Monthly Archives: ಜೂನ್ 2009

ಆಷಾಢ ಮಾಡಿದ ಪಾಪವಾದರೂ ಏನು?

ಸಾಮಾನ್ಯ

ಆಷಾಢವೆಂದರೆ ನೆನಪುಗಳು ಹಿಂದಕ್ಕೆ ಓಡುತ್ತವೆ. ಆ ಕರಾಳ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ದಿಗಿಲು. ಹೊಟ್ಟೆಪಾಡಿಗಾಗಿ ನೆಚ್ಚಿದ್ದ ಆಟೋಮೊಬೈಲ್ಸ್ ಅಂಗಡಿಗೆ ಆ ತಿಂಗಳು ಗ್ರಹಣ. ವ್ಯಾಪಾರ ಲಾಸ್ ಎನ್ನುವುದು ಎಲ್ಲರ ಮಾತು. ದಿನಕ್ಕೆಷ್ಟು ಗಂಟೆ, ಗಂಟೆಗೆಷ್ಟು ನಿಮಿಷ, ನಿಮಿಷಕ್ಕೆಷ್ಟು ಸೆಕೆಂಡು ಎನ್ನುವುದು ಆಗಷ್ಟೇ ಅರ್ಥವಾಗುತ್ತಿದ್ದ ದಿನಗಳವು. ಸೆಕೆಂಡುಗಳು ಗಂಟೆಗಳಾಗಿ ಕೊಲ್ಲುತ್ತಿದ್ದವು.

ಸಮಯ ಮುಂದಕ್ಕೋಡಿದೆ. ಬೇಕು-ಬೇಡ ಕೇಳದೇ ಬಂದ ಸಾಕಷ್ಟು ಬದಲಾವಣೆಗಳು. ಆದರೆ ಈ ವರ್ಷದ ಆಷಾಢ, ಅದರಲ್ಲೂ ಆರಂಭದ ಆ ೧೦ ದಿನಗಳು ನನ್ನ ಪಾಲಿಗೆ ಮತ್ತದ್ದೇ ಕರಾಳ ದಿನಗಳು. ಸೆಕೆಂಡುಗಳು ಗಂಟೆಗಳಾಗುವ ದಿನಗಳು. ಅದಕ್ಕೆ ಆಷಾಢವಲ್ಲ ಕಾರಣ, ನನ್ನವಳ ಪರೀಕ್ಷೆ.

ಹೌದು. ನೋಡನೋಡುತ್ತಲೇ ದಿನಗಳು ಉರುಳಿವೆ. ಆ ಮೂವತ್ತೆರಡು ದಿನಗಳು, ೩೨ ನಿಮಿಷಗಳಂತೆ ಸವೆದಿವೆ. ನಿನ್ನೆಯಷ್ಟೇ ಮದುವೆಯಾದಂತೆ ಭಾವ. ನನಗಷ್ಟೇ ಅಲ್ಲ ಅವಳಿಗೂ ಅದೇ ಭಾವ. ಅಷ್ಟರಲ್ಲಾಗಲೇ ಯಾರೋ ಕರೆ ಮಾಡಿ ನೆನಪಿಸಿದರು. ಇಂದಿಗೆ ನೀನು ಮದುವೆಯಾಗಿ ತಿಂಗಳೆಂದು.

ಮೊದಲ ತಿಂಗಳ ಸಂಭ್ರಮಾಚರಣೆ ಫೋನ್‌ನಲ್ಲಿಯೇ ನಡೆದು ಹೋಯಿತು. ಸೆಕೆಂಡು ನಿಮಿಷಗಳ ಹಂಗು ಮರೆತಂತೆ ಮಾತನಾಡಿದೆವು. ಮಾತಿಗೆಷ್ಟು ಬೆಲೆ ಇದೆ ಎಂಬುದು ಮೊಬೈಲ್‌ಗೆ ಕರೆನ್ಸಿ ಹಾಕಿಸುವಾಗಲೆಲ್ಲ ಅರ್ಥವಾಗುತ್ತಿದೆ. ‘೩೦ ದಿನವಲ್ಲ, ೩೦೦ ವರ್ಷ ಜೊತೆಜೊತೆಯಲ್ಲೇ ಖುಷಿಖುಷಿಯಲ್ಲೇ ಬಾಳೋಣ’ ಎಂಬ ಮಾತು, ಅಡೆತಡೆಯಿಲ್ಲದೇ ಇಬ್ಬರ ಮಧ್ಯೆ ವಿನಿಮಯವಾಯಿತು.

‘ಆಷಾಢ ಜೂ.೨೩ರಿಂದ ಶುರುವಂತೆ. ಆಮೇಲೆ ಹೇಗೆ? ನಿನ್ನನ್ನು ಅಗಲಿ ನಾ ಇರುವುದಾದರೂ ಹೇಗೆ?’ ಎಂಬ ಪ್ರಶ್ನೆ ಮುಗಿಸುವ ಮುನ್ನವೇ, ಅವಳಿಂದ ಉತ್ತರ. ‘ಅದು ಹಾಗಲ್ಲ.. ಒಂದೇ ಮನೆಯಲ್ಲಿ, ಅದರಲ್ಲೂ ಒಂದೇ ಬಾಗಿಲಲ್ಲಿ ಅತ್ತೆ ಸೊಸೆ ಓಡಾಡಬಾರದಂತೆ. ಗಂಡ ಹೆಂಡತಿ ಜತೆಯಲ್ಲಿರಬಹುದು’ ಅಂದಳು. ಮಾತಿನ ಮಧ್ಯೆ ತುಂಟ ನಗೆ. ಅಯ್ಯೋ ಇದನ್ನೆಲ್ಲ ಅವಳು ಯಾವಾಗ ತಿಳಿದಳೋ? ಯಾಕೆ ಮತ್ತು ಹೇಗೆ ತಿಳಿದಳೋ ಎಂಬ ಅಚ್ಚರಿ ಮಿಶ್ರಿತ ಮೆಚ್ಚುಗೆ ನನ್ನ ಮನದಲ್ಲಿ.

ಇಷ್ಟಕ್ಕೂ ನಮ್ಮಿಬ್ಬರದು ‘ಸಾಪ್ತಾಹಿಕ ಪುರವಣಿ’ಯಂಥ ಸಂಸಾರ. ಅಂದರೆ ವಾರಕ್ಕೊಮ್ಮೆ ಭೇಟಿ. ಕಲಿಕೆ ನೆಪದಲ್ಲಿ ದೂರದ ಊರಲ್ಲಿ ಕೂತೇ ಅವಳು ನನಗೆ ಹತ್ತಿರವಾಗಿದ್ದಾಳೆ. ನಾನು, ನೀನು ಎಲ್ಲವೂ ಹೋಗಿ, ನಾವಾಗಿದ್ದೇವೆ. ನಮ್ಮ ಮುಂದೆ ಬಣ್ಣದ ಕನಸುಗಳು. ಯಾರಿಗೂ ಹೇಳಲಾಗದ ಗುಟ್ಟುಗಳು ಇಬ್ಬರ ಮಧ್ಯೆ ರಟ್ಟು. ಜಗತ್ತಿನಲ್ಲಿ ನಮ್ಮದೊಂದೇ ‘ಅಪರೂಪದ ಜೋಡಿ’ ಎಂಬಂಥ ಮಾಕು ಇಬ್ಬರಿಗೂ.  ಪರೀಕ್ಷೆಗಳ ಬಂಧನದಿಂದ ಮುಕ್ತಳಾಗುವ ಅವಳಿಗೆ ಆಷಾಢದಲ್ಲಿಯೇ ಕೈತುಂಬ ರಜೆ. ಆ ರಜೆಗೆ ಬಣ್ಣ ತುಂಬುವ ಆಸೆ ನಮಗೆ. ಪರೀಕ್ಷೆ ಅವಯೇ ನಮ್ಮಿಬ್ಬರ ಪಾಲಿಗೆ ಆಷಾಢಕ್ಕೂ ಮೀರಿದ ಕಿರುಕುಳವನ್ನು ಕೊಡುತ್ತಿದೆ.
***
ಇಷ್ಟಕ್ಕೂ ಜ್ಯೇಷ್ಠ ಮತ್ತು ಶ್ರಾವಣದ ಮಧ್ಯೆ ಬರುವ ಆಷಾಢವೆಂದರೆ ಜನರಲ್ಲಿ ಯಾಕಿಷ್ಟು ತಳಮಳವೊ ಗೊತ್ತಿಲ್ಲ. ಈ ಅವಯಲ್ಲಿ ವ್ಯಾಪಾರವೇಕೆ ಲಾಸ್ ಆಗಬೇಕು? ಶುಭಕಾರ್ಯಗಳೇಕೆ ನಡೆಯಬಾರದು? ಹೊಸ ಬಟ್ಟೆ ತೊಟ್ಟರೆ ಹರಿದು ಹೋಗುತ್ತಾ? ಹೊಸ ವಾಹನ ಖರೀದಿ ಮಾಡಬಾರದಾ? ಮದುವೆಯಾದರೆ ಪ್ರಳಯ ಆಗುತ್ತಾ? ಎಲ್ಲವೂ ನಮ್ಮ ಮನಸ್ಥಿತಿ. ಒಳ್ಳೆ ಕೆಲಸಕ್ಕೆ ಎಲ್ಲ ಕಾಲವೂ ಸುಮುಹೂರ್ತಗಳೇ ಎನ್ನುವಲ್ಲಿ ನನಗೆ ಅನುಮಾನಗಳಿಲ್ಲ.

ಮೊದಲು ಆಷಾಢದ ಸಮಯದಲ್ಲಿ ಬಿತ್ತನೆ, ಕಳೆ ಕೀಳುವುದು ಸೇರಿದಂತೆ ರೈತನಿಗೆ ಕೈತುಂಬ ಕೆಲಸ. ಬೇರೆ ಕೆಲಸಗಳತ್ತ ಆತನ ಗಮನ ಹೋಗುತ್ತಿರಲಿಲ್ಲ. ಅಷ್ಟು ಪುರುಸೊತ್ತು ಸಹ ಇರಲಿಲ್ಲವೆನ್ನಿ. ಹೀಗಾಗಿಯಷ್ಟೇ ಆಷಾಢದಲ್ಲಿ ಶುಭ ಕಾರ್ಯಗಳಿಗೆ ಅಲ್ಪವಿರಾಮ. ಆಷಾಢ ಆರಂಭಕ್ಕೆ ಮುನ್ನವೇ ಹೆಣ್ಣು ಮಗಳು ತವರು ಸೇರುತ್ತಾಳೆ. ಗಂಡನ ಮನೆ ಸೇರಿದ ಮನೆ ಮಗಳು ಆಷಾಢದ ನೆಪದಲ್ಲಾದರೂ ತವರಲ್ಲಿ ಸ್ವಲ್ಪ ದಿನ ಸುಖವಾಗಿರಲಿ ಎಂಬ ಹೆತ್ತವರ ಮಮತೆ, ಆಷಾಢದ ಸಂಪ್ರದಾಯಕ್ಕೆ ಜೈ ಎಂದಿರಬಹುದು.

ಆಷಾಢದ ಗುಮ್ಮನ ಮುಂದಿಟ್ಟು, ಅಗಲಿಕೆ ಮತ್ತು ವಿರಹಗಳನ್ನು ಕಲ್ಪಿಸಿ, ಗಂಡ-ಹೆಂಡಿರ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಜಾಣತನ ಹಿರಿಯರದೇನೋ ಗೊತ್ತಿಲ್ಲ. ಅಲ್ಲದೇ ಆಷಾಢದಲ್ಲಿ ಸತಿ-ಪತಿಗಳು ಒಂದಾದರೆ ೯ ತಿಂಗಳ ನಂತರ ಅಂದರೆ ಬಿರು ಬೇಸಗೆಯಲ್ಲಿ ಮಗುವಾಗುವ ಸಾಧ್ಯತೆಗಳಿವೆ. ಬೇಸಗೆ ಕಾವಿನ ಮಧ್ಯೆ ಗರ್ಭದ ಭಾರ, ಹೆರಿಗೆಯ ನೋವು, ಬಾಣಂತನದ ಬಾಧೆ ತಪ್ಪಿಸುವ ಉದ್ದೇಶ ಇದ್ದರೂ ಇರಬಹುದು.