ವಿಖ್ಯಾತರ ವ್ಯಕ್ತಿ ಚಿತ್ರಮಾಲೆ

ಸಾಮಾನ್ಯ

ವಿಖ್ಯಾತರ ವ್ಯಕ್ತಿ ಚಿತ್ರಮಾಲೆ ಹೊರತರಲು ವಸಂತ ಪ್ರಕಾಶನ ಹೊರಟಿದೆ. ಮೊದಲ ಹಂತದಲ್ಲಿ ೨೫ ಪುಸ್ತಕಗಳು ಸಿದ್ಧವಾಗಿದ್ದು, ಜೂನ್ ೧೨ ರಂದು ಬಿಡುಗಡೆ. ಈ ಅಪರೂಪದ ಕಾರ್ಯಕ್ರಮವನ್ನು ಮಿಸ್ ಮಾಡ್ಕೋಬೇಡಿ..

ಸಮ್ಮೇಳನಕ್ಕೊಂದು ಕಾಟಾಚಾರದ ವೆಬ್‌ಸೈಟ್‌!

ಸಾಮಾನ್ಯ

ಮಾಹಿತಿ ತಂತ್ರಜ್ಞಾನದ ಬಗ್ಗೆ ಮಾರುದ್ದದ ಭಾಷಣ ಬಿಗಿಯುವ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ, ವಿಶ್ವಕನ್ನಡ ಸಮ್ಮೇಳನವನ್ನು ಒಂದು ಒಳ್ಳೆಯ ವೆಬ್‌ಸೈಟ್‌ ಮೂಲಕ ಜಗತ್ತಿಗೆ ಕಟ್ಟಿಕೊಡಬೇಕು ಎಂಬ ಕನಿಷ್ಠ ಕಾಳಜಿಯಿಲ್ಲ. ಸಮ್ಮೇಳನದ ಅಂಗವಾಗಿ ಸರಕಾರ ರೂಪಿಸಿರುವ ವೆಬ್‌ಸೈಟ್‌ ಮತ್ತು ಬ್ಲಾಗ್‌ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ವಿಶ್ವ ಕನ್ನಡ ಸಮ್ಮೇಳನವೆಂದರೆ ಜಾಗತಿಕ ಹಬ್ಬ. ಜಗತ್ತಿನ ಮೂಲೆಮೂಲೆಯಲ್ಲಿನ ಕನ್ನಡಿಗರು ಸಂಭ್ರಮಿಸುವ ಹಬ್ಬ. ಈ ಎಲ್ಲರನ್ನು ಬೆಸೆಯಲು ಒಂದು ಒಳ್ಳೆಯ ವೆಬ್‌ಸೈಟ್‌ ಮಾಡಬೇಕೆಂದು ಸರಕಾರಕ್ಕೆ ಅನ್ನಿಸಿಲ್ಲ. ಸಮ್ಮೇಳನಕ್ಕಾಗಿಯೇ ಒಂದು ಅಧಿಕೃತ ವೆಬ್‌ಸೈಟ್‌ ಇಲ್ಲ. ಕಾಟಾಚಾರಕ್ಕೆ ಎಂಬಂತೆ ಬೆಳಗಾವಿ ಜಿಲ್ಲೆಯ ವೆಬ್‌ಸೈಟ್‌ನಲ್ಲೇ ಒಂದು ಭಾಗವಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ಸೇರಿಸಲಾಗಿದೆ(http://belgaum.nic.in/kannada_s_Sam/Index.html). . ಮಾರುದ್ದದ ಈ ಯುಆರ್‌ಎಲ್‌ ಯಾರಿಗೆ ತಾನೇ ನೆನಪಲ್ಲಿ ಉಳಿಯಲು ಸಾಧ್ಯ. ಹೋಗಲಿ ಈ ವೆಬ್‌ಸೈಟ್‌ ವ್ಯವಸ್ಥಿತವಾಗಿದೆಯೇ ಎಂದರೆ ಅದೂ ಇಲ್ಲ.

ಮನಸೋ ಇಚ್ಛೆ ವೆಬ್‌ಸೈಟ್‌ ರೂಪುಗೊಂಡಿದೆ. ಅಲ್ಲಿರುವ ವಿಷಯ ಮತ್ತು ವಿನ್ಯಾಸ ದೇವರಿಗೆ ಪ್ರಿಯ. ಸರಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಕಣ್ಣಿಗೆ ಕಾಣುವಂತಿದೆ. `ರ್ನಾಟಕ ಏಕೀಕರಣಗೊಂಡು.. ‘ ಎಂದು ವೆಬ್‌ಸೈಟ್‌ನ ಮುಖಪುಟದ ಲೇಖನ ಆರಂಭಗೊಳ್ಳುತ್ತದೆ. ಅಂದರೆ ಮೊದಲ ಸಾಲಿನ ಮೊದಲ ಪದವಾದ ಕರ್ನಾಟಕದಲ್ಲಿ `ಕ’ ಇಲ್ಲವೇ ಇಲ್ಲ! ಸಮ್ಮೇಳನದ ಮಹತ್ವ ವಿವರಿಸುವ ಎರಡು ಪ್ಯಾರಾ ಬರೆಯಲು ಆಗಿಲ್ಲ. ಸರಕಾರದ ಸುತ್ತೋಲೆಯಂತೆ ಮುಖಪುಟ ಕಾಣಿಸುತ್ತಿದೆ.

ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ವಿಷಯಗಳಿಗೆ ಸಂಬಂಧಿಸಿದ ಪುಟಗಳು ಲೆಕ್ಕಕ್ಕಷ್ಟೇ ಇವೆ. ಮುಖಪುಟ ವಿನ್ಯಾಸಕ್ಕೆ ಕಣ್ಣಿಗೆ ರಾಚುವಂತಹ ವರ್ಣಗಳ ಬಳಕೆಯಾಗಿದೆ. ಪುಟದ ಎಡ ಭಾಗದಲ್ಲಿನ ವಿಷಯ ಸೂಚಿಯಲ್ಲಿರುವುದನ್ನು ಓದಲು ಕನ್ನಡಕ ಬೇಕೇ ಬೇಕು! ಸಮ್ಮೇಳನದ ಹಿಂದಿನ ಇತಿಹಾಸ, ಸಮ್ಮೇಳನದ ಮಹತ್ವ, ನಾಡು ನುಡಿ ಪರಿಚಯ ಮಾಡಿಕೊಡುವ ಲೇಖನ ಮತ್ತು ಚಿತ್ರಗಳನ್ನು ಇಲ್ಲಿ ಕೇಳುವುದೇ ಬೇಡ.

ಸಮ್ಮೇಳನದ ಸಿದ್ಧತೆ ಅಥವಾ ನಾಡುನುಡಿಗೆ ಸಂಬಂಧಿಸಿದ ಒಂದೇ ಒಂದು ಚಿತ್ರಪಟ ಇಲ್ಲಿಲ್ಲ. ಇಂಥ ವೆಬ್‌ಸೈಟ್‌ಗೊಂದು ಗ್ಯಾಲರಿ ಬೇಕು ಎಂದು ಆಡಳಿತಯಂತ್ರಕ್ಕೆ ಅನ್ನಿಸಿಲ್ಲ. ಆಹ್ವಾನ ಪತ್ರಿಕೆ, ಸಮಿತಿಗಳು, ಸರಕಾರದ ಆದೇಶಗಳು, ಸಭಾ ನಡವಳಿಕೆಗಳು ಇಲ್ಲಿದ್ದು, ಸರಕಾರದ ಲೆಕ್ಕಪತ್ರ ವಿಭಾಗದ ವೆಬ್‌ಸೈಟ್‌ನಂತೆ ಇದು ರೂಪುಗೊಂಡಿದೆ. ನಾಡು ನುಡಿಯನ್ನು ಬಿಂಬಿಸುವ ಯಾವ ಮಾಹಿತಿಗಳೂ ಇಲ್ಲಿಲ್ಲ.

ನೋ ಅಪ್‌ಡೇಟ್ಸ್‌..
ವಿಶ್ವಕನ್ನಡ ಸಮ್ಮೇಳನದ ನೇರ ಪ್ರಸಾರ ಎಂದು ವೆಬ್‌ಸೈಟ್‌ನ ಮೇಲಿದ್ದರೂ, ಯಾವುದೇ ಅಪ್‌ಡೇಟ್‌ಗಳಿಲ್ಲ. ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿಶ್ವಕನ್ನಡ ಸಮ್ಮೇಳನ ವಿಭಾಗ ವೆಬ್‌ಸೈಟ್‌ಗೆ ಮಾಹಿತಿ ಒದಗಿಸಿದ್ದು, ಅವುಗಳ ಸಮರ್ಪಕ ಬಳಕೆಯ ಕೊರತೆ ಕಂಡು ಬಂದಿದೆ. ವೆಬ್‌ಸೈಟ್‌ ಎನ್ನುವುದು ಬಳಕೆದಾರರ ಸ್ನೇಹಿಯಾಗಿರಬೇಕು. ಆದರೆ ಇದೆಲ್ಲವೂ ಇಲ್ಲಿ ನಗಣ್ಯ.

ಮುಖ್ಯಮಂತ್ರಿಗಳ ಮುನ್ನುಡಿ ಎನ್ನುವ ಕೊಂಡಿಯನ್ನು ಕ್ಲಿಕ್‌ ಮಾಡಿದರೆ ಪೇಪರ್‌ನಲ್ಲಿ ಬಂದಿರುವ ಜಾಹೀರಾತು ಕಾಣಿಸುತ್ತದೆ. ಅದನ್ನು ಸ್ಕ್ಯಾನ್‌ ಮಾಡಿ ಪಿಡಿಎಫ್‌ ಮಾಡಲಾಗಿದ್ದು, ಓದುವುದು ಕಷ್ಟ. ಪಿಡಿಎಫ್‌ `ಡೌನಲೋಡ’ ಎಂಬ ಪದ ಪ್ರಯೋಗವೂ ಇಲ್ಲುಂಟು!

ಚಿತ್ರಗಳಿಗೆ ಬರವೇ?
ಬೆಳಗಾವಿಗೆ ಬರುವ ಕನ್ನಡಿಗರಿಗೆ ಸುತ್ತಲಿನ ಪ್ರವಾಸಿ ತಾಣಗಳ ಪರಿಚಯಿಸುವ ವ್ಯವಧಾನವೂ ವೆಬ್‌ಸೈಟ್‌ನಲ್ಲಿ ಇಲ್ಲ. ಪ್ರವಾಸಿ ತಾಣಗಳು ಪರಿಚಯ ಏನೇನೂ ಸಾಲದು. ಎರಡು ಸ್ಟಾಂಪ್‌ ಅಳತೆಯ ಚಿಕ್ಕ ಚಿತ್ರಗಳು ಇಲ್ಲಿದ್ದು, ಪ್ರವಾಸಿ ತಾಣಗಳ ದೊಡ್ಡ ಚಿತ್ರಗಳಿಗೆ ಇಷ್ಟು ಕೊರೆತೆ ಇದೆಯೇ ಅನಿಸುತ್ತದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಬಯಸುವಂತಿಲ್ಲ. ಇನ್ನಷ್ಟು ವಿವರಗಳಿಗೆ ಕ್ಲಿಕ್‌ ಮಾಡಿದರೆ, ಗೂಗಲ್‌ ನಕ್ಷೆ ಮತ್ತು ಮ್ಯಾಪ್‌ಎಕ್ಸೆಲ್‌ ಡಾಟ್‌ಕಾಮ್‌ ತೆರೆದುಕೊಳ್ಳುತ್ತವೆ. ಬೆಳಗಾವಿಗೆ ಸಂಬಂಧಿಸಿದ ಒಂದು ನಕ್ಷೆಯನ್ನು ಸಿದ್ಧಪಡಿಸಲು ಸಹ ಸರಕಾರ ವಿಫಲವಾಗಿದೆ. ನಗರ ನಕ್ಷೆಗೆ ಗೂಗಲ್‌ನತ್ತ ಬೆರಳು ತೋರಿಸಿ ಕೈತೊಳೆದುಕೊಳ್ಳಲಾಗಿದೆ.

ಬ್ಲಾಗ್‌ ಇಂಗ್ಲಿಷ್‌ಮಯ
ಸಮ್ಮೇಳನಕ್ಕಾಗಿ ಸರಕಾರ ರೂಪಿಸಿರುವ http://world-kannada-sammelana-belgaum-2011.blogspot.com/
ಬ್ಲಾಗ್‌ಗೆ ಹೋದರೆ, ಅಲ್ಲಿ ಇಂಗ್ಲಿಷ್‌ನದ್ದೇ ಕಾರುಬಾರು. `ಕರ್ನಾಟಕ ಸರಕಾರ, ವಿಶ್ವಕನ್ನಡ ಸಮ್ಮೇಳನ ಬೆಳಗಾವಿ’ ಎನ್ನುವುದನ್ನು ಬಿಟ್ಟರೆ ಎಲ್ಲವೂ ಇಂಗ್ಲಿಷ್‌ಮಯ. ವೆಬ್‌ಸೈಟ್‌ಗಿಂತ ಇಲ್ಲಿಯೇ ಅಪ್‌ಡೇಟ್‌ ಹೆಚ್ಚಿದ್ದು, ಒಂದಿಷ್ಟು ಮಾಹಿತಿ ಲಭ್ಯ.

ಕಿ.ರಂ. ಬಗ್ಗೆ ನನಗೆ ಅಸೂಯೆ!

ಸಾಮಾನ್ಯ

ಕಿ.ರಂ.ನಾಗರಾಜ್ ಅವರು ಕನ್ನಡ ಶ್ರವ್ಯ ಪರಂಪರೆಯ ನೇತಾರ. ಸಾಹಿತ್ಯ ಕಾರ್ಯಕ್ರಮದಲ್ಲಿ ಸಭಿಕರ ಮಧ್ಯೆ ಜಾಗ ಮಾಡಿಕೊಂಡು ಸಾಮಾನ್ಯರಂತೆಯೇ ಕೂರುತ್ತಿದ್ದ ಅವರ ಅಪಾರ ಓದಿನ ಬಗ್ಗೆ ನನಗೆ ಅಸೂಯೆ! ಅವರನ್ನು ಕಂಡಾಗಲೆಲ್ಲ ಬೆರಗು. ಬೇಂದ್ರೆ, ಅಡಿಗ, ಅಲ್ಲಮನ ಕಾವ್ಯಗಳ ಬಗ್ಗೆ ಮಾತು ತೆಗೆದರೆ ತಮ್ಮನ್ನು ತಾವೇ ಮರೆಯುತ್ತಿದ್ದರು. ಅವರ ಸಾಹಿತ್ಯ ನಿಶೆ ಕಂಡು ನನಗೆ ಹೊಟ್ಟೆ ಉರಿ.
‘ಕವಿತೆ ಕವಿತೆ ಅಷ್ಟೇ. ಅದು ಎಂದಿಗೂ ಘೋಷಣೆಯಾಗಬಾರದು, ಭಾಷಣವಾಗಬಾರದು. ಅದಕ್ಕೆ ಬೇರೇನೂ ಮಾಡಬೇಡಿ. ಅದರ ಪಾಡಿಗೆ ಬಿಡಿ’ ಎಂದಿದ್ದ ಕಿ.ರಂ ಇನ್ನಿಲ್ಲ.. ಛೇ, ಅವರು ಇನ್ನಷ್ಟು ದಿನ ತಮ್ಮ ಅಪಾರ ಓದಿನಿಂದ ನನ್ನ ಹೊಟ್ಟೆ ಉರಿಸಬೇಕಿತ್ತು..

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..

ಸಾಮಾನ್ಯ

ಇಂದು(ಆಗಸ್ಟ್ ತಿಂಗಳ ಮೊದಲ ಭಾನುವಾರ) ‘ಅಂತಾರಾಷ್ಟ್ರೀಯ ಸ್ನೇಹ ದಿನ’. ಸ್ನೇಹವೆಂದರೆ ವ್ಯಾಪಾರವೇ, ಸ್ನೇಹವೆಂದರೆ ಹರಟೆಯೇ, ಸ್ನೇಹವೆಂದರೆ ಬಂಧವೇ, ಸ್ನೇಹವೆಂದರೆ ಅಮೃತವೇ, ಸ್ನೇಹವೆಂದರೆ ಹುಚ್ಚಾಟವೇ?

ನಾವು ಪರೀಕ್ಷೆಗೆ ಹೊರಟಾಗ ‘ಆಲ್ ದಿ ಬೆಸ್ಟ್’ ಎಂದು ಹೇಳುವವ ಮಿತ್ರ. ಅದೇ ಪರೀಕ್ಷೆ ಹಾಲ್‌ಗೆ ಬಂದು, ಕಾಪಿ ಚೀಟಿ ಎಸೆಯುವವ ಆಪ್ತಮಿತ್ರ! ತಪ್ಪು ಮಾಡಿ ನಾವು ಜೈಲು ಸೇರಿದಾಗ, ಜಾಮೀನಿಗಾಗಿ ನಮ್ಮ ಪರವಾಗಿ ಸುತ್ತಾಡುವವ ಮಿತ್ರ. ಪಕ್ಕದಲ್ಲೇ ಕೂತು, ಕಂಬಿ ಎಣಿಸುವವ ಆಪ್ತಮಿತ್ರ! – ಮಿತ್ರ ಮತ್ತು ಆಪ್ತಮಿತ್ರನಿಗಿರುವ ವ್ಯತ್ಯಾಸವನ್ನು ನನ್ನ ಗೆಳೆಯ ಪ್ರಹ್ಲಾದ ಮೊನ್ನೆ ವ್ಯಾಖ್ಯಾನಿಸಿದ್ದು ಹೀಗೆ!

ಪ್ರಹ್ಲಾದ ನಿಮಗೆ ಮಿತ್ರನೋ, ಆಪ್ತಮಿತ್ರನೋ ಎಂದು ಕೇಳಿ, ನನ್ನನ್ನು ಇಕ್ಕಟ್ಟಿಗೆ ತಳ್ಳಬೇಡಿ. ಪ್ರಹ್ಲಾದ ಹೇಳಿದ್ದು ಕುತರ್ಕ ಎಂದು ತಳ್ಳಿಹಾಕಿದರೂ, ಒಲಿತು-ಕೆಡಕಿಗೆಲ್ಲ ಸ್ನೇಹವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಬ್ಬ ವ್ಯಕ್ತಿಯ ಗುಣಾವಗುಣಗಳನ್ನು ಅಳೆಯಲು ಆತನನ್ನೇ ನೋಡಬೇಕು ಎಂದೇನಿಲ್ಲ, ಆತನ ಮಿತ್ರರನ್ನು ನೋಡಿದರೂ ಸಾಕು. ಅಂದಹಾಗೇ, ಸ್ನೇಹಿತರನ್ನು ಹುಡುಕಿಕೊಳ್ಳುವಾಗ ಎಚ್ಚರಿಕೆವಹಿಸಬೇಕಾ? ಅಳೆದೂ ತೂಗಿ ಮಾಡಿಕೊಳ್ಳುವ ಸಂಬಂಧ ಮದುವೆಯಾಗುತ್ತದೆಯೇ ಹೊರತು, ಸ್ನೇಹವಾಗಲು ಹೇಗೆ ಸಾಧ್ಯ?

‘ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು..’ ಎಂದು ಆರಂಭಗೊಳ್ಳುವ ಚೆನ್ನವೀರ ಕಣವಿ ಬರೆದಿದ್ದ ಪದ್ಯವೊಂದು ನಮಗೆ ಏಳನೇ ತರಗತಿಯಲ್ಲಿ ಪಠ್ಯವಾಗಿತ್ತು. ಗೆಳೆತನದ ಮಹತ್ವ ವಿವರಿಸುವ ಆ ಪದ್ಯವನ್ನು ಮೇಷ್ಟ್ರು ಓದುವಾಗ ಅದೇಕೋ ಪುಳಕಿತನಾಗಿದ್ದೆ.

‘ಗೆಳೆತನವೆ ಚಿರಬಾಳ ಸಂಜೀವಿನಿ ವಿಶ್ವದಂತಃಕರಣ ಮಂದಾಕಿನಿ’ ಮತು ‘ಜೀವ ಜೀವಕೆ ಇಂಬುಕಯ್ವವರು ನಾಲ್ವರಿರೆ ಚದುರಂಗ ಬಲವಿದಕೆ ಯಾವ ಸಾಟಿ’ ಎನ್ನುವ ಸಾಲುಗಳನ್ನು ಮರೆಯಲಾದೀತೆ?

‘ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ..
ಆಟದೆ ಸೋತು, ರೋಷದೆ ಕಚ್ಚಿದ;
ಗಾಯವ ಮರೆತಿಲ್ಲ ಅಹ ಅಹ!’

ಎನ್ನುತ್ತಾ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಳ್ಳುವುದೇ ಒಂದು ಆನಂದ. ಗೆಳೆಯರ ಜತೆ ಈಜಿದ್ದು, ಮಾವಿನ ಕಾಯಿ ಕದ್ದು ತಿಂದದ್ದು, ಊರೆಲ್ಲ ಸುತ್ತಿದ್ದು ಎಲ್ಲವೂ ಮನದ ಚಿತ್ರಶಾಲೆಯಲ್ಲಿ ಮಧುರಾತಿಮಧುರ ಚಿತ್ರಪಟಗಳು.

‘ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಎನ್ನುತ ನಾನು, ಕೆಣಕಲು ನಿನ್ನ,
ಎನ್ನುತ ನಾನು, ಕೆಣಕಲು ನಿನ್ನ ಉದಿಸಿದೆ ಕೆನ್ನೆ ಹೇ
ನಾನದ ಮರೆಯುವೆನೆ?’

ತುಂಬ ವರ್ಷಗಳ ನಂತರ ಹಳೆಯ ಗೆಳೆಯನೊಬ್ಬ ಆಕಸ್ಮಿಕವಾಗಿ ಸಿಕ್ಕಿದಾಗ, ಹಳೆಯ ನೆನಪುಗಳನ್ನು ಕೆದಕಿದಾಗ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಉಲ್ಲಾಸ. ಶಾಲಾ ದಿನಗಳಿಗೆ ಜಾರುವುದೇ ಒಂದು ಮಧುರ ಅನುಭೂತಿ. ಶಾಲೆಯ ಉಪ್ಪಿಟ್ಟು, ಸ್ವಾತಂತ್ರ್ಯ ದಿನಾಚರಣೆಯ ದಿನ ಧ್ವಜ ಹಿಡಿದು ಊರಲ್ಲಿ ಮೆರವಣಿಗೆ ಹೋಗಿದ್ದು, ಗಣೇಶೋತ್ಸವದಲ್ಲಿ ಸಂಭ್ರಮಿಸಿದ್ದು, ಡುಮ್ಮಿ ಮೇಡಂ ಸಿಟ್ಟು, ಮನೆಗೆ ನೀರು ತುಂಬಿಸಿದ ಥ್ರಿಲ್ ಮೇಷ್ಟ್ರ ದುರ್ಬುದ್ಧಿ -ಹೀಗೆ ಎಷ್ಟೊಂದು ವಿಷಯಗಳು.

‘ಮೈ ಆಟೋಗ್ರಾಫ್’ ಸಿನಿಮಾ ಯಶಸ್ಸಿಗೆ ಕಾರಣವಾದದ್ದು ಸ್ನೇಹದ ಭಾವ. ಗೆಳೆಯರನ್ನೆಲ್ಲ ಮದುವೆ ವೇಳೆ ಸೇರಿಸುವ ಚಿತ್ರದ ನಾಯಕನ ಸಂಭ್ರಮವನ್ನು ಪ್ರೇಕ್ಷಕರೂ ಹಂಚಿಕೊಂಡರು.

ಒಳ್ಳೆಯ ಸ್ನೇಹಿತನೊಬ್ಬ ಜತೆಯಲ್ಲಿದ್ದರೆ ಏಳು ಬೆಟ್ಟಗಳ ಹತ್ತಿಳಿದು, ಸಪ್ತ ಸಾಗರಗಳ ಈಜುವುದು ಕಷ್ಟವಾಗಲಾರದು! ಎಲ್ಲವೂ ಕಮರ್ಷಿಯಲೈಜ್ ಆಗುತ್ತಿರುವ ಈ ದಿನಗಳಲ್ಲಿ ಸ್ನೇಹವೂ ಮಾರಾಟದ ಸರಕು. ಸ್ನೇಹಿತರು ಬೇಕಾ? ಸ್ನೇಹಿತರಿಗಾಗಿ ಕಾಲ್ ಮಾಡಿ, ಚಾಟ್ ಮಾಡಿ ಎನ್ನುವ ಜಾಹೀರಾತುಗಳು ಅಚ್ಚರಿಯಾಗೇನೂ ಇಂದು ಉಳಿದಿಲ್ಲ.

ಉತ್ತಮ ಅಥವಾ ಮಾದರಿ ಸ್ನೇಹಕ್ಕೆ ರಾಮಾಯಣ ಮತ್ತು ಮಹಾಭಾರತದಲ್ಲೂ ಉದಾಹರಣೆಗಳಿವೆ. ಅಲ್ಲಿ ಅಪ್ತ ಸ್ನೇಹಿತರಿದ್ದಾರೆ. ರಾಮಾಯಣದಲ್ಲಿ ಸುಗ್ರೀವ ಮತ್ತು ರಾಮನ ಸ್ನೇಹ, ಮಹಾಭಾರತದಲ್ಲಿ ಕೃಷ್ಣ ಮತ್ತು ಅರ್ಜುನನ ಸ್ನೇಹವನ್ನು ಕಾಣಬಹುದು. ಇಲ್ಲಿ ಸ್ನೇಹಕ್ಕಿಂತಲೂ ಅನುಕೂಲಸಿಂಧು ಮೈತ್ರಿಯೇಎದ್ದು ಕಾಣುತ್ತದೆ. ಇವರೆಲ್ಲರಿಗಿಂತಲೂ ಮಿಗಿಲಾದ ಸ್ನೇಹ ದುರ್ಯೋಧನ ಮತ್ತು ಕರ್ಣ ಅವರದು.

ಒಂದು ಸಲ ದುರ್ಯೋಧನನ ಪತ್ನಿ ಭಾನುಮತಿ ಮತ್ತು ಕರ್ಣ ಪಗಡೆಯಾಡುತ್ತಿರುತ್ತಾರೆ. ಪಗಡೆಯಾಟದಲ್ಲಿ ಸೋತ ಭಾನುಮತಿ, ತಾನು ಪಣವಾಗಿಟ್ಟಿದ್ದ ಸರವನ್ನು ನೀಡಲು ನಿರಾಕರಿಸುತ್ತಾಳೆ. ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕರ್ಣನು ಎಳೆದಾಗ ಅದು ಹರಿದು ಮಣಿಗಳು ಚೆಲ್ಲಾಪಿಲ್ಲಿಯಾಗುತ್ತವೆ. ಅದೇ ಸಮಯಕ್ಕೆ ಅಲ್ಲಿಗೆ ದುರ್ಯೋಧನ ಪ್ರವೇಶಿಸುತ್ತಾನೆ. ಭಾನುಮತಿ ಮತ್ತು ಕರ್ಣನಿಗೆ ಒಂದು ಕ್ಷಣ ಏನು ಮಾಡಬೇಕು ಎಂಬುದೇ ದೋಚುವುದಿಲ್ಲ.

ಆಗ ದುರ್ಯೋಧನ ನೆಲದಲ್ಲಿ ಬಿದ್ದಿದ್ದ ಮಣಿಗಳನ್ನು ಆಯುತ್ತಾ, ‘ಪಣವೆಂದರೆ ಪಣ. ನೀನು ಗೆದ್ದಿರುವೆ. ಸರ ನಿನಗೇ ಸೇರಬೇಕು. ಒಂದು ಮಣಿಯನ್ನೂ ಬಿಡಬೇಡ. ಎಲ್ಲವೂ ನಿನ್ನದೇ. ಎಲ್ಲ ಮಣಿಗಳನ್ನೂ ನಾನೇ ಆಯ್ದು ಕೊಡುತ್ತೇನೆ’ ಎನ್ನುತ್ತಾನೆ.

ಆ ಸಂದರ್ಭದಲ್ಲಿ ಬೇರೆ ಯಾರಾದರೂ ಆಗಿದ್ದರೆ ಮಿತ್ರನ ವಿರುದ್ಧ ಕಿಡಿಕಾರುತ್ತಿದ್ದರು. ಕರ್ಣನ ಸಲಿಗೆಯನ್ನು ತಪ್ಪಾಗಿ ಭಾವಿಸುತ್ತಿದ್ದರು. ಆದರೆ ದುರ್ಯೋಧನನಿಗೆ ಕರ್ಣ ಎಂಥವನು ಎಂಬುದು ಗೊತ್ತಿತ್ತು.

ಕಾಲವನ್ನು ತಡೆಯೋರು ಯಾರೂ ಇಲ್ಲ ಎಂಬಂತೆ ದಿನಗಳು ಬದಲಾಗಿವೆ. ಆದರೂ ಸ್ನೇಹದ ಮಹತ್ವ, ಸ್ನೇಹದ ದಾಹ ಮನುಷ್ಯರಲ್ಲಿ ಹಿಂಗಿಲ್ಲ. ಹೀಗಾಗಿಯೇ ಆರ್ಕುಟ್, ಫೇಸ್‌ಬುಕ್, ಟ್ರಿಟರ್‌ನಂತಹ ಸೋಷಿಯಲ್ ನೆಟ್‌ವರ್ಕ್ ವೆಬ್‌ಸೈಟ್‌ಗಳು ಜನಪ್ರಿಯ. ಇದು ಚಾಟಿಂಗ್ ಫ್ರೆಂಡ್ಸ್, ಫೋನ್ ಫ್ರೆಂಡ್ಸ್‌ಗಳ ಕಾಲ.

ಸ್ನೇಹ ಅರಳಲು ಯಾವುದೇ ಕಾರಣಗಳು ಬೇಕಿಲ್ಲ. ಅವನ್ಯಾರೋ, ಇವನ್ಯಾರೋ? ಗೆಳೆಯರಾಗುವ ಮುನ್ನ ಅಪರಿಚಿತರು. ನಂತರ ಫೆವಿಕಾಲ್ ಹಾಕಿದಂತೆ ಅಂಟಿಕೊಳ್ಳುತ್ತಾರೆ. ಪರಿಚಯಕ್ಕೆ ಕಾರಣಗಳಿರುತ್ತವೆಯೇ ಹೊರತು, ಗೆಳೆತನಕ್ಕೆ ಕಾರಣಗಳಿರುವುದಿಲ್ಲ. ಕಾರಣಗಳಿದ್ದರೇ, ಅದು ಗೆಳೆತನವಾಗಲು ಹೇಗೆ ಸಾಧ್ಯ?

ನಮ್ಮ ತಂದೆ ಹೇಳುತ್ತಿದ್ದರು; ‘ನಾವು ಪರಿಚಿತರನ್ನೆಲ್ಲ ಗೆಳೆಯರೆಂದೇ ಕರೆಯುತ್ತೇವೆ. ಪರಿಚಿತರೇ ಬೇರೆ. ಗೆಳೆಯರೇ ಬೇರೆ. ನನ್ನ ಈ ಸುದೀರ್ಘ ಬದುಕಿನಲ್ಲಿ ನನಗೆ ಸಿಕ್ಕಿದ್ದು ಒಬ್ಬನೇ ಒಬ್ಬ ಗೆಳೆಯ. ಅಂತಹ ಒಬ್ಬ ಗೆಳೆಯ ಸಿಕ್ಕರೂ ಸಾಕು, ನೂರು ಆನೆಯ ಶಕ್ತಿ ಬರುತ್ತದೆ’.

ಒಂದೇ ತರಗತಿಯಲ್ಲಿ ಓದಿದ ಮಾತ್ರಕ್ಕೆ, ಅಕ್ಕಪಕ್ಕ ಕೂತ ಮಾತ್ರಕ್ಕೆ, ಒಂದೇ ಕಚೇರಿಯಲ್ಲಿ ಕೆಲಸ ಮಾಡಿದ ಮಾತ್ರಕ್ಕೆ ಗೆಳೆಯರಾಗಲು ಸಾಧ್ಯವೇ? ಎರಡು ಹೃದಯಗಳಲ್ಲಿ ಸ್ನೇಹದ ಹೊಳೆ ಹರಿಯದಿದ್ದರೇ, ಬಂಧವೂ ಇಲ್ಲ, ಸಂಬಂಧವೂ ಇಲ್ಲ.

ಸ್ನೇಹದ ಬಗ್ಗೆ ದಿನಕ್ಕೆ ಹತ್ತು ಎಸ್ಸೆಮ್ಮೆಸ್ ಕಳಿಸುವ ವ್ಯಕ್ತಿಯ ಬಳಿ, ಒಂದೇ ಒಂದು ಸಹಾಯ ಕೇಳಿ ನೋಡಿ.. ಬಣ್ಣ ಬಯಲಾಗುತ್ತದೆ. ಆತ ನಿಮಗಾಗಿ ಯಾರೋ ಕಳಿಸಿದ ಎಸ್ಸೆಮ್ಮೆಸ್‌ಗಳನ್ನಷ್ಟೇ ಫಾರ್ವರ್ಡ್ ಮಾಡುತ್ತಾನೆ! ಎಸ್ಸೆಮ್ಮೆಸ್ ಸೇವೆ ಅವರ ಮೊಬೈಲ್‌ನಲ್ಲಿ ಉಚಿತವಿದ್ದರೇ ಮಾತ್ರ ಈ ಸೇವೆ ಮುಂದುವರಿಯುತ್ತದೆ! ಇವರನ್ನು ‘ಎಸ್ಸೆಮ್ಮೆಸ್ ಗೆಳೆಯ’ ಎನ್ನೋಣವೇ?

ನಾನು ಪದವಿ ತರಗತಿಯಲ್ಲಿ ಓದುವಾಗ ಒಬ್ಬ ಪರಿಚಿತನಾಗಿದ್ದ. ಏನಾದರೂ ಸಹಾಯ ಬೇಕಿದ್ದರೆ ಮಾತ್ರ ಜೊತೆಯಲ್ಲಿರುತ್ತಿದ್ದ. ಈಗಲೂ ಅವನು ಕರೆ ಮಾಡಿದನೆಂದರೆ, ‘ನಟೇಶ ನಿನ್ನಿಂದ ನನಗೊಂದು ಹೆಲ್ಪ್ ಆಗಬೇಕಿತ್ತಲ್ಲ..’ ಎನ್ನುವುದೇ ಆತನ ಮೊದಲ ಮಾತು. ನಾನು ‘ಇಲ್ಲ’ ಎಂದರೆ, ಫ್ರೆಂಡ್‌ಗಾಗಿ ಇಷ್ಟೂ ಮಾಡುವುದಿಲ್ಲವೇ ಎಂಬ ಒಗ್ಗರಣೆ ಬೇರೆ ಇರುತ್ತದೆ.

ಇನ್ನೂ ಕೆಲವರಿರುತ್ತಾರೆ. ಅವರಿಗೆ ಅವರ ಕಷ್ಟಗಳಷ್ಟೇ ದೊಡ್ಡವು! ಸಮಯ ಸಿಕ್ಕರೇ ಸಾಕು, ಕಷ್ಟಗಳ ಪಟ್ಟಿಯನ್ನು ಒಪ್ಪಿಸುತ್ತಿರುತ್ತಾರೆ. ಸದಾ ಅನುಕಂಪವನ್ನು ಕೋರುತ್ತಿರುತ್ತಾರೆ. ಅವರದು ಮುಗಿಯದ ಗೋಳು. ಕಷ್ಟಗಳಿಲ್ಲದ ಮನುಷ್ಯರು ಜಗತ್ತಿನಲ್ಲಿ ಯಾರಿದ್ದಾರೆ ಹೇಳಿ? ಕಷ್ಟಗಳ ಮಧ್ಯೆಯೂ ಬದುಕುತ್ತಿರುವ ನಾವು ದೊಡ್ಡ ‘ಮಹಾತ್ಮ’ರು ಎಂದು ಬಿಂಬಿಸಿಕೊಳ್ಳುವ ಕೆಲವರ ಕಾಯಿಲೆಗೆ ಔಷಧಿಯಿಲ್ಲ.

ಜಾಗತೀಕರಣದ ಈ ದಿನಗಳಲ್ಲಿ ಗೆಳೆತನವನ್ನು ವ್ಯವಹಾರವಾಗಿ ಬದಲಿಸಿಕೊಳ್ಳಿ ಎನ್ನುವ ಸಲಹೆಗಳೂ ಇವೆ. ಎಲ್‌ಐಸಿ ಪಾಲಿಸಿಗಾಗಿ ಗಂಟು ಬೀಳುವ ಗೆಳೆಯರಿದ್ದಾರೆ. ನಮ್ಮ ಪಾಲಿಸಿ ಜೊತೆಗೆ ನಮ್ಮ ಆಪ್ತರ ಪಾಲಿಸಿಗಳನ್ನೂ ಕೊಡಿಸಬೇಕಂತೆ. ಇವರನ್ನು ‘ಎಲ್‌ಐಸಿ ಗೆಳೆಯ’ ಅನ್ನೋಣವೇ?

ಸ್ನೇಹ ಮಾಡುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ ಅನ್ನುತ್ತಾರೆ ಕೆಲವರು. ಉಳಿಸಿಕೊಳ್ಳಲು ಅದೇನು ಕದ್ದ ದುಡ್ಡಾ? ಉಳಿಯಲಿಲ್ಲ ಎಂದರೆ ಅಲ್ಲಿ ಸ್ನೇಹವಿರಲಿಲ್ಲ ಎಂದರ್ಥ. ಅಲ್ಲಿ ಪರಸ್ಪರ ಅವಶ್ಯಕತೆಗಳಿದ್ದವು ಅಷ್ಟೆ.

ಪ್ರೀತಿ, ಸಹೋದರ ಭಾವ, ರಕ್ಷಣೆ, ಮಾರ್ಗದರ್ಶನ, ಆತ್ಮೀಯತೆ, ಟೀಕೆ -ಇದೆಲ್ಲವೂ ಗೆಳೆತನದಲ್ಲಿ ಇವೆ. ಜತೆಗೆ ಇನ್ನೂ ಏನೇನೋ ಇದೆ. ‘ನನಗೊಬ್ಬ ಒಳ್ಳೆಯ ಗೆಳೆಯ ಸಿಕ್ಕಲಿಲ್ಲ’ ಎಂದು ನಾವು ಆಗಾಗ ಗೊಣಗುತ್ತಿರುತ್ತೇವೆ ಅಥವಾ ಯಾರಿಗಾದರೂ ಹೇಳುತ್ತಿರುತ್ತೇವೆ. ಆದರೆ, ‘ನಾನು ಒಳ್ಳೆ ಗೆಳೆಯನೇ?’ ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದು ನಮ್ಮತ್ರ ಇರೋದಿಲ್ವೋ ಅದನ್ನು ಇನ್ನೊಬ್ಬರಲ್ಲಿ ಹುಡುಕುವ ಸ್ವಭಾವ ನಮ್ಮದು!

ಫ್ರೆಂಡ್‌ಶಿಫ್‌ಗೊಂದು ಡೇ!

ಅಮ್ಮನಿಗೊಂದು ದಿನ, ಅಪ್ಪನಿಗೊಂದು ದಿನ, ಪ್ರೇಮಿಗಳಿಗೊಂದು ದಿನ ಇದ್ದ ಮೇಲೆ ಗೆಳೆತನಕ್ಕೊಂದು ದಿನ ಬೇಡವೇ? ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ‘ಅಂತಾರಾಷ್ಟ್ರೀಯ ಸ್ನೇಹ ದಿನ’ವಾಗಿ ಆಚರಿಸಲಾಗುತ್ತಿದೆ. ಆ ದಿನವನ್ನು ಗೆಳೆಯರಿಗೆ ಅರ್ಪಿಸುವ ಪರಿಪಾಠವನ್ನು ಆರಂಭಿಸಿದ್ದು ಅಮೆರಿಕ. ೧೯೩೫ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ಫ್ರೆಂಡ್‌ಶಿಫ್ ಡೇ ಎಂದು ಅಮೆರಿಕದ ಸಂಸತ್ ಘೋಷಿಸಿತು. ಅದು ಹೀಗೆಯೇ ಮುಂದುವರಿದಿದೆ. ಅಮೆರಿಕದಲ್ಲಿ ಇದು ಜನಪ್ರಿಯವಾದ ನಂತರ ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳೂ ಈ ಪದ್ಧತಿಯನ್ನು ಅನುಸರಿಸುತ್ತಿವೆ. ಶಾಲೆ ಕಾಲೇಜುಗಳಲ್ಲಿ ಫ್ರೆಂಡ್‌ಶಿಫ್ ಕ್ರೇಜ್ ಆರಂಭಗೊಂಡಿದೆ. ಫ್ರೆಂಡ್‌ಶಿಫ್ ಕಾರ್ಟ್, ಗಿಫ್ಟ್, ಫ್ರೆಂಡ್‌ಶಿಫ್ ಬ್ಯಾಂಡ್‌ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಆನ್‌ಲೈನ್‌ನಲ್ಲೂ ಮಾರಾಟದ ಭರಾಟೆ ಕಾಣಿಸುತ್ತಿದೆ. ಸ್ನೇಹವನ್ನು ವಾಣಿಜ್ಯೀಕರಣ ಮಾಡಲಾಗಿದ್ದು, ಫ್ರೆಂಡ್‌ಶಿಫ್ ಡೇ ಎನ್ನುವುದು ಮಾರ್ಕೆಂಟಿಂಗ್ ಗಿಮಿಕ್.

ಏನು ಕೊಡಲಿ ಗಿಫ್ಟ್?
ಶುಭಾಶಯ ಪತ್ರ, ನೆಚ್ಚಿನ ಸಿ.ಡಿ ಅಥವಾ ಪುಸ್ತಕ, ಶೋ ಫೀಸ್, ಫೋಟೊ ಫ್ರೇಮ್, ಫೋಟೊ ಆಲ್ಬಮ್, ಪೆನ್ನು, ಡೈರಿ, ಬರೆಯುವ ಪ್ಯಾಡ್, ಗಡಿಯಾರ, ಬೀಗದ ಕೈ, ಪೆನ್ ಸ್ಟ್ಯಾಂಡ್, ಎಲೆಕ್ಟ್ರಾನಿಕ್ ನೋಟ್‌ಬುಕ್ ಮತ್ತಿತರ ವಸ್ತುಗಳನ್ನು ಮಿತ್ರರಿಗೆ ನೀಡುವ ಪರಿಪಾಠ ಬೆಳೆದು ಬಂದಿದೆ. ಇದೆಲ್ಲದರ ಬದಲಿಗೆ ಗೆಳೆಯನಿಗಾಗಿ ನಿಮ್ಮ ‘ಬೆಲೆಕಟ್ಟಲಾಗುವ ಸಮಯ’ವನ್ನು ಕೊಡಬಹುದು! ನಿಜ ಹೇಳಿ, ನಿಮ್ಮ ಜೀವದ ಗೆಳೆಯನನ್ನು ಭೇಟಿ ಮಾಡಿ ಎಷ್ಟು ದಿನ ಅಥವಾ ವರ್ಷವಾಯಿತು? ಅಟ್ ಲೀಸ್ಟ್ ಫೋನ್ ಮಾಡಿ ಯಾವ ಕಾಲವಾಯಿತು?

ಸಿಂಪ್ಲಿ ಟಾಕ್ ಮಾಡೋದನ್ನು ಸ್ಟಾಪ್ ಮಾಡೋಣ್ವಾ?

ಸಾಮಾನ್ಯ

ಭಾಷೆ ಎಂದರೆ ಭಾವಾವೇಶ. ಎದೆಯ ತುಂಬ ನವೋಲ್ಲಾಸ. ಭಾಷೆ ಎಂದರೆ ಪುಳಕ. ಭಾಷೆ ಎನ್ನುವುದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ಒಂದು ನಾಡಿನ ಜೀವನಾಡಿ. ಅದೊಂದು ಸಂಸ್ಕೃತಿ, ಅದೊಂದು ಪರಂಪರೆ. ಭಾಷೆಯಿಂದಲೇ ಬೆಳಕು. ಭಾಷೆಯಿಂದಲೇ ಬದುಕು. ಮಾತೃಭಾಷೆ ಪ್ರಾಮುಖ್ಯವನ್ನು ಅರ್ಥಮಾಡಿಕೊಂಡವರು ಈ ಮಾತುಗಳನ್ನು ಒಪ್ಪುತ್ತಾರೆ ಎನ್ನುವುದು ನನ್ನ ಅಭಿಮತ.

ಭಾಷೆ ಉಳಿದಾಗ ಮಾತ್ರ ನಾಡು ಉಳಿಯುತ್ತದೆ, ಬೆಳೆಯುತ್ತದೆ. ಹೀಗಾಗಿ ನಾಡು-ನುಡಿ ಕಾಯುವ ಕೆಲಸ ಅತ್ಯಂತ ಮಹತ್ವದ್ದು. ದುರದೃಷ್ಟವೆಂದರೆ; ಚಂಪಾ ಹೇಳುವಂತೆ; ಈವರೆಗೆ ಕನ್ನಡ ಸರಕಾರಗಳು ಬರಲೇ ಇಲ್ಲ. ಬರುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪಕ್ಕದ ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಂತೆ ಇಲ್ಲಿ ಭಾಷಾ ರಾಜಕೀಯ ನಡೆಯುವುದಿಲ್ಲ. ಭಾಷೆಗೆ ರಾಜಮಾನ್ಯತೆ ದೊರೆಯುವುದಿಲ್ಲ. ರಾಜ್ಯೋತ್ಸವದ ತಿಂಗಳು ಬಿಟ್ಟರೆ, ಕನ್ನಡದ ಸದ್ದು ಹೊಸ್ತಿಲು ದಾಟುವುದಿಲ್ಲ.

ನಮ್ಮ ನಾಡಿನ ಜನಪ್ರತಿನಿಧಿಗಳು ಕನ್ನಡ ಕಲಿಸುವ ಕೆಲಸಕ್ಕಿಂತ, ಹಿಂದಿ-ಇಂಗ್ಲಿಷ್ ಕಲಿಯುವಲ್ಲಿಯೇ ಗಮನಹರಿಸಿದ್ದು ವಿಷಾದಕರ. ಇಂಗ್ಲಿಷ್ ತಿಳಿಯದೆಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರೊಬ್ಬರು ಕೀಳರಿಮೆಯಿಂದ ನರಳಿದ್ದು, ತಮ್ಮ ಕೀಳರಿಮೆಯನ್ನೇ ಸಾರ್ವತ್ರೀಕರಣಗೊಳಿಸಿದ್ದು ಅಕ್ಷಮ್ಯ. ಈ ನಾಡಿನ ರಾಜಕಾರಣಿಗಳು ಟಿ.ವಿ ಚಾನೆಲ್‌ಗಳ ಎದುರು ಮುರುಕು ಇಂಗ್ಲಿಷ್‌ನಲ್ಲಿ ಸಂವಹನ ನಡೆಸಿ ನಗೆಪಾಟಲಿಗೀಡಾದ ಪ್ರಸಂಗ ಇನ್ನೂ ಹಸಿಯಾಗಿದೆ. ತಮಿಳಿನಲ್ಲಿಯೇ ನುಡಿಯುವ ಮತ್ತು ಕೆಮ್ಮುವ ಕರುಣಾನಿಧಿ ಮತ್ತು ಜಯಲಲಿತಾ ನಮ್ಮವರಿಗೆ ಮಾದರಿಯಾಗಬಾರದೇ?

ಮಾತೃ ಭಾಷೆ ಬಗ್ಗೆ ಪ್ರೇಮವಿಲ್ಲದ ಇಂಗ್ಲಿಷ್ ಮೋಹಿತ ಜನಪ್ರತಿನಿಧಿಗಳ ದೆಸೆಯಿಂದಾಗಿಯೇ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆಯಲು ತಿಣುಕಾಡಬೇಕಾಯಿತು. ನವೆಂಬರ್ ಹಿಂದೆಮುಂದಷ್ಟೆ ಗುರ್‌ಗುರ್ ಎನ್ನುವ ಜನಪ್ರತಿನಿಧಿಗಳಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಇಂದು ಕನ್ನಡ ತಿಳಿಯದಿದ್ದರೂ ರಾಜಧಾನಿ ನಗರ ಬೆಂಗಳೂರಿನಲ್ಲಿ ಆರಾಮವಾಗಿ ಬದುಕಬಹುದು. ಅದೇ ಇಂಗ್ಲಿಷ್ ತಿಳಿಯದಿದ್ದರೆ, ಸೆಕ್ಯೂರಿಟಿಗಾರ್ಡ್ ಕೆಲಸ ಸಹಾ ದಕ್ಕುವುದಿಲ್ಲ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ತಿಳಿಯದಿದ್ದರೆ ಬೆಂಗಳೂರು ಅಸಹನೀಯ!

ಒಂದರ್ಥದಲ್ಲಿ ಕನ್ನಡಿಗ ಬೆಂಗಳೂರೆಂಬ ಘೋರ ಕಾನನದಲ್ಲಿ ದಾರಿ ತಪ್ಪಿದ ಪೋರ. ಹತ್ತಾರು ವರ್ಷ ಬೆಂಗಳೂರಿನಲ್ಲಿದ್ದರೂ ಒಂದಕ್ಷರ ಕನ್ನಡ ನುಡಿಯದ ಅನ್ಯ ಭಾಷಿಗರು ನಮ್ಮ ನಡುವೆ ಇದ್ದಾರೆ. ಕನ್ನಡ ಕಲಿಯುವ ಅನಿವಾರ್ಯತೆ ಬಾರದ ಹೊರತು, ಪರಿಸ್ಥಿತಿ ಬದಲಾಗುವುದಿಲ್ಲ. ಕನ್ನಡ ಭಾಷೆ ಬೆಳೆಯದ ಹೊರತು ಸಾಹಿತ್ಯ, ಸಂಸ್ಕೃತಿ, ಚಲನಚಿತ್ರ, ಸಂಗೀತ -ಹೀಗೆ ನಾನಾ ಕ್ಷೇತ್ರಗಳು ಸಮೃದ್ಧವಾಗಿ ಬೆಳೆಯಲಾರವು. ಸೀಮಿತ ಮಾರುಕಟ್ಟೆ ಬಗ್ಗೆಯೇ ಮಾತನಾಡುವ ಮಂದಿ, ಮಾರುಕಟ್ಟೆ ವಿಸ್ತರಣೆಗೆ ತಾವು ಮಾಡಿದ ಕೆಲಸದ ಬಗ್ಗೆ ಹೇಳುವುದಿಲ್ಲ. ತೆಲುಗರ ಮುಂದೆ ತೆಲುಗರಾಗಿ, ತಮಿಳರ ಮುಂದೆ ತಮಿಳರಾಗಿ ನಮ್ಮ ಭಾಷಾ ನೈಪುಣ್ಯ ಮತ್ತು ಹೃದಯ ವೈಶಾಲ್ಯವನ್ನು ಪ್ರದರ್ಶಿಸುವ ಹುಚ್ಚಿನ ಭರದಲ್ಲಿ ನಾವೇ ಕನ್ನಡಕ್ಕೆ ಕಂಟಕವಾಗುತ್ತಿದ್ದೇವೆ. ಅನ್ಯ ಭಾಷಿಗರಿಗೆ ಕನ್ನಡ ಕಲಿಯುವ ಅವಕಾಶವನ್ನೇ ನಾವು ಕಸಿದಿದ್ದೇವೆ. ಆಯಾ ನೆಲದಲ್ಲಿ ಆಯಾ ಭಾಷೆಯೇ ಸಾಮ್ರಾಟ. ಅದೇ ನ್ಯಾಯ.

‘ಕನ್ನಡಕ್ಕೆ ಏನೋ ಅಪಾಯವಾಗುತ್ತಿದೆ.. ಯಾರೋ ಕನ್ನಡ ಮಾತನಾಡುತ್ತಿಲ್ಲ ಎಂದು ಯಾಕೆ ಕೊರಗಬೇಕು? ನನಗೆ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ ಸಾಕಷ್ಟು ಭಾಷೆ ಗೊತ್ತು.. ಸಂದರ್ಭಾನುಸಾರ ನಾನು ಎಲ್ಲಾ ಭಾಷೆ ಮಾತಾಡುತ್ತೇನೆ’ ಎಂದು ಸಮಾರಂಭವೊಂದರಲ್ಲಿ ‘ಮಠ ’ ಚಿತ್ರದ ನಿರ್ದೇಶಕ ಗುರುಪ್ರಸಾದ್ ಹೆಮ್ಮೆಯಿಂದ ಹೇಳಿದ್ದರು. ಅಷ್ಟರ ಜತೆಗೆ ಅವರು, ‘ಯಾರು ಯಾವ ಭಾಷೆ ಬೇಕಾದರೂ ಕಲಿಯಲಿ. ಮಾತನಾಡಲಿ. ಅದಕ್ಕೆ ನಮ್ಮದೇಕೆ ಅಭ್ಯಂತರ? ಯಾರೋ ಕನ್ನಡ ಮಾತನಾಡುತ್ತಿಲ್ಲ ಎಂದು ಯಾಕೆ ಕೊರಗಬೇಕು? ಅವರನ್ನು ಅವರ ಪಾಡಿಗೆ ಬಿಡಿ’ ಎಂದಿದ್ದರು.

ಗುರು ಮಾತಲ್ಲಿ ಅಪಾಯವಿದೆ. ಕನ್ನಡ ಬಾರದೇ ಈ ನೆಲದಲ್ಲಿ ಒಂದು ಕ್ಷಣವೂ ಇರಲಾಗದು ಎಂದು ಅನ್ನಿಸದ ಹೊರತು, ಅನ್ಯರು ಕನ್ನಡ ಕಲಿಯುವುದಿಲ್ಲ. ಕನ್ನಡ ಮಾರುಕಟ್ಟೆ ಬೆಳೆಯುವುದಿಲ್ಲ.

ಕನ್ನಡ ಗಣಕ

ಭಾಷೆ ಉಳಿಯಬೇಕಾದರೆ, ಅದನ್ನು ಬಳಸಬೇಕು! ಅಂತರ್ಜಾಲದ ಅಪಾರ ಸಾಧ್ಯತೆಗಳನ್ನು ಸಮಸ್ತ ಕನ್ನಡಿಗರು ಬಳಸಿಕೊಳ್ಳಲು, ಆ ಮೂಲಕ ಇಂಗ್ಲಿಷ್ ಪ್ರವಾಹಕ್ಕೆ ತಡೆಯೊಡ್ಡಲು ಕನ್ನಡ ಗಣಕವೊಂದೇ ಪರಿಹಾರ. ಬರಹ-ನುಡಿಗಳಾಚೆ ಕನ್ನಡವನ್ನು ಬೆಳೆಸುವ ಜವಾಬ್ದಾರಿ ಸರಕಾರದ್ದು. ಕನ್ನಡವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅನೇಕರು ಸ್ವಪ್ರೇರಣೆಯಿಂದ ಪ್ರೋಗ್ರಾಮ್‌ಗಳನ್ನು ಬರೆಯುತ್ತಿದ್ದಾರೆ, ಸಾಫ್ಟ್‌ವೇರ್‌ಗಳನ್ನು ಕಂಡು ಹಿಡಿಯುತ್ತಿದ್ದಾರೆ.

ಎಲ್ಲ ಇಂಟರ್‌ನೆಟ್ ಬ್ರೌಸಿಂಗ್ ಸೆಂಟರ್‌ಗಳಲ್ಲಿ, ಖಾಸಗಿ ಮತ್ತು ಸರಕಾರಿ ಕಚೇರಿಗಳಲ್ಲಿನ ಗಣಕಗಳಲ್ಲಿ ಬರಹ-ನುಡಿಗಳನ್ನು ಅನುಸ್ಥಾಪಿಸಬೇಕು. ಆ ಮೂಲಕ ಫಾಂಟ್‌ಗಳ ತೊಂದರೆಯಿಂದ ಕನ್ನಡ ಬಳಸುತ್ತಿಲ್ಲ ಎಂಬ ನೆಪವನ್ನು ತಳ್ಳಿಹಾಕಬಹುದು. ಜತೆಗೆ ಮೂಲಭೂತವಾಗಿ ಕಂಪ್ಯೂಟರ್ ಕನ್ನಡಮಯವಾಗಲು ಸಾಧ್ಯವಾಗುತ್ತದೆ. ಸರಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಆದೇಶವೊಂದನ್ನು ಹೊರಡಿಸಬೇಕಾಗಿದೆ.

ಅತ್ಯಂತ ಪರಿಣಾಮಕಾರಿಯಾದ ಅಂತರ್ಜಾಲ ಮಾಧ್ಯಮವನ್ನೂ ಗಂಭೀರವಾಗಿ ಪರಿಗಣಿಸಬೇಕು. ಮುದ್ರಣ ಮಾಧ್ಯಮಕ್ಕೆ ನೀಡಿದಂತೆಯೇ ಸರಕಾರಿ ಜಾಹೀರಾತುಗಳನ್ನು ನೀಡುವ ಮೂಲಕ ಕನ್ನಡ ವೆಬ್‌ಸೈಟ್‌ಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಕ್ರಿಯಾಶೀಲವಾಗಿರುವುದು ಒಂದೆರಡೇ ವೆಬ್‌ಸೈಟ್‌ಗಳಾಗಿರುವುದರಿಂದ, ಸರಕಾರಕ್ಕೇನು ಭಾರವಾಗದು. ಜಾಗತಿಕ ಕನ್ನಡಿಗರಿಗೆ ಕನ್ನಡದ ವರ್ತಮಾನಗಳನ್ನು ತಲುಪಿಸುವ ಕೆಲಸ ಮಾಡುತ್ತಾ, ತವರಿನ ಜತೆ ಎನ್‌ಆರ್‌ಐ ಕನ್ನಡಿಗರ ಬೆಸೆಯುತ್ತಿರುವ ವೆಬ್‌ಸೈಟ್‌ಗಳನ್ನು ಕಡೆಗಣಿಸುವುದು ಸಲ್ಲದು.

ಜಾಹೀರಾತುದಾರರ ಬೆಂಬಲ ಮತ್ತು ಕನ್ನಡಿಗರ ಪ್ರೀತಿಯ ಕೊರತೆಯಿಂದಾಗಿ ಕನ್ನಡ ವೆಬ್‌ಸೈಟ್‌ಗಳು ಕಣ್ ಮುಚ್ಚುತ್ತಿವೆ. ಈ ಮಾತಿಗೆ ‘ಕೆಂಡ ಸಂಪಿಗೆ’ವೆಬ್‌ಸೈಟ್ ಹೊಸ ಉದಾಹರಣೆ.

ಎಲ್ಲಿದ್ದಾರೆ ಕನ್ನಡ ಜಾಣ-ಜಾಣೆಯರು?

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕಂಪ್ಯೂಟರ್ -ಹೀಗೆ ಏನೇ ಇರಲಿ.. ಎಲ್ಲವನ್ನೂ ಮಾತೃ ಭಾಷೆಯಲ್ಲಿ ಯೋಚಿಸಿದಾಗ ಮಾತ್ರ ಮನನವಾಗುತ್ತದೆ. ಇಂದು ಕನ್ನಡದಲ್ಲಿ ತಪ್ಪಿಲ್ಲದೇ ಬರೆಯುವವರು ಅತಿ ವಿರಳ. ಕನ್ನಡ ಎಂ.ಎ. ಪದವೀಧರರ ಬರವಣಿಗೆಯಲ್ಲೂ  ಸಾಕಷ್ಟು ಕಾಗುಣಿತ ದೋಷಗಳನ್ನು ಗಮನಿಸಬಹುದು.

ಬರವಣಿಗೆಯಿರಲಿ, ಶುದ್ಧ ಕನ್ನಡ ಮಾತು ಕಿವಿಗೆ ಬಿದ್ದರೆ ಪುಣ್ಯ ಮಾಡಿರಬೇಕು. ಪ್ರಾಥಮಿಕ ಹಂತದಿಂದ ಹಿಡಿದು ಪದವಿಯ ವರೆಗೆ ಹತ್ತಾರು ವರ್ಷ ಕನ್ನಡ ಅಧ್ಯಯನ ಮಾಡಿದ ಬಹುತೇಕರಿಗೆ ಅಲ್ಪಪ್ರಾಣ-ಮಹಾಪ್ರಾಣ, ಹ್ರಸ್ವ-ದೀರ್ಘಗಳ ವ್ಯತ್ಯಾಸವೇ ಗೊತ್ತಿಲ್ಲ! – ಉತ್ತಮ ಭಾಷಾ ಶಿಕ್ಷಕರ ಕೊರತೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಿನ ಮಕ್ಕಳಿರಲಿ, ಕೆಲವು ಶಿಕ್ಷಕರಿಗೆ ಸಂಧಿ-ಸಮಾಸಗಳ ಗಂಧವೇ ಗೊತ್ತಿಲ್ಲ. ಇನ್ನು ಅಲಂಕಾರ, ಛಂದಸ್ಸುಗಳ ತಂಟೆಗೆ ಹೋಗುವಂತೆಯೇ ಇಲ್ಲ. ‘ಕೇಶಿರಾಜ’ನನ್ನು ‘ಕೆ.ಸಿ.ರಾಜ’ಎಂದು ತಿಳಿದುಕೊಂಡಿರುವ ಕನ್ನಡಿಗರೂ ನಮ್ಮ ನಡುವೆ ಇದ್ದಾರೆ!

ಕನ್ನಡ ಜಾಣ-ಜಾಣೆಯರನ್ನು ಸೃಷ್ಟಿಸುತ್ತಿದ್ದ ಕನ್ನಡ ಪಂಡಿತ್ ಕೋರ್ಸನ್ನು ಸರಕಾರ ಕೆಲವು ವರ್ಷಗಳ ಹಿಂದೆಯೇ ರದ್ದು ಪಡಿಸಿದೆ. ೫ ವರ್ಷಗಳ ಈ ಕೋರ್ಸ್ ಮಾಡಿದವರು ಕನ್ನಡವನ್ನು ಅರೆದು ಕುಡಿಯುತ್ತಿದ್ದರು. ಕನ್ನಡ ಪಂಡಿತ್ ಕೋರ್ಸ್ ಮುಗಿಸಿದ ಮೇಲೆ ಶಿಕ್ಷಕರಾಗುವ ಅವಕಾಶಗಳಿದ್ದವು. ಆದರೆ ಕನ್ನಡ ಪಂಡಿತ್ ಮುಗಿಸಿದರೂ, ಹೈಸ್ಕೂಲ್ ಶಿಕ್ಷಕರಾಗಲು ಬಿಎಡ್ ಕಡ್ಡಾಯ ಎಂಬ ನೀತಿಯನ್ನು ಸರಕಾರ ಅನುಸರಿಸಿತು. ಈ ಕಾರಣ, ೫ ವರ್ಷಗಳ ಕಬ್ಬಿಣದ ಕಡಲೆಯಂತಿದ್ದ ಕನ್ನಡ ಪಂಡಿತ್ ಕೋರ್ಸ್‌ಗಿಂತಲೂ, ಮೂರುವರ್ಷಗಳ ಪದವಿ ನಂತರ, ಬಿಎಡ್ ಮುಗಿಸುವುದನ್ನೇ ಅನೇಕರು ಆಯ್ದುಕೊಂಡರು.

ಕನ್ನಡ ಪಂಡಿತ್ ಕೋರ್ಸನ್ನು ಪುನಾರಂಭಿಸಿ, ಆ ಕೋರ್ಸ್ ಮುಗಿಸಿದವರಿಗಷ್ಟೆ ಕನ್ನಡ ಶಿಕ್ಷಕರ ಹುದ್ದೆ ಎಂಬ ನಿಯಮವನ್ನು ಸರಕಾರ ಜಾರಿಗೆ ತರಬೇಕು. ಕನ್ನಡವನ್ನು ನಂಬಿ ಬದುಕುವ ಪರಿಸ್ಥಿತಿ ಆಗ ಒಂದಿಷ್ಟಾದರೂ ನಿರ್ಮಾಣವಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಾಣ, ಕಾವ, ರತ್ನ ಪರೀಕ್ಷೆ ಪಾಸು ಮಾಡಿದವರಿಗೆ ಸರಕಾರ ಒಂದಿಷ್ಟು ಆದ್ಯತೆ ನೀಡಿದರೆ, ಇವುಗಳತ್ತ ಅನೇಕರು ಆಕರ್ಷಿತರಾಗುತ್ತಾರೆ. ಆ ಮೂಲಕ ನಾಡು-ನುಡಿಯ ಪ್ರಜ್ಞೆ ಜೀವಂತವಾಗುತ್ತದೆ.

ಪುಸ್ತಕೋದ್ಯಮದ ಸವಕಲು ಪುಟಗಳು

ಒಂದು ಸಾವಿರ ಮುದ್ರಿಸುವುದಾಗಿ ಹೇಳಿ ಐದಾರು ಸಾವಿರ ಪ್ರತಿಗಳನ್ನು ಪ್ರಕಟಿಸುವುದು, ಲೇಖಕರಿಗೆ ಗೌರವ ಧನ ನೀಡದೇ ನಾಮ ಹಾಕುವ ದರಿದ್ರ ವ್ಯವಸ್ಥೆಯಿಂದ ಪುಸ್ತಕ ಪ್ರಕಾಶನ ನರಳುತ್ತಿದೆ. ನಮ್ಮಲ್ಲಿ ಲೈಬ್ರರಿ ಪ್ರಕಾಶಕರು ಮತ್ತು ಜನಹಿತ ಪ್ರಕಾಶಕರು ಎಂಬ ಎರಡು ಗುಂಪುಗಳಿವೆ. ಅದರಲ್ಲೂ ಲೈಬ್ರರಿ ಪ್ರಕಾಶಕರ ಸಂಖ್ಯೆ ದೊಡ್ಡದು. ಗ್ರಂಥಾಲಯ ಇಲಾಖೆಯ ದುಡ್ಡು ನಂಬಿ, ಇವರು ಬದುಕುತ್ತಾರೆ. ಇವರ ದೆಸೆಯಿಂದ ಪುಸ್ತಕಗಳು ಲೈಬ್ರರಿಯ ಕತ್ತಲೆ ಕೋಣೆಯಲ್ಲಿ ಕೊಳೆಯುತ್ತಿವೆ. ಒಂದು ಒಳ್ಳೆಯ ಪುಸ್ತಕ ಓದುವ ಬಯಕೆ ಪುಸ್ತಕ ಪ್ರೇಮಿಗಳಲ್ಲಿ ಸಹಜ. ಆದರೆ ಆ ಪುಸ್ತಕ ಖರೀದಿಸಲು ಕರ್ನಾಟಕದ ಕುಗ್ರಾಮಗಳಲ್ಲಿನ ಓದುಗ, ಬೆಂಗಳೂರಿಗೆ ಬರಬೇಕಾದ ಪರಿಸ್ಥಿತಿ ಇದೆ. ಓದುಗರು ಮತ್ತು ಪ್ರಕಾಶಕರ ನಡುವಿನ ಅಂತರ, ಈ ಸಮಸ್ಯೆಗೆ ಪ್ರಮುಖ ಕಾರಣ.

ಪ್ರಕಾಶನಗಳಿಂದ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸುತ್ತದೆ. ಆದರೆ ಕೆಲವು ಪ್ರಕಾಶಕರು ಬೇರೆಬೇರೆ ಹೆಸರಲ್ಲಿ ೮-೧೦ ಪ್ರಕಾಶನಗಳನ್ನು ಹೊಂದಿದ್ದಾರೆ. ಇದು ಹಣ ನುಂಗಲು ದಾರಿಯಾಗಿದ್ದು, ಪ್ರಾಮಾಣಿಕ ಪ್ರಕಾಶಕರಿಗೆ ತೊಂದರೆಯಾಗಿದೆ.  ಗೌರವ ಧನ ನೀಡದೇ ವಂಚಿಸುವ ಪ್ರಕಾಶಕನಿಗೆ ಪಾಠ ಕಲಿಸುವ ಅಥವಾ ಬರಹದ ಹಕ್ಕುಗಳನ್ನು ಮೂರುನಾಲ್ಕು ಪ್ರಕಾಶಕರಿಗೆ ಮಾರುವ ಲೇಖಕನಿಗೆ ಶಿಕ್ಷೆ ನೀಡುವ ಕಾನೂನುಗಳು ನಮ್ಮಲ್ಲಿಲ್ಲ. ಹೀಗಾಗಿ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ. ನಕಲಿ ಪುಸ್ತಕಗಳ ಜಾಲ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಸಮಗ್ರ ಪುಸ್ತಕ ನೀತಿ ಅತ್ಯಗತ್ಯ ಎಂಬುದು ಸುಮುಖ ಪ್ರಕಾಶನದ ನಾರಾಯಣ್ ಮಾಲ್ಕೋಡ್ ಅಭಿಪ್ರಾಯ.

ಕನ್ನಡದ ಮಾರುಕಟ್ಟೆ ಚಿಕ್ಕದು, ಓದುಗರ ಕೊರತೆ ಇದೆ ಎನ್ನುವ ಮಾತಿನಲ್ಲಿ ಎಳ್ಳಷ್ಟು ಹುರುಳಿಲ್ಲ. ಕನ್ನಡ ಪುಸ್ತಕ ಪ್ರಾಕಾರವು ಪ್ರಕಾಶನ ಸಂಸ್ಥೆಯಾಗಿ ಬದಲಾಗಿದೆ! ಅದರ ಕಾರ್ಯಾವೈಖರಿ ಬದಲಾಗಬೇಕು. ಅದು ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿ ಮಾಡಿ, ತಾಲೂಕು ಕೇಂದ್ರಗಳಲ್ಲಿ ಮಾರಾಟ ಮಾಡಬೇಕು. ಎಲ್ಲಾ ಕಡೆ ಪ್ರಕಾಶಕರೇ ಮಳಿಗೆ ತೆರೆಯುವ ವ್ಯವಸ್ಥೆ ಜಾರಿಗೆ ಬರಲು, ಇನ್ನೂ ಸಮಯ ಬೇಕು. ಆ ಮಟ್ಟಕ್ಕೆ ಕನ್ನಡ ಪ್ರಕಾಶಕರು ಬೆಳೆದಿಲ್ಲ. ಹೊಸ ಪುಸ್ತಕಗಳ ಬಗ್ಗೆ ಓದುಗರಿಗೆ ಮಾಹಿತಿ ಸಿಗುತ್ತಿಲ್ಲ.

ಕನ್ನಡ ಪತ್ರಿಕೆಗಳನ್ನು ಈ ಬಗ್ಗೆ ದೂರುವಂತಿಲ್ಲ. ಪ್ರಕಟವಾಗುವ ಸಾವಿರಾರು ಪುಸ್ತಕಗಳಿಗೆ ಜಾಗ ನೀಡಲು ಪತ್ರಿಕೆಗಳಿಗೆ ಕಷ್ಟ.  ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ನೀಡುವ ಪತ್ರಿಕೆಗಳನ್ನು ಆರಂಭಿಸಿ, ಅನೇಕರು ವಿಫಲರಾಗಿದ್ದಾರೆ. ತಾಲೂಕು ಕೇಂದ್ರಗಳಲ್ಲಿ ಮಳಿಗೆಗಳನ್ನು ತೆರೆದು, ಕನ್ನಡ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಕೆಲಸವನ್ನು ಪ್ರಕಾಶಕರು ಮಾಡಬೇಕಿದೆ.

ಓದುಗರು ಬೆಚ್ಚುವಷ್ಟು ಕೆಲವು ಕನ್ನಡ ಪುಸ್ತಕಗಳು ದುಬಾರಿ. ಕೆಲವು ಪ್ರಕಾಶನಗಳು ಪುಟಕ್ಕೆ ೪೦-೪೨ ಪೈಸೆ ನಿಗದಿ ಪಡಿಸುತ್ತದೆ. ಕೆಲವು ಪ್ರಕಾಶಕರು ಲಾಭದ ಆಸೆಯಿಂದ ೭೦-೮೦ ಪೈಸೆ ನಿಗದಿ ಮಾಡುತ್ತಾರೆ. ಪುಸ್ತಕೋದ್ಯಮದಲ್ಲಿ ಲಾಭ-ನಷ್ಟಗಳ ಮೇಲಾಟವೇ ನಡೆಯುತ್ತಿದೆ.

ಧ್ವನಿ ಸುರುಳಿ ಕಂಪನಿಗಳಿಗೆ ಬೀಗ

ಪೈರಸಿ ಎನ್ನುವ ಪಿಡುಗು ಕನ್ನಡ ಪುಸ್ತಕೋದ್ಯಮದ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಆದರೆ ಧ್ವನಿ ಸುರುಳಿ ಮತ್ತು ವಿಸಿಡಿ, ಡಿವಿಡಿ ಮಾರುಕಟ್ಟೆ ಮೇಲೆ ರಾಕ್ಷಸನಂತೆ ಎರಗಿದೆ. ಸುಮಾರು ೧ ಲಕ್ಷ ಮಂದಿ ಕ್ಯಾಸೆಟ್ ಉದ್ಯಮ ನಂಬಿ ಬದುಕುತ್ತಿದ್ದಾರೆ. ಪೈರಸಿ ತಡೆಯಲು ಗೂಂಡಾ ಕಾಯಿದೆ ಜಾರಿಗೆ ತರುವುದಾಗಿ ಎಲ್ಲಾ ಸರಕಾರಗಳು ಹೇಳುತ್ತಿದ್ದವು. ಈ ನಿಟ್ಟಿನಲ್ಲಿ ಯಡಿಯೂರಪ್ಪ ಒಂದೆಜ್ಜೆ ಮುಂದೆ ಇಟ್ಟಿದ್ದಾರೆ. ಆದರೂ ಪೈರಸಿ ಪಿಡುಗು ಗಣನೀಯವಾಗಿ ಕಡಿಮೆಯಾಗಿಲ್ಲ. ಮುಂಬಯಿ, ದಿಲ್ಲಿ, ಕೋಲ್ಕತಾ, ಗೋವಾದಲ್ಲಿ ಕನ್ನಡ ಕ್ಯಾಸೆಟ್‌ಗಳಿಗೆ ಉತ್ತಮ ಮಾರುಕಟ್ಟೆಯಿದೆ.

‘ಪ್ರೇಮಲೋಕ ಚಿತ್ರದ ೪೦ ಲಕ್ಷ ಕ್ಯಾಸೆಟ್‌ಗಳನ್ನು ಲಹರಿ ಸಂಸ್ಥೆ ಮಾರಾಟ ಮಾಡಿದ್ದನ್ನು ಉದ್ಯಮ ಕಂಡಿದೆ. ಈ ಅಂಶಗಳು ಕನ್ನಡ ಧ್ವನಿ ಸುರುಳಿಗಿರುವ ಮಾರುಕಟ್ಟೆಯನ್ನು ವಿವರಿಸುತ್ತವೆ. ಆದರೆ ಪೈರಸಿ ಹಾವಳಿಯಿಂದ ಆಡಿಯೊ ಕಂಪನಿಗಳಿಗೆ ಬೀಗ ಜಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೈರಸಿ ವಿರುದ್ಧ ನಾವು ೬೫೦ ಪ್ರಕರಣ ದಾಖಲಿಸಿದ್ದೇವೆ. ಯಾರಿಗೂ ಶಿಕ್ಷೆಯಾಗಿಲ್ಲ. ೧.೨೪ ಲಕ್ಷ(೮೦ ಸಾವಿರ ಕನ್ನಡ ) ಧ್ವನಿ ಸುರುಳಿಗಳನ್ನು ಸಂಸ್ಥೆ ಹೊರತಂದಿದೆ. ಆದರೆ ಇಂದು ಉದ್ಯಮ ಇಕ್ಕಟ್ಟಿನಲ್ಲಿದೆ. ೨೫-೩೦ ಲಕ್ಷ ಹಣ ಹೂಡಿಕೆ ಮಾಡಿದರೆ, ಒಂದೆರಡು ಲಕ್ಷವೂ ಲಾಭ ದೊರಕುತ್ತಿಲ್ಲ’ ಎಂದು ಲಹರಿ ಸಂಸ್ಥೆಯ ವೇಲು ಸಮಾರಂಭವೊಂದರಲ್ಲಿ ಅಲವತ್ತುಗೊಂಡಿದ್ದಾರೆ.

ಸಿನಿಮಾ ತೆರೆಗೆ ಬಂದ ೪-೫ ದಿನಗಳೊಳಗೆ ಪೈರಸಿ ವಿಸಿಡಿಗಳು ಮಾರುಕಟ್ಟೆ ಪ್ರವೇಶಿಸುತ್ತವೆ. ಮನೆಯ ಟಿ.ವಿ, ಕಂಪ್ಯೂಟರ್‌ನಲ್ಲಿ ಸಿನಿಮಾ ನೋಡುವ ಮನುಷ್ಯ ಚಿತ್ರಮಂದಿರಕ್ಕೆ ಯಾಕೆ ಬರುತ್ತಾನೆ? ಅಂದಹಾಗೆ, ಜೇನು ತುಪ್ಪ ಪಕ್ಕದಲ್ಲಿರುವಾಗ ಕೈ ಹಾಕುವುದು ಸಹಜ. ಅದು ಕಳ್ಳತನ, ಇನ್ನೊಬ್ಬರ ಶ್ರಮಕ್ಕೆ ಬೆಲೆ ಕೊಡದ ವಂಚನೆ, ಮೌಲ್ಯಗಳ ಪ್ರಶ್ನೆ -ಇವೆಲ್ಲವೂ ಆ ಸಂದರ್ಭದಲ್ಲಿ ಅಪ್ರಸ್ತುತ.

ಸಂಗೀತ, ಹಾಡು, ಸಿನಿಮಾ, ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೀಗಾಗಿ ಧ್ವನಿ ಸುರುಳಿ, ಚಲನಚಿತ್ರ ಮತ್ತು ಪುಸ್ತಕೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸಾಕಷ್ಟು ಲಾಭ ಉಂಡರೂ ಧ್ವನಿ ಸುರುಳಿ ಕಂಪನಿಗಳು, ಚಲನಚಿತ್ರ ನಿರ್ಮಾಪಕರು ಮತ್ತು ಪ್ರಕಾಶಕರಿಗೆ ತೃಪ್ತಿಯಿಲ್ಲ. ಹೀಗಾಗಿ ನಕಲು ಮಾಡುವುದರತ್ತ ಜನರು ಆಸಕ್ತರಾಗುತ್ತಾರೆ. ಹೀಗಾಗಿ ಪುಸ್ತಕ ಮತ್ತು ಚಲನಚಿತ್ರಗಳ ಹಕ್ಕುಸ್ವಾಮ್ಯದ ಅವಯನ್ನು ಮಿತಿಗೊಳಿಸುವುದು ಒಳ್ಳೆಯದು. ಸರಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ.

ತೆರೆ ಮೇಲಷ್ಟೆ ನಾಯಕರು!

ಕಾವೇರಿ ಚಳವಳಿಗಾಗಿ ತಮಿಳುನಾಡಿನ ನಟರು ವಿದೇಶದ ಚಿತ್ರೀಕರಣ ನಿಲ್ಲಿಸಿ ಚೆನ್ನೈ ಕಡೆ ಹೆಜ್ಜೆ ಹಾಕುತ್ತಾರೆ. ಆದರೆ ನಮ್ಮಲ್ಲಿ? ಬೆಂಗಳೂರಿನಲ್ಲಿದ್ದರೂ ಚಳವಳಿ ನಡೆಯುವ ದಿಕ್ಕಿನತ್ತ ನೋಡದ ನಟ-ನಟಿಯರು ಒಬ್ಬಿಬ್ಬರಲ್ಲ. ನಾಡು-ನುಡಿ ಬಗ್ಗೆ ಎದ್ದು ನಿಲ್ಲುತ್ತಿದ್ದ ರಾಜ್‌ಕುಮಾರ್ ನಿಧನದ ನಂತರ ಚಿತ್ರೋದ್ಯಮದಲ್ಲೊಂದು ಬೃಹತ್ ಶೂನ್ಯ.

ಉದಯ ಟಿ.ವಿ ಸಂದರ್ಶನವೊಂದನ್ನು ಇಲ್ಲಿ ಪ್ರಸ್ತಾಪಿಸುವುದು ನಮ್ಮವರ ಕನ್ನಡ ತಾತ್ಸಾರಕ್ಕೆ ಉದಾಹರಣೆಯಾಗಬಲ್ಲದು. ನಾಲ್ಕಾರು ವರ್ಷಗಳ ಹಿಂದೆ ದೀಪಕ್ ತಿಮ್ಮಯ್ಯ ಅವರು ನಟ ವಿಷ್ಣುವರ್ಧನ್ ಅವರನ್ನು ಸಂದರ್ಶಿಸುತ್ತಿದ್ದರು. ಇಬ್ಬರೂ ಹದಿನಾರಾಣೆ ಕನ್ನಡಿಗರು. ತಮಾಷೆಯೆಂದರೆ ಸಂದರ್ಶನದುದ್ದಕ್ಕೂ ಇಬ್ಬರೂ ಇಂಗ್ಲಿಷ್‌ನಲ್ಲಿಯೇ ಮಾತನಾಡಿದರು! ನಮ್ಮ ಕನ್ನಡದ ಬೆಡಗಿಯರಂತೂ ಆಕ್ಸಫರ್ಡ್‌ನಲ್ಲಿ ಕಲಿತವರಂತೆ ಇಂಗ್ಲಿಷ್‌ನಲ್ಲಿಯೇ ಬಳುಕುತ್ತಾರೆ. ಅಪ್ಪಿತಪ್ಪಿಯಷ್ಟೆ ಕನ್ನಡ ಪದ ಹೊರ ನುಸುಳುತ್ತದೆ!

ಮೊನ್ನೆ ಟಿ.ವಿ ಕಾರ್ಯಕ್ರಮವೊಂದರಲ್ಲಿ ಇಂಗ್ಲಿಷ್‌ನಲ್ಲಿಯೇ ಭಾವನೆಗಳ ಹಂಚಿಕೊಂಡ ನಟಿ ಭಾವನಾ, ಕಾರ್ಯಕ್ರಮದ ಕೊನೆಗೆ ಆಟೋಗ್ರಾಫ್‌ನಲ್ಲಿ ‘ಕನ್ನಡ ನಾಡು-ನುಡಿ ಉಳಿಯಲಿ’ ಎಂದು ಬರೆದು ಧನ್ಯತೆ ಅನುಭವಿಸಿದರು! ಭೇಷ್ ಭಾವನಾ! 

ಇಂಗ್ಲಿಷ್ ಬೇಡ್ವಾ?

ಶಿಕ್ಷಣ ಮಾಧ್ಯಮದಲ್ಲಿ ಯಾವುದೇ ದ್ವಂದ್ವಗಳು ಬೇಡ. ಮಾತೃಭಾಷೆಯಲ್ಲೆ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ.

‘ಇವತ್ತು ಕನ್ನಡ ಅನ್ನ ಕೊಡುವ ತಾಕತ್ತನ್ನು ಕಳೆದುಕೊಂಡಿದೆ. ಇಂಗ್ಲಿಷ್ ಗೊತ್ತಿದ್ದರೆ ವಿಶ್ವದಲ್ಲಿ ಎಲ್ಲಿ ಬೇಕಾದರೂ ಬದುಕಬಹುದು. ಅದು ನಿಜಕ್ಕೂ ನಮ್ಮ ಹೊಟ್ಟೆ ತುಂಬಿಸುತ್ತೆ. ಕನ್ನಡ ಕನ್ನಡ ಅಂಥ ಮುದ್ದಾಡಬಹುದೇ ಹೊರತು, ಬೇರೇನೂ ಸಾಧ್ಯವಿಲ್ಲ. ನನಗೂ ಕನ್ನಡದ ಬಗ್ಗೆ ಗೌರವವಿದೆ. ಪ್ರೀತಿಯಿದೆ. ಇಂಗ್ಲಿಷನ್ನು ಕಲಿಯೋದು ತಪ್ಪಾ? ಒಂದನೇ ತರಗತಿಯಿಂದಲೇ ಇಂಗ್ಲಿಷ್ ಇರಲಿ. ಇಂಗ್ಲಿಷ್ ಬೇಡ ಎನ್ನುವ ಮೂಲಕ ಬಡವರನ್ನು ಶೋಷಿಸೋದು ಸರೀನಾ? ಎಲ್ಲರ ಮಕ್ಕಳು ಮೈಸೂರು ಪಾಕ್ ತಿನ್ನುವಾಗ, ನಮ್ಮುಡುಗರು ರಾಗಿ ಮುದ್ದೆ ತಿನ್ತಾ ಕೂರಬೇಕಾ? ’ -ಹೀಗೆ ಪ್ರಶ್ನಿಸಿದ ಗೆಳೆಯನೊಬ್ಬನ ಅಂತರಾಳ ನನಗೆ ಅರ್ಥವಾಗುತ್ತೆ. ತಾನು ಸರಿಯಾಗಿ ಇಂಗ್ಲಿಷ್ ಕಲಿಯಲಿಲ್ಲ. ಕಲಿತಿದ್ದರೆ ಇವತ್ತು ದೊಡ್ಡ ಸಂಬಳ ಪಡೆಯಬಹುದಿತ್ತು ಅನ್ನೋದು ಅವನ ಕೊರಗು.

ಒಂದು ವಿಷಯ ಗಮನಿಸಿ. ಮೊದಲು ಇಂಗ್ಲಿಷ್ ಅನ್ನೋದನ್ನು ೫ನೇ ತರಗತಿಯಿಂದ ಕಲಿಸಲಾಗುತ್ತಿತ್ತು. ಅಲ್ಲಿಂದ ಪದವಿ ತನಕ ಅಂದ್ರೆ ಸುಮಾರು ೯-೧೦ ವರ್ಷ ಇಂಗ್ಲಿಷ್ ಕಲಿತರೂ, ನಮ್ಮುಡಗರ ತಲೆಗೆ ಅದು ಹೋಗಲೇ ಇಲ್ಲ. ಅಂದ್ರೆ ಇಂಗ್ಲಿಷ್ ಅನ್ನೋದು ಅಷ್ಟೊಂದು ಕಠಿಣವೇ? ಖಂಡಿತ ಇಲ್ಲ. ಆದರೆ ನಾವು ಕಲಿತ, ನಮಗೆ ಕಲಿಸಿದ ವಾತಾವರಣವಿದೆಯಲ್ಲ , ಅಲ್ಲಿಯೇ ಇದೆ ದೋಷ. ಒಳ್ಳೆ ಭಾಷಾ ಶಿಕ್ಷಕರು ದೊರಕದ ಕಾರಣ, ಇಂಗ್ಲಿಷ್ ಭೂತವಾಯಿತು ಅಷ್ಟೆ. ಒಳ್ಳೆ ಶಿಕ್ಷಕರು ಸಿಗದ ಹೊರತು, ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಿದರೂ ಪ್ರಯೋಜನವಿಲ್ಲ.

ಇನ್ನು ವಿಶ್ವ ಸುತ್ತುವ ವಿಷಯಕ್ಕೆ ಬರೋಣ. ಅಂತಾರಾಷ್ಟ್ರೀಯ ಭಾಷೆ ಎನ್ನುವ ಸುಳ್ಳು ಪ್ರಚಾರ ಪಡೆದಿರುವ ಇಂಗ್ಲಿಷ್, ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಜೀವಂತ. ಜಪಾನಿಯರು, ಚೀನಿಯರಿಗೆ ಬೇಕಿಲ್ಲದ ಇಂಗ್ಲಿಷ್ ನಮಗೇಕೆ? ಅಭಿವೃದ್ಧಿ ಎನ್ನುವುದು ನಮ್ಮ ಮನಸ್ಥಿತಿ, ಅದು ಶ್ರಮವನ್ನು ಆಧಾರಿಸಿದೆಯೇ ಹೊರತು, ಭಾಷೆಯನ್ನಲ್ಲ. ಭಾಷೆಯಾಗಿ ಇಂಗ್ಲಿಷ್ ಕಲಿಯುವುದಾದರೆ ನನ್ನದೇನು ತಕರಾರಿಲ್ಲ. ಇಂಗ್ಲಿಷ್ ಒಂದೇ ಅಲ್ಲ, ಪ್ರೆಂಚ್, ಡಚ್, ಜರ್ಮನ್ ಸೇರಿದಂತೆ ಯಾವ ಭಾಷೆ ಬೇಕಾದರೂ ಕಲಿಯಿರಿ.

‘ಇಂಗ್ಲಿಷ್‌ನ ಅನಿವಾರ್ಯತೆ ಇದೆ, ಹೀಗಾಗಿ ಒಂದನೇ ತರಗತಿಯಿಂದ ಕನ್ನಡದ ಜತೆಗೆ ಇಂಗ್ಲಿಷ್ ಸಹಾ ಇರಲಿ’ ಎನ್ನುವ ನಾವು, ನಾಳೆ ಇಂಗ್ಲಿಷ್ ಒಂದೇ ಇರಲಿ ಎಂದರೂ ಅಚ್ಚರಿಯೇನಿಲ್ಲ. ಇಂಗ್ಲಿಷ್ ಭಾಷೆಯನ್ನಷ್ಟೆ ನಾವು ಕಲಿಯುತ್ತಿಲ್ಲ.. ಆ ಸಂಸ್ಕೃತಿಯನ್ನೂ ಸಹಾ ಮೈಗೂಡಿಸಿಕೊಳ್ಳುತ್ತಿದ್ದೇವೆ. ಭಾಷೆಯನ್ನು ನುಂಗುತ್ತಿರುವ ಇಂಗ್ಲಿಷ್ ತಿಮಿಂಗಲ, ನಂತರ ನೆಲದ ಸಂಸ್ಕೃತಿಯನ್ನು ನುಂಗುತ್ತದೆ. ಆನಂತರ ನಮ್ಮತನವನ್ನು ನುಂಗುತ್ತದೆ. ಲಿವ್ ಇನ್ ರಿಲೇಷನ್‌ಶಿಪ್, ಡೈವರ್ಸ್ -ಮತ್ತಿತರ ವಿಷಯಗಳು ನಮ್ಮ ಸಮಾಜದಲ್ಲೀಗ ವಿಶೇಷವಾಗಿ ಉಳಿದಿಲ್ಲ. ಇಂಗ್ಲಿಷ್ ಅಪ್ಪುಗೆಯಲ್ಲಿ ಇವೆಲ್ಲವೂ ನಮಗೆ ಅಹಿತವಾಗಿ ಕಾಣಿಸುತ್ತಿಲ್ಲ. ಇಂಗ್ಲಿಷ್ ವಿರೋಧಿಸಲು ಇದಕ್ಕಿಂತ ಬೇರೆ ಕಾರಣ ಬೇಕಿಲ್ಲ.

ಜಗತ್ತನ್ನು ಇಂಗ್ಲಿಷ್ ಇಲ್ಲದೇ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯವಾ? -ಸಾಧ್ಯ. ಈ ನಿಟ್ಟಿನಲ್ಲಿ ಅಸಲಿ ಕನ್ನಡ ಪ್ರೇಮಿಗಳು ಹೆಜ್ಜೆ ಹಾಕಬೇಕು. ಕೆಲವೇ ವರ್ಷಗಳ ಹಿಂದೆ ಇಂಗ್ಲಿಷ್ ಗೊತ್ತಿಲ್ಲದವರ ಕೈಗೆ ಎಟುಕದಿದ್ದ ಗಣಕ, ಈಗ ಎಲ್ಲರಿಗೂ ಹತ್ತಿರವಾಗಿದೆ. ಜಗತ್ತಿನ ಎಲ್ಲಾ ಮಾಹಿತಿಯನ್ನೂ ಕನ್ನಡದ ಅಂತರ್ಜಾಲಕ್ಕೆ ಬಸಿಯುವ ಮಹಾಯಜ್ಞ ಕ್ಕೆ ನಮ್ಮ ಕನ್ನಡದ ಹುಡುಗರು ಕಂಕಣ ತೊಡಬೇಕಿದೆ. ಇದು ಖಂಡಿತ ಅಸಾಧ್ಯದ ಕೆಲಸವೇನಲ್ಲ.

ಬದಲಾಗುವುದೆಂದರೆ ಅರ್ಧರಾತ್ರಿಯಲ್ಲಿ ಮನೆ ಬಿಡುವುದಾ?

ಸಾಮಾನ್ಯ

ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಎಲ್ಲೆಲ್ಲಿದ್ದಾರೋ ಅಲ್ಲಲ್ಲಿಯೇ ಕಳೆದು ಹೋಗಿದ್ದಾರೆ. ಕಳೆದು ಹೋಗುವ ಅನಿವಾರ್ಯತೆಯನ್ನು ನಮಗೆ ನಾವೇ ಸೃಷ್ಟಿಸಿಕೊಂಡಿದ್ದೇವೆ. ಅಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳೆಯರು -ಹೀಗೆ ಆತ್ಮೀಯರ ಜತೆ ನಾಲ್ಕು ಮಾತಿಗೆ ಬಿಝಿ ಷೆಡ್ಯೂಲ್‌ನಲ್ಲಿ ಸಮಯ ಹೊಂದಿಸಿಕೊಳ್ಳಲು ತಿಣುಕಾಡಬೇಕಾಗಿದೆ.

ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಹಳ್ಳಿ ಹುಡುಗ, ಆರಂಭದಲ್ಲಿ ಊರಿಗೆ ವಾರಕ್ಕೊಮ್ಮೆ ಹೋಗುತ್ತಿದ್ದ. ನಂತರ ಎರಡು ವಾರಕ್ಕೊಮ್ಮೆ, ಆಮೇಲೆ ತಿಂಗಳಿಗೊಮ್ಮೆ. ಅಮೇಲಾಮೇಲೆ ಮೂರು ತಿಂಗಳಿಗೊಮ್ಮೆ. ಕೊನೆಕೊನೆಗೆ ವರ್ಷಕ್ಕೊಂದು ಸಲ. ಮದುವೆಯಾದ ಮೇಲೆ ಊರು ಎಲ್ಲಿದೆ ಎಂಬುದೇ ಆತನಿಗೆ ನೆನಪಾಗುತ್ತಿಲ್ಲ. ಪ್ರತಿ ಶ್ರಾವಣ ಶನಿವಾರ ಮನೆ ದೇವರ ದೇಗುಲಕ್ಕೆ ಹೋಗುವುದನ್ನು ಆತ ತಪ್ಪಿಸುತ್ತಿರಲಿಲ್ಲ. ಆದರೀಗ ಮನೆ ದೇವರು ಸಹ ದೂರ. ದೇವರ ಪಟವನ್ನು ಮನೆಯಲ್ಲಿಟ್ಟು ದಿನವೂ ಕೈ ಮುಗಿಯುತ್ತಿದ್ದಾನೆ.

ಅಮ್ಮನ ಸೆರಗಿನಡಿಯೇ ಬೆಳೆದ ಹುಡುಗಿಗೆ ಬೇರೆ ಪ್ರಪಂಚವೇ ಗೊತ್ತಿರಲಿಲ್ಲ. ಅಮ್ಮನ ನೆರಳಿಲ್ಲದೇ ಬದುಕಲಾರೆ ಎಂದುಕೊಂಡಿದ್ದಳು ಅವಳು. ಕಲಿಕೆ ನೆಪದಲ್ಲಿ ಪಟ್ಟಣಕ್ಕೆ ಬಂದಳು. ಅಲ್ಲಿಯೇ ಕೈತುಂಬ ದುಡ್ಡು ಸಿಗುವಂಥ ಕೆಲಸವೂಸಿಕ್ಕಿತು. ಆಮೇಲೆ ಊರು, ಅಮ್ಮ ಯಾವುದೂ ಮರೆತಿಲ್ಲ. ಆದರೆ ಹತ್ತಿರವಿಲ್ಲ. ಹಾಗೆಂದು ಅವರ ಊರು ದೂರದ ಅಮೆರಿಕದಲ್ಲಿಲ್ಲ. ಒಂದು ರಾತ್ರಿ ಬಸ್‌ನಲ್ಲಿ ಕುಳಿತರೆ ಬೆಳಗಾಗುವ ವೇಳೆಗೆ ಊರು ತಲುಪಬಹುದು. ಆದರೆ ಕೈತುಂಬ ಕಾಸು ಕೊಡುವ ಕಂಪನಿ, ರಜೆ ನೀಡೀತೇ? ಅದು ನೀಡಿದರೂ ಪಡೆಯಲು ಆಕೆಗೆ ಇಷ್ಟವಿಲ್ಲ! ಭವಿಷ್ಯ ಕಟ್ಟಿಕೊಳ್ಳುವ ಹುಮ್ಮಸ್ಸಿನಲ್ಲಿ ಸೆಂಟಿಮೆಂಟ್‌ಗಳಿಗೆ ಅರ್ಥವೇ ಇಲ್ಲ ಎಂದು ಅನಿಸುತ್ತಿದೆ.

‘ಬೆಂಗಳೂರಿನಂಥ ಮಾಯಾನಗರಿಗಳು ಎಲ್ಲರನ್ನೂ ಕರೆಕರೆದು ಕೆಲಸ ಕೊಡುತ್ತವೆ. ಈ ಮಾಯಾನಗರಿಯ ಸೆಳೆತದಲ್ಲಿ ವ್ಯತ್ಯಾಸಗಳೇ ಕಾಣಿಸುವುದಿಲ್ಲ. ನಮ್ಮತನವೇ ಸವೆದು ಹೋಗಿರುತ್ತದೆ. ಎಲ್ಲರಿಗೂ ಒಂದೇ ಸಮವಸ್ತ್ರ. ಒಂದೇ ಕೆಲಸ. ಭಾವನೆಗಳೇ ಇಲ್ಲದ ಯಾಂತ್ರಿಕ ಬದುಕು’ ಎಂದು ಹೇಳಲು ಹೊರಟರೆ, ಅದೇ ಹಳೆಯ ಕೊರಗು ಎನ್ನುವಿರೇನೋ?

ಗಂಡ ಹೆಂಡತಿ ಜತೆ, ಮಕ್ಕಳು ಹೆತ್ತವರ ಜತೆ ಇಮೇಲ್‌ನಲ್ಲಿ, ಎಸ್‌ಎಂಎಸ್‌ಗಳಲ್ಲಿ ಮಾತಾಡುವ ಕಾಲವಿದು. ಮಗನ ಹುಟ್ಟುಹಬ್ಬವನ್ನು ಮೊಬೈಲ್ ನೆನಪಿಸುತ್ತದೆ. ಕೂಡಲೇ ಕರೆ ಮಾಡಿ, ಮಗನಿಗೆ ಹೂಗುಚ್ಛ ತಲುಪುವಂತೆ ಅಪ್ಪ ವ್ಯವಸ್ಥೆ ಮಾಡುತ್ತಾನೆ. ಹುಟ್ಟಿದ ಹಬ್ಬದ ದಿನವಾದರೂ ನನ್ನ ಜತೆ ಅಪ್ಪ ಕಾಲ ಕಳೆಯುತ್ತಾನೆ ಎಂದು ಭಾವಿಸುವ ಮಗನಿಗೆ, ಆ ದಿನವೂ ಯಾವುದೇ ವ್ಯತ್ಯಾಸ ಗೊತ್ತಾಗುವುದಿಲ್ಲ. ಯಾವುದೋ ಎಮರ್ಜೆನ್ಸಿ ಮೀಟಿಂಗ್, ಮುಗಿಯದ ಪ್ರಾಜೆಕ್ಟ್, ತಲೆತಿನ್ನುವ ಕೆಲಸಗಳು ಭಾವನೆಗಳನ್ನು ತಣ್ಣಗೆ ಕೊಲ್ಲುತ್ತದೆ.

ಆರ್ಥಿಕ ಮಹಾ ಕುಸಿತದ ಈ ದಿನಗಳಲ್ಲಿ ಪಿಂಕ್ ಸ್ಲಿಪ್ ತಪ್ಪಿಸಿಕೊಳ್ಳಲು ತಿಣುಕಾಡಲೇ ಬೇಕು. ಮ್ಯಾನೇಜ್‌ಮೆಂಟ್ ಕಾಕದೃಷ್ಟಿ ತಪ್ಪಿಸಿಕೊಳ್ಳಲು ಗಾಣದ ಎತ್ತಿನಂತೆ ದುಡಿಯಲೇ ಬೇಕು. ಮಲ್ಯನ ರೇಸ್ ಕುದುರೆಗಳಂತೆ ದಣಿವನ್ನು ಮರೆತು ಓಡಲೇ ಬೇಕು. ಗುರಿಯಿಲ್ಲದ ಈ ಓಟ, ನಿರಂತರ. ಸ್ವಲ್ಪ ಏರುಪೇರಾದರೂ ಕೆಲಸಕ್ಕೆ ಕತ್ತರಿ. ಈಗಿನದು ಊರಿಗೆ ನೂರಾರು ಪದ್ಮಾವತಿಯರ ಕಾಲ. ನಮ್ಮ ಕುರ್ಚಿ ಅಲಂಕರಿಸಲು ದೊಡ್ಡದೊಂದು ಕ್ಯೂ ಆಗಲೇ ಹನುಮಂತಪ್ಪನ ಬಾಲದಂತೆ ಬೆಳೆದು ನಿಂತಿದೆ.

ಜಗದ ಸಂಕಷ್ಟಗಳನ್ನು ಅವುಗಳ ಪಾಡಿಗೆ ಬಿಟ್ಟು, ಎಲ್ಲವನ್ನೂ ಮರೆತು, ನಮಗೆ ಬೇಕಾದವರೊಂದಿಗೆ ಹೋಟೆಲ್‌ನಲ್ಲಿ ಕೂತು ಕಾಫಿ ಹೀರಿದ್ದು ಯಾವಾಗ? ಯಾವುದೋ ಪಾರ್ಕ್‌ನಲ್ಲಿ, ನಮ್ಮದೇ ಮೆಚ್ಚಿನ ತಾಣಗಳಲ್ಲಿ ಕೂತು ಅವರೊಂದಿಗೆ ನೆನಪುಗಳನ್ನು ಕೆದಕಿದ್ದು ಯಾವಾಗ? ಯಾವುದೋ ಮರೆತ ಹಳೆಯ ಹಾಡನ್ನು ತಪ್ಪು ತಪ್ಪಾಗಿಯೇ ಗುನುಗಿ, ಮಧುರಾನುಭೂತಿ ಹೊಂದಿದ್ದು ಯಾವಾಗ? ನೆನಪುಗಳು ತಿಂಗಳುಗಳನ್ನು ದಾಟಿ ವರ್ಷಗಳನ್ನು ಎಣಿಸುತ್ತವೆ.

ಅವನೆಲ್ಲೋ ಇವನೆಲ್ಲೋ? ಭೇಟಿ ನೆಪದಲ್ಲಿ ದೂರದ ಗೆಳೆಯ ಊರಿಗೆ ಬಂದರೂ ನಮಗೆ ಸಿಗುವುದೇ ಇಲ್ಲ. ಕನಸಲ್ಲಿ ಬಂದಂತೆ ಮಿಂಚಿ ಮಾಯವಾಗುತ್ತಾನೆ. ಊರಿಗೆ ಬಂದರೂ ಸೆಲ್‌ನಲ್ಲಿಯೇ ಆತ ಹೆಚ್ಚಾಗಿ ಸಿಗುತ್ತಾನೆ. ನೇರ ಸಿಕ್ಕರೂ ಸೆಲ್‌ನಲ್ಲಿಯೇ ಇರುತ್ತಾನೆ. ಯಾರಿಗೋ ಎಸ್ಸೆಮ್ಮೆಸ್‌ಗಳನ್ನು ಒಂದರ ನಂತರ ಒಂದರಂತೆ ಕಳುಹಿಸುತ್ತಾ, ನಾವು ಹೇಳಿದ್ದಕ್ಕೆ ತಲೆಯಾಡಿಸುತ್ತಿರುತ್ತಾನೆ! ಅವನು ಪಕ್ಕದಲ್ಲಿದ್ದರೂ, ದೂರದಲ್ಲಿದ್ದಂತೆ ಭಾವ. ಹಾಕಿಕೊಂಡಿದ್ದ ಯೋಜನೆಗಳು ಯಥಾ ಪ್ರಕಾರ ಮುಂದಿನ ಭೇಟಿಗೆ ವರ್ಗವಾಗುತ್ತವೆ. ಕೊನೆಗೆ ಊರು ಬಿಡುವ ವಿಷಯ ಸಹ ತಿಳಿಯುವುದಿಲ್ಲ.

ಒಂದೆರಡು ದಿನಗಳ ನಂತರ ಫೋನಲ್ಲಿಯೇ ‘ಅದೇನಾಯ್ತು ಅಂದ್ರೆ..’ ಎಂದು ಆತ ನೆಪಗಳನ್ನು ಜೋಡಿಸಲು ಶುರು ಮಾಡುತ್ತಾನೆ. ಅವುಗಳನ್ನು ಒಪ್ಪದೇ ಅಥವಾ ನಂಬದೇ ಬೇರೆ ದಾರಿಯಾದರೂ ನಮಗಿದೆಯೇ?
‘ಚಿಕ್ಕ ಕನಸುಗಳನ್ನು ಕಾಣುವುದು ಅಪರಾಧ ’ ಎಂದು ಎಲ್ಲೋ ಕೇಳಿದ ಮಾತು ತಲೆಯಲ್ಲಿ ಉಳಿದಿರುತ್ತದೆ. ‘ ನನಗೆ ಆಸೆಗಳಿಲ್ಲ. ತಿಂಗಳಿಗೆ ಕೇವಲ ೫೦೦೦ ರೂಪಾಯಿ ಸಿಕ್ಕರೆ ಸಾಕು. ನಾನು ಆನಂದದ ಬದುಕು ಕಟ್ಟಿಕೊಳ್ಳುತ್ತೇನೆ’ ಎನ್ನುತ್ತಿದ್ದ ಗೆಳೆಯನ ಸಂಬಳ ಈಗ ೫೦ ಸಾವಿರ. ಆದರೂ ಆತನಿಗೆ ಸಮಾಧಾನ ಇಲ್ಲ. ಸೈಕಲ್ ಸಾಕು ಎನ್ನುತ್ತಿದ್ದವಗೆ ಸ್ಕೂಟರ್ ಸಿಕ್ಕಿದೆ. ರಸ್ತೆಯಲ್ಲಿ ನಿಂತು, ಕಾರಿನ ಕನಸು ಕಂಡವನ ಮನೆಯಲ್ಲಿ ಎರಡೆರಡು ಕಾರುಗಳಿವೆ. ‘ಮಗಳ ಮದುವೆ ಮುಗಿದರೆ ನಾನು ಪುನೀತ. ತಲೆಮೇಲಿನ ಹೊರೆ ಇಳಿಸಿಕೊಂಡು ಹಗುರಾಗುತ್ತೇನೆ’ ಎನ್ನುತ್ತಿದ್ದ ಯಜಮಾನರು, ತಮ್ಮ ಮೊಮ್ಮಗಳಿಗೂ ಮದುವೆ ಮಾಡಿದ್ದಾರೆ. ಆದರೂ ಇವರ‍್ಯಾರಲ್ಲೂ ಸಂತೋಷ ಕೆನೆಕಟ್ಟಿಲ್ಲ.

‘ಆನಂದವನ್ನು ಬಿಟ್ಟು ನಾವು ಸುಖದ ಬೆನ್ನತ್ತಿರುವುದರಿಂದಲೇ ಹೀಗಾಗುತ್ತಿದೆ. ಆನಂದ ನೀಡುವ ಮೇಷ್ಟ್ರು ಕೆಲಸದತ್ತ ಯಾರಿಗೂ ಆಸಕ್ತಿಯಿಲ್ಲ. ಎಲ್ಲರಿಗೂ ಸಾಫ್ಟ್‌ವೇರ್ ಎಂಜಿನಿಯರ್ ಆಗುವ ಹಂಬಲ ಹೆಚ್ಚುತ್ತಿದೆ’ ಎನ್ನುವ ಟಿ.ಎನ್.ಸೀತಾರಾಂ ಮಾತು, ಇಲ್ಲಿ ಸುಮ್ಮನೇ ನೆನಪಾಗುತ್ತಿದೆ. ಮನೆ ಹತ್ತಿರದ ೭ ವರ್ಷದ ಪುಟಾಣಿ ಬಾಲಕಿಯನ್ನು ಮೊನ್ನೆ ಮಾತಾಡಿಸಿದೆ. ‘ದೊಡ್ಡವಳಾದ ಮೇಲೆ ಏನಾಗುತ್ತೀಯಾ?’ ಎಂಬ ಪ್ರಶ್ನೆಗೆ, ತಡವರಿಸದೇ ‘ಡಾಕ್ಟರ್ ಆಗ್ತೀನಿ ಅಂಕಲ್’ ಎಂದಳು. ‘ಯಾಕೆ?’ ಎಂದರೆ, ‘ಚೆನ್ನಾಗಿ ದುಡ್ಡು ಸಂಪಾದಿಸುವುದಕ್ಕೆ’ ಅಂದಳು. ದೊಡ್ಡವರ ದುಡ್ಡಿನ ಮೋಹ ಮಕ್ಕಳ ರಕ್ತದಲ್ಲಿಯೂ ಬೆರೆಯುತ್ತಿದೆಯೇ?

ಈ ಮಧ್ಯೆ ಮದುವೆಗೆ ಬಾರದ ಗೆಳೆಯನೊಬ್ಬ ನಾನು ಬಯಸದಿದ್ದರೂ ಫೋನ್‌ನಲ್ಲಿ ವಿವರಣೆ ಕೊಡುತ್ತಿದ್ದ. ‘ಮದುವೆಗೆ ನೀನು ಬರಲಿಲ್ಲ ಎಂದು ನನಗೆ ಬೇಸರವಿಲ್ಲ. ಅಲ್ಲದೇ ನೀನು ಮದುವೆಗೆ ಬಂದೇ ನಮ್ಮಿಬ್ಬರ ಸ್ನೇಹವನ್ನು ಗಟ್ಟಿಗೊಳಿಸಬೇಕಿತ್ತು ಎಂದು ನಾನು ಭಾವಿಸಿಲ್ಲ. ಹೊಟ್ಟೆಪಾಡಿನ ಸರ್ಕಸ್ ಇದ್ದದ್ದೇ. ಕೆಲವು ಸಲವಾದರೂ ಅನಿವಾರ್ಯತೆಯ ಭೂತದಿಂದ ನಾವು ತಪ್ಪಿಸಿಕೊಳ್ಳಬೇಕು. ನೋಟಿನ ಮಸಿ ಕೈಗೆ ಅಂಟಿದರೆ ಪರವಾಗಿಲ್ಲ. ಮುಖಕ್ಕೆ ಅಂಟಬಾರದು. ನನ್ನ ಮದುವೆ ವಿಷಯ ಬಿಡು, ಅದೇನು ಲೋಕ ಕಲ್ಯಾಣದ ಕಾರ್ಯಕ್ರಮವಲ್ಲ ’ ಎಂದು ಹೇಳಿ ಪೋನ್ ಕೆಳಗಿಟ್ಟೆ.

ದೂರದ ಊರಿಂದ ಮದುವೆಗೆ ಆಗಮಿಸಿದ್ದ ನನ್ನ ಇನ್ನೊಬ್ಬ ಗೆಳೆಯ ತುಂಬ ಭಾವುಕನಾಗಿದ್ದ. ‘ಕಟ್ಟ ಕಡೆಯ ತನಕ ಮದುವೆಯಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ನಾನು ದ್ವಂದ್ವದಲ್ಲಿದ್ದೆ. ಊರಲ್ಲಿ ತುಂಬಾ ತಾಪತ್ರಯಗಳು. ಆದರೂ ಈ ಮದುವೆ ತಪ್ಪಿಸಿದರೆ ಸಾಯುವ ತನಕ ಪಾಪ ಪ್ರಜ್ಞೆ ಕಾಡುತ್ತಿತ್ತು. ಈಗ ಮದುವೆ ಮಂಟಪದಲ್ಲಿದ್ದೇನೆ. ನನಗೆ ಈಗಲೇ ಸಮಾಧಾನ’ ಎಂದು ಒಂದೇ ಉಸಿರಿನಲ್ಲಿ ಹೇಳುತ್ತಿದ್ದ. ನನ್ನಲ್ಲಿ ಮಾತಿಗೆ ಬರ. ಬಿಗಿಯಾಗಿ ಆತನ ಕೈ ಅಮುಕಿದೆ.

ಸಂಬಂಧಗಳು ಸಡಿಲವಾಗುತ್ತಿವೆ. ದೂರವಿದ್ದಷ್ಟು ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂಬ ಮಾತಿನಲ್ಲಿ ಅರ್ಥವಿಲ್ಲ. ಈಗಿನ ಜೀವನ ಶೈಲಿಯಲ್ಲಿ ದೂರವಿದ್ದಷ್ಟೂ ಇನ್ನಷ್ಟೂ ದೂರವಾಗುತ್ತೇವೆ. ಅಂತರ ಕಡಿಮೆ ಮಾಡಿಕೊಳ್ಳಲು ಆರ್ಕುಟ್‌ನಲ್ಲಿ ಗುಂಪು ಕಟ್ಟಿಕೊಳ್ಳುತ್ತೇವೆ.. ಚಾಟ್ ಮಾಡುತ್ತೇವೆ. ಇಮೇಲ್ ಮಾಡುತ್ತೇವೆ. ಎಲ್ಲವೂ ಸರಿ. ಆದರೆ ಎದುರಿಗೆ ಸಿಕ್ಕಾಗ ತುಟಿಗಳಲ್ಲಿ ಒಂದು ಸಣ್ಣ ನಗೆ ಸಹ ಕಾಣಿಸುವುದಿಲ್ಲ.

ಒಂದು ಲಯಕ್ಕೆ ಜೀವನವನ್ನು ಜೋಡಿಸಿಕೊಂಡವರು ನಾವು. ಇಲ್ಲ ಹಾಗೆ ಅಂದುಕೊಂಡಿದ್ದೇವೆ. ಲಿಮಿಟ್ಟುಗಳನ್ನು ದಾಟಲಾಗದ ಅಸಹಾಯಕತೆಯನ್ನು ಅಪ್ಪಿಕೊಂಡಿದ್ದೇವೆ. ಸರಳತೆ, ಪ್ರಾಮಾಣಿಕತೆ, ಮೌಲ್ಯಗಳ ಬಗ್ಗೆ ನೀವು ಬಾಯಿಬಿಚ್ಚಿದರೆ, ವಿಚಿತ್ರ ಪ್ರಾಣಿಯಂತೆ ಸಮಾಜ ನೋಡುತ್ತದೆ.

ವ್ಯವಸ್ಥೆ ಭ್ರಷ್ಟಗೊಂಡಿದೆ ಎನ್ನುತ್ತಲೇ ನಾವು ಅದರ ಒಂದು ಭಾಗವಾಗುತ್ತೇವೆ. ಈ ಬಗ್ಗೆ ವಿವರಣೆ ನೀಡಲು ನಾವು ಜಾಣರಾಗಿದ್ದೇವೆ. ನಾಚಿಕೆ ಮರೆತು ಬಹಳ ಕಾಲವಾಯಿತು. ಆದರ್ಶಗಳ ಜಪಿಸುತ್ತಲೇ ದಾರಿ ತಪ್ಪುತ್ತೇವೆ. ಕ್ರಾಂತಿಗಳನ್ನು ಕೇಳಿ ಅಥವಾ ಕಂಡು ಪುಳಕಿತರಾಗುತ್ತೇವೆ. ಸಂಬಂಧಗಳ ಬಗ್ಗೆ ಗೌರವ ಉಳಿದಿಲ್ಲ. ಜನರ ಬಗ್ಗೆ ನಂಬಿಕೆ ಉಳಿದಿಲ್ಲ. ಎಲ್ಲವನ್ನೂ ಕಳೆದುಕೊಂಡು ಅನಾಥ ಪ್ರಜ್ಞೆ ಅನುಭವಿಸುವಾಗ ದೇವರು ನೆನಪಾಗುತ್ತಾನೆ. ಪ್ರಾರ್ಥನೆ ನೆನಪಾಗುತ್ತದೆ. ಬೆಳಗ್ಗೆ ಹ್ಯೂಮರ್ ಕ್ಲಬ್‌ಗಳಿಗೆ ಹೋಗಿ, ಬಲವಂತದಿಂದ ನಕ್ಕು ವಾಪಸ್ ಆಗುತ್ತೇವೆ.
‘ಬದುಕು ಎಂದರೆ ಇದಲ್ಲ ’ ಎಂದು ಆಗಾಗ ಸುಪ್ತ ಮನಸ್ಸು ಎಚ್ಚರಿಸುತ್ತಲೇ ಇರುತ್ತದೆ. ದುಡ್ಡಿನ ಝಣಝಣದ ಮಧ್ಯೆ ಅದರ ಸದ್ದು ಕ್ಷೀಣ. ನಾವು ಬದಲಾಗುವುದಿಲ್ಲ. ಬದಲಾಗುವುದು ಎಂದರೆ, ಸಿದ್ಧಾರ್ಥ ಅರ್ಧ ರಾತ್ರಿಯಲ್ಲಿ ಮನೆ ಬಿಟ್ಟು ಹೋದಂತೆಯೇ? ನನಗಂತೂ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳಲು, ಸದ್ಯದ ಕಮಿಟ್‌ಮೆಂಟ್‌ಗಳ ಮಧ್ಯೆ ಪುರುಸೊತ್ತಿಲ್ಲ. ಅವುಗಳು ಮುಗಿದರೆ ಇನ್ನಷ್ಟು ಕಮಿಟ್‌ಮೆಂಟ್‌ಗಳು.

(ವಿಜಯ ಕರ್ನಾಟಕದಲ್ಲಿ ಈ ಲೇಖನ ಜು.೧೭ರಂದು ಪ್ರಕಟಗೊಂಡಿದ್ದು, ಸ್ಥಳಾವಕಾಶ ಮತ್ತು ಇತರೆ ಕಾರಣಗಳಿಗೆ ತಕ್ಕಂತೆ ಕೆಲವು ಎಡಿಟ್‌ಗಳಾಗಿವೆ. ಲೇಖನದ ಮೂಲ ರೂಪ ಇಲ್ಲಿದೆ. )

ಆಷಾಢ ಮಾಡಿದ ಪಾಪವಾದರೂ ಏನು?

ಸಾಮಾನ್ಯ

ಆಷಾಢವೆಂದರೆ ನೆನಪುಗಳು ಹಿಂದಕ್ಕೆ ಓಡುತ್ತವೆ. ಆ ಕರಾಳ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ದಿಗಿಲು. ಹೊಟ್ಟೆಪಾಡಿಗಾಗಿ ನೆಚ್ಚಿದ್ದ ಆಟೋಮೊಬೈಲ್ಸ್ ಅಂಗಡಿಗೆ ಆ ತಿಂಗಳು ಗ್ರಹಣ. ವ್ಯಾಪಾರ ಲಾಸ್ ಎನ್ನುವುದು ಎಲ್ಲರ ಮಾತು. ದಿನಕ್ಕೆಷ್ಟು ಗಂಟೆ, ಗಂಟೆಗೆಷ್ಟು ನಿಮಿಷ, ನಿಮಿಷಕ್ಕೆಷ್ಟು ಸೆಕೆಂಡು ಎನ್ನುವುದು ಆಗಷ್ಟೇ ಅರ್ಥವಾಗುತ್ತಿದ್ದ ದಿನಗಳವು. ಸೆಕೆಂಡುಗಳು ಗಂಟೆಗಳಾಗಿ ಕೊಲ್ಲುತ್ತಿದ್ದವು.

ಸಮಯ ಮುಂದಕ್ಕೋಡಿದೆ. ಬೇಕು-ಬೇಡ ಕೇಳದೇ ಬಂದ ಸಾಕಷ್ಟು ಬದಲಾವಣೆಗಳು. ಆದರೆ ಈ ವರ್ಷದ ಆಷಾಢ, ಅದರಲ್ಲೂ ಆರಂಭದ ಆ ೧೦ ದಿನಗಳು ನನ್ನ ಪಾಲಿಗೆ ಮತ್ತದ್ದೇ ಕರಾಳ ದಿನಗಳು. ಸೆಕೆಂಡುಗಳು ಗಂಟೆಗಳಾಗುವ ದಿನಗಳು. ಅದಕ್ಕೆ ಆಷಾಢವಲ್ಲ ಕಾರಣ, ನನ್ನವಳ ಪರೀಕ್ಷೆ.

ಹೌದು. ನೋಡನೋಡುತ್ತಲೇ ದಿನಗಳು ಉರುಳಿವೆ. ಆ ಮೂವತ್ತೆರಡು ದಿನಗಳು, ೩೨ ನಿಮಿಷಗಳಂತೆ ಸವೆದಿವೆ. ನಿನ್ನೆಯಷ್ಟೇ ಮದುವೆಯಾದಂತೆ ಭಾವ. ನನಗಷ್ಟೇ ಅಲ್ಲ ಅವಳಿಗೂ ಅದೇ ಭಾವ. ಅಷ್ಟರಲ್ಲಾಗಲೇ ಯಾರೋ ಕರೆ ಮಾಡಿ ನೆನಪಿಸಿದರು. ಇಂದಿಗೆ ನೀನು ಮದುವೆಯಾಗಿ ತಿಂಗಳೆಂದು.

ಮೊದಲ ತಿಂಗಳ ಸಂಭ್ರಮಾಚರಣೆ ಫೋನ್‌ನಲ್ಲಿಯೇ ನಡೆದು ಹೋಯಿತು. ಸೆಕೆಂಡು ನಿಮಿಷಗಳ ಹಂಗು ಮರೆತಂತೆ ಮಾತನಾಡಿದೆವು. ಮಾತಿಗೆಷ್ಟು ಬೆಲೆ ಇದೆ ಎಂಬುದು ಮೊಬೈಲ್‌ಗೆ ಕರೆನ್ಸಿ ಹಾಕಿಸುವಾಗಲೆಲ್ಲ ಅರ್ಥವಾಗುತ್ತಿದೆ. ‘೩೦ ದಿನವಲ್ಲ, ೩೦೦ ವರ್ಷ ಜೊತೆಜೊತೆಯಲ್ಲೇ ಖುಷಿಖುಷಿಯಲ್ಲೇ ಬಾಳೋಣ’ ಎಂಬ ಮಾತು, ಅಡೆತಡೆಯಿಲ್ಲದೇ ಇಬ್ಬರ ಮಧ್ಯೆ ವಿನಿಮಯವಾಯಿತು.

‘ಆಷಾಢ ಜೂ.೨೩ರಿಂದ ಶುರುವಂತೆ. ಆಮೇಲೆ ಹೇಗೆ? ನಿನ್ನನ್ನು ಅಗಲಿ ನಾ ಇರುವುದಾದರೂ ಹೇಗೆ?’ ಎಂಬ ಪ್ರಶ್ನೆ ಮುಗಿಸುವ ಮುನ್ನವೇ, ಅವಳಿಂದ ಉತ್ತರ. ‘ಅದು ಹಾಗಲ್ಲ.. ಒಂದೇ ಮನೆಯಲ್ಲಿ, ಅದರಲ್ಲೂ ಒಂದೇ ಬಾಗಿಲಲ್ಲಿ ಅತ್ತೆ ಸೊಸೆ ಓಡಾಡಬಾರದಂತೆ. ಗಂಡ ಹೆಂಡತಿ ಜತೆಯಲ್ಲಿರಬಹುದು’ ಅಂದಳು. ಮಾತಿನ ಮಧ್ಯೆ ತುಂಟ ನಗೆ. ಅಯ್ಯೋ ಇದನ್ನೆಲ್ಲ ಅವಳು ಯಾವಾಗ ತಿಳಿದಳೋ? ಯಾಕೆ ಮತ್ತು ಹೇಗೆ ತಿಳಿದಳೋ ಎಂಬ ಅಚ್ಚರಿ ಮಿಶ್ರಿತ ಮೆಚ್ಚುಗೆ ನನ್ನ ಮನದಲ್ಲಿ.

ಇಷ್ಟಕ್ಕೂ ನಮ್ಮಿಬ್ಬರದು ‘ಸಾಪ್ತಾಹಿಕ ಪುರವಣಿ’ಯಂಥ ಸಂಸಾರ. ಅಂದರೆ ವಾರಕ್ಕೊಮ್ಮೆ ಭೇಟಿ. ಕಲಿಕೆ ನೆಪದಲ್ಲಿ ದೂರದ ಊರಲ್ಲಿ ಕೂತೇ ಅವಳು ನನಗೆ ಹತ್ತಿರವಾಗಿದ್ದಾಳೆ. ನಾನು, ನೀನು ಎಲ್ಲವೂ ಹೋಗಿ, ನಾವಾಗಿದ್ದೇವೆ. ನಮ್ಮ ಮುಂದೆ ಬಣ್ಣದ ಕನಸುಗಳು. ಯಾರಿಗೂ ಹೇಳಲಾಗದ ಗುಟ್ಟುಗಳು ಇಬ್ಬರ ಮಧ್ಯೆ ರಟ್ಟು. ಜಗತ್ತಿನಲ್ಲಿ ನಮ್ಮದೊಂದೇ ‘ಅಪರೂಪದ ಜೋಡಿ’ ಎಂಬಂಥ ಮಾಕು ಇಬ್ಬರಿಗೂ.  ಪರೀಕ್ಷೆಗಳ ಬಂಧನದಿಂದ ಮುಕ್ತಳಾಗುವ ಅವಳಿಗೆ ಆಷಾಢದಲ್ಲಿಯೇ ಕೈತುಂಬ ರಜೆ. ಆ ರಜೆಗೆ ಬಣ್ಣ ತುಂಬುವ ಆಸೆ ನಮಗೆ. ಪರೀಕ್ಷೆ ಅವಯೇ ನಮ್ಮಿಬ್ಬರ ಪಾಲಿಗೆ ಆಷಾಢಕ್ಕೂ ಮೀರಿದ ಕಿರುಕುಳವನ್ನು ಕೊಡುತ್ತಿದೆ.
***
ಇಷ್ಟಕ್ಕೂ ಜ್ಯೇಷ್ಠ ಮತ್ತು ಶ್ರಾವಣದ ಮಧ್ಯೆ ಬರುವ ಆಷಾಢವೆಂದರೆ ಜನರಲ್ಲಿ ಯಾಕಿಷ್ಟು ತಳಮಳವೊ ಗೊತ್ತಿಲ್ಲ. ಈ ಅವಯಲ್ಲಿ ವ್ಯಾಪಾರವೇಕೆ ಲಾಸ್ ಆಗಬೇಕು? ಶುಭಕಾರ್ಯಗಳೇಕೆ ನಡೆಯಬಾರದು? ಹೊಸ ಬಟ್ಟೆ ತೊಟ್ಟರೆ ಹರಿದು ಹೋಗುತ್ತಾ? ಹೊಸ ವಾಹನ ಖರೀದಿ ಮಾಡಬಾರದಾ? ಮದುವೆಯಾದರೆ ಪ್ರಳಯ ಆಗುತ್ತಾ? ಎಲ್ಲವೂ ನಮ್ಮ ಮನಸ್ಥಿತಿ. ಒಳ್ಳೆ ಕೆಲಸಕ್ಕೆ ಎಲ್ಲ ಕಾಲವೂ ಸುಮುಹೂರ್ತಗಳೇ ಎನ್ನುವಲ್ಲಿ ನನಗೆ ಅನುಮಾನಗಳಿಲ್ಲ.

ಮೊದಲು ಆಷಾಢದ ಸಮಯದಲ್ಲಿ ಬಿತ್ತನೆ, ಕಳೆ ಕೀಳುವುದು ಸೇರಿದಂತೆ ರೈತನಿಗೆ ಕೈತುಂಬ ಕೆಲಸ. ಬೇರೆ ಕೆಲಸಗಳತ್ತ ಆತನ ಗಮನ ಹೋಗುತ್ತಿರಲಿಲ್ಲ. ಅಷ್ಟು ಪುರುಸೊತ್ತು ಸಹ ಇರಲಿಲ್ಲವೆನ್ನಿ. ಹೀಗಾಗಿಯಷ್ಟೇ ಆಷಾಢದಲ್ಲಿ ಶುಭ ಕಾರ್ಯಗಳಿಗೆ ಅಲ್ಪವಿರಾಮ. ಆಷಾಢ ಆರಂಭಕ್ಕೆ ಮುನ್ನವೇ ಹೆಣ್ಣು ಮಗಳು ತವರು ಸೇರುತ್ತಾಳೆ. ಗಂಡನ ಮನೆ ಸೇರಿದ ಮನೆ ಮಗಳು ಆಷಾಢದ ನೆಪದಲ್ಲಾದರೂ ತವರಲ್ಲಿ ಸ್ವಲ್ಪ ದಿನ ಸುಖವಾಗಿರಲಿ ಎಂಬ ಹೆತ್ತವರ ಮಮತೆ, ಆಷಾಢದ ಸಂಪ್ರದಾಯಕ್ಕೆ ಜೈ ಎಂದಿರಬಹುದು.

ಆಷಾಢದ ಗುಮ್ಮನ ಮುಂದಿಟ್ಟು, ಅಗಲಿಕೆ ಮತ್ತು ವಿರಹಗಳನ್ನು ಕಲ್ಪಿಸಿ, ಗಂಡ-ಹೆಂಡಿರ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಜಾಣತನ ಹಿರಿಯರದೇನೋ ಗೊತ್ತಿಲ್ಲ. ಅಲ್ಲದೇ ಆಷಾಢದಲ್ಲಿ ಸತಿ-ಪತಿಗಳು ಒಂದಾದರೆ ೯ ತಿಂಗಳ ನಂತರ ಅಂದರೆ ಬಿರು ಬೇಸಗೆಯಲ್ಲಿ ಮಗುವಾಗುವ ಸಾಧ್ಯತೆಗಳಿವೆ. ಬೇಸಗೆ ಕಾವಿನ ಮಧ್ಯೆ ಗರ್ಭದ ಭಾರ, ಹೆರಿಗೆಯ ನೋವು, ಬಾಣಂತನದ ಬಾಧೆ ತಪ್ಪಿಸುವ ಉದ್ದೇಶ ಇದ್ದರೂ ಇರಬಹುದು.

ಕಾರಣವಿಲ್ಲದೇ ಇಷ್ಟವಾಗುವ ಅಮ್ಮನೂ, ಮಣಿಯೂ

ಸಾಮಾನ್ಯ

ಪುಸ್ತಕ ಎಂದರೆ ಮೂಗು ಮುರಿಯುವ ಮಂದಿಯೇ ಹೆಚ್ಚು. ಎಸ್.ಎಲ್.ಭೈರಪ್ಪ , ರವಿ ಬೆಳಗೆರೆ ಮತ್ತು ಯಂಡಮೂರಿ ವೀರೇಂದ್ರನಾಥರ(ಕನ್ನಡ ಭಾಷಾಂತರ) ಪುಸ್ತಕಗಳನ್ನು ಬಿಟ್ಟರೆ ಕನ್ನಡದಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುವ ಪುಸ್ತಕಗಳು ಮೂರು ಮತ್ತೊಂದು. ವಸುಧೇಂದ್ರನಂಥ ಜಾಣರು, ಅಂಕಿತದ ಪ್ರಕಾಶ್ ಕಂಬತ್ತಳ್ಳಿ ಸೇರಿದಂತೆ ಕೆಲವೇ ಕೆಲವರು ಪುಸ್ತಕೋದ್ಯಮದಲ್ಲಿ ಅಷ್ಟಿಷ್ಟು ಲಾಭ ಕಂಡವರು.

ಮತ್ತೊಂದು ಕಡೆ ಗ್ರಂಥಾಲಯ ಪ್ರಕಾಶಕರ ದಂಡು ಕನ್ನಡದಲ್ಲಿ ದೊಡ್ಡದಾಗಿಯೇ ಇದೆ. ಪುಸ್ತಕ ತರುವುದು, ಗ್ರಂಥಾಲಯಕ್ಕೆ ಅವುಗಳನ್ನು ಸೇರಿಸುವುದರಲ್ಲಿ ಇವರು ಪ್ರಖ್ಯಾತರು. ಪುಸ್ತಕವನ್ನು ಓದುಗರ ಕೈಗೆ ತಲುಪಿಸುವ ಅಪರೂಪದ ಪ್ರಯತ್ನಗಳು ಇತ್ತೀಚೆಗೆ ಕನ್ನಡದಲ್ಲಿ ನಿಧಾನವಾಗಿಯಾದರೂ ಆರಂಭಗೊಳ್ಳುತ್ತಿವೆ. ‘ಪುಸ್ತಕ ಮೂರು, ರೂಪಾಯಿ ನೂರು’ ಎನ್ನುವ ‘ಛಂದ’ದ ಚೆಂದದ ಪ್ರಯತ್ನಗಳನ್ನು ಇಲ್ಲಿ ಸ್ಮರಿಸಬೇಕು.

ಇಂದು(ಏ.೨೫) ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾದ ನನ್ನ ಸಹೋದ್ಯೋಗಿ ಮತ್ತು ಹಿರಿಯಣ್ಣನಂಥ ಎ.ಆರ್.ಮಣಿಕಾಂತರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಪುಸ್ತಕ ಪ್ರಕಾಶನಕ್ಕೆ ಗ್ಲಾಮರ್ ಟಚ್ ನೀಡಿದ ಈ ಕಾರ್‍ಯಕ್ರಮ ನನಗೆ ಎರಡು ಕಾರಣಗಳಿಗೆ ಮುಖ್ಯವೆನಿಸುತ್ತದೆ. ರವೀಂದ್ರ ಕಲಾಕ್ಷೇತ್ರ ಇಂಥದ್ದೊಂದು ಕಾರ್‍ಯಕ್ರಮದ ಸಲುವಾಗಿ ಹೌಸ್‌ಫುಲ್ ಆದ ಉದಾಹರಣೆ ನನ್ನ ಮಟ್ಟಿಗೆ ಹೊಸತು. ಅಕ್ಷರಶಃ ಕಲಾಕ್ಷೇತ್ರ ತುಂಬಿ ತುಳುಕುತ್ತಿತ್ತು. ಸೀಟುಗಳು ತುಂಬಿದ್ದ ಕಾರಣ, ಮಣಿ ಅಭಿಮಾನಿಗಳು ಮೂರು ಗಂಟೆಯ ಈ ಕಾರ್‍ಯಕ್ರಮವನ್ನು ನಿಂತೇ ಸವಿದರು. ಮಾನವ ಸಂಬಂಧಗಳನ್ನು ಬೆಸೆಯುವಂತಿರುವ ಇಂಥ ಪುಸ್ತಕಗಳನ್ನು ಓದಲು ಜನರ ಕಾತರ ಹೆಚ್ಚುತ್ತಿರುವುದನ್ನು ಇಲ್ಲಿ ಹೇಳಲೇ ಬೇಕು. ಇಂಥ ಪುಸ್ತಕಗಳ ಮೂಲಕವಾದರೂ ಕೆಟ್ಟುನಿಂತ ಬದುಕುಗಳು, ಕರಳು-ಬಳ್ಳಿ ನಂಟುಗಳು ಬಿಗಿಯಾದರೆ ಅದಕ್ಕಿಂತ ಸಂತೋಷ ಇನ್ನೇನಿದೆ.

ಈಗಿನ ಯುವ ಬರಹಗಾರರು ಲಂಕೇಶ್, ರವಿ ಬೆಳಗೆರೆ, ವಿಶ್ವೇಶ್ವರ ಭಟ್‌ರಂತೆಯೇ ಬರೆಯುತ್ತಾರೆ. ಆ ಪ್ರಭಾವಳಿಯಿಂದ ಹೊರಬಂದು ಸ್ವಂತಿಕೆ ಉಳಿಸಿಕೊಳ್ಳುವುದು ನಿಜಕ್ಕೂ ಕಷ್ಟ. ‘ಮಣಿಕಾಂತ್ ಅನುಕರಣೆಯಲ್ಲಿ ಫಟಿಂಗ. ನಾಗತಿಹಳ್ಳಿಯಂತೆ, ರವಿ ಬೆಳಗೆರೆಯಂತೆಯೇ ಬರೆಯುತ್ತಾನೆ’ ಎಂದು ವಿಕ ಸಂಪಾದಕ ವಿಶ್ವೇಶ್ವರ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಅದರಾಚೆಯ ಮಿತಿಯನ್ನು ಪ್ರೊ.ಕೃಷ್ಣೇ ಗೌಡ ಬಿಚ್ಚಿಟ್ಟರು.

‘ರವಿ ಬೆಳಗೆರೆಯಂತೆಯೇ ಬರೆಯುವುದು ಮಣಿಕಾಂತ್ ಪಾಲಿಗೆ ಇಂದು ಹೆಮ್ಮೆಯ ವಿಷಯ. ಆದರೆ ಹತ್ತು ವರ್ಷಗಳ ನಂತರ ಇದೇ ಅಭಿಪ್ರಾಯ ಮೂಡಿದರೆ, ಅದು ಅವರಿಗೆ ಅವಮಾನ’ -ಗೌಡರ ಈ ಮಾತನ್ನು, ಅಕ್ಷರ ಲೋಕ ಪ್ರವೇಶಿಸಿರುವ ಹೊಸ ಹುಡುಗರು ಪದೇಪದೆ ಮೆಲುಕು ಹಾಕಬೇಕು.

ವಸುಧೇಂದ್ರನ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕದ ಜನಪ್ರಿಯತೆಯ ಜಾಡಿನಲ್ಲಿಯೇ ಮಣಿ ಪುಸ್ತಕವೂ ಹೆಜ್ಜೆಹಾಕಿದೆ. ಅಮ್ಮನ ಬಗ್ಗೆ ಎಷ್ಟು ಬರೆದರು, ಯಾರು ಬರೆದರೂ ಚೆನ್ನಾಗಿಯೇ ಇರುತ್ತದೆ ಎಂಬುದು ನನ್ನ ಅಭಿಮತ. ಮಣಿಕಾಂತರ ಬರಹದ ಶೈಲಿ ಏನೇ ಇರಲಿ, ಅವರ ಜನಪ್ರಿಯತೆ ದೊಡ್ಡದು. ಅವರ ಜನಪ್ರಿಯತೆ ಹೆಚ್ಚಳಕ್ಕೆ ಅವರ ಬರಹಗಳ ಜತೆಗೆ ಅವರ ಮಾತೃ ಹೃದಯದ ಪಾತ್ರವೂ ದೊಡ್ಡದು. ಎಲ್ಲರನ್ನೂ ಪ್ರೀತಿಯಿಂದ ಸೆಳೆಯುವ ಅವರ ನೋಟದಲ್ಲಿ ಏನೋ ಆಪ್ತತೆ ಮತ್ತು ವಾತ್ಸಲ್ಯ ತುಂಬಿತುಳುಕುವಂತೆ ನನಗೆ ಭಾಸವಾಗುತ್ತದೆ.

ಪುಸ್ತಕ ಮತ್ತು ಲೇಖಕರಿಗೆ ಯಾವುದೇ ಸಂಬಂಧವಿಲ್ಲದ ಪ್ರಕಾಶ್ ರೈರನ್ನು ದೂರದ ಚೆನ್ನೈನಿಂದ ಕರೆಸಿದ ಔಚಿತ್ಯ ನನಗಂತೂ ಅರ್ಥವಾಗುತ್ತಿಲ್ಲ. ರವಿಬೆಳಗೆರೆ, ವಿಶ್ವೇಶ್ವರ ಭಟ್, ಕೃಷ್ಣೇಗೌಡ ವೇದಿಕೆ ಮೇಲಿದ್ದರು. ಹೀಗಾಗಿ ಮಾತಿಗಂತೂ ಭರವಿಲ್ಲ. ಮತ್ತೊಂದು ಕಡೆ ಉಪಾಸನಾ ಮೋಹನ್ ಮತ್ತು ಅವರ ತಂಡದ ಸುಗಮ ಸಂಗೀತ ಸಹ ಇತ್ತು. ಹೀಗಾಗಿ ಒಂದರ್ಥದಲ್ಲಿ ಪುಸ್ತಕ ಬಿಡುಗಡೆ ನೆಪದಲ್ಲಿ ಹಾಡು-ಹಾಸ್ಯ-ಹರಟೆಗಳು ಬೋನಸ್ ರೂಪದಲ್ಲಿ ಸಿಕ್ಕವು.

ಕೆಲವು ಬಿಡಿಬಿಡಿ ಚಿತ್ರಗಳು

ಬದುಕಿಗೆ ಬಣ್ಣ ಬಳಿಯಲು ಸೈಕಲ್ ತುಳಿಯುತ್ತಿದ್ದ ರೈಗೆ ಅವು ಕಷ್ಟದ ದಿನಗಳು. ಆಗ ಐಡೆಂಟಿಟಿಗಾಗಿ ಒತ್ತಾಡುತ್ತ, ರವೀಂದ್ರ ಕಲಾಕ್ಷೇತ್ರದ ಸುತ್ತ ಸುತ್ತುತ್ತಿದ್ದ ರೈನತ್ತ ಕತ್ತೆತ್ತಿ ನೋಡುವವರು ಇರಲಿಲ್ಲ. ಸಾಮಾನ್ಯರಲ್ಲಿ ಅವರು ಅಂದು ಸಾಮಾನ್ಯರು. ಅದರೆ ಇಂದು? ಇದೇ ಕಲಾಕ್ಷೇತ್ರದ ವೇದಿಕೆ ಮೇಲೆ ಅವರು ದೊಡ್ಡ ಸ್ಟಾರ್! ಹಿಂದೆ ಆಟೋಗ್ರಾಫ್‌ಗೆ ಕೈಚಾಚಿದ್ದ ಕೈ, ಇಂದು ಆಟೋಗ್ರಾಫ್ ಗೀಚುತ್ತಿತ್ತು! ಇದೇ ಬದುಕು!

‘ಮನೆಯಲ್ಲಿ ಮಾಸ್ಟರ್ ಬೆಡ್‌ರೂಂ, ಮಗನಿಗೆ ಸ್ಟಡಿ ರೂಂ ಎಲ್ಲವೂ ಇರುತ್ತದೆ. ಆದರೆ ಅಮ್ಮನಿಗೆ ಪ್ರತ್ಯೇಕ ರೂಂ ಕಟ್ಟುವ ಔದಾರ್ಯ ಎಷ್ಟು ಮಂದಿಗಿದೆ? ಮಕ್ಕಳಿಲ್ಲವೆಂದು ದತ್ತು ಸ್ವೀಕರಿಸುವ ಜನರು, ಅದೇ ರೀತಿ ಅಮ್ಮನನ್ನು ಏಕೆ ದತ್ತು ಸ್ವೀಕರಿಸಬಾರದು?’ ಎನ್ನುವ ಬೆಳಗೆರೆ ಮಾತು, ಹೃದಯದ ತಂತಿಗಳ ಮೀಟುವಂತಿತ್ತು.

‘ಮಣಿಕಾಂತ್‌ರ ಈ ಪುಸ್ತಕವನ್ನು ಓದುತ್ತ ಹೋದಂತೆ ತುಂಬಾ ಆಪ್ತವೆನಿಸುತ್ತದೆ. ಅವರ ಭಾಷೆಯಲ್ಲಿ ಸೊಗಸು ಮತು ಆತ್ಮೀಯತೆ ಮೇಳೈಸಿದ್ದು, ಇಲ್ಲಿನ ಲೇಖನ ಪ್ರೀತಿಯ ರೂಪಕಗಳು. ಹೀಗಾಗಿ, ಇದನ್ನು ಓದುತ್ತಿದ್ದಂತೆ ಕಣ್ಣು ಎಲ್ಲೋ ತಂಗುತ್ತದೆ, ಮನಸ್ಸು ಎಲ್ಲೋ ನಿಲ್ಲುತ್ತದೆ. ತುಂಬಾ ಸಹೃದಯಿ ಆಗಿರುವ ಕಾರಣ ಅವರ ಬರವಣಿಗೆ ಅಂಥ ಭಾವವುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಇದೊಂದು ಭಾವಗದ್ಯ.ಮಣಿಕಾಂತ್‌ರ ಈ ಪುಸ್ತಕವನ್ನು ನಮ್ಮ ಮಕ್ಕಳಿಗೆ ಓದಲು ಕೊಡಬೇಕು. ಆಗ ಅವರು ನಮ್ಮನ್ನು ನೋಡುವ ಭಾವವೇ ಬೇರೆಯಾದಂತೆ ಕಾಣುತ್ತದೆ.’ ಕೃಷ್ಣೇಗೌಡರ ಈ ಅಭಿಪ್ರಾಯಕ್ಕೆ ನನ್ನದು ಸಂಪೂರ್ಣ ಸಮ್ಮತಿ.

ನಮ್ ಮುದ್ದೆಗೌಡ್ರು, ಕ್ಷಮಿಸಿ ದೇವೇಗೌಡ್ರು ಹೀಗಂದ್ರಾ?

ಸಾಮಾನ್ಯ

ಮೇ ಮುಗ್ಯೋ ತನ್ಕ ನಮ್ ರಾಜ್‌ಕಾರುಣಿಗುಳ್ಗೆ ನಿದ್ದಿಲ್ಲ.  ನಮುಗಿಲ್ಲದ್ ನಿದ್ದಿ ನಿಮಗ್ಯಾಕೆ ಅಂಥ, ಮತುದಾರುರ ನಿದ್ದಿಗೂ ಭಂಗ ತಂದವ್ರೆ. ಮತುದಾರ್ರಿಗೆ ಮೊಂಕುಬೂದಿ ಎರಚೋದು ಹೆಂಗೆ ಅಂಬೋ ಸಂಶೋದ್ನೆಗೆ ಇರೋಬರೊ ರಾಜ್ಕೀಯ ಪಕ್ಸುಗುಳು ಕಾಸು ಸುರಿದಿವ್ಯಂತೆ.

ಚುನಾವಣೆ ಟೇಮಲ್ಲಿ ಬಿಸಿಬಿಸಿ ಸುದ್ದಿ ಮಧ್ಯೆ ಲೋಡುಗಟ್ಟಲೇ ಜಾಹೀರಾತು(ಥೂ) ಮಾರಿ ಜೇಬು ತುಂಬ್ಸಿಕೊಳ್ಳೋಕೆ ಪೇಪರ್‌ನೋರು, ಟೀವಿನೋರು ಐನಾತಿ ಪಿಲಾನು ಮಾಡವ್ರೆ ಅಂಬುತಾ ಅದ್ಯಾರೋ ಲದ್ದಿಯೊ ಬುದ್ಧಿಯೊ ಇರೋ ಜೀವಿ ಹೇಳ್ತಾವ್ನೆ. ನನ್ ಈ ಘನಂದಾರಿ ಕೆಲ್ಸಕ್ಕೆ ನೊಬಲ್ಲು ಕೊಡಿ ಅಂಬುತಾ ಆಯಪ್ಪ ಬಾಯಿ ಬಡಕೋತಾ ಇದಾನೆ.

ಈ ಗಲಾಟೆನಾಗೆ ನಮ್ ರಾಜಕಾರಣಿಗಳು ಇಲೆಕ್ಷನ್‌ಗೆ ಸಜ್ಜಾಗ್ತಾವ್ರೆ. ಜಯ ಲಕ್ಷ್ಮಮ್ಮುನ್ನ ತಮ್ ಕಡೀಗೆಯಾ ವಾಲಿಸಿಕೊಳ್ಳೋಕೆ ಅವ್ರು ಈಗೇನ್ ಕಡುದು ಕಟ್ಟೆ ಹಾಕವ್ರೆ ಅಂಬೋದನ್ನು ಅವ್ರ ಬಾಯಲ್ಲೇ ಕೇಳೋಣ್ವಾ?

ದೇವೇಗೌಡ: ನಾನು ಸನ್ ಆಫ್ ಸಾಯಿಲ್ಲು. ಮಣ್ಣಿಂದಲೇ ರಿಯಲ್ಲಾಗಿ ಎದ್ದು ಬರೋಕೆ ಸಾಕಷ್ಟು ಲೋಡು ಮಣ್ಣು ರಾಶಿ ಹಾಕಿಸ್ತಾ ಇವ್ನಿ. ನನ್ ಜತೆಗೇನೇ ಕುಮಾರನೂ ದಿಲ್ಲಿಗೆ ಬರೋ ಹಂಗೆ ಆಗಬೇಕು. ಅದುಕ್ಕೆ ಡಬಲ್ಲು ಡಬಲ್ಲು ಪೂಜೆ ಮಾಡಿಸ್ತಾಯಿವ್ನಿ. ನನ್ನ ಶತ್ರುಗಳು ನೆಗೆದು ನೆಲ್ಲಿಕಾಯಾಗಲಿ ಅಂಥ ಮಾಟಾ ಮಂತ್ರನೂ ಜೋರಾಗೆ ಮಾಡಿಸಿವ್ನಿ. ದೊಡ್‌ದೊಡ್ ಬಲಿನೂ ಕೊಡಬೇಕಂತೆ. ನಾಡಿ ನೋಡುದವ್ರು ನಿಮ್ಗೆ ರಾಜ್‌ಯೋಗ ಐತೆ, ಶುಭುವಾಗ್ತೈತೆ ಅಂದವ್ರೆ. ಆದ್ರೆ ಕೈ ನೋಡುದವ್ರುನಿಮರಾಯಾ ಹೆಗಲ್‌ಮ್ಯಾಲ್ ಕುಂತವ್ನೆ ಅಂದವ್ರೆ. ನೋಡೋಣ..

ವರುಣ್ ಗಾಂಧಿ: ನಾನೇನು ತಪ್ಪು ಮಾಡಿಲ್ಲ ಅನ್ನೋದಕ್ಕೆ ಬಾಳಾ ಠಾಕ್ರೆ ನೀಡಿರೋ ಸರ್ಟಿಫಿಕೇಟೇ ಸಾಕ್ಷಿ. ಚುನಾವಣೆಯಲ್ಲಿ ಮತದಾರರ ಸೆಳೆಯೋದಕ್ಕೆ ಇನ್ನೂ ಸಕತ್ತು ಟೈಲಾಗ್ ರೆಡಿ ಮಾಡಿದ್ದೆ. ಆರಂಭದಲ್ಲೇ ಸಿಕ್ಕಿಹಾಕಿಕೊಂಡೆ. ಬೇಕಿದ್ದವರು ಟೈಲಾಗ್ ಬುಕ್‌ನ ಪಡೀಬಹುದು.

ಸೋನಿಯಾಗಾಂಧಿ: ‘ಭಾರತಕ್ಕಾಗಿ ತವರು ದೇಶ ಬಿಟ್ಟೆ.. ಅತ್ತೇನಾ ಕೊಟ್ಟೆ, ಗಂಡನ್ನ ಕೊಟ್ಟೆ ’ ಅನ್ನೋ ಟೈಲಾಗ್ ಹಳೆಯದಾಯಿತು. ಮತ್ತೆ ಇಂದಿರಮ್ಮನ ಸ್ಟೈಲಲ್ಲಿ ನಾನು ನನ್ನ ಮಗಳು ಸೀರೆ ಉಟ್ಟು ಮತದಾರರ ಮುಂದೆ ನಿಲ್ತೇವೆ. ಮತದಾರರ ಸೆಳೆಯುವಂತೆ ಮುಗುಳ್ನಗುತ್ತಾ, ಕೈಮುಗಿಯೋದರ ರಿಹರ್ಸಲ್ ಮಾಡ್ತಾ ಇದ್ದೀವಿ. ಮೊದಲು ತೆರೆಹಿಂದಿನ ಪ್ರಧಾನಿಯಾಗಿದ್ದೆ. ನನಗಂತೂ ಪ್ರಧಾನಿ ಯೋಗ ಬರೆದಿಲ್ಲ. ರಾಹುಲ್‌ನನ್ನು ರಾಜೀವ್ ಥರಾ, ಪ್ರಿಯಾಂಕಾನಾ ನಮ್ಮ ಅತ್ತೆ ಥರಾ ಜನರ ಮನದಲ್ಲಿ ನಿಲ್ಲಿಸೋದು ನನ್ನಾಸೆ. ಮುಂದೆ ಒಂದು ದಿನ ಅವರು ಪ್ರಧಾನಿ ಕುರ್ಚಿ ಹತ್ತಿದರೆ, ಅದಕ್ಕಿಂತ ಸೌಭಾಗ್ಯ ಏನೈತೆ?

ಆಡ್ವಾಣಿ: ವಾಜಪೇಯಿ ಮನೆ ಸೇರಿದ್ದಾರೆ. ಅವರಿಲ್ಲದ ಕೊರತೆ, ಈ ಚುನಾವಣೆಯಲ್ಲಿ ಕಾಡ್ತಾಯಿದೆ. ಏನ್ ಲಾಗಾ ಹಾಕಿದ್ರೂ ಜನಗಳ ಮನಸು ಕಮಲದತ್ತ ವಾಲುತ್ತಿಲ್ಲ. ವಾಜಪೇಯಿ ಮುಖವಾಡ ಹಾಕಿಕೊಂಡು, ಪ್ರಚಾರ ಮಾಡಬೇಕು ಅಂಥ  ನಿರ್ಧರಿಸಿದ್ದೇನೆ. ಪ್ರಧಾನಿಯಾಗೋ ಯೋಗ ನನ್ನ ಹಣೆಯಲ್ಲಿ ಬರೆದಿದ್ಯೋ ಇಲ್ವೋ ರಾಮನೇ ಬಲ್ಲ..

ಚಿರಂಜೀವಿ: ನಾನು ಅಸಲೀ ಕಲಾವಿದ. ಚುನಾವಣೆ ಅನ್ನೋದು, ನನ್ನಲ್ಲಿರೋ ಕಲಾವಿದನಿಗೆ ನಿಜಕ್ಕೂ ಒಂದು ಸವಾಲು. ಉತ್ತಮವಾಗಿ ಅಭಿನಯಿಸಿ, ಬಣ್ಣದ ಟೈಲಾಗ್‌ಗಳಿಂದ ಮತದಾರರ ಮರಳು ಮಾಡೋ ಆತ್ಮವಿಶ್ವಾಸ ನನಗಂತೂ ಇದೆ.

ಗೆಳೆಯರೇ ಈ ರಾಜಕೀಯ ವಿಡಂಬನೆ ಏನನ್ನಿಸಿತು?

‘ಮೈಸೂರು ಮಲ್ಲಿಗೆ’ ಕಂಪು ಹಬ್ಬಲಿ ಗಲ್ಲಿಗಲ್ಲಿಗೆ..

ಸಾಮಾನ್ಯ

ಅಮೆರಿಕದಲ್ಲಿನ ಸದ್ಯದ ಸ್ಥಿತಿ, ಆರ್ಥಿಕ ಹಿಂಜರಿತ, ಹೊಸ ಲ್ಯಾಪ್‌ಟಾಪ್, ಮೊಬೈಲ್, ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ, ಬರಾಕ್ ಪತ್ನಿ ಮಿಶೆಲ್ ಗರ್ಭವತಿ, ಸತ್ಯಮ್ ಹಗರಣ -ಹೀಗೆ ಎಲ್ಲದರ ಬಗ್ಗೆಯೂ ಗಂಟೆಗಟ್ಟಲೇ ಮಾತನಾಡುವ ನಾವು, ನಮ್ಮ ಬಗ್ಗೆ ಐದಾರು ನಿಮಿಷ ಮಾತಾಡುವ ವೇಳೆಗೆ ಸುಸ್ತಾಗಿ ಬಿಡುತ್ತೇವೆ. ನಮ್ಮ ಬಗ್ಗೆ ಹೇಳಿಕೊಳ್ಳುವ ವಿಷಯಗಳು ಇರುವುದೇ ಇಲ್ಲವಾ? ಅಥವಾ ಹೇಳಲು ನಮಗೆ ಗೊತ್ತಿಲ್ಲವಾ?
ಇಂದು ಗಂಡ-ಹೆಂಡತಿ, ಅಪ್ಪ-ಅಮ್ಮ, ಅಜ್ಜ-ಅಜ್ಜಿ  ಇಂಥ ಯಾವ ಸಂಬಂಧಗಳೂ ನಮಗೆ ಆನಂದ ತರುತ್ತಿಲ್ಲ. ನಮ್ಮ ಸಂಸಾರವನ್ನು ಆನಂದ ಸಾಗರ ಮಾಡಿಕೊಳ್ಳುವ ಕೌಶಲ ನಮಗೆ ಗೊತ್ತಿಲ್ಲ. ಆ ಕಲೆಯಲ್ಲಿ ಕೆ.ಎಸ್.ನರಸಿಂಹಸ್ವಾಮಿ ನಿಪುಣರು. ಅದನ್ನು ಇತರರಿಗೆ ಕಲಿಸಲು  ಅವರಿಗೆ ಎಲ್ಲಿಲ್ಲದ ಆಸಕ್ತಿ. ಕುಟುಂಬದ ಸಾರ-ಸಾರ್ಥಕತೆಯನ್ನು ಮನದಲ್ಲಿ ಬಿತ್ತಿದ ಕೆಎಸ್‌ನ, ತಮ್ಮ ಪದ್ಯಗಳ ಮೂಲಕ ಇಂದಿಗೂ ನಮ್ಮ ಮಧ್ಯೆ ಜೀವಂತ. ಒಲವಿನ ವಿಸ್ಮಯ, ಬೆರಗು, ನೋವು, ತಳಮಳಗಳು ಅವರ ಪದ್ಯದಲ್ಲಿ ಅರಡಿಕೊಂಡಿವೆ. ಅದರಾಚೆ ಅವರು ಸಾಕಷ್ಟು ಬರೆದರೂ, ಒಲವಿನಷ್ಟು ಓದುಗರನ್ನು ಸೆಳೆದದ್ದು ಇನ್ನೊಂದಿಲ್ಲ.
೧೯೪೨ರಿಂದ ಈವರೆಗೆ ೩೦ಕ್ಕೂ ಹೆಚ್ಚು ಮುದ್ರಣ ಕಂಡಿರುವ ‘ಮೈಸೂರು ಮಲ್ಲಿಗೆ’ ಅದು ಕೇವಲ ಒಂದು ಪುಸ್ತಕವಲ್ಲ. ಮನೆಯ ಜೀವಂತಿಕೆ ಮತ್ತು ಪ್ರತಿಷ್ಠೆ ಹೆಚ್ಚಿಸುವ ಸಂಜೀವಿನಿ.  ‘ಮೈಸೂರು ಮಲ್ಲಿಗೆ ’ಪ್ರೇಮಿಗಳ ಪಾಲಿಗೆ ಭಗವದ್ಗೀತೆ. ಈ ಮಲ್ಲಿಗೆ ಬಗ್ಗೆ ಯಾರಿಗೆ ಗೊತ್ತಿಲ್ಲ.  ಈ ಕವನಸಂಕಲನ ಪ್ರಕಟವಾಗಿ ೬೭ ವರ್ಷವಾದರೂ, ಆ ಕವನಗಳು ತಾಜಾತನದಿಂದ ಇಂದಿಗೂ ನಳನಳಿಸುತ್ತಿವೆ. ಕವನ ಓದಿದಾಗಲೆಲ್ಲ ಹೊಸದಾಗಿ ಓದಿದಂತೆ ಓದುಗ ಭಾವಪರವಶ. ಕವನಕ್ಕೆ ಕಿವಿಯಾದವರ ಭಾವಕೋಶದಲ್ಲಿ ಹೇಳಲಾಗದ ಸಂಭ್ರಮ. ಇಂಥ ಸಂಭ್ರಮವನ್ನು ದ್ವಿಗುಣಗೊಳಿಸುತ್ತಿರುವುದು, ಡಾ.ಬಿ.ವಿ.ರಾಜಾರಾಂ ನಿರ್ದೇಶನದ ‘ಮೈಸೂರು ಮಲ್ಲಿಗೆ’ ನಾಟಕ.
ಕವಿಯನ್ನು ಜನರ ಮಧ್ಯೆ ತರುವಲ್ಲಿ ಇಂಥ ಪ್ರಯೋಗಗಳು ಸ್ವಾಗತಾರ್ಹ. ಬೇಂದ್ರೆ ಪದ್ಯಗಳನ್ನು ಖ್ಯಾತನಾಮರಿಂದ ಓದಿಸಿದ ‘ನಾಕುತಂತಿ’, ಇದೇ ಮಾದರಿಯಲ್ಲಿ ನಿಸಾರ್ ಪದ್ಯಗಳನ್ನು ಜನರಿಗೆ ತಲುಪಿಸಿದ ‘ಗುಲ್‌ಮೊಹರ್’ ಕಾರ್‍ಯಕ್ರಮಗಳನ್ನು ಇಲ್ಲಿ ನೆನೆಯಬೇಕು. ಶಕಲಕ ಬೇಬಿ ವಸುಂಧರಾ ದಾಸ್ ಮತ್ತು ಸಂಸದ ಅನಂತಕುಮಾರ್ ಬಾಯಲ್ಲಿ ನಿಸಾರ್ ಪದ್ಯ ಕೇಳುವುದು, ಪವಿತ್ರಾ ಲೋಕೇಶ್ ಮತ್ತು ಕ್ರಿಕೆಟಿಗ ವಿಜಯ ಭಾರದ್ವಾಜ್ ಅವರು ಬೇಂದ್ರೆ ಪದ್ಯ ಓದುವುದು ಹೊಸ ಅನುಭವ.  ಈ ಕಾರ್‍ಯಕ್ರಮಗಳಲ್ಲಿ ಪಾಲ್ಗೊಂಡವರು, ಕವಿಪ್ರೀತಿಯನ್ನು ದ್ವಿಗುಣಗೊಳಿಸಿಕೊಂಡಿದ್ದರೆ ಅಚ್ಚರಿಯೇನಿಲ್ಲ. ಕವಿಗಳನ್ನು ಜನರ ಹತ್ತಿರಕ್ಕೆ ತರುವಲ್ಲಿ ಸಿ.ಆರ್.ಸಿಂಹ ಸಹಾ ಎತ್ತಿದ ಕೈ. ಅವರ ‘ಟಿಪಿಕಲ್ ಕೈಲಾಸಂ’ ಮತ್ತು ಕುವೆಂಪು ಬದುಕು ಬರಹಗಳನ್ನು ಆಧರಿಸಿದ ‘ರಸಋಷಿ’ ನಾಟಕಗಳನ್ನು ಮರೆಯುವಂತಿಲ್ಲ. ಇಂಥದ್ದೇ ಮುಂದುವರಿದ ಪ್ರಯತ್ನ ‘ಮೈಸೂರು ಮಲ್ಲಿಗೆ’.
ಮಲ್ಲಿಗೆ ಕವಿಯ ಬದುಕು, ಬರಹಗಳಿಗೆ ಕನ್ನಡಿಯಾಗುವ ಈ ನಾಟಕಕ್ಕೆ, ‘ಮೈಸೂರು ಮಲ್ಲಿಗೆ’ ಪದ್ಯಗಳೇ ಮಣ್ಣು-ನೀರು ಮತ್ತು ಬೆಳಕು. ಪದ್ಯಗಳ ಮೂಲಕ ಕವಿಯನ್ನು ಕಾಣುವ, ಅರ್ಥೈಸಿಕೊಳ್ಳುವ ಈ ವಿನೂತನ ಪ್ರಯತ್ನದಿಂದ ಮಲ್ಲಿಗೆ ಕಂಪು ಇನ್ನಷ್ಟು ಪಸರಿಸಿದೆ. ರಾಜೇಂದ್ರ ಕಾರಂತರ ಕೈಯಲ್ಲಿ ರೂಪುಗೊಂಡ ಈ ನಾಟಕ, ರಾಜಾರಾಂ ನಿರ್ದೇಶನದಲ್ಲಿ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಾಡಿನ ರಂಗಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟಾಕೀಸಲ್ಲಿ ಕನ್ನಡ ಸಿನೆಮಾ ನೋಡೋರೇ ಇಲ್ಲ, ಇನ್ನು ನಾಟಕಗಳನ್ನು ನೋಡೋರು ಯಾರು ಎಂಬ ಕೊಂಕಿನ ನಡುವೆಯೇ, ನಾಟಕ ೫೦ ಪ್ರದರ್ಶನಗಳನ್ನು ಮುಗಿಸಿ, ನೂರರತ್ತ ಮುನ್ನಡೆದಿದೆ. ಇತ್ತೀಚೆಗಷ್ಟೇ ರವೀಂದ್ರ ಕಲಾಕ್ಷೇತ್ರದಲ್ಲಿ ೫೦ನೇ ಪ್ರದರ್ಶನಗೊಂಡ ನಾಟಕಕ್ಕೆ ರಂಗಾಸಕ್ತರು ಉತ್ಸಾಹದಿಂದ ಆಗಮಿಸಿದ್ದರು. ಕಲಾಕ್ಷೇತ್ರ ತುಂಬಿತುಳುಕುತ್ತಿತ್ತು.
ಕವಿಯ ಯೌವ್ವನ, ಮಧ್ಯ ವಯಸ್ಸು, ವೃದ್ದಾಪ್ಯದ ಪಾತ್ರಗಳಿಗೆ ವಿಜಯಸಿಂಹ, ಕಿಟ್ಟಿ ಮತ್ತು ರಾಜಾರಾಂ ಜೀವ ತುಂಬಿದರು. ಕವಿ ಪತ್ನಿಯಾಗಿ ಯೌವ್ವನಾವಸ್ಥೆಯಲ್ಲಿ ವಸಂತಲಕ್ಷ್ಮಿ ಮತ್ತು ಲಕ್ಷ್ಮಿ, ನಂತರದ ದಿನಗಳಲ್ಲಿ ವಿದ್ಯಾ ತಮ್ಮ ಪ್ರಬುದ್ಧ ಅಭಿನಯದಿಂದ ಗಮನಸೆಳೆದರು. ಬೆನ್ನು ಬಾಗಿದ ಬಳೆಗಾರ ಚೆನ್ನಯ್ಯನ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಅವರದು ಚಪ್ಪಾಳೆಗಿಟ್ಟಿಸುವಂಥ ಅಭಿನಯ. ಪಾತ್ರಧಾರಿಗಳ ಅಲಂಕಾರ, ಉಡುಪು, ಬೆಳಕಿನ ಬಳಕೆ ಎಲ್ಲವೂ ಹಿತಮಿತ.
ಕಲಾಗಂಗೋತ್ರಿ ತಂಡ ಪ್ರದರ್ಶಿಸಿದ ೬೦ ನಿಮಿಷಗಳ ಈ ಗೀತನಾಟಕದುದ್ದಕ್ಕೂ ಕಲಾಸಕ್ತರು ಒಂದಾದರು. ಪಾತ್ರ ಮತ್ತು ಪದ್ಯದೊಳಗೆ ಬೆರೆತರು. ಶ್ಯಾನುಭೋಗರ ಮಗಳನ್ನು ಮದುವೆಯಾದ ನಂತರದ ಕವಿಯ ಬದುಕು ಹೇಗಿತ್ತು ಎನ್ನುವುದರಿಂದ ಆಕೆಯ ಸಿಟ್ಟು-ಸೆಡವಿನ ವರೆಗೆ.. ಎಲ್ಲದರಲ್ಲೂ ಕವಿಗೆ ಚೆಲುವನ್ನೇ ಕಾಣುವ ಹಂಬಲ. ಆಥವಾ ಅನಿವಾರ್‍ಯತೆ ಎಂದೂ ಕರೆಯಬಹುದು. ಇದೆಲ್ಲವೂ ನಾಟಕದಲ್ಲಿ ಎಳೆಎಳೆಯಾಗಿ ವ್ಯಕ್ತವಾಗಿದೆ.
ಪ್ರೀತಿಗೊಂದು ವಯಸ್ಸಿದೆಯಾ? ಕೆಎಸ್‌ನ ಅವರಂತೂ ತಮ್ಮ ಕಡೇ ಕಾಲದ ತನಕ ಪ್ರೇಮ ಕವನಗಳನ್ನೇ ಬರೆದರು. ಒಲವನ್ನು ಸುದೀರ್ಘ ಕಾಲ ಕಾಯ್ದುಕೊಂಡ ಅವರ ತಾಕತ್ತು ದೊಡ್ಡದು. ಅರ್ಥವಾಗದಂತೆ ಬರೆಯುವುದೇ ಶ್ರೇಷ್ಠತೆ ಎಂಬ ನವ್ಯದ ಅಬ್ಬರದ ಮಧ್ಯೆ, ಕೆಎಸ್‌ನ ಭಿನ್ನ. ಅವರು ನವ್ಯ ಬರೆಯಲಿಲ್ಲವೆಂದಲ್ಲ. ಆದರೆ ಪ್ರೇಮಗೀತೆಗಳ ಸುಳಿಯಲ್ಲಿ ಅದು ತೆರೆಮರೆ.
೭೮ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಕವಿಯ ಬದುಕು, ಬಡತನ, ಅತೃಪ್ತಿ, ದುಗುಡ, ದುಮ್ಮಾನ, ಸಿಡುಕು, ಅಸಹಾಯಕತೆ, ಹಿರಿಮೆ ಮತ್ತು ಸಾವು ಇವೆಲ್ಲವೂ ನಾಟಕದ ವಸ್ತು. ಬಳೆಗಾರ ಚೆನ್ನಯ್ಯ ಬಾಗಿಲಿಗೆ, ತೌರ ಸುಖದೊಳಗೆನ್ನ, ಸಿರಿಗೆರೆಯ ನೀರಿನಲ್ಲಿ, ರಾಯರು ಬಂದರು, ನಿನ್ನ ಪ್ರೇಮದ ಪರಿಯ ಗೀತೆಗಳು ಸಾಂದರ್ಭಿಕವಾಗಿ ನಾಟಕದಲ್ಲಿ ಬಳಕೆಯಾಗಿವೆ. ಕತೆ ಮತ್ತು ಪದ್ಯಗಳು ಎಲ್ಲಿಯೂ ಬೇರೆಬೇರೆಯಾಗಿ ಕಾಣುವುದಿಲ್ಲ. ಇವೆರಡೂ ದಾರಕ್ಕೆ ಮಲ್ಲಿಗೆ ಮೊಗ್ಗು ಪೋಣಿಸಿದಂತೆ ಅಂದ ಮತ್ತು ಚೆಂದ. ಮೈಸೂರು ಮಲ್ಲಿಗೆ ಎಂದರೆ ಬಳೆಗಾರ ಚೆನ್ನಯ್ಯ ನೆನಪಾಗುತ್ತಾನೆ. ಆ ಪಾತ್ರ ಒಂದು ರೀತಿಯಲ್ಲಿ ಸೂತ್ರದಾರನಂತೆ ನಾಟಕದುದ್ದಕ್ಕೂ ನಿಲ್ಲುತ್ತದೆ. ಆತನ ಆಗಮನದೊಂದಿಗೆ ನಾಟಕ ಆರಂಭಗೊಳ್ಳುತ್ತದೆ. ಫ್ಲ್ಯಾಷ್‌ಬ್ಯಾಕ್‌ನಲ್ಲಿ ಕವಿಯ ಬದುಕು ಅನಾವರಣಗೊಳ್ಳುತ್ತದೆ. ಪ್ರತಿ ದೃಶ್ಯಕ್ಕೂ ಚೆನ್ನಯ್ಯ ಸಾಕ್ಷಿ ಬಿಂದು. ಶಾನುಭೋಗರ ಮಗಳು ಸೀತಮ್ಮಳ(ಕವಿಯ ಪತ್ನಿ) ಮರಿಮಗಳು ಮತ್ತು ಆಕೆಯ ಮೊಮ್ಮಕ್ಕಳನ್ನು ನವಿಲೂರಿನಲ್ಲಿ ಭೇಟಿ ಮಾಡುವ ಚೆನ್ನಯ್ಯ, ಹಳೆಯದನ್ನು ನೆನೆಯುತ್ತಾನೆ. ಆ ದಿನಗಳು ಹೇಗಿದ್ದವು, ಕೆಎಸ್‌ನ ಬದುಕು ಹೇಗಿತ್ತು ಎನ್ನುವುದನ್ನು ಹೇಳುತ್ತಾ ಹೋಗುತ್ತಾನೆ.
ಅಂದಿಗೂ ಇಂದಿಗೂ ಇರುವ ಬದಲಾವಣೆ ಕಂಡು ಚೆನ್ನಯ್ಯ ಅಚ್ಚರಿಪಡುತ್ತಾನೆ. ‘ಬೀಸೋ ಗಾಳಿ ಬದಲಾಗಿಲ್ಲ. ಹರಿಯೋ ನೀರು ಬದಲಾಗಿಲ್ಲ. ಮಲ್ಲಿಗೆ ಹೂವು ಬದಲಾಗಿಲ್ಲ. ಬೆಳದಿಂಗಳು ಬದಲಾಗಿಲ್ಲ. ಭೂಮಿ ಅಂಗೇ ಇದೆ. ಸೂರ್‍ಯನೂ  ಬದಲಾಗಿಲ್ಲ. ಆದರೆ ಈ ಮನುಷ್ಯ ಮಾತ್ರ ಈ ಪಾಟಿ ಬದಲಾಗಿದ್ದಾನೆ’ ಎನ್ನುವ ಅವನ ಮಾತು, ಆಧುನಿಕ ಪ್ರಪಂಚಕ್ಕೆ ಪ್ರಶ್ನೆ. ‘ಎಲ್ಲ ಬದಲಾದರೂ ಬದಲಾಗದ್ದು, ಈ ಹಳ್ಳಕೊಳ್ಳದ ರಸ್ತೆಗಳು ಮಾತ್ರ’ ಎನ್ನುವ ಮೂಲಕ ಆಡಳಿತ ಯಂತ್ರವನ್ನು ಚುಚ್ಚುತ್ತಾನೆ. ಇಂಥ ಮೊನಚು ಸಂಭಾಷಣೆ ನಾಟಕದುದ್ದಕ್ಕೂ ಬೆರೆತಿದೆ.
ಅಂದಿನ ವೈಭವ ನೆನೆಯುವ ಚೆನ್ನಯ್ಯ, ‘ಇಲ್ಲಿದ್ದ ತೆಂಗಿನ ಮರ ಎಲ್ಲಮ್ಮ?’ ಎನ್ನುತ್ತಾನೆ. ಕವಿಯ ಮರಿಮಗಳು, ‘ಅವನ್ನು ಕಡಿದು ಹಾಕಿದೆವು’ ಎನ್ನುತ್ತಾಳೆ. ‘ಕಲ್ಪವೃಕ್ಷಾನಾ ಎಲ್ಲಾದ್ರೂ ಕಡಿಯೋದುಂಟಾ.. ಅಯ್ಯೊ ಅಯ್ಯೊ’ ಎಂದು ಕೊರಗುತ್ತಾನೆ ಚೆನ್ನಯ್ಯ. ‘ಸುಮ್ಮನೇ ಕಡಿಯಲಿಲ್ಲ, ಪೂಜೆ ಮಾಡಿಯೇ ಕಲ್ಪವೃಕ್ಷ ಕಡಿಸಿದೆವು’ ಎನ್ನುವ ಉತ್ತರ ಕೇಳಿ, ತಲೆ ಚಚ್ಚಿಕೊಳ್ಳುತ್ತಾನೆ. ಕಾಣದ ಮಲ್ಲಿಗೆ ಚಪ್ಪರ ನೆನೆದು ಚೆನ್ನಯ್ಯ ಕುಗ್ಗಿ ಹೋಗುತ್ತಾನೆ.
ಎರಡು ಪೀಳಿಗೆಯ ಕೊಂಡಿಯಂತೆ ಕಾಣಿಸಿಕೊಳ್ಳುವ ಚೆನ್ನಯ್ಯ ದಾಹವೆಂದಾಗ ಪುಟಾಣಿಗಳು ಪೆಪ್ಸಿ ತಂದು ಕೊಡುತ್ತಾರೆ. ‘ನನಗಿದ್ದೆಲ್ಲ ಬೇಡ ನೀರು ಕೊಡಿ. ಇಲ್ಲೆಲ್ಲೋ ಸಿಹಿನೀರು ಬಾವಿ ಇದ್ದಲ್ಲ..  ಎಲ್ಲಿ?’ ಎಂದು ಚೆನ್ನಯ್ಯ ಹುಡುಕಾಡುತ್ತಾನೆ. ‘ಬಾವಿ ನೀರು ಕೆಟ್ಟಿದೆ’ ಎನ್ನುವುದನ್ನು ಕೇಳಿ, ‘ಇಲ್ಲ ಅದು ಕೆಟ್ಟಿಲ್ಲ .. ನೀವು ಕೆಡಿಸಿದ್ದೀರಿ’ ಎನ್ನುವ ಮೂಲಕ ಕುಟುಕುತ್ತಾನೆ. ಕವಿಯ ಮದುವೆ, ಆ ಸಂಭ್ರಮದ ಯೌವ್ವನ, ಪ್ರೇಮ ಇದು ಮೊದಲ ಭಾಗದಲ್ಲಿ ಅನಾವರಣಗೊಳ್ಳುತ್ತದೆ.
ಸಾಂಸಾರಿಕ ಬದುಕಿನ ಕಷ್ಟ, ದುಡ್ಡಿನ ಕಷ್ಟ, ಮಗಳ ದುರಂತ, ಗಂಡ-ಹೆಂಡತಿ ಪ್ರತ್ಯೇಕ ಜೀವನ ನಡೆಸುವುದು, ಮಗ ಬಂದು ಕರೆಯುವುದು, ಕವಿ ನಿರಾಕರಣೆ ಇವೆಲ್ಲವೂ ನಾಟಕದ ಎರಡನೇ ಭಾಗದಲ್ಲಿವೆ. ಮಗನ ಮೇಲಿನ ಕೋಪವನ್ನು ‘ಯಾತ್ರೆ’ ಕವಿತೆ ಮೂಲಕ ಕವಿ ತೀರಿಸಿಕೊಳ್ಳುತ್ತಾರೆ. ಮೊಮ್ಮಗನ ಮೇಲೆ ‘ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು’ ಪದ್ಯವನ್ನು ಬರೆದು, ಅದು ಮುಂದಿನವಾರದ ಸುಧಾದಲ್ಲಿ ಬರುತ್ತೆ. ದಯವಿಟ್ಟು ಓದು ಎಂದು ಮಗನಿಗೆ ಹೇಳುವ ಸಂದರ್ಭ ಭಾವನಾತ್ಮಕವಾಗಿದೆ.
ನೀವು ನೆಮ್ಮದಿಯಾಗಿದದ್ದನ್ನು ನಾ ಎಂದೂ ಕಂಡಿಲ್ಲ ಎನ್ನುವ ಪತ್ನಿ ಮಾತಿಗೆ, ‘ನೊಂದ್ಕೊಳ್ಳದಿದ್ರೆ ಕವಿತೆ ಹುಟ್ಟುತ್ತಾ? ನೆಮ್ಮದಿಯಿದ್ರೆ ಕವಿ ಕವಿತೆ ಹೇಗೆ ಬರೆಯುತ್ತಾನೆ?’ಎನ್ನುತ್ತಾರೆ. ಕೆಲಸದಲ್ಲಿನ ಪ್ರಾಮಾಣಿಕತೆ, ಸತ್ಯವಾಗಿ ಬದುಕಿದ ಹೆಮ್ಮೆ ಅವರ ಮಾತಲ್ಲಿ ಎದ್ದು ಕಾಣುತ್ತದೆ. ತಮ್ಮ ಬಡತನಕ್ಕೆ ಯಾರನ್ನೂ ಹೊಣೆ ಮಾಡದ ಅವರು, ಕಷ್ಟದಿಂದ ಹಣ್ಣಾಗುತ್ತಾರೆ. ‘ಸರಕಾರವನ್ನು ಕೇಳೋದು ಹೇಗೆ? ನಾ ಕೇಳಲಾರೆ. ಮಗನಿಗೆ ನಾ ಏನನ್ನೂ ನೀಡಲಿಲ್ಲ. ಈಗ ನಾ ಹೇಗೆ ಕೈವೊಡ್ಡಲಿ’ ಎನ್ನುವ ಮಲ್ಲಿಗೆ ಕವಿ ತಮ್ಮ ಸ್ವಾಭಿಮಾನ ಪ್ರದರ್ಶಿಸುತ್ತಾರೆ. ಈ ದೃಶ್ಯಗಳು ನೋಡುಗರ ಕಣ್ಣನ್ನು ತೇವಗೊಳಿಸುತ್ತವೆ. ಆ ಮಧ್ಯೆ ನೋವಿನಲ್ಲೂ ಕವಿ ಮತ್ತು ಅವರ ಪತ್ನಿ ನಲಿವನ್ನು ಕಾಣುತ್ತಾರೆ. ಅವರಿಬ್ಬರ ನಡುವಿನ ಸರಸ ಸಂಭಾಷಣೆ, ಮುದ್ದಣ ಮನೋರಮೆಯರ ನೆನಪಿಸುತ್ತದೆ.
ಕೇವಲ ೫೦೦೦ ರೂ.ಗಳಿಗೆ ತಮ್ಮ ಸಮಗ್ರ ಕಾವ್ಯದ ಹಕ್ಕುಗಳನ್ನು ಪಡೆದ ಪ್ರಕಾಶಕರ ಬಗ್ಗೆ ಕವಿಗೆ ಒಂದಿಷ್ಟೂ ಸಿಟ್ಟಿಲ್ಲ. ಒಳ್ಳೆ ಸಮಯದಲ್ಲಿ ಹಣ ನೀಡಿ ಉಪಕಾರ ಮಾಡಿದಿರಿ ಎನ್ನುತ್ತಾರೆ. ವಿಮರ್ಶಕರ ಬಗ್ಗೆ ಅಸಹನೆ ಹೊಂದಿರುವ ಕವಿ, ಪತ್ನಿಯನ್ನು ಶ್ರೇಷ್ಠ ವಿಮರ್ಶಕಿ ಅನ್ನುತ್ತಾರೆ. ಬದುಕಿದ್ದಾಗಲೇ ಸಾವಿನ ಸುದ್ದಿ ಪ್ರಕಟವಾದದ್ದನ್ನು ಕಂಡು ನೊಂದುಕೊಳ್ಳುತ್ತಾರೆ. ನಾನು ಸತ್ತ ನಂತರ, ಜನರು ನನ್ನನ್ನು ನೆನಪಲ್ಲಿಟ್ಟುಕೊಳ್ತಾರಾ ಎಂಬ ಅನುಮಾನ ಸಹಾ ಎಲ್ಲೋ ಒಂದು ಮೂಲೆಯಲ್ಲಿ. ಈ ಅಂಶಗಳ ಜತೆಗೆ  ನಾಟಕದಲ್ಲಿ ನೆನಪಲ್ಲಿ ಉಳಿಯುವ ಎರಡು ಮುಖ್ಯ ದೃಶ್ಯಗಳಿವೆ. ವೇದಿಕೆ ಮೇಲೆಯೇ ಹಳೆಯ ಮದುವೆ ದಿಬ್ಬಣ ನೆನಪಿಸುವ ದೃಶ್ಯವಂತೂ ಕಣ್ಣಿಗೆ ಹಬ್ಬ. ‘ಎಲ್ಲಿದ್ದಿಯೇ ಮೀನಾ’ ಪದ್ಯದ ಬಳಕೆ ದೃಶ್ಯಕಾವ್ಯವಾಗಿ ನೆನಪಲ್ಲಿ ನಿಲ್ಲುತ್ತದೆ.
ಮನೆ ಇಷ್ಟಪಡುವವರಿಗೆ ಮೈಸೂರು ಮಲ್ಲಿಗೆ ಇಷ್ಟವಾಗುತ್ತದೆ. ಪಪ್ ಇಷ್ಟಪಡುವವರಿಗೆ ನರಸಿಂಹಸ್ವಾಮಿ ಅರ್ಥವಾಗುವುದಿಲ್ಲ. ಇಂಥ ನಾಟಕಗಳು ಇನ್ನಷ್ಟು ಬರಲಿ. ಕನ್ನಡ ನಾಟಕಗಳನ್ನು ಇನ್ನಷ್ಟು ನೋಡಲು ಕನ್ನಡಿಗರು ಮನಸ್ಸು ಮಾಡಲಿ.

೧೦೦೦ ಪುಟಗಳಲ್ಲಿ ‘ಸಿರಾ’ ದರ್ಶನ!

ಸಾಮಾನ್ಯ

ತುಮಕೂರು ಜಿಲ್ಲೆಯ ಸಿರಾ ಎನ್ನುವುದು ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಮತ್ತು ಚಾರಿತ್ರಿಕವಾಗಿ ಸಮೃದ್ಧ ಸೀಮೆ. ಆದರೆ ಈ ಬಗ್ಗೆ ಸಮಗ್ರ ಮಾಹಿತಿ ನೀಡುವ ಪುಸ್ತಕಗಳು ಇಲ್ಲವೇ ಇಲ್ಲ. ಆ ಕೊರತೆ ನೀಗಿಸುವ ನಿಟ್ಟಿನಲ್ಲಿ ಡಾ.ಎನ್. ನಂದೀಶ್ವರ ಅವರು ಎರಡು ಪುಸ್ತಕಗಳನ್ನು(ಸಿರಾ ತಾಲೂಕಿನ ಸ್ಮಾರಕಗಳು ಹಾಗೂ ಶಾಸನಗಳು, ಸಿರಾ ತಾಲೂಕು ದರ್ಶನ) ಹೊರ ತಂದಿದ್ದಾರೆ.

ಕಳ್ಳಂಬೆಳ್ಳದ ಮರಡಿ ರಂಗನಾಥ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಅವರು, ರಜೆಗಳು ಸೇರಿದಂತೆ ತಮ್ಮ ಬಿಡುವಿನ ವೇಳೆಯನ್ನು ಸಿರಾ ಇತಿಹಾಸ ಕೆದಕಲು ಸದ್ಬಳಕೆ ಮಾಡಿಕೊಂಡಿದ್ದಾರೆ. ತಾಲೂಕಿನ ಮೂಲೆಮೂಲೆಗಳಿಗೂ ತೆರಳಿ ಸಂಗ್ರಹಿಸಿದ ಮಾಹಿತಿಯನ್ನು ಪುಸ್ತಕದಲ್ಲಿ ವ್ಯವಸ್ಥಿತವಾಗಿ ಅವರು ಬಳಸಿಕೊಂಡಿದ್ದಾರೆ. ಸುಮಾರು ಐದಾರು ವರ್ಷಗಳ ಶ್ರಮ ೧೦೦೦ ಪುಟಗಳ ಪುಸ್ತಕವಾಗಿ ಸಿದ್ಧಗೊಂಡಿದೆ. ಅವರ ಸಂಶೋಧನೆಯ ಲಾಭ ಓದುಗರಿಗೆ ದೊರೆತಿದ್ದು, ಸಿರಾ ಪಾಲಿನ ದಾಖಲೆಯಾಗಿ ಪುಸ್ತಕ ರೂಪುಗೊಂಡಿದೆ.

‘ನಾನು-ನನ್ನ ಮನೆ ’ ಎಂದಷ್ಟೇ ಯೋಚಿಸುವ ಜನರ ಮಧ್ಯೆ ‘ಊರು-ಕೇರಿ’ ಬಗ್ಗೆ ಚಿಂತಿಸುವ ಡಾ.ನಂದೀಶ್ವರರಂಥವರು ಭಿನ್ನವಾಗಿ ಕಾಣುತ್ತಾರೆ. ತಾಲೂಕು ದರ್ಶನದಂಥ ಕೆಲಸಗಳನ್ನು ಸರಕಾರ ಮಾಡಬೇಕು. ವಿಶ್ವವಿದ್ಯಾಲಯಗಳು ಈ ಬಗ್ಗೆ ಆಸಕ್ತಿವಹಿಸಬೇಕು. ಆದರೆ ಯಾವುದೇ ಅನುದಾನದ ಬಯಕೆಯಿಲ್ಲದೇ ತಮ್ಮ ಅಮೂಲ್ಯ ಸಮಯ, ಹಣ, ಶ್ರಮವನ್ನು ಅವರು ವ್ಯಯಿಸಿರುವುದು ಶ್ಲಾಘನೀಯ. ಅವರನ್ನು ಅಭಿನಂದಿಸಬೇಕಾ? ಜಂಗಮವಾಣಿ ಸಂಖ್ಯೆ: ೯೯೬೪೨ ೦೭೧೨೩

ಕಾಂಗ್ರೆಸ್-ಬಿಜೆಪಿಗೆ ಬುದ್ಧಿಯಿಲ್ಲ: ಉಗ್ರರಿಗೆ ಅಡ್ಡಿಯಿಲ್ಲ!

ಸಾಮಾನ್ಯ

ಮಳೆಗೂ ಮುಂಬಯಿಗೂ ಎಲ್ಲಿಲ್ಲದ ನಂಟು. ಮಹಾಮಳೆಯಿಂದ ಆಗಾಗ ಕಂಗಾಲಾಗುವ ಮಹಾನಗರಿ, ಈ ಸಲ ಉಗ್ರರ ಗುಂಡಿನ ಮಳೆಯಿಂದ ತತ್ತರಿಸಿತು. ಉಗ್ರರ ಕರಿನೆರಳಲ್ಲಿ ಮುಂಬಯಿ ಸಿಲುಕಿದ್ದ ಮೂರು ದಿನ, ಅದರಲ್ಲೂ ಮೊದಲ ಎರಡು ದಿನ ದೇಶಕ್ಕೆ ದೇಶವೇ ಬೆಚ್ಚಿ ಕುಳಿತಿತ್ತು. ಜನರು ಟಿ.ವಿ ಚಾನೆಲ್‌ಗಳ ಬಿಟ್ಟು ಕದಲಲಿಲ್ಲ. ಪತ್ರಿಕೆಗಳಲ್ಲಿನ ಎಲ್ಲ ಅಕ್ಷರಗಳನ್ನು ಓದಿ ಜೀರ್ಣಿಸಿಕೊಂಡರು. ಏನಾಗುವುದೊ? ಎಂಬ ಆತಂಕ ಎಲ್ಲರ ಮನದಲ್ಲಿ.
ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತ ಜನರು, ದೇಶದ ಪರಿಸ್ಥಿತಿಯನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಿದರು. ಉಗ್ರರು ಕೈಗೆ ಸಿಕ್ಕಿದರೆ ಸಿಗಿದು ಹಾಕುವಂತೆ ಕೆಲವರು ಅಬ್ಬರಿಸಿದರು. ತಾವೇ ಭಯೋತ್ಪಾದಕರ ಒತ್ತೆಯಾಳಾದಂತೆ ಅನೇಕರು ತತ್ತರಿಸಿದರು. ಕಮಾಂಡೊಗಳ ಧೈರ್ಯ ಮತ್ತು ಸಾಹಸಕ್ಕೆ ಜನ ಭೇಷ್‌ಗಿರಿ ನೀಡಿದರು.
ಇಂದು ಮುಂಬೈನಲ್ಲಿ ಆದದ್ದು, ನಾಳೆ ನಮ್ಮೂರಿನಲ್ಲಿ ಆದರೂ ಅಚ್ಚರಿಯಿಲ್ಲ ಎನ್ನುವುದನ್ನು ಊಹಿಸಿಕೊಂಡು ಕಂಗಾಲಾದರು. ‘ನಮಗಿನ್ಯಾರು ದಿಕ್ಕು? ರಕ್ಷಣೆ ನೀಡುವವರ್‍ಯಾರು?’ ಎಂದು ಎತ್ತ ನೋಡಿದರೂ, ಭರವಸೆಯ ಬೆಳಕು ಮಾತ್ರ ಜನರಿಗೆ ಕಾಣಿಸಲಿಲ್ಲ. ಒಂದು ರೀತಿಯಲ್ಲಿ ಸರ್ವಸ್ವವೇ ಅಗಿದ್ದ ಅಮ್ಮನನ್ನು ಕಳೆದುಕೊಂಡು ಪುಟ್ಟ ಕಂದಮ್ಮ, ಸಂತೆಯಲ್ಲಿ ನಿಂತಂಥ ಅನಾಥ ಭಾವ!
ಆದರೆ ಎಲ್ಲವೂ ನಿಧಾನವಾಗಿ ತಿಳಿಯಾಗುತ್ತಿದೆ. ಕಾಲವೆನ್ನುವ ಮಾಂತ್ರಿಕ ಎಲ್ಲವನ್ನೂ ಮರೆಸುತ್ತಾನೆ. ಅದರಲ್ಲೂ ಭಾರತೀಯರ ನೆನಪಿನ ಶಕ್ತಿ ತುಂಬ ಕಡಿಮೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮತ್ತೊಂದು ಉಗ್ರರ ದಾಳಿಯಾಗುವ ತನಕ, ಜನರಿಗೆ ಭಯೋತ್ಪಾದನೆಯ ಕಾವು ತಟ್ಟುವುದಿಲ್ಲ.  ಗೃಹ ಸಚಿವ ಶಿವರಾಜ್ ಪಾಟೀಲ್‌ರ ತಲೆದಂಡದ ಮೂಲಕ, ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ಯುಪಿಎ ಸರಕಾರ ಮುಂದಾಗಿದೆ. ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಹಾಕುವುದಾಗಿ ಅಬ್ಬರಿಸಿದೆ. ಪ್ರತಿ ದುರ್ಘಟನೆ ಸಂದರ್ಭದಲ್ಲೂ ಇದು ಮಾಮೂಲಿ ಪ್ರಕ್ರಿಯೆಯಾಗಿದ್ದು, ಜನರಿಗೆ ವಿಶ್ವಾಸವಿಲ್ಲ.
‘ಮುಸ್ಲಿಂರೆಲ್ಲರೂ ಭಯೋತ್ಪಾದಕರಲ್ಲ, ಆದರೆ ಎಲ್ಲ ಭಯೋತ್ಪಾದಕರೂ ಮುಸ್ಲಿಮರೇ’ ಎಂಬ ಹೇಳಿಕೆಯನ್ನು ಪದೇಪದೆ ಹೇಳುತ್ತಾ ಬಂದಿದ್ದ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಮಾಲೆಗಾಂವ್ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ‘ಹಿಂದೂ ಉಗ್ರವಾದಿಗಳು’ ಎಂಬ ಪದವನ್ನೇ ಜಗ್ಗಾಡಿದ ಕಾಂಗ್ರೆಸ್ ನಾಯಕರು, ಬಿಜೆಪಿಯನ್ನು ಕೆಣಕಲು ಪ್ರಯತ್ನಿಸಿದರು. ಉಭಯ ಪಕ್ಷಗಳ ಒಣ ಜಗಳದತ್ತ ದೇಶ ಗಮನ ನೀಡಿದ್ದ  ಸಂದರ್ಭದಲ್ಲಿಯೇ ಮುಂಬಯಿ ಮೇಲೆ ಉಗ್ರರು ದಾಳಿ ಮಾಡಿದರು. ‘ಇಬ್ಬರ ಜಗಳ ಮೂರನೆಯವನಿಗೆ ಲಾಭ ’ ಎಂದರೆ ಇದೇ ಏನೋ?
‘ಭಯೋತ್ಪಾದನೆ ’ ಎನ್ನುವುದನ್ನು ಧರ್ಮಗಳ ನೆಲೆಯಲ್ಲಿಯೇ ನೋಡುವ ಪರಿಪಾಠ ಅನೇಕರದು. ಯಾವ ಧರ್ಮವೂ ಭಯೋತ್ಪಾದನೆಯನ್ನು, ಅದರಲ್ಲೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ‘ಧರ್ಮ’ ಎಂದರೆ ಬದುಕನ್ನು ಚೆಂದಗೊಳಿಸುವ ಮಾರ್ಗ. ಯಾವ ಧರ್ಮವೂ ಅಂತಿಮವಲ್ಲ. ಯಾವುದೂ ಪರಿಪೂರ್ಣವಲ್ಲ. ಲೋಪದೋಷಗಳು ಇದ್ದದ್ದೆ. ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನಷ್ಟೆ ನಾವು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಆಗುತ್ತಿರುವುದಾದರೂ ಏನು? ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ಧರ್ಮದಿಂದಲೇ ಮುಕ್ತಿ ಎಂಬ ಗದ್ದಲದಲ್ಲಿ ನಿಜವಾದ ಮಾನವೀಯ ಧರ್ಮವನ್ನೇ ಎಲ್ಲರೂ ಮರೆತಿದ್ದಾರೆ. ಹೀಗಾಗಿಯೇ ಹಿಂಸೆ ಮತ್ತು ಕ್ರೌರ್ಯಗಳು ಹೆಚ್ಚುತ್ತಿವೆ.
ದೇಶದಲ್ಲಿ ಭ್ರಷ್ಟರ ಸಂಖ್ಯೆ ಹೆಚ್ಚುತ್ತಿದೆ. ಕಳ್ಳ-ಖದೀಮರ ಗುಂಪು ದೊಡ್ಡದಾಗುತ್ತಿದೆ. ಸಂಬಂಧಗಳು ವಾಣಿಜ್ಯೀಕರಣಗೊಳ್ಳುತ್ತಿವೆ. ಸುಳ್ಳು ಹೇಳುವುದು, ಲಂಚ ತಿನ್ನುವುದು ಅವಮಾನ ಅಥವಾ ತಪ್ಪು ಎಂದು ಯಾರಿಗೂ ಅನ್ನಿಸುತ್ತಿಲ್ಲ. ಪರಿಸ್ಥಿತಿ ಹೀಗಾಗಿದೆ ಎಂದರೆ ಧರ್ಮಗಳು ಜನರನ್ನು ಸರಿದಾರಿಗೆ ತರುವಲ್ಲಿ ವಿಫಲವಾಗಿವೆ ಎಂದರ್ಥ. ಬಡತನ, ನಿರುದ್ಯೋಗದಂಥ ಸಮಸ್ಯೆಗಳ ಬಗ್ಗೆ ಹೊಟ್ಟೆ ತುಂಬಿದವರು ಯೋಚಿಸುತ್ತಿಲ್ಲ. ಧರ್ಮದ ಗದ್ದಲದಲ್ಲಿ ಮೂಲ ಸಮಸ್ಯೆ-ಸವಾಲುಗಳನ್ನು ಮರೆತಿದ್ದೇವೆ.
ಮುಸ್ಲಿಂರಲ್ಲಿ ಅಥವಾ ಹಿಂದೂಗಳಲ್ಲಿ ಉಗ್ರಗಾಮಿಗಳಿದ್ದಾರೆ ಎಂದ ಮಾತ್ರಕ್ಕೆ ಹಿಡೀ ಜನಾಂಗವನ್ನು ಅನುಮಾನದಿಂದ ನೋಡಬೇಕಿಲ್ಲ. ಯಾರೋ ಮಾಡಿದ ತಪ್ಪಿಗೆ ಹಿಡೀ ಜನಾಂಗವನ್ನು ಹೊಣೆಯಾಗಿಸುವುದು, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ. ಅದರ ಸ್ವರೂಪವನ್ನು ಅರಿಯಲು ನನ್ನ ಗೆಳೆಯನಿಗಾದ ಅನುಭವವನ್ನು ಇಲ್ಲಿ ಹೇಳುವುದು ಸೂಕ್ತ.
ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಎಂಸಿಜೆ ತೆಗೆದುಕೊಂಡಿದ್ದ ನನ್ನ ಗೆಳೆಯನೊಬ್ಬ, ವಿವಿಯ ಸಂಪರ್ಕ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ೫ ದಿನ ಉಳಿದುಕೊಳ್ಳಲು ಹೋಟೆಲ್‌ನಲ್ಲಿ ರೂಮ್ ಪಡೆಯಲು ನಿರ್ಧರಿಸಿ, ಎಲ್ಲೆಡೆ ಸುತ್ತಾಡಿ ಒಂದು ಹೋಟೆಲ್‌ಗೆ ಹೋದ. ಕೇಳಿದಷ್ಟು ದಿನದ ಬಾಡಿಗೆ ಮತ್ತು ಅಡ್ವಾನ್ಸ್‌ನ್ನು ಕೊಡಲು ಒಪ್ಪಿದ ಕಾರಣ, ಹೋಟೆಲ್ ಸಿಬ್ಬಂದಿ ರೂಂ ಕೊಡಲು ಉತ್ಸಾಹ ತೋರಿದರು.
ನೋಂದಣಿ ಪುಸ್ತಕ ತೆರೆದು ‘ನಿಮ್ಮ ಹೆಸರು?’ ಎಂದರು. ಅವನು ‘ಇಸ್ಮತ್’ ಎಂದಾಕ್ಷಣ, ಪ್ರಶ್ನೆಗಳ ಸುರಿಮಳೆ ಆರಂಭವಾಯಿತು. ‘ನೀವ್ಯಾರು? ಬೆಂಗಳೂರಿಗೆ ಯಾಕೆ ಬಂದಿರಿ? ನಿಮ್ಮ ಊರ್‍ಯಾವುದು?’ -ಹೀಗೆ ಪ್ರಶ್ನೆಗಳ ರಾಶಿ. ಸಮಾಧಾನದಿಂದಲೇ ನನ್ನ ಗೆಳೆಯ ತನ್ನ ಬಗ್ಗೆ, ತಾನು ಬೆಂಗಳೂರಿಗೆ ಬಂದ ಉದ್ದೇಶದ ಬಗ್ಗೆ ಹೇಳಿದ. ಅವರು ನಂಬಲು ಸುತಾರಾಂ ಒಪ್ಪಲಿಲ್ಲ. ನನ್ನ ಗೆಳೆಯನಲ್ಲಿ ಒಬ್ಬ ಉಗ್ರಗಾಮಿಯನ್ನು ಅವರು ಕಂಡಿದ್ದರು!
‘ನೀವು ವಿದ್ಯಾರ್ಥಿ’ ಎನ್ನುವುದಾದರೆ ಗುರುತಿನ ಚೀಟಿ ತೋರಿಸಿ ಎಂದು ಪಟ್ಟು ಹಿಡಿದರು. ಪುಣ್ಯಕ್ಕೆ ಗುರುತಿನ ಚೀಟಿ ಸೂಟ್‌ಕೇಸ್‌ನಲ್ಲಿತ್ತು. ಗುರುತಿನ ಚೀಟಿ ತೋರಿಸಿದರೂ ಮುಗಿಯದ ಸಂಶಯ. ಒಲ್ಲದ ಮನಸ್ಸಿನಿಂದಲೇ ತಂಗಲು ಜಾಗ ಕೊಟ್ಟರು.
‘ಇಂಥ ಅನುಭವ ಹಿಂದೆಯೂ ಒಂದೆರಡು ಸಲ ಆಗಿದೆ. ಭಯೋತ್ಪಾದಕರ ಬೆದರಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಅನಿವಾರ್ಯ. ಒಪ್ಪೋಣ. ಆದರೆ ನಾನು ಮತ್ತು ನನ್ನಂಥವರು ಮಾಡಿದ ತಪ್ಪೇನು? ನನಗಾದ ಅವಮಾನಕ್ಕೆ ಯಾರನ್ನು ಹೊಣೆ ಮಾಡಲಿ. ನಮ್ಮಂಥವರಿಗೆ ಯಾರು ಸಾಂತ್ವನ ಹೇಳುತ್ತಾರೆ? ದೇಶದ ಬಗ್ಗೆ ನಮಗೇನು ಪ್ರೀತಿಯಿಲ್ಲವೇ? ನಾವು ಇಲ್ಲೇ ಹುಟ್ಟಿ ಬೆಳೆದವರಲ್ಲವೇ? ಅವರು ವಿರೋಸುತ್ತಿರುವುದು ಭಯೋತ್ಪಾದಕರನ್ನೋ, ಮುಸ್ಲಿಂರನ್ನೋ?’ಎನ್ನುವ ಗೆಳೆಯನಿಗೆ ಉತ್ತರ ನೀಡಲು ನನ್ನಲ್ಲಿನ ಪದಗಳು ಸಾಲಲಿಲ್ಲ.
ಮುಂಬಯಿ ದಾಳಿ ನಡೆದ ದಿನ ಬಸ್‌ನ ಹಿಂದಿನ ಸೀಟಿನಲ್ಲಿದ್ದ ನಾಲ್ಕೈದು ಜನ ಭಯೋತ್ಪಾದನೆ ಬಗ್ಗೆ ಚರ್ಚಿಸುತ್ತಿದ್ದರು. ಅವರ ಮುಂದಿನ ಸೀಟಿನಲ್ಲಿ ಮುಸ್ಲಿಂ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಕೂತಿದ್ದರು. ‘ಮುಸ್ಲಿಮರನ್ನು ದೇಶದಿಂದ ಹೊರಗಟ್ಟುವ ತನಕ ಭಾರತಕ್ಕೆ ಭವಿಷ್ಯವಿಲ್ಲ ’ ಎಂಬ ಮಾತು ಹಿಂದಿನ ಸೀಟಿನಿಂದ ಪದೇಪದೆ ಕೇಳಿ ಬರುತ್ತಿತ್ತು. ‘ನಾವೇನ್ ತಪ್ಪು ಮಾಡಿದ್ದೇವೆ. ನಮ್ಮನ್ಯಾಕೆ ಹೊರಗಟ್ಟಬೇಕು?’ ಎಂದು ಅಮಾಯವಾಗಿ ಹೆತ್ತವರನ್ನು ಕೇಳಿದ ಮಗುವಿನ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಭಯೋತ್ಪಾದನೆಯೆಂಬ ವಿಷವೃಕ್ಷವನ್ನು ಕತ್ತರಿಸಲು ಹೊರಟ ನಾವುಗಳು ಇಂಥ ಸೂಕ್ಷ್ಮಗಳನ್ನು ಗಮನಿಸಬೇಕು.
ಭಯೋತ್ಪಾದಕರನ್ನು ಮಟ್ಟಹಾಕುವುದು ಹೇಗೆ ಎಂಬ ನಿಟ್ಟಿನಲ್ಲಿ ಆಲೋಚಿಸುತ್ತ, ಭಯೋತ್ಪಾದನೆಯ ಮೂಲಬೇರುಗಳ ಹುಡುಕಲು ಹೊರಟರೆ, ಅದು ಮತ್ತೆ ಧರ್ಮದತ್ತಲೇ ಸುತ್ತುತ್ತದೆ. ಶಿಕ್ಷಣದ ಮೂಲಕ ಮತಾಂಧತೆಯನ್ನು ಇಲ್ಲವಾಗಿಸಬಹುದು ಎಂಬುದು ಪೂರ್ಣ ಸತ್ಯವಲ್ಲ. ಭಯೋತ್ಪಾದಕರಲ್ಲಿ ಎರಡೆರಡು ಪದವಿ ಪಡೆದವರೂ ಇದ್ದಾರೆ! ಉಗ್ರವಾದಿಗಳು ಹುಟ್ಟಲು ಕಾರಣವಾದ ಅಂಶಗಳ ಬಗ್ಗೆ ಆತ್ಮಾವಲೋಕನ ಅಗತ್ಯ.
‘ಮಾಲೆಗಾಂವ್ ಸೋಟದಲ್ಲಿ ಹಿಂದೂ ಉಗ್ರವಾದಿಗಳ ಕೈವಾಡವಿದೆ ’ ಎಂದ ತಕ್ಷಣ ಬಿಜೆಪಿ ಬೆಚ್ಚಿ ಬೀಳಬೇಕಿಲ್ಲ. ‘ಭಯೋತ್ಪಾದನೆಗೆ ಧರ್ಮವಿಲ್ಲ. ತಪ್ಪಿದಸ್ಥರಿಗೆ ಶಿಕ್ಷೆಯಾಗಲಿ’ ಎಂಬಂಥ ಹೇಳಿಕೆ ಬಿಜೆಪಿ ಪಾಳಯದಿಂದ ಬರಲೇ ಇಲ್ಲ. ಸಮಯ ಸಿಕ್ಕಿದೆಯೆಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಸ್ವಘೋಷಿತ ಬುದ್ಧಿಜೀವಿಗಳು ವಾಗ್ದಾಳಿ ಮಾಡುವುದೂ ತಪ್ಪು. ಭಯೋತ್ಪಾದನೆಯೆಂಬ ಗಂಭೀರ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಂದಾಗಬೇಕು. ಅದೇ ರೀತಿ ಮುಸ್ಲಿಂ ಉಗ್ರವಾದಿಗಳ ವಿಚಾರವನ್ನು ಹಿಡಿ ಮುಸ್ಲಿಂ ಸಮುದಾಯಕ್ಕಾದ ಅವಮಾನವೆಂದು ಪರಿಗಣಿಸಬಾರದು. ಯಾರೋ ಒಬ್ಬ ಕಿಡಿಗೇಡಿಯ ಕುಕೃತ್ಯಕ್ಕೆ ಸಮುದಾಯವನ್ನು ಹೊಣೆಯಾಗಿಸುವುದು ಎಷ್ಟು ಸರಿ?
ಹಿಂದೂ ಸಂಘಟನೆಗಳ ಮೇಲೆ ವಾಗ್ದಾಳಿ ಮಾಡುವುದನ್ನೇ ಜಾತ್ಯತೀತತೆ ಎಂದು ಕೆಲವರು ಭಾವಿಸಿದಂತಿದೆ. ಹಿಂದೂ ಮತಗಳ ಮೇಲೆ ಬಿಜೆಪಿ, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಮತ್ತಿತರ ಪಕ್ಷಗಳು ಇನ್ನಾದರೂ ತಮ್ಮ ಕೋಳಿ ಜಗಳ ನಿಲ್ಲಿಸಬೇಕು. ಅಸಲಿ ಅಪಾಯವನ್ನು ಗ್ರಹಿಸದಿದ್ದರೆ ದೇಶಕ್ಕೆ ಗಂಡಾಂತರ ತಪ್ಪದು.
ಧರ್ಮ ಉಳಿಸುವ ಮಹಾತ್ಮರ ಗುಂಗಿನಲ್ಲಿ ಪ್ರಾಣವನ್ನೇ ಕಳೆದುಕೊಳ್ಳಲು ಮುಂದಾಗುವ ಉಗ್ರರ ಕೂರಿಸಿಕೊಂಡು, ಚಂದಮಾಮದ ನೀತಿ ಕತೆ ಹೇಳಿದರೆ ಪ್ರಯೋಜನವಿಲ್ಲ. ಅವರಿಗೆ ಗುಂಡಿನ ಭಾಷೆಯಷ್ಟೆ ಅರ್ಥವಾಗುತ್ತದೆ. ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿಯೇ ರಾಜಕಾರಣಿಗಳು ಮೈಮರೆತರೆ, ದೇಶದ ಜನರು ಎಂದೂ ಕ್ಷಮಿಸುವುದಿಲ್ಲ. ಉಗ್ರರ ವಿರುದ್ಧ ಪ್ರಾಮಾಣಿಕ ಹೋರಾಟ ನಡೆಸುವುದು ಸರಕಾರದ ಕೆಲಸ.
ಧರ್ಮ ಮತ್ತು ಜಾತಿಯ ಅವಹೇಳನದ ಮೂಲಕ, ಅಸ್ಪೃಶ್ಯತೆ ಮೂಲಕ ಹೊಸ ಉಗ್ರ ಜನಿಸದಂತೆ ಎಚ್ಚರವಹಿಸುವುದು ಸಮಾಜದಲ್ಲಿನ ಪ್ರತಿಯೊಬ್ಬರ ಕರ್ತವ್ಯ.

‘ಹೇ ಅನ್ನಪೂರ್ಣೆ, ನಿನಗೆ ಅವಸರವೇನೀಗ?’

ಸಾಮಾನ್ಯ

ದೀಪಾವಳಿಯ ಬೆಳಕು ಎಲ್ಲಿಗೆ ಹೋಯಿತೊ?
ಚಟಪಟ ಪಟಾಕಿಯ ಸದ್ದು ಕಿವಿಯಿಂದ ಇನ್ನೂ ಕರಗಿಲ್ಲ
ಆಗಲೇ ಆಘಾತ! ಇಲ್ಲ ಪ್ರತಿ ಸಲವೂ ಮೋಸವಾಗುವುದಿಲ್ಲ
ನನಗೆ ನಂಬಿಕೆಗಳನ್ನು ಬಿಟ್ಟರೆ ಇನ್ನೇನು ಉಳಿದಿಲ್ಲ!
ನಂಬಿದವರು ಕೆಟ್ಟಿಲ್ಲ.. ಕೆಟ್ಟರೂ ನಾ ನಂಬುವುದ ಬಿಟ್ಟಿಲ್ಲ!

ಮತ್ತೆ ಅನ್ನಪೂರ್ಣೆ ಮೆತ್ತಗಾಗಿ ಮುಳ್ಳಿನ ಹಾಸಿಗೆ ಹಿಡಿದಿದ್ದಾಳೆ
ಅವಳ ಕೈ ಹಿಡಿದು ಆ ಮಾಯಗಾರನ ಮನೆಯಿಂದ
ಹೊರಗೆಳೆಯಲು ಶ್ವೇತಧಾರಿಗಳ ಹರಸಾಹಸ
ನಮ್ಮೆಲ್ಲರನ್ನೂ ಮೇಲೆತ್ತಿ ಆಡಿಸಿದ ಮಮತೆಯ ಕೈಗಳವು
ಅವು ಇನ್ನಷ್ಟು ಮಂದಿಯನ್ನೂ ಎತ್ತಿಯಾಡಿಸಲಿ

ಅವಳು ಬಸವಳಿದು ಧಣಿದವಳಂತೆ ಅಲ್ಲೀಗ ಮಲಗಿಲ್ಲ
ಈಗಲೂ ಕೈಗಳಲ್ಲಿ ಸಂಚಲನ ಮೂಡಿಸುವಷ್ಟು ಚೈತನ್ಯ
ಕಣ್ಗಳ ಗೂಡಿನಲ್ಲಿ ಎಲ್ಲರ ಜೋಪಾನವಾಗಿಡಲು ಯತ್ನ
ವಯಸ್ಸಾಯ್ತು ಅನ್ನುವವರು ನಾಚುವಷ್ಟು ಹುಮ್ಮಸ್ಸು
ಸೋತು ಅಡ್ಡ ಬೀಳಲೇ ಬೇಕೆಂಬಷ್ಟು ಮಹಾ ತೇಜಸ್ಸು

ಚಿಟ್ಟೆ ಫ್ರಾಕ್ ತೊಟ್ಟ ಚೋಟುದ್ದದ ಹುಡುಗಿಗೂ
ಇಲ್ಲದಷ್ಟು ಬಣ್ಣಬಣ್ಣದ ಭಾವ ಬಂಗಾರದ ಕನಸುಗಳು
ಎಲ್ಲರನ್ನೂ ಪೊರೆಯುವ, ಕ್ಷಮಿಸುವ ಅಭ್ಯುದಯದತ್ತ
ನಡೆಸುವ ಕಾಯಕ ಇನ್ನೂ ಮುಗಿದಿಲ್ಲವೆಂಬ ಚಿಂತೆಯ
ಕಾರ್ಮೋಡ ಕಂಡೂ ಕಾಣದಂತೆ..

ಸಾವು ಸಹಜ ಎಂಬುದು ನನಗೆ ಗೊತ್ತಿದೆ ಎನ್ನುವುದಾದರೆ
ಜ್ಞಾನನಿ ಅನ್ನಪೂರ್ಣೆಗೆ ತಿಳಿಯದಿರುತ್ತದೆಯೇ?
ಆದರೆ ಅವಳನ್ನು ಬಿಡಲು ನಾವು ಬಿಲ್‌ಕುಲ್ ತಯಾರಿಲ್ಲ,
ಮಾಯನರಮನೆಗೆ ತೆರಳಲೂ ಅವಳೂ ಸಿದ್ಧಳಿಲ್ಲ
ಸಾಗಿದೆ ಚೌಕಾಭಾರ.. ಬೀಳಲಿ ಬೇಕಾದ ನಾಲ್ಕು ಆರುಗಳು!

ಮಂಚ ಹತ್ತಲು ಹೋಗಿ ಕೈಮುರಿದುಕೊಂಡರೂ
ಆ ನೋವಿನ ಕೈಯಲ್ಲಿಯೇ ಗಲ್ಲ ಸವರುತ್ತಾಳೆ
ನೋವಲ್ಲೂ ನಗೆಯ ಚೆಲ್ಲುವ ಅವಳು ಇದೆಲ್ಲವನ್ನೂ
ಎಲ್ಲಿ ಕಲಿತಲೋ? ಯಾರು ಅವಳಿಗೆ ಕಲಿಸಿದರೋ?
ನಮಗೂ ಕಲಿಸಲು ಸಾಕಷ್ಟು ತಿಣುಕಿದಳು, ಆದರೆ ನಾವು ಮೊದ್ದುಗಳು!

ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಕಂಡದ್ದಾಯ್ತು
ಅವಳಿಗೆ ಸುಸ್ತಿಲ್ಲ. ಮನೆಯೆಂಬುದು ಇಂದಿಗೂ ಆಕೆ
ಪಾಲಿಗೆ ಆನಂದ ತುಂಬಿದ ಅನುರಾಗ ಸದನ.
ಆಕೆಯಿದ್ದರೇ ನಮಗದು ಸರಿಸಾಟಿಯಿಲ್ಲದ ಸ್ವರ್ಗ
ಕಾಲನ ಸುಳಿಯಲ್ಲಿ ಎಲ್ಲವೂ ಹಸಿಹಸಿ ಸುಳ್ಳುಗಳಾ?

ಅಮ್ಮನಿಗೆ ಬರೆದ ಪೋಸ್ಟ್ ಮಾಡಲಾಗದ ಪತ್ರ..

ಸಾಮಾನ್ಯ

ಪ್ರೀತಿಯ ಅಮ್ಮನಿಗೆ,

ಅಮ್ಮಾ ಹೇಗಿದ್ದೀಯಾ? ನಿನ್ನ ಪರಿಸ್ಥಿತಿ ಅರಿತೂ ಈ ಪ್ರಶ್ನೆ ಕೇಳುತ್ತಿರುವುದಕ್ಕೆ ಕ್ಷಮೆಯಿರಲಿ. ಇದು ನಾನು ನಿನಗೆ ಬರೆಯುತ್ತಿರುವ ಮೊದಲ ಪತ್ರ. ಇಂತಹ ಪರಿಸ್ಥಿತಿ, ಅಂದರೆ ಈ ಬಗೆಯ ಪತ್ರ ಬರೆಯುವ ಪರಿಸ್ಥಿತಿ ಪ್ರಪಂಚದಲ್ಲಿ ಯಾರಿಗೂ ಬಾರದಿರಲಿ.

ನನ್ನ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಜುಗುಪ್ಸೆಯಾಗುತ್ತಿದೆ. ಸಂಕಟದ ಸಮಯದಲ್ಲೂ ನಿನ್ನೊಂದಿಗೆ ಇರಲಾಗದ ನನ್ನ ಬದುಕಿಗೆ ಧಿಕ್ಕಾರವಿರಲಿ. ಒಂದೊಂದು ಸಲ ಕೆಲಸ ಬಿಟ್ಟು ಊರಿಗೆ ಓಡಿ ಬರಲೇ ಅನಿಸುತ್ತದೆ. ಆದರೆ ನಮ್ಮ ಮುಂದಿರುವ ಆರ್ಥಿಕ ಮುಗ್ಗಟ್ಟು, ಧೈರ್ಯವನ್ನು ಕಸಿಯುತ್ತದೆ.

ನಿನ್ನನ್ನು ಮುಖತಃ ಎದುರಿಸಲಾಗದೇ, ದೂರವಾಣಿಯಲ್ಲಿ ಹೇಳಲು ಸಾಧ್ಯವಾಗದೇ ಈ ಪತ್ರ ಬರೆಯುತ್ತಿದ್ದೇನೆ. ಕಾಲ ಚಕ್ರ ಉರುಳುತ್ತಲೇ ಇದೆ. ಹಿಂದೆ ಮುಂದೆ ಸಂತೆ ಸಾಲು… ಸಾವು ಯಾರಿಗಿಲ್ಲ ಎಂದೆಲ್ಲ ಹೇಳಿದರೂ/ಅರಿವಿದ್ದರೂ ಅಪ್ಪನ ಸಾವನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡ, ಬೆಂಗಳೂರಿನ ವಾತಾವರಣದ ನಡುವೆ ಎಲ್ಲವನ್ನೂ ತುಸು ಮರೆತಂತೆ ಅನ್ನಿಸಿದರೂ, ಎದೆಯಲ್ಲಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಸಾಧ್ಯವೇ? ನೀನೇ ಹೇಳು.

ನನ್ನ ಪರಿಸ್ಥಿತಿಯೇ ಹೀಗಿದೆ. ಇನ್ನು ನಿನ್ನ ಪರಿಸ್ಥಿತಿಯನ್ನು ನಾನು ಯೋಚಿಸಬಲ್ಲೆ. ದೇವರು ನಮಗೆ ಮೋಸ ಮಾಡಿದ. ನಮ್ಮ ಕುಟುಂಬದಲ್ಲಿನ ನಗು ಕಂಡು ಅವನಿಗೆ ಹೊಟ್ಟೆಕಿಚ್ಚಾಗಿದೆ. ಈಗ ಅವನಿಗೆ ತುಸು ನೆಮ್ಮದಿ ಸಿಕ್ಕಿರಬಹುದು! ಕಷ್ಟಗಳು ನಮಗೆ ಹೊಸವೇನಲ್ಲ. ಆದರೆ ಆಗ ಧೈರ್ಯವಿತ್ತು. ನಮ್ಮಲ್ಲಿ ಛಲವಿತ್ತು. ಏನನ್ನೇ ಆಗಲಿ ಎದುರಿಸುವ ಉತ್ಸಾಹ ಇತ್ತು. ಎಲ್ಲಕ್ಕೂ ಮುಖ್ಯವಾಗಿ ಅಪ್ಪ ಇದ್ದರು.

ನಮ್ಮ ಪಾಲಿಗೆ ನೀನೀಗ ಅಮ್ಮ ಮಾತ್ರವಲ್ಲ… ಅಪ್ಪನೂ ಆಗಬೇಕು. ಆಗದ ಹೊರತು ಬೇರೆ ದಾರಿಗಳಿಲ್ಲ. ಇಷ್ಟು ವರ್ಷ ನಿನ್ನ ಮಕ್ಕಳಿಗೆ ನೆರಳು ನೀಡಿದ ನೀನು, ಇನ್ನು ಮುಂದೆಯೂ ನಮ್ಮ ಕೈಬಿಡುವುದಿಲ್ಲ ಎಂಬ ವಿಶ್ವಾಸ ನನ್ನದು. ಅಪ್ಪನನ್ನು ನಾವು ವಿಧಿಯ ಆಟದಲ್ಲಿ ಕಳೆದುಕೊಂಡಿದ್ದೇವೆ. ಸೋತಿದ್ದೇವೆ. ಆದರೆ ನಾವು ಕಲ್ಲಾಗೋಣ. ನಮ್ಮ ಸೌಭಾಗ್ಯ ಕಸಿದ, ಅವನಿಗೆ ನಾವ್ಯಾಕೆ ಹೆದರಬೇಕು?

ಅಮ್ಮ ನೀನು ಧೈರ್ಯ ತೆಗೆದುಕೊಳ್ಳಬೇಕು. ಕಾಲಕಾಲಕ್ಕೆ ಸರಿಯಾಗಿ ಊಟ ಮಾಡು. ನೀನು ನಮಗಾಗಿ ವಿಶೇಷವಾಗಿ ಈ ದಡ್ಡನಿಗಾಗಿ ಎಲ್ಲವನ್ನೂ ಎದುರಿಸಲೇಬೇಕು. ನಾನಿಂದು ಅನಾಥನಾಗಿದ್ದೇನೆ. ಆದರೆ ನೀನಿರುವೆ ಎಂಬ ಧೈರ್ಯ ತುಸು ಸಮಾಧಾನ ತಂದಿದೆ. ಅಣ್ಣನಿಗೆ ಧೈರ್ಯ ಹೇಳು. ಊರಲ್ಲಿ ಬೇಸರವಾದರೆ, ಬೆಂಗಳೂರಿಗೆ ಬಾ…

ಅಮ್ಮ ನಿನ್ನ ದುಃಖ ಮತ್ತು ನೋವನ್ನು ನಾನು ಊಹಿಸಿಯೇ ಗಾಬರಿಕೊಂಡಿದ್ದೇನೆ. ಅದನ್ನೆಲ್ಲ ಅನುಭವಿಸುತ್ತ, ನಮಗೆಲ್ಲ ಧೈರ್ಯ ಹೇಳುವವಳಂತೆ ನೀನು ನಟಿಸುತ್ತಿರುವುದನ್ನು ನಾ ಬಲ್ಲೆ. ನಿನ್ನ ಮನದಾಳದಲ್ಲೀಗ ಅಗ್ನಿಪರ್ವತವಿದೆ. ಆದರೆ ಮನುಷ್ಯರ ಕೈಯಲ್ಲಿ ಏನಿದೆ? ಅಪ್ಪನ ಉಳಿವಿಗಾಗಿ ಎಲ್ಲರೂ ಕೈ ಚಾಚಿದರು… ಆದರೆ ಅವನು ಕೈಕೊಟ್ಟ. ಸಮಾಧಾನ ಮಾಡಿಕೋ…

ಅಪ್ಪ ಬದುಕಿರುವ ತನಕ, ನೀನು ಅವರಿಗಾಗಿಯೇ ಬದುಕಿದೆ. ಈಗ ನಮಗಾಗಿ ಬದುಕು. ಅಪ್ಪನಿಗೆ ಹೆಂಡತಿಯಾಗಿ, ಗೆಳತಿಯಾಗಿ, ಮಾಡಿದ ತಪ್ಪುಗಳ ಕ್ಷಮಿಸುವ ಮತ್ತು ಸರಿಪಡಿಸುವ ತಾಯಿಯಾಗಿ ಜೊತೆಯಲ್ಲಿದ್ದೆ. ನಿನ್ನ ಬಗೆಗೆ ಅಪ್ಪನಿಗೆ ಸಾಕಷ್ಟು ಒಲವಿತ್ತು. ಹೀಗಾಗಿಯೇ ಅಮ್ಮನ ಮನಸ್ಸನ್ನು ನೋಯಿಸಬೇಡಿ ಎಂದು ನಮಗೆಲ್ಲ ಹೇಳುತ್ತಿದ್ದರು. ಅಪ್ಪನಿಗೆ ಸುಖ ನೀಡಲು/ ಅವರ ಕಷ್ಟಗಳ ಹಗುರಗೊಳಿಸಲು ನೀನು ಶಕ್ತಿಮೀರಿ ಪ್ರಯತ್ನಿಸಿರುವುದನ್ನು ನಾವು ಕಂಡಿದ್ದೇವೆ.

ಅವರಿಗದು ಸಾಯುವ ವಯಸ್ಸಲ್ಲ. ಆದರೆ ನಮ್ಮ ದುರದೃಷ್ಟದಿಂದ ನಡು ನೀರಲ್ಲಿ ನಮ್ಮನ್ನು ನಿಲ್ಲಿಸಿ, ತಮ್ಮ ಪಾಡಿಗೆ ತಾವು ಹೊರಟು ಹೋದರು. ಅವರಿಗೆ ಹೋಗುವ ಮನಸ್ಸಾದರೂ ಎಲ್ಲಿತ್ತು. ಅವನೇ ಗುಬ್ಬಚ್ಚಿಯನ್ನು ಹಾವು ಎತ್ತಿಕೊಂಡು ಹೋದಂತೆ, ಅಪ್ಪನನ್ನು ಎತ್ತಿಕೊಂಡು ಹೋದ. ಅಪ್ಪ ಇರುವವರೆಗೂ ಸುಖವಾಗಿದ್ದರು. ಜನರ ಪ್ರೀತಿಗೆ ಪಾತ್ರರಾಗಿದ್ದರು. ಒಬ್ಬ ಮನುಷ್ಯನಿಗೆ ಇಷ್ಟು ಸಾಕಲ್ಲವೇನಮ್ಮ… ?

ಅಪ್ಪ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಅವರು ನಮ್ಮ ಜೊತೆಯಲ್ಲಿಲ್ಲ. ಮನಸ್ಸಿನಲ್ಲಿದ್ದಾರೆ. ಮುಂದೆಯೂ ಇರುತ್ತಾರೆ. ಅವರ ಕನಸುಗಳಿಗೆ ನಾವು ಜೀವ ತುಂಬೋಣ. ಅವರ ಹಾದಿಯಲ್ಲಿಯೇ ಸಾಗೋಣ.

ಅಮ್ಮ ನಿನಗಾಗಿ ಮಿಡಿಯುವ ಜೀವಗಳು ಸಾಕಷ್ಟಿವೆ ಎನ್ನುವುದನ್ನು ನೀನು ಮರೆಯಬೇಡ. ನೀನು ಚೆನ್ನಾಗಿದ್ದರಷ್ಟೇ ನಾವಿಲ್ಲಿ ಉಸಿರಾಡಲು ಸಾಧ್ಯ. ಕಷ್ಟಗಳ ಮೂಟೆ ನಿನ್ನ ಮೇಲೆ ಬಿದ್ದಿದೆ. ಆದರೆ ನೀನು ಒಂಟಿಯಲ್ಲ. ನಿನ್ನೊಂದಿಗೆ ನಾವು ಮೂರು ಜನ ಮಕ್ಕಳಿದ್ದೇವೆ.

ಬದುಕು ಅಂದರೆ ಅಷ್ಟೇ ಅನಿಸುತ್ತದೆ. ಬಂದದ್ದನ್ನೆಲ್ಲ ಎದುರಿಸಲೇಬೇಕು. ಒಂದು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕು. ಆದರೆ ನಮ್ಮ ಬದುಕಿನಲ್ಲಿ ಪಡೆದುದಕ್ಕಿಂತಲೂ ಕಳೆದುಕೊಂಡದ್ದೇ ಹೆಚ್ಚು. ಆದರೆ ಏನು ಮಾಡಲು ಸಾಧ್ಯ? ಯೋಗಿ ಪಡೆದದ್ದು ಯೋಗಿಗೆ. ಜೋಗಿ ಪಡೆದದ್ದು ಜೋಗಿಗೆ. ಬಂದದ್ದೆಲ್ಲ ಬರಲಿ ಎದುರಿಸೋಣ.

ಅಮ್ಮ, ದೇವರು ನಿನಗೆ(ನಮಗೆ) ಮೋಸ ಮಾಡಿದ್ದಾನೆ. ಆದರೂ ನೀನು ಅವನನ್ನು ನಂಬು. ಕಾರಣ; ಅವನು ದೇವರು! ಆತ ನಿನ್ನ ಗಂಡ-ಮಕ್ಕಳಿಗೆ ಹಿತ ಕೊಡಲಿ ಎಂದು ಈವರೆಗೆ ಪೂಜಿಸುತ್ತಿದ್ದೆ. ಇನ್ನು ಮುಂದೆ ಬೇಡಿಕೆ ಸಲ್ಲಿಸದೆ ಪೂಜಿಸು. ಆವಾಗಲಾದರೂ ಆ ದೇವರಿಗೆ ನಾಚಿಕೆಯಾಗಲಿ.

ಅಮ್ಮ ಪ್ರಪಂಚ ವಿಚಿತ್ರವಾದುದು. ಉಸಿರಿಡುವ ತನಕ ಒದ್ದಾಟ ತಪ್ಪದು. ಲಾಭವೋ, ನಷ್ಟವೋ… ಈ ಸಮುದ್ರ ಈಜಲೇಬೇಕು. ಈಜಿದವನಿಗೆ ಮುಕ್ತಿ. ಮುಕ್ತಿ ಮಾತು ಪಕ್ಕಕ್ಕಿರಲಿ, ನಮಗಾಗಿ ನೀನು ಈಜಬೇಕಮ್ಮ. ಯಾಕೆಂದರೆ, ನಿನ್ನ ಮಡಿಲಲ್ಲಿ ನಾವಿದ್ದೇವೆ.

ನಿನ್ನ ನೋವು ನನಗೆ ಗೊತ್ತು. ಅದನ್ನು ಮರೆಯುವುದು ಆಗದ ಮಾತು. ಆದರೆ ಕಷ್ಟ ಎದುರಿಸಲು ಶರೀರವನ್ನು ಗಟ್ಟಿ ಮಾಡಿಕೊಳ್ಳಮ್ಮ! ನಾಳೆಗಳಿಗಾಗಿ ನಾವು ಇಂದು ಬದುಕಬೇಕು. ಅದಕ್ಕಾಗಿ ನಮಗಾಗಿ ನೀನು ಇಷ್ಟು ಮಾಡಲಾರೆಯಾ?

 • ಅಮ್ಮ ಬೆಳಗ್ಗೆ ಪುಟ್ಟದೊಂದು ವಾಕಿಂಗ್‌ ಮಾಡು. ಅಣ್ಣ/ಅತ್ತಿಗೆ/ಪುಟ್ಟಿ ಯಾರನ್ನಾದರೂ ಜೊತೆಗೆ ಕರೆದುಕೊಂಡು ನಾಳೆಯಿಂದಲೇ ಪ್ರಾರಂಭಿಸು. ವಾಕಿಂಗ್‌ನ ಮಹಿಮೆ ಕೆಲವೇ ದಿನಗಳಲ್ಲಿ ನಿನಗೆ ಗೊತ್ತಾಗಲಿದೆ!
 • ಸಂಜೆ ಯಾವುದಾದರೂ ದೇವಸ್ಥಾನಕ್ಕೆ ಹೋಗು -ಬೇಕಿದ್ದರೆ ಅದ್ಯಾವುದೋ ಆಶ್ರಮಕ್ಕೆ ಸೇರಿಕೊ…
 • ಬೀರು ತುಂಬ ಪುಸ್ತಕಗಳಿವೆ. ಹಿಂದೆ ನೀ ಎಷ್ಟೊಂದು ಓದುತ್ತಿದ್ದೆ. ಈಗ ಮತ್ತೊಮ್ಮೆ ಓದುವ ಅಭ್ಯಾಸ ಬೆಳೆಸಿಕೊ… ಪುಸ್ತಕ ಓದೋದರಿಂದ ಮನಸಿನ ನೋವು ಕಡಿಮೆಯಾಗುತ್ತದೆ. ಒಂದಿಷ್ಟು ಆತ್ಮವಿಶ್ವಾಸ ಬರುತ್ತದೆ. ಎಲ್ಲಕ್ಕೂ ಮಿಗಿಲಾಗಿ ಸಮಯ ಕಳೆಯುತ್ತದೆ.
 • ಅಮ್ಮ ನಿನಗೆ ಮೊದಲೇ ಗ್ಯಾಸ್ಟ್ರಿಕ್‌. ದಯಮಾಡಿ ಹೊಟ್ಟೆಗೆ ಹಿಂದಿನಂತೆಯೇ ಮೋಸ ಮಾಡಬೇಡ. ಸಾಧ್ಯವಾದಷ್ಟು ತಿನ್ನು. ತಿನ್ನುವುದು ಕಷ್ಟವಾದರೆ ನಮ್ಮ ಮುಖ ನೋಡಿಯಾದರೂ ಕಷ್ಟಪಟ್ಟು ನುಂಗು! ಅಮ್ಮ ಅರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡ.
 • ನನ್ನ ಈ ಪತ್ರ ಓದಿ ನಿನಗೆ ನಗು ಬರಬಹುದು. ನನಗೆ ಸಮಾಧಾನ ಹೇಳುವಷ್ಟು ದೊಡ್ಡವನಾದನೇ ಎಂದು ಸಿಟ್ಟು ಕೂಡಾ ಬರಬಹುದು. ಆದರೆ ನನ್ನಮ್ಮನಿಗೆ ನಾನು ಇಷ್ಟು ಹೇಳಲೇಬೇಕು ಎಂದೆನಿಸಿ ಈ ಪ್ರಯತ್ನ ಮಾಡಿದ್ದೇನೆ. ಈ ಪತ್ರ ಓದಿದ ಮೇಲೆ ನಿನಗೇನನಿಸಿತು?

  ಅಮ್ಮ, ನೀನೂ ಬರೆಯುವುದನ್ನು ಆರಂಭಿಸು. ಸೊಗಸಾಗಿ ಬರೆಯುವ ಶಕ್ತಿ ನಿನ್ನಲ್ಲಿದೆ… ಪ್ರಯತ್ನಿಸು… ಕನಿಷ್ಟ, ನಿನ್ನ ಮಗನಿಗಾಗಿ ಬರೆಯಲಾದರೂ ಪ್ರಯತ್ನಿಸು.

  ಈ ಪತ್ರದಲ್ಲಿ ತಪ್ಪಿದ್ದರೆ ಕ್ಷಮಿಸು ಎಂದು ನಾನು ಕೇಳುವುದಿಲ್ಲ! ಯಾಕೆಂದರೆ; ಇದು ನನ್ನ ಮೊದಲ ತಪ್ಪಲ್ಲ.

  ನಮಸ್ಕಾರ.

  -ನಿನ್ನ ಕುಮಾರಕಂಠೀರವ!

  ಸಂತೆಯೊಳಗೊಂದು ಮನೆಯ ಮಾಡಿ..

  ಸಾಮಾನ್ಯ

  (ಸಂತೆ: ಭಾಗ-೨)

  ಸಿರಾ ಎನ್ನೋ ಬರದೂರು ಉದ್ದುದ್ದ ಅಡ್ಡದ್ದ ಬೆಳೆದರೂ, ಸಂತೆಯ ಗತ್ತು-ಗಮ್ಮತ್ತು ಒಂದು ಚೂರು ಕಡಿಮೆಯಾಗಿಲ್ಲ. ಮಂಗಳವಾರ ಬಂದರೆ ರಾಷ್ಟ್ರೀಯ ಹೆದ್ಧಾರಿಯ ಆಜೂಬಾಜು, ಬಸ್ಟಾಂಡು, ಹೈಸ್ಕೂಲ್ ಫಿಲ್ಡು , ಎಪಿಎಂಸಿ ಆವರಣ -ಹೀಗೆ ಎಲ್ಲೆಲ್ಲೂ  ಜನವೋ ಜನ. ರಂಗಜ್ಜಿ ಮಿಲ್ಟ್ರಿ ಹೋಟೆಲ್‌ಗೆ ಅಂದು ಭರ್ಜರಿ ವ್ಯಾಪಾರ. ಸಂತೆ ನಂಬಿಯೇ ಬದುಕೋ ಅನೇಕ ಸಂಸಾರಗಳು ಸಿರಾದಲ್ಲಿವೆ.

  ಮಾರುಕಟ್ಟೆ ಪಕ್ಕದಲ್ಲೇ ಇದ್ದರೂ, ಸೊಪ್ಪು-ತರಕಾರಿ ಮನೆಮುಂದಕ್ಕೆ ಪ್ರತಿದಿನಾ ಬಂದರೂ, ಸಿರಾ ಹೆಂಗಸರು ಕನಕಾಂಬರ, ಗಿಣಿ ಹಸಿರು, ಅಕಾಶ ನೀಲಿ ಮತ್ತಿತರ ಬಣ್ಣಗಳ ವೈರ್ ಬ್ಯಾಗ್ ಹಿಡಿದು ಸಂತೆಗೆ ಹೊರಡುತ್ತಾರೆ. ಒಂದು ನೂರು ರೂಪಾಯಿ ನೋಟನ್ನು ಗಂಡಂದಿರು ಗೊಣಗುತ್ತಲೇ ಕೊಡುತ್ತಾರೆ. ಅದರಲ್ಲಿ ಹತ್ತಿಪ್ಪತ್ತು ಉಳಿಯುತ್ತೆ ಅನ್ನೋ ಕಾರಣಕ್ಕೋ ಅಥವಾ ಸಂತೆ ನೆಪದಲ್ಲಾದರೂ ತಮ್ಮ ಅಕ್ಕಪಕ್ಕದವರ ಜತೆ ಸುತ್ತಾಡಬಹುದು ಎಂಬ ಒಳ ಆಸೆಯೋ, ಹೆಂಗಸರಿಗಂತೂ ಸಂತೆ ಯಾವತ್ತೂ ಬೇಸರ ತರಿಸಿಲ್ಲ.

  ಜವಗಾನಹಳ್ಳಿಯಿಂದ ಲಾರಿ, ಬಸ್ಸುನಲ್ಲಿ ಹಗ್ಗ ಹಾಕಿಕೊಂಡು ಬೆಳಬೆಳಗ್ಗೆ ಬರೋ ಕೆಲವರು, ನಾರಾಯಾಣ ಸ್ವಾಮಿ ಆಫೀಸು, ಎಸ್‌ಎಸ್ ಮೆಡಿಕಲ್ಸ್, ಹನುಮಾನ್ ಮೆಡಿಕಲ್ಸ್ ಮುಂದೆಲ್ಲ ಉದ್ದಕೆ ಹಗ್ಗ ಹರಡಿಕೊಂಡು ಕೂತು ಬಿಡುತ್ತಾರೆ. ಅವರಿಗೂ ಚಾಪೆ ಮಾರೋರಿಗೂ ಸದಾ ಜಗಳ.

  ಹಗ್ಗದ ಪೆಂಡಿಗಳನ್ನು ಹಾಕಿ, ಪಕ್ಕದ ಜಯಣ್ಣನ ಹೋಟೆಲ್‌ಗೆ ನುಗ್ಗಿ  ಚಿತ್ರಾನ್ನವೋ, ಇಡ್ಲಿನೋ ತರಾತುರಿಯಲ್ಲಿ ತಿಂದು, ಪ್ಲಾಸ್ಟಿಕ್ ಲೋಟದಲ್ಲಿನ ಅರ್ಧ ಚಹಾವನ್ನು ಕೈಯಲ್ಲಿಡಿದೇ ಹಗ್ಗದ ಪೆಂಡಿಗೊಂದು ನಮಸ್ಕಾರ ಹಾಕುತ್ತಾರೆ. ಆಮೇಲೆ ಒಂದೊಂದೇ ಗಂಟು ಬಿಚ್ಚಿ, ವ್ಯವಸ್ಥಿತವಾಗಿ ಜೋಡಿಸಿ ಗಿರಾಕಿಗಳ ಕಾಯುತ್ತಾ ನಿಂತು ಬಿಡುತ್ತಾರೆ. ಪಾನ್ ಪರಾಕ್ ತಿನ್ನೋರು ಪಾಕೇಟ್ ಹೊಡೆಯುತ್ತಾರೆ. ಕೆಲವರು ಬಿಸಿಲ ಧಗೆಗೆ ಸಡ್ಡು ಹೊಡೆಯುವಂತೆ ಬೀಡಿ ಹಚ್ಚುತ್ತಾರೆ. ಕೆಲವರು ಎಲೆ ಅಡಿಕೆ ಜಗಿಯುತ್ತಾ ಬಾಯಿ ಕೆಂಪಗೆ ಮಾಡಿಕೊಳ್ಳುತ್ತಾರೆ.

  ಯಾರಾದರೂ ಹಗ್ಗ ನೋಡಿದರೆ ಸಾಕು, ‘ಬನ್ರೀ ಸ್ವಾಮಿ, ಎಷ್ಟು ಬೇಕು, ಯಾವುದು ಬೇಕು? ಇದು ಜವಗಾನಹಳ್ಳಿ ಹಗ್ಗ ’ ಅನ್ನುತ್ತಾರೆ. ಗಿರಾಕಿಗಳು ಹಗ್ಗವನ್ನು ಕೈಯಲ್ಲಿಡಿದು, ಅಳೆದೂತೂಗಿ ಮಾಡಿ ‘ಎಷ್ಟಕ್ಕೆ ಕೊಡ್ತಿಯಾ?’ ಎಂದು ಮುಖ ನೋಡುತ್ತಾರೆ. ಬೆಳಗ್ಗೆ ವ್ಯಾಪಾರ ಯಾರಿಗೂ ಮೋಸ ಬೇಡ, ಇಷ್ಟು ಕೊಡಿ ಎಂದು ಕೇಳುತ್ತಾರೆ. ಗಿರಾಕಿ ಹೆದರಿದಂತೆ ಮುಖ ಮಾಡಿ, ‘ಹೋಗಯ್ಯಾ ಹೋಗು.. ದುಡ್ಡೇನು ಗಿಡದಲ್ಲಿ ಬೆಳಿಯುತ್ತಾ?‘ ಎನ್ನುತ್ತಾ ಮುಂದೆ ಹೋಗುತ್ತಾನೆ. ಕರೆದರೂ ತಿರುಗಿ ಸಹಾ ನೋಡುವುದಿಲ್ಲ. ಮುಂದೆ ಹೋಗಿ ವಿಚಾರಿಸಿದರೆ, ಎಲ್ಲರದೂ ಒಂದೇ ರೇಟು. ಹಗ್ಗದವರು ಮೊದಲೇ ಮಾತಾಡಿಕೊಂಡಿರುವ ಕಾರಣ, ಯಾರೂ ಕಡಿಮೆ ಬೆಲೆಗೆ ಕೊಡಲು ಒಪ್ಪುವುದಿಲ್ಲ. ಕೊನೆಗೆ ಮುಖ ಊದಿಸಿಕೊಂಡೆ  ಕಾಸುಕೊಟ್ಟು ಹಗ್ಗ ಕೈಯಲ್ಲಿಡಿದು ಗಿರಾಕಿಗಳು ಹೋಗುತ್ತಾರೆ.

  ಮಧ್ಯಾಹ್ನ ಕಾಣಿಸಿಕೊಳ್ಳುವ ಹೆಸರುಬೇಳೆಯವನು ಅವರಿಗೆಲ್ಲ ಹೆಸರುಬೇಳೆ ಕೊಟ್ಟು, ತಲಾ ಒಂದು ರೂಪಾಯಿ ಇಸಕೊಂಡು ಮುಂದೆ ಹೋಗುತ್ತಾನೆ. ಆಮೇಲೆ ‘ಪೆಪ್ಸಿ ಐಸ್ ಬಾಯಾರ್‍ಕೆಗೆ ಒಳ್ಳೇದು..’ ಎಂದು ಕೂಗುತ್ತಾ ಬರುವ ಹುಡುಗ, ತನ್ನ ಮಾಲನ್ನು ಮಾರಲು ಮುಖಮುಖ ನೋಡುತ್ತಾನೆ.   

  ಇಲ್ಲಿ ಮನೆಗಳಲ್ಲಿ ಗಂಡಂದಿರನ್ನು ಆಫೀಸ್‌ಗೆ ಕಳಿಸಿ, ಹೆಂಗಸರು ಸಂತೆಗೆ ರೆಡಿಯಾಗುತ್ತಾರೆ. ‘ರೆಡಿನಾ ಸಂತೆಗೆ?’ ಎಂದು ಒಬ್ಬರನ್ನೊಬ್ಬರು ಕೇಳಿಕೊಳ್ಳುತ್ತಾರೆ. ‘ಈ ಸೀರೆ ಉಟ್ಟುಕೊಳ್ಳಲಾ?’ ಎಂಬ ಸಲಹೆ ಬೇರೆ ಕೇಳುತ್ತಾರೆ. ‘ಯಾವಾಗ್ ತಗೊಂಡಿದ್ದು?’ ಅಂದ್ರೆ, ಅದಕ್ಕೆ ಮಸಾಲೆ ಸೇರಿಸಿ ಸಂಭ್ರಮಿಸುತ್ತಾರೆ. ಯಾವುದೋ ಮದುವೆಗೋ, ನಾಮಕರಣಕ್ಕೋ ಹೋದಂತೆ ಸಿಂಗಾರಬಂಗಾರ ಮಾಡಿಕೊಂಡು ವೈರ್‌ಬ್ಯಾಗ್ ಹಿಡಿದುಕೊಂಡು, ಪರ್ಸಲ್ಲಿ ಕಾಸು ಇದೆಯಾ, ಚಿಲ್ಲರೆ ಇದೆಯಾ ಅನ್ನೋದನ್ನು ಚೆಕ್ ಮಾಡಿಕೊಂಡು ಸಂತೆ ದಿಕ್ಕಿನತ್ತ ಹೆಂಗಸರು ಹೊರಡುತ್ತಾರೆ. ಮನೆಯಲ್ಲಿರೋ ಪುಟ್ಟ ಮಕ್ಕಳು ಅಮ್ಮನ ಕೈಹಿಡಿದುಕೊಂಡು ಹೊರಟು ಬಿಟ್ಟುತ್ತವೆ.

  ಹಳ್ಳಿಗಳಿಂದ ಬರೋ ಜನರು ಸಿನಿಮಾ ಪ್ಲಾನ್ ಹಾಕಿಕೊಂಡಿರುತ್ತಾರೆ. ರಂಗನಾಥ ಟಾಕೀಸ್‌ನಲ್ಲಿ ಯಾವ ಸಿನಿಮಾ? ಸಪ್ತಗಿರಿ ಟಾಕೀಸಲ್ಲಿ ಯಾವ ಸಿನಿಮಾ ಎನ್ನುವುದನ್ನು ಮೊದಲೇ ತಿಳಿದಿರುತ್ತಾರೆ. ಕೆಲವರು ಮಾರ್ನಿಂಗ್ ಶೋಗೆ ನುಗ್ಗಿದರೆ, ಕೆಲವರು ಮ್ಯಾಟನಿಗೆ ನುಗ್ಗುತ್ತಾರೆ. ಕೆಲವರು ಈ ಟಾಕೀಸ್‌ಗಳನ್ನು ಅವುಗಳ ಪಾಡಿಗೆ ಬಿಟ್ಟು ದೇವರ ಚಿತ್ರ(?)ಗಳನ್ನು ಹುಡುಕುತ್ತಾರೆ. ಕದ್ದುಮುಚ್ಚಿ , ಟವಲ್‌ನಿಂದ ಮುಖ ಮರೆಮಾಡಿಕೊಂಡು ಚಿತ್ರಮಂದಿರ ಹೊಕ್ಕವರು ನಿಧಾನವಾಗಿ ಬೀಡಿ ಹೊಗೆ ಬಿಡುತ್ತಾರೆ. ಕಾಲೇಜಿಗೆ ಚಕ್ಕರೆ ಹೊಡೆದು ಸಿನಿಮಾಗೆ ಬಂದಿರೋ ಪಡ್ಡೆಗಳು, ನಮಗೆ ಗೊತ್ತಿರೋರು ಯಾರಾದ್ರೂ ಅಲ್ಲಿದರಾ ಎಂದು ಕಣ್ಣಾಡಿಸುತ್ತಾರೆ.

  ಸಿನಿಮಾ ಶುರುವಾಗಿ ೧೦-೧೫ ನಿಮಿಷವಾದರೂ ಸಂಭಾಷಣೆಗಳೇ ಮುಂದುವರಿದರೆ, ದೇವತೆಗಳು ಕಾಣಿಸದಿದ್ದರೆ ‘ಅವುನಜ್ಜಿ .. ಸೀನ್ ಹಾಕಯ್ಯೋ .. ’ಎಂದು ಜೋರಾಗಿ ಗಂಟಲು ದೊಡ್ಡದು ಮಾಡಿಕೊಂಡು ಕೂಗುತ್ತಾರೆ. ವಿಷಲ್ ಹಾಕುತ್ತಾರೆ. ಅಷ್ಟು ಹೊತ್ತಿಗೆ ಟಾಕೀಸ್ ಮೇಲಿನ ಶೀಟ್‌ಗಳು ಕಾದು ಬೊಬ್ಬೆ ಹೊಡೆಯುವಂತಾಗುತ್ತದೆ. ಫ್ಯಾನ್‌ಗಳು ಸದ್ದು ಮಾಡುತ್ತವೆಯೇ ಹೊರತು, ಜೋರಾಗಿ ತಿರುಗುವುದಿಲ್ಲ. ಒಂದರ್ಥದಲ್ಲಿ ಬಿಸಿ ಬಾಣಲೆಯಲ್ಲಿ ಕುಳಿತೇ ನಮ್ಮೂರ ಶೃಂಗಾರ ಪ್ರಿಯರು ಚಿತ್ರ ವೀಕ್ಷಿಸುತ್ತಾರೆ. ‘ಥತ್ ಬಡ್ಡೀಮಗ ಮೋಸ ಮಾಡಿದ.. ’ ಎಂದು ಗೊಣಗಿಗೊಳ್ಳುತ್ತಲೆ ಚಿತ್ರ ಇನ್ನೂ ಇರುವಾಗಲೇ ಹೊರಬಂದು ಜನರ ಮಧ್ಯೆ ಬೆರೆತುಹೋಗುತ್ತಾರೆ. 

  ಸಂತೆಯಲ್ಲಿ ಅಂಗಡಿ ಹಾಕೋದು ಕೆಲವರಿಗೆ ಕುಲಕಸುಬು. ಮೂಗುದಾರ, ಹಸು-ಕರು ಕುತ್ತಿಗೆಗೆ ಗಂಟೆ, ಕಾಲಿಗೆ ಗೆಜ್ಜೆ ಮತ್ತಿತರ ಅಂಗಡಿಯನ್ನು ಇಡುವ ಕೋಟೆ ನಿವಾಸಿಗೆ ವ್ಯಾಪಾರಕ್ಕಿಂತಲೂ ಕುಲಕಸುಬು ಮುಂದುವರಿಸಿದ್ದೇ ತೃಪ್ತಿ. ಸರಕಾರಿ ಕೆಲಸ ಮಾಡೋ ಒಬ್ಬಾತ ಸಂತೆಯಲ್ಲಿ ವ್ಯಾಪಾರ ಸಹಾ ಮಾಡುತ್ತಾನೆ. ಹೀಗಾಗಿ ಅವುನು ಪ್ರತಿ ಮಂಗಳವಾರ ಮಧ್ಯಾಹ್ನ ಅದೇನ್ ರಜೆ ಹಾಕ್ತಾನೋ, ಕೆಲಸಕ್ಕೆ ಚಕ್ಕರ್ ಹಾಕ್ತಾನೋ  ಸಂತೆಯಲ್ಲಂತೂ ಕೂತು ವ್ಯಾಪಾರ ಮಾಡ್ತಾನೆ.

  ಹಳ್ಳಿಗಳಿಂದ ಬರೋ ಗಂಡಸರು ಮೆಡಿಕಲ್ ಸ್ಟೋರ್‌ಗೆ ತೆರಳಿ ‘ಪೀಪಿ ಕೊಡಿ’ ಎಂದು ಮೆತ್ತಗೆ ಕೇಳುತ್ತಾರೆ. ಕೆಲವು ಆಧುನಿಕ ಮಹಿಳೆ ಥರಾ ಕಾಣೋ ಹಳ್ಳಿ ಹೆಂಗಸರು ನಾಚಿಕೊಂಡು ಬ್ರೆಡ್ ಕೊಡಿ ಎಂದು ಪಿಸಗುಟ್ಟುತ್ತಾರೆ. ಅವರ ಸ್ಥಿತಿ ನೋಡಿಯೇ ಮೆಡಿಕಲ್ ಸ್ಟೋರ್‌ನವರು ಅವರವರು ಬಯಸಿದ್ದನ್ನು ಕೊಟ್ಟು ಮನಸ್ಸಿನಲ್ಲಿಯೇ ನಗುತ್ತಾರೆ.

  ಅಂದ ಹಾಗೆ ಸಂತೆಪೇಟೆಯಲ್ಲಂತೂ ಸಂತೆ ನಂಬಿ ಬದುಕುವ ಹಟ್ಟಿಯೇ ಇದೆ. ಇಲ್ಲಿ ನಡೆಯುತ್ತಿದ್ದ ಸಂತೆ, ಈಗ ಜಾಜಿಕಟ್ಟೆ ಬಳಿಗೆ ಹೋಗಿದೆ. ಅಲ್ಲೂ ಇಕ್ಕಟ್ಟು, ಬೇರೆ ಕಡೆಗೆ ವರ್ಗಾಯಿಸಿ ಎಂದು ಪ್ರಜಾಪ್ರಗತಿ ಮತ್ತು ಸೊಗಡು ಪೇಪರ್‌ನಲ್ಲಿ ಓದುಗರು ಪದೇಪದೇ ಬರೆಯುತ್ತಿರುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಮಾರುವ ಸಂತೆಪೇಟೆಯ ಈಡಿಗರ ಕೇರಿಯ ಹುಡುಗರು ಸಾಕಷ್ಟು ದುಡ್ಡು ಎಣಿಸುತ್ತಾರೆ. ಸಿರಾ ಸಂತೆಯಲ್ಲದೇ ಸುತ್ತಲಿನ ಬರಗೂರು, ಪಟ್ಟನಾಯಕನಹಳ್ಳಿ, ಸೀಬಿ, ಮಧುಗಿರಿ ಸಂತೆಗೂ ಹೋಗುತ್ತಾರೆ. ದಿನಕ್ಕೊಂದು ಸಂತೆಯಲ್ಲಿ ಈ ಹುಡುಗರು ಕಾಣಿಸಿಕೊಳ್ಳುತ್ತಾರೆ. ಸಂತೆ ಹಣದಲ್ಲೇ ಹೆಂಡತಿ ಮಕ್ಕಳನ್ನು ಸುಖವಾಗಿ ಸಾಕುತ್ತಿದ್ದು, ಅಕ್ಕ ತಂಗೀರ ಮದುವೆ ಮಾಡುತ್ತಿದ್ದಾರೆ. ಕೆಲವರು ಬೆಳಗ್ಗೆ ದುಡಿದದ್ದನ್ನು ಸಂಜೆ ಎಣ್ಣೆಗೆ ಖಾಲಿ ಮಾಡ್ತಾರೆ ಎನ್ನೋದನ್ನು ಬಿಟ್ಟರೆ ಎಲ್ಲರೂ ತಕ್ಕಮಟ್ಟಿಗೆ ಕ್ಷೇಮ.

  ಸಂತೆಗೆ ಗುಂಪುಗುಂಪಾಗಿ ಬರೋ ಹೆಂಗಸರಲ್ಲಿ ಕೆಲವರಿಗೆ ಕಳ್ಳತನದ ಚಪಲ. ತರಕಾರಿಯವನು ಮಾತಿನ ಭರದಲ್ಲಿ ಎತ್ತಲೋ ಕಣ್ಣು ಹಾಯಿಸಿದಾಗ ಬ್ಯಾಗಿಗೆ ಒಂದಿಷ್ಟು ತರಕಾರಿ ಒಳಸೇರಿರುತ್ತದೆ. ‘ಅವುನು ಕೊತ್ತಂಬರಿ ಸೊಪ್ಪನ್ನು ರೂಪಾಯಿಗೆ ಕಡಿಮೆ ಕೊಡಲ್ಲ ಅನ್ತಾಯಿದ್ದ, ನಾನು ರೂಪಾಯಿ ಕೊಡದೇ ಎಗರಿಸಿದೆ ’ ಎಂದು ತಮ್ಮ ಚಾಲೂಕುತನವನ್ನು ತಮ್ಮ ಸಂತೆ ಗೆಳತಿಯರ ಜತೆ ಹಂಚಿಕೊಳ್ಳುತ್ತಿರುತ್ತಾರೆ. ಅವರು ಕದ್ದು ಸಿಕ್ಕಿಬಿದ್ದಾಗ ಎಲ್ಲರೂ ತರಕಾರಿಯವರ ಗಲೀಜು ಬೈಗುಳಗಳನ್ನು ಹಂಚಿಕೊಳ್ಳಬೇಕಾಗುತ್ತದೆ. 

  ಸಂತೇದಿನ ಲಕ್ಷ್ಮಿ ಕುಣಿಯೋದು ಕಂಡು ಅಂಗಡಿ ವ್ಯಾಪಾರಿಗಳಿಗೆ ಖುಷಿ. ಅಂದು ಸರತಿ ಸಾಲಂತೆ ೧೦-೧೫ ನಿಮಿಷಕ್ಕೊಬ್ಬರು ಬರೋ ಭಿಕ್ಷುಕರನ್ನು ಕಂಡು, ತಲೆ ಕೆಟ್ಟು ಗೊಬ್ಬರವಾಗುತ್ತೆ. ಆ ಭಿಕ್ಷುಕರೋ ಒಂದು ರೂಪಾಯಿಗಿಂತ ಕಡಿಮೆ ಮುಟ್ಟೋದಿಲ್ಲ. ಯಾವುದೋ ಜನ್ಮದ ಸಾಲ ವಸೂಲಿ ಮಾಡುವಂತೆ ಅಂಗಡಿ ಮುಂದೆ ನಿಂತ ದಾಸಯ್ಯಗಳು ಶಂಖ ಊದುತ್ತಾರೆ. ಕೆಲವರ  ಜಾಗಟೆ ಬಡಿಯುತ್ತಾರೆ. ಹಣ ಇಲ್ಲ ಎಂದರೆ ಹಿಡಿ ಶಾಪ ಹಾಕುತ್ತಾ ಮುಂದಕ್ಕೆ ಹೋಗುತ್ತಾರೆ. ಚಿಲ್ಲರೆ ಇಲ್ಲ ಎಂದು ಸಾಗಾಕಲು ನೋಡಿದರೆ, ‘ತಗೊಳ್ಳಿ ಸ್ವಾಮಿ ಚಿಲ್ಲರೆ..’ ಎಂದು ಪುಡಿಗಾಸುಗಳ ಆ ಭಿಕ್ಷುಕ ಮಹಾಶಯರು ಜೋಡಿಸುತ್ತಾರೆ.

  ಹೊಸದಾಗಿ ಮದುವೆಯಾದವರಿಗೆ ಸುತ್ತಾಡೋದಕ್ಕೆ ಸಂತೆಗಿಂತಲೂ ಒಳ್ಳೆ ಜಾಗ ಯಾವುದಿದೆ? ಹೊಸ ಜೋಡಿಗಳು ಮಾತ್ರವಲ್ಲ, ಹಳೇ ಜೋಡಿಗಳು ಸಹಾ ಸಂತೆ ನೆಪದಲ್ಲಿ ಹೊರಗೆ ಬರುತ್ತವೆ. ಸಂತೆ ತುಂಬ ಸುತ್ತಾಡುತ್ತ, ಬ್ಯಾಗ್‌ನ ಹಿಡಿಗಳನ್ನು ಹಂಚಿಕೊಂಡು, ತಮ್ಮ ಸಮಾನಭಾರಾಭಿರುಚಿ ಸೂತ್ರವನ್ನು ಎಲ್ಲರ ಮುಂದೆ ಪ್ರದರ್ಶಿಸುತ್ತಾರೆ.

  ಆಟೋಗೆ ಕೊಟ್ಟರೆ ಹೋಗುತ್ತಲ್ಲ ಎಂದು ಕೆಲವು ಮಹಿಳೆಯರು ಉಸ್ಸಪ್ಪಾ ಅನ್ನುತ್ತಲೇ ಜಾಜೀಕಟ್ಟೆ ಮೇಲೆ ಬ್ಯಾಗನ್ನು ತಲೆ ಮೇಲೆ ಹೊತ್ತುಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಾರೆ. ಮನೆ ಸೇರೋ ಹೊತ್ತಿಗೆ ಅವರಿಗೆಲ್ಲ ಬೆವರಲ್ಲೇ ಸ್ನಾನ ಮಾಡಿದಂತಾಗಿರುತ್ತೆ. ಬ್ಯಾಗ್ ಹೊತ್ತುಕೊಂಡು ಬರೋ ಹೆಂಗಸರ ಮುಖ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತೆ.
  ಇದನ್ನೂ ಓದಿ:
  ಸಂತೆ: ಭಾಗ-೧

  ಒಂದೇ ಒಂದು ಸಾರಿ, ಕಣ್ಮುಂದೆ ಬಾರೇ..

  ಸಾಮಾನ್ಯ

  ಎಲ್ಲಿರುವೆ ಮನವ ಕಾಡುವ ರೂಪಸಿಯೇ.. ‘ಎಂದು ಅನಂತ್ ನಾಗ್ ಥರಹಾ ಹಾಡುತ್ತಾ ನಾನು ಕಾಡು ಮೇಡು ಅಲೆಯಲು ಸಾಧ್ಯವಿಲ್ಲ. ಆದರೂ ಹುಡುಕುತ್ತಲೇ ಇರುತ್ತೇನೆ. ಇವರಲ್ಲಿ ಯಾರಾದರೂ ನನ್ನವಳು ಇದ್ದಿರಬಹುದಾ ಎಂದು ಊಹಿಸುತ್ತೇನೆ. ನೀ ಯಾರು ನನಗೆ ಗೊತ್ತಿಲ್ಲ.. ನಾ ಯಾರು ನಿನಗೆ ಮೊದಲೇ ಗೊತ್ತಿಲ್ಲ.. ಆದರೆ ನೀ ನನಗೆ ಬೇಕು. ಒಂದು ಸಲ, ಒಂದೇ ಒಂದು ಸಲ ನನ್ನ ಬಳಿಗೆ ನೀ ಬಾ.. ನನ್ನ ಹೃದಯವನ್ನು ಬಿಚ್ಚಿಡುತ್ತೇನೆ… ಅದರೊಳಗೆ ನಿನ್ನನ್ನು ಬಚ್ಚಿಟ್ಟುಕೊಳ್ಳುತ್ತೇನೆ.

  ಏಳು ಸಮುದ್ರ ದಾಟಿದ ರಾಜಕುಮಾರ ನಾನಲ್ಲ. ನಭದಿಂದ ಸೂರ್ಯನ ಕಿತ್ತು ತಂದು ನಿನ್ನ ತುರುಬಿಗೆ ನಾ ಮುಡಿಸಲಾರೆ. ಸೂರ್ಯನ ತಂದು ನಿನ್ನ ಮಗನಿಗೆ ಆಟಿಕೆಯಾಗಿ ನೀಡುತ್ತೇನೆ ಎಂದು ನಾ ಅಪ್ಪಿತಪ್ಪಿಯೂ ಹೇಳಲಾರೆ. ಆದರೂ ನೀ ನನ್ನ ಪ್ರೀತಿಸು, ಮುದ್ದಿಸು. ಜಗತ್ತಿನಲ್ಲಿ ಮನುಷ್ಯ ಹೆಚ್ಚು ಪ್ರೀತಿಸುವುದು ಯಾರನ್ನು ಗೊತ್ತೆ? ಇನ್ಯಾರನ್ನು ಅವನನ್ನು ಅವನೇ ಪ್ರೀತಿಸುತ್ತಾನೆ. ಆಮೇಲೆ ಬಂಧು, ಬಳಗ ಇತ್ಯಾದಿ. ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನು ನಂಬಬೇಕು. ಪರೀಕ್ಷೆ ಮಾಡಲು ಹೊರಟರೇ, ನನಗೆ ಸಿಟ್ಟು ಬರುತ್ತದೆ. ನನ್ನ ಪ್ರೀತಿಯನ್ನು ಶಂಕಿಸುವ ನಿನ್ನ ಜೊತೆ ನಾನು ಹೇಗೆ ತಾನೇ, ಬೆರೆಯಲಿ.

  ಬಹುಶಃ ನೀನು ಸಹಾ ನನ್ನನ್ನು ಹುಡುಕುತ್ತಿರುವೆ. ಪ್ರಪಂಚ ದೊಡ್ಡದು, ಹೀಗಾಗಿ ಮುಖಮುಖ ನೋಡಲು ಸಾಧ್ಯವಾಗಿಲ್ಲ. ಕಣ್ಣಲ್ಲಿ ಕಣ್ಣಿಟ್ಟು, ಕೈಯಲ್ಲಿ ಕೈಹಿಡಿದು ಆ ಬಿಸಿಯನ್ನು ಸವಿಯಲು ಸಾಧ್ಯವಾಗಿಲ್ಲ. ರಸ್ತೆ ಬದಿಯ ಪಾನೀಪುರಿ ತಿನ್ನುತ್ತಾ, ಪಾರ್ಕಿನ ಮರದಡಿ ನಿಂತು ಮಳೆ ಇನ್ನಷ್ಟು ಸುರಿಯಲಿ ಎಂದು ಪ್ರಾರ್ಥಿಸುವ ಅವಕಾಶ ನಮ್ಮಿಬ್ಬರಿಗೆ ಸಿಕ್ಕಿಲ್ಲ. ಪ್ರಪಂಚ ನಮಗಾಗಿ ಚಿಕ್ಕದಾಗಲಿ.. ಏನಂತೀಯಾ?

  ಅದೇನೇ ಆಗಲಿ, ಬೇಗ ಬಾ. ಹೇಗಾದರೂ ಬಾ. ಓಡಿ ಬಾ. ನನ್ನ ಕೈಗೆ ಕೈ ಸೇರಿಸು. ಜಗತ್ತು ನಾಚುವಷ್ಟು ಪ್ರೀತಿ ಮಾಡೋಣ, ಜಗತ್ತಿಗೆ ಗೋಲಿ ಹೊಡೆಯೋಣ. ನಿನ್ನ ಒಂದೇ ಒಂದು ಕಣ್ಣ ಹನಿ ಭೂಮಿ ಸೇರದಂತೆ ನಾ ನಿನ್ನ ಕಾಯುತ್ತೇನೆ. ಮೊದಲೇ ಹೇಳಿ ಬಿಡುತ್ತೇನೆ. ಇದು ನನ್ನ ದೌರ್ಬಲ್ಯವೂ ಹೌದು, ಪ್ರಾಬಲ್ಯವೂ ಹೌದು. ನಿನ್ನ ಕನಸಿನ ಕಾಲು, ನನ್ನ ಹಾಸಿಗೆಯ ಮೀರಬಾರದು. ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡಬೇಡ. ದೂರ ನಿಲ್ಲಬೇಡ. ನನ್ನ ಮಾತನ್ನು ತಾಳ್ಮೆಯಿಂದ ಕೇಳಿಸಿ ಕೋ. ವಾರವಿಡೀ ನಾವಿಬ್ಬರೂ ಹಸಿದ ಸಂದರ್ಭದಲ್ಲಿ ಒಂದು ರೊಟ್ಟಿ ಸಿಕ್ಕರೇ, ನಾನು ಅದನ್ನು ನಿನಗೆ ನೀಡುತ್ತೇನೆ. ನಿನ್ನ ತೇಗು ನಾನಾಗುತ್ತೇನೆ. ನಾನು ನೀರು ಕುಡಿದು ಮಲಗುತ್ತೇನೆ. ಇದು ಸುಳ್ಳಲ್ಲ. ಹದಿನಾರಾಣೆ ಸತ್ಯ.

  ಸದ್ಯಕ್ಕಂತೂ ಭಯವಿಲ್ಲ. ಕೈಬಾಯಿಗೆ ಸಾಕಾಗುವಷ್ಟು ಸಂಬಳ ಬರುತ್ತೆ. ನಾಳೆ ಇರುತ್ತಾ? ಗೊತ್ತಿಲ್ಲ. ಸಂಬಳ ಇಲ್ಲದಿದ್ದರೂ, ಕೆಲಸ ಇಲ್ಲದಿದ್ದರೂ ನಾ ಇರುತ್ತೇನೆ. ನನ್ನುಸಿರು ಇರುವ ತನಕ ನಿನ್ನ ಉಸಿರು ನಿಲ್ಲದಂತೆ ನೋಡಿಕೊಳ್ಳುತ್ತೇನೆ. ಉಸಿರಲ್ಲಿ ಉಸಿರಾಗಿ ಬೆರೆತು, ಪ್ರೇಮ ಲೋಕದಲ್ಲಿ ವಿಹರಿಸೋಣ ಬಾರೇ.

  ನಾನು ಬಡವಿ ನೀನು ಬಡವ
  ಒಲವೇ ನಮ್ಮ ಬದುಕು
  ಹಂಚಿಕೊಂಡೆವದನು ನಾವು
  ಅದಕು ಇದಕು ಎದಕು..

  ಯಾವುದೋ ಪಾರ್ಕಲ್ಲಿ, ಸಿನಿಮಾ ಟಾಕೀಸಲ್ಲಿ, ಬಿಗ್ ಬಜಾರ್ ನಲ್ಲಿ ಕೈಕೈ ಹಿಡಿದು ಸುತ್ತಾಡುವ ಪ್ರಣಯದ ಹಕ್ಕಿಗಳ ಕಂಡಾಗ ಮನದಲ್ಲಿ ಚಿಂತೆಯ ಗುಂಡುಕಲ್ಲು. ಒನಕೆಯಿಂದ ಹೃದಯವ ಕುಟ್ಟಿದಷ್ಟು ಯಾತನೆ. ಆದರೆ ಏನು ಮಾಡಲಿ, ನೀನು ಬರುವ ತನಕ ಇದೆಲ್ಲಾ ಇದ್ದದ್ದೇ. ‘ಮದುವೆಯಾಗುವ ತನಕ ಆಗಲಿಲ್ಲವಲ್ಲ ಎಂಬ ಚಿಂತೆ. ಆದ ಮೇಲೆ ನೂರೊಂದು ಚಿಂತೆ’ಎಂದು ಗೆಳೆಯ ಗೊಣಗುತ್ತಿದ್ದ. ಆದರೂ ನಾನು ಇದಕ್ಕೆಲ್ಲ ಹೆದರುವುದಿಲ್ಲ. ನೀನು ನನ್ನೊಂದಿಗೆ ಇದ್ದರೆ, ಭೂಮಂಡಲವನ್ನೇ ಕುಟ್ಟಿ ಪುಡಿ ಮಾಡುವ ಧೈರ್ಯ ಎದೆಯಲ್ಲಿ ಇರುತ್ತೆ.

  ನಿನಗೆ ಮುಖ್ಯ ವಿಷಯ ಹೇಳೋದು ಮರೆತೆ. ನನಗೊಬ್ಬಳು ತಾಯಿಯಿದ್ದಾಳೆ. ಬೇರೆಯವರೂ ಇದ್ದಾರೆ.. ಆದರೆ ನನ್ನ ಲೆಕ್ಕದಲ್ಲಿ ಅವಳೊಬ್ಬಳೇ ಮುಖ್ಯ.. ಮುಖ್ಯ ಮಾತ್ರವಲ್ಲ ನನ್ನ ಜೀವ. ನನ್ನ ಪಾಲಿಗೆ ಅವಳೊಂದು ಕಣ್ಣು, ನೀನೊಂದು ಕಣ್ಣು. ಯಾವ ಕಣ್ಣಿಗೆ ಪೆಟ್ಟಾದರೂ ನನಗೇ ನೋವಾಗುತ್ತದೆ. ಅವಳ ನೋಯಿಸಬೇಡ. ನಿನಗಿದು ಅರ್ಥವಾಗಿದೆ ಅಂದುಕೊಳ್ಳುತ್ತೇನೆ.

  ಮೊನ್ನೆ ಕನ್ನಡಿ ನೋಡುತ್ತಿದ್ದೆ. ನಾನು ನಿಜಕ್ಕೂ ಬೆಚ್ಚಲಿಲ್ಲ. ಬೆಚ್ಚುವ ಕಾಲ ಹೋಗಿ ಐದಾರು ವರ್ಷವಾದವು. ಕೂದಲ ಕಾಡಿನಲ್ಲಿ ಬಿಳಿಯರ ಜನಸಂಖ್ಯೆ ಹೆಚ್ಚುತ್ತಿದೆ. ಕರಿಯರ ಹಿಡಿದು ಅವರ ಬುಡಕ್ಕೆ ಕತ್ತರಿ ಹಾಕುವ ತಂತ್ರ ಈಗ ಫಲಿಸುವುದಿಲ್ಲ. ನಿನಗೂ ಇಂಥ ಕಷ್ಟಗಳಿವೆ ನನಗೆ ಗೊತ್ತು. ಆದರೂ ಯಾಕೆ ತಡ ಮಾಡುತ್ತಿರುವೆ? ನೀನು ಬಂದರೆ ಜೊತೆಯಾಗಿ ದೀಪಾವಳಿ ಆಚರಿಸೋಣ. ದೀಪ ಬೆಳಕಿಸೋಣ. ಬಹುಶಃ ನೀನು ಬಂದರೆ ದೀಪದ ಅವಶ್ಯಕತೆಯೇ ಬೇಕಾಗುವುದಿಲ್ಲ.

  ತೋಚಿದಂತೆ ಗೀಚಲು ಬ್ಲಾಗೇನು ಪರ್ಸನಲ್ ಡೈರಿಯಾ?

  ಸಾಮಾನ್ಯ

  ಬ್ಲಾಗ್ ಬಗೆಗಿನ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಇದು ಬ್ಲಾಗ್ ಬಗೆಗಿನ ನನ್ನ ಕನಸು ಮಾತ್ರ. ಹಾಗೆಂದು ನನ್ನ ಕನಸಿನಂತೆಯೇ ಈ ‘ಕನಸಿನರಮನೆ ’ ಇದೆ ಅಥವಾ ಇರುತ್ತದೆ ಎಂದರ್ಥವಲ್ಲ.

  ಕನ್ನಡ ಬಿತ್ತನೆ ಅಂತರ್ಜಾಲದಲ್ಲಿ ನಿಧಾನವಾಗಿ ಶುರುವಾಗಿದ್ದರೂ, ಬ್ಲಾಗ್‌ಗಳ ದೆಸೆಯಿಂದ ತುಸು ವೇಗ ಪಡೆಯುತ್ತಿದೆ. ಇಮೇಲ್ ಅಡ್ರೆಸ್ ಪಡೆಯುವುದು ಎಷ್ಟು ಸುಲಭವೋ, ಬ್ಲಾಗ್ ಆರಂಭಿಸುವುದೂ ಅಷ್ಟೇ ಸುಲಭ. ಹೀಗಾಗಿ ಬ್ಲಾಗ್ ಮಾಲೀಕರ ಸಂಖ್ಯೆ ಹೆಚ್ಚುತ್ತಿದೆ. ತಮಗನಿಸಿದ್ದನ್ನು ಎಲ್ಲರಿಗೂ ಹೇಳುವ ಮತ್ತು ಹಂಚಿಕೊಳ್ಳುವ ಪ್ರಯತ್ನದಿಂದ ಮಾನವ ಸಂಬಂಧಗಳು ಚಿಗುರುತ್ತವೆ. ಈ ನಿಟ್ಟಿನಲ್ಲಿ ಸಂವಾದದ ಹೊಸ ಮಾಧ್ಯಮವಾಗಿ ಬ್ಲಾಗ್‌ಗಳು ಅರಳಿ ಘಮಘಮಿಸುತ್ತಿವೆ.
  ಟಿವಿ, ರೇಡಿಯೋ, ಪತ್ರಿಕೆ ಮತ್ತು ಸಿನಿಮಾ ರೀತಿಯಲ್ಲಿಯೇ ಬ್ಲಾಗ್‌ಗಳೂ ಸಮೂಹ ಸಂವಹನದ ಆಧುನಿಕ ಅಂಗ. ಯೂನಿಕೋಡ್ ಜನಪ್ರಿಯತೆಯಿಂದಾಗಿ ಕನ್ನಡ ಬ್ಲಾಗ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಬ್ಲಾಗಿನ ಗೂಡಿನಲ್ಲಿ ಒಲಿದಂತೆ ಹಾಡುತ್ತಿರುವ ಬ್ಲಾಗಿಗಳಿಗೆ, ತಮ್ಮ ಸುತ್ತಲಿನ ಪ್ರಪಂಚವನ್ನು ತಾವು ಕಂಡಂತೆ ಇತರರಿಗೆ ಕಾಣಿಸುವ ಮತ್ತು ಇತರರು ಕಂಡ ಪ್ರಪಂಚವನ್ನು ಕಾಣುವ ತವಕ.
  ಪ್ರತಿನಿತ್ಯ ಬ್ಲಾಗಿನ ಮನೆಗಳಿಗೆ ತೆರಳುವುದು ಈಗೀಗ ಬ್ರೌಸಿಂಗ್‌ನ ಒಂದು ಭಾಗ. ಅದಕ್ಕೆ ಪೂರಕವಾಗಿ ಬ್ಲಾಗ್‌ಗಳು ಹೊಸ ಪುಟಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಮೈದುಂಬಿಕೊಳ್ಳುತ್ತಿವೆ. ಆದರೆ ಶೇ.೯೦ರಷ್ಟು ಬ್ಲಾಗಿಗಳಿಗೆ ಅಪ್‌ಡೇಟ್ ಮಾಡಲು ಆಲಸ್ಯ. ಇವರುಗಳು ತಮ್ಮ ಬ್ಲಾಗ್‌ಗೆ ಬೀಗ ಜಡಿದರೆ ಒಳ್ಳೆಯದು. ಇದರಿಂದ ಬ್ಲಾಗ್ ಓದುಗರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ.

  ಅಂದ ಹಾಗೇ, ಕನ್ನಡದಲ್ಲಿರುವ ಒಟ್ಟು ಬ್ಲಾಗ್‌ಗಳ ಸಂಖ್ಯೆ ಎಷ್ಟು? -ಈ ಪ್ರಶ್ನೆಗೆ ಖಚಿತವಾಗಿ ಹೇಳುವುದು ಕಷ್ಟ. ಹೊಸಬರ ದಂಡೇ ಇತ್ತ ಹರಿದು ಬರುತ್ತಿದೆ. ಬ್ಲಾಗ್ ನೋಡಿದ ಮರುಕ್ಷಣವೇ, ತಾವೊಂದು ಬ್ಲಾಗ್ ಕಟ್ಟಬೇಕೆಂದು ಅನೇಕರು ಬಯಸುತ್ತಾರೆ. ಹೀಗಾಗಿ ದಿನಕ್ಕೆ ಹತ್ತಾರು ಬ್ಲಾಗ್‌ಗಳು ಹುಟ್ಟುತ್ತಿವೆ. ಅದೇ ರೀತಿ ಸಾಯುತ್ತಿವೆ. ಹೀಗೆ ಹರಿದು ಹಂಚಿ ಹೋಗಿರುವ ಕನ್ನಡದ ಅಷ್ಟೂ ಬ್ಲಾಗ್‌ಗಳನ್ನು ಒಟ್ಟುಗೂಡಿಸುವಲ್ಲಿ ಬೆಂಗಳೂರಿನ ರೋಹಿತ್ ರಾಮಚಂದ್ರಯ್ಯ ಯಶಸ್ವಿಯಾಗಿದ್ದಾರೆ.
  ಮೇ.೧೪, ೨೦೦೮ರವರೆಗೆ ಲಭ್ಯವಿರುವ ಅಂಕಿ ಸಂಖ್ಯೆಗಳ ಪ್ರಕಾರ ಕನ್ನಡದಲ್ಲಿ ೬೧೬ ಬ್ಲಾಗ್‌ಗಳಿವೆ. ರೋಹಿತ್ ತಮ್ಮ kannadabala.blogspot.comನಲ್ಲಿ ಕನ್ನಡದ ಎಲ್ಲಾ ಬ್ಲಾಗ್‌ಗಳ ಕೊಂಡಿಗಳನ್ನು ಪ್ರಕಟಿಸಿದ್ದಾರೆ. ಬ್ಲಾಗಿಗರ ಮಧ್ಯೆ ಬಾಂಧವ್ಯ ಬೆಳೆಸಲು ಮತ್ತು ಬ್ಲಾಗ್‌ಗಳ ಬಗ್ಗೆ ಮಾಹಿತಿ ಹಂಚುವಲ್ಲಿ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
  ಕನ್ನಡದಲ್ಲಿ ೬೦೦ಕ್ಕೂ ಅಕ ಬ್ಲಾಗ್‌ಗಳಿವೆ. ಈ ಸಂಖ್ಯೆ ಏನೋ ಸಮಾಧಾನಕರ. ಆದರೆ ಗುಣಮಟ್ಟ? ಈ ಬಗ್ಗೆ ದಟ್ಸ್ ಕನ್ನಡ.ಕಾಮ್ ಸಂಪಾದಕ ಎಸ್.ಕೆ.ಶಾಮ ಸುಂದರ ಅವರಿಗೆ ಅಸಮಾಧಾನ. ‘ಮಾಹಿತಿಯನ್ನು ಎಲ್ಲರಿಗೂ ಸುಲಭವಾಗಿ ಮತ್ತು ಉಚಿತವಾಗಿ ಹಂಚುವುದು ಅಂತರ್ಜಾಲದ ಮೂಲ ಆಶಯ. ಈ ನಿಟ್ಟಿನಲ್ಲಿ ವೆಬ್‌ಸೈಟ್‌ಗಳು ಮತ್ತು ಬ್ಲಾಗ್‌ಗಳು ಕಾರ್ಯ ನಿರ್ವಹಿಸಬೇಕು’ ಎಂಬುದು ಅವರ ಕಳಕಳಿ. ಆದರೆ ಕನ್ನಡ ಬ್ಲಾಗಿಗಳು ಭಾವನಾತ್ಮಕ ನೆಲೆಯಲ್ಲಿಯೇ ನಿಂತುಬಿಟ್ಟಿದ್ದಾರೆ. ಬೇರೆ ಆಲೋಚಿಸಲು ಯಾರೂ ಸಿದ್ಧರಿಲ್ಲ.
  ಕನ್ನಡದ ಬಹುಪಾಲು ಬ್ಲಾಗ್‌ಗಳು ಪದ್ಯ, ಹನಿಗವನ, ಲೇಖನ, ಕತೆ, ನೆನಪು, ಕನಸು, ಕನವರಿಕೆಗಷ್ಟೆ ಮೀಸಲು. ಎಲ್ಲಾ ರಂಗದ ವ್ಯಕ್ತಿಗಳೂ ಬ್ಲಾಗ್ ತೆರೆಯಬೇಕು. ಅದರಲ್ಲಿ ತಮ್ಮ ಮತ್ತು ತಮ್ಮ ಕ್ಷೇತ್ರದ ವಿಶೇಷ, ಸಾಹಸ, ಸವಾಲು, ಸಾಧನೆ ಮತ್ತು ತಾಕಲಾಟಗಳನ್ನು ವಿವರಿಸಬೇಕು. ಉಪ್ಪಿಟ್ಟು ಮಾಡುವುದು ಹೇಗೆ ಎನ್ನುವುದರಿಂದ ಆರಂಭವಾಗಿ, ಸಾಫ್ಟ್‌ವೇರ್ ಲೋಕದ ಪ್ರೋಗ್ರಾಮ್ ಅಥವಾ ಕೋಡಿಂಗ್ ಬರೆಯುವುದು ಹೇಗೆ ಎನ್ನುವ ತನಕ ಮಾಹಿತಿಯ ವಿಲೇವಾರಿಯಾಗಬೇಕು.
  ಮೋಟಾರ್ ಸೈಕಲ್ ರಿಪೇರಿ ಹೇಗೆ? ಕಸೂತಿ ಹಾಕುವುದು ಹೇಗೆ? ವಿದ್ಯುತ್ ಅಥವಾ ನೀರಿನ ಬಿಲ್ ಯದ್ವಾತದ್ವಾ ಬಂದರೆ ಯಾರನ್ನು ಕೇಳಬೇಕು? ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನು ಮಾಡಬೇಕು? ಬಾಳೆಎಲೆ ಎಲ್ಲಿ ಸಿಗುತ್ತೆ? ಬಸವನಗುಡಿಗೆ ಮೆಜೆಸ್ಟಿಕ್‌ನಿಂದ ಹತ್ತಿರದ ದಾರಿ ಯಾವುದು? -ಇಂಥ ಹತ್ತಾರು ಸಂಗತಿಗಳು ಬ್ಲಾಗ್‌ಗಳಲ್ಲಿ ಚರ್ಚೆಯಾಗಬೇಕು. ಜನಸಾಮಾನ್ಯರಿಗೆ ಅರ್ಥವಾಗಬೇಕು.
  ಬ್ಲಾಗಿಗರ ಬಗೆಗಿನ ನನ್ನ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಗೆಳೆಯನೊಬ್ಬ, ‘ಕೆಲಸದ ಏಕತಾನತೆಯಿಂದ ಪಾರಾಗಲೆಂದೇ ಬ್ಲಾಗ್‌ನಲ್ಲಿ ಬರೆಯುತ್ತೇವೆ.. ನಮ್ಮ ಆಸಕ್ತಿಯ ಕತೆ, ಕವನಗಳತ್ತ ಗಮನ ನೀಡುತ್ತೇವೆ. ಅಲ್ಲಿ ಬೇರೇನನ್ನೋ ನಿರೀಕ್ಷಿಸುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ. ಆದರೆ ‘ತೋಚಿದಂತೆ ಗೀಚುವೆ, ನಾನು ನನ್ನಿಷ್ಟ ’ ಎನ್ನಲು ಬ್ಲಾಗ್ ಎಂಬುದು ಮನೆಯ ಕಪಾಟಿನಲ್ಲಿ ಕೊಳೆಯುವ ಡೈರಿಯಲ್ಲ ಎಂದಷ್ಟೆ ಹೇಳುತ್ತೇನೆ.
  ಜಗತ್ತಿನ ಕೋಟ್ಯಂತರ ಬಳಕೆದಾರರ ಮುಂದೆ ಬ್ಲಾಗ್‌ಗಳ ಪುಟಗಳು ಬಿಚ್ಚಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಗೂಗಲ್, ಯಾಹೂ, ಗುರೂಜಿ ಮತ್ತಿತರ ಸರ್ಜ್ ಎಂಜಿನ್‌ಗಳ ದೆಸೆಯಿಂದ ಯಾವ ಬ್ಲಾಗನ್ನು ಯಾರು ಯಾವಾಗ ಬೇಕಾದರೂ ನೋಡುವ ಸಾಧ್ಯತೆಗಳಿವೆ. ಹೀಗಾಗಿ ಬ್ಲಾಗಿಗರ ಜವಾಬ್ದಾರಿ ದೊಡ್ಡದು. ಬ್ಲಾಗ್ ಎಂಬುದು ಖಾಸಗಿ ಡೈರಿಯಲ್ಲ… ಅದು ನಾಲ್ಕು ಗೋಡೆಗಳ ಮನೆಯಲ್ಲ.
  ನಿಜಕ್ಕೂ ಕನ್ನಡದ ಬ್ಲಾಗ್‌ಗಳೆಂದರೆ ನೆನಪಾಗುವುದು ಕೆಲವಷ್ಟೆ. ಪತ್ರಿಕೆಗಳಲ್ಲಿ ಜೋಗಿ ಬರಹಗಳನ್ನು ಓದದವರಿಗಷ್ಟೆ, ಜೋಗಿಮನೆ(http://jogeemane.blogspot.com/) ಖುಷಿ ತರುತ್ತದೆ. ತಮ್ಮ ಹಳೆಯ ಬರಹಗಳನ್ನು ತುಂಬುವ ಕಣಜವಾಗಿ ಅವರು ಬ್ಲಾಗನ್ನು ಬಳಸುತ್ತಿದ್ದಾರೆ! ಜೋಗಿ ಅವರಂತೆಯೇ ತಮ್ಮ ಹಳೆಯ ಬರಹಗಳನ್ನೇ ಬ್ಲಾಗ್‌ಗಳಲ್ಲಿ ಅನೇಕರು ತುಂಬುತ್ತಿದ್ದಾರೆ.
  ವೈವಿಧ್ಯದ ದೃಷ್ಟಿಯಲ್ಲಿ ನೋಡುವುದಾದರೆ ಮೋಟುಗೋಡೆ(http://motugode.blogspot.com/), ಏನ್‌ಗುರು(http://enguru.blogspot.com/), ಇ-ಜ್ಞಾನ(http://e-jnana.blogspot.com/), ಅಚ್ಚ-ಕನ್ನಡ(http://accha-kannada.blogspot.com/) ಬ್ಲಾಗ್‌ಗಳನ್ನು ಪ್ರಸ್ತಾಪಿಸಬೇಕು. ಐಟಿ ಕನ್ನಡಿಗರ ಬನವಾಸಿ ಬಳಗ ನಡೆಸುತ್ತಿರುವ ಏನ್‌ಗುರು, ನಾಡು-ನುಡಿ ಬರಹಗಳ ಖಜಾನೆ. ಕನ್ನಡದ ಹೊಸ ಸವಾಲು, ಸಂಕಟ, ಸಮಸ್ಯೆಗಳ ಬಗ್ಗೆ ಇಲ್ಲಿ ಸದಾ ಕಾವೇರಿದ ಚರ್ಚೆ.
  ಬ್ಲಾಗ್ ಕೆಲವರ ಪಾಲಿಗೆ ಕೋತಿ ಕೈಯೊಳಗಿನ ಮಾಣಿಕ್ಯದಂತಾಗಿದೆ. ತಮ್ಮ ಕೋಪ-ತಾಪ, ವೈಯಕ್ತಿಕ ನಿಂದೆಗೆ ಬ್ಲಾಗ್ ಅಸ್ತ್ರವಾಗಿದೆ. ಬ್ಲಾಗ್‌ಗಳನ್ನು ಜನಪ್ರಿಯಗೊಳಿಸಲು ‘ಬರಹ ’ದ ರೂವಾರಿ ಶೇಷಾದ್ರಿ ವಾಸು ಪ್ರಯತ್ನಿಸುತ್ತಿದ್ದಾರೆ. ಕನ್ನಡ ಬ್ಲಾಗ್‌ಗಳು ಅಪ್‌ಡೇಟ್ ಆದ ತಕ್ಷಣ http://www.baraha.com/kannada/ ಮಾಹಿತಿ ಒದಗಿಸತ್ತದೆ. ಇದರ ಜತೆಗೆ ದಟ್ಸ್‌ಕನ್ನಡ.ಕಾಮ್ ಮತ್ತು ವೆಬ್‌ದುನಿಯಾಗಳು ಬ್ಲಾಗ್‌ಗಾಗಿ ಪ್ರತ್ಯೇಕ ವಿಭಾಗ ತೆರೆದಿವೆ.
  ಬ್ಲಾಗಿಗಳನ್ನು ಕವಿಗಳು, ಲೇಖಕರು ಎನ್ನಲು ಸಾಹಿತ್ಯವಲಯದ ಹಳೆಯ ತಲೆಮಾರು ಸಿದ್ಧವಿಲ್ಲ. ಪುಟ ತುಂಬಿಸಲು ಪೈಪೋಟಿ ನಡೆಸುತ್ತಿರುವ ಕೆಲವು ಬ್ಲಾಗಿಗಳು ಅಕ್ಷರ ಮಾಲಿನ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಕಾಳಿಗಿಂತ ಜೊಳ್ಳೇ ಜಾಸ್ತಿಯಿದೆ ಅನ್ನಿಸಿದರೂ, ಕನ್ನಡ ಬ್ಲಾಗ್‌ಗಳನ್ನು ಕಡೆಗಣಿಸುವಂತಿಲ್ಲ.
  ಈ ಮಧ್ಯೆ ಕನ್ನಡ ಬ್ಲಾಗಿಗಳನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನಗಳು ಆಗಾಗ ನಡೆಯುತ್ತಿವೆ. ಕಂಪ್ಯೂಟರ್ ಎನ್ನುವುದು ಕಚೇರಿಯಲ್ಲಿ ಮಾತ್ರವಲ್ಲದೇ ಅಡುಗೆ ಮನೆ ಶೆಲ್ಪ್ ಮೇಲೂ ಪವಡಿಸಿದೆ. ಹೀಗಾಗಿ ಸಹಜವಾಗಿಯೇ ಬ್ಲಾಗ್ ಕ್ರೇಜ್ ಇನ್ನಷ್ಟು, ಮತ್ತಷ್ಟು ಹೆಚ್ಚಾಗಿದೆ. ಆದರೆ ಬ್ಲಾಗಿಗರ ಜವಾಬ್ದಾರಿ?

  ಡಿಎನ್‌ಎ ಹಿಂದೆ ಓಡಿದ ಬೆಂಗಳೂರು ಪತ್ರಕರ್ತರು!

  ಸಾಮಾನ್ಯ

  ಇ ದು ಮತ್ತೊಂದು ಸುಂಟರಗಾಳಿ. ಬೆಂಗಳೂರಿನ ಪತ್ರಿಕಾಲೋಕದಲ್ಲಿ ಈಗ ಸುಂಟರಗಾಳಿ ಎಬ್ಬಿಸಿರುವುದು ಡಿಎನ್‌ಎ! ಈ ಹಿಂದೆ ಮುಂಬಯಿ ಪದರಗುಟ್ಟಿಸಿ, ತನ್ನ ಜಾಗ ಭದ್ರಪಡಿಸಿಕೊಂಡ ಡಿಎನ್‌ಎ ಕಣ್ಣೀಗ ಬೆಂಗಳೂರಿನತ್ತ. ನಿರೀಕ್ಷೆಯಂತೆಯೇ ಆದರೆ ವರ್ಷಾಂತ್ಯಕ್ಕೆ ಪತ್ರಿಕೆ ಓದುಗರ ಕೈ ಸೇರುತ್ತದೆ.
  ‘Might Is Right’ ಎನ್ನುವುದು ಪತ್ರಿಕೋದ್ಯಮಕ್ಕೂ ಅನ್ವಯ. ಈಗಿನ ಸ್ಪರ್ಧೆ ಪರಿಣಾಮ ಗಟ್ಟಿಗರು ಮಾರುಕಟ್ಟೆಯಲ್ಲಿ ಉಳಿಯುತ್ತಾರೆ, ಇತರರು ಬದಿಗೆ ಸರಿಯುತ್ತಾರೆ. ಸ್ಪರ್ಧೆ ಎನ್ನುವುದು ಎಂದಿಗೂ ಒಳ್ಳೆಯದೇ. ಆದರದು ಅನಾರೋಗ್ಯಕರವಾಗಿದ್ದರೆ ಕಷ್ಟ. ಅದರಲ್ಲೂ ಮಾಧ್ಯಮರಂಗದಲ್ಲಿನ ಈ ರೋಗಗ್ರಸ್ಠ ಸ್ಪರ್ಧೆಯಿಂದ ಒಲಿತನ್ನು ನಿರೀಕ್ಷಿಸಲಾಗದು.
  ‘ವಿಜಯ ಕರ್ನಾಟಕ ’ ಹಿಂದೆ ಇಂಥದ್ದೊಂದು ಕದಲಿಕೆಯನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಉಂಟು ಮಾಡಿತ್ತು. ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ ಮಾತ್ರವಲ್ಲದೇ ಸ್ಥಳೀಯ ಪತ್ರಿಕೆಗಳ ಪ್ರಸರಣಕ್ಕೆ ಕೈಹಾಕಿದ ವಿಜಯ ಕರ್ನಾಟಕ, ನಾಡಿನ ನಂ.೧ ಪತ್ರಿಕೆಯಾದದ್ದು ಎಲ್ಲರಿಗೂ ತಿಳಿದ ಸಂಗತಿ. ಪತ್ರಿಕೆಯ ಪ್ರಯೋಗಶೀಲತೆ, ಹೊಸತಿನ ತುಡಿತದ ಬಗ್ಗೆ ಎರಡು ಮಾತಿಲ್ಲ. ನಿಂತು ನೀರಾಗಿದ್ದ ಕನ್ನಡ ಪತ್ರಿಕೋದ್ಯಮದಲ್ಲಿ ಚಲನಶೀಲತೆಗೆ ಕಾರಣವಾಗಿದ್ದು ಪತ್ರಿಕೆಯ ಹೆಗ್ಗಳಿಕೆ. ಆದರೆ ಅದು ಆರಂಭಿಸಿದ ದರ ಸಮರದಿಂದ ಸಣ್ಣ ಪತ್ರಿಕೆಗಳು ಬಾಗಿಲು ಹಾಕಿಕೊಂಡದ್ದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.
  ಈಗ ಬೆಂಗಳೂರಿನಲ್ಲಿ ಕಣ್ತೆರೆಯಲು ಸಿದ್ಧತೆ ನಡೆಸಿರುವ ಡಿಎನ್‌ಎ, ಬೆಂಗಳೂರಿನಲ್ಲಿ ೩ ಲಕ್ಷ ಪ್ರಸರಣ ಹೊಂದಲು ಸಂಕಲ್ಪಿಸಿದೆ. ಅಂದಹಾಗೇ, ಬೆಂಗಳೂರಿನ  ಎಲ್ಲಾ ಆಂಗ್ಲ ಪತ್ರಿಕೆಗಳ ಪ್ರಸರಣ ಸಂಖ್ಯೆ ೬.೫೦ ಲಕ್ಷ. ಅದರಲ್ಲಿ ಅರ್ಧದಷ್ಟನ್ನು ಬಾಚಲು, ಅದರ ಲಕ್ಷ್ಯ. ಡಿಎನ್‌ಎ ಸದ್ದಿಗೆ ಈಗಲೇ ಅರೆಜೀವವಾಗಿರುವ ಡೆಕ್ಕನ್ ಹೆರಾಲ್ಡ್ ಬೆಚ್ಚಿ ಬಿದ್ದಿದೆ.
  ಜಾಹೀರಾತು ಮಾರುಕಟ್ಟೆ ದೃಷ್ಟಿಯಿಂದ ಬೆಂಗಳೂರಿಗೆ ಅಗ್ರ ಸ್ಥಾನವಿದೆ. ಹೀಗಾಗಿಯೇ ಎಲ್ಲರಿಗೂ ಬೆಂಗಳೂರಿನ ಬಗ್ಗೆ ಅಕ್ಕರೆ. ಜಾಹೀರಾತು ಮಾರುಕಟ್ಟೆಯಲ್ಲಿ ಮುಂಬಯಿ, ದಿಲ್ಲಿ ಬಿಟ್ಟರೆ ಬೆಂಗಳೂರಿಗೆ ಮೂರನೇ ಸ್ಥಾನ. ಬೆಂಗಳೂರಿನಲ್ಲಿ ವಾರ್ಷಿಕ ೫೦೦ ಕೋಟಿಗೂ ಅಕ ಜಾಹೀರಾತು ವಹಿವಾಟು ನಡೆಯುತ್ತದೆ. ಮುಂಬಯಿನಲ್ಲಿ ಮೂರುಪಟ್ಟು ಅಂದರೆ ೧೫೦೦ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ.  ಜನರಿಗೆ ಅರಿವು ಆನಂದ ನೀಡುವುದಕ್ಕಿಂತಲೂ, ಇಲ್ಲಿನ ಜಾಹೀರಾತು ಮಾರುಕಟ್ಟೆಯನ್ನು ಗಮದಲ್ಲಿಟ್ಟುಕೊಂಡೇ ಡಿಎನ್‌ಎ ಥರದ ಪತ್ರಿಕೆಗಳು ಇತ್ತ ನುಗ್ಗುತ್ತಿವೆ.
  ದಿ ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರೋನಿಕಲ್, ಬೆಂಗಳೂರ್ ಮಿರರ್, ಮಿಡ್-ಡೇ, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್‌ಪ್ರೆಸ್, ದಿ ಹಿಂದೂ ಪತ್ರಿಕೆಗಳಲ್ಲಿನ ಪ್ರತಿಭಾವಂತರನ್ನು ಹೆಕ್ಕಿ ತನ್ನ ಮಡಿಲಿಗೆ ಹಾಕಿಕೊಳ್ಳಲು ಡಿಎನ್‌ಎ ಮುಂದಾಗಿದೆ. ಮೂರು ಪಟ್ಟು ಹೆಚ್ಚಿನ ಸಂಬಳದ ಆಮಿಷಕ್ಕೆ ಪತ್ರಕರ್ತರು ಮರುಳಾಗುತ್ತಿದ್ದಾರೆ. ಪತ್ರಿಕಾಲಯಗಳಲ್ಲಿ ವಲಸೆ ಆರಂಭಗೊಂಡಿದೆ. ೧೫-೨೦ ಸಾವಿರ ಪಡೆಯುತ್ತಿದ್ದ ಪತ್ರಕರ್ತರಿಗೆ ೫೦-೬೦ ಸಾವಿರ ಸಂಬಳ ನೀಡಲು ಡಿಎನ್‌ಎ ಮುಂದಾಗಿದೆ. ಹಣ ಹಿಂಬಾಲಿಸುವ ಪತ್ರಕರ್ತರು, ಹಳೆಯ ಪತ್ರಿಕೆಗಳಿಗೆ ನಮಸ್ಕಾರ ಹಾಕಿ ಡಿಎನ್‌ಎ ಬಾಗಿಲಲ್ಲಿ ನಿಂತಿದ್ದಾರೆ. ಪತ್ರಿಕಾರಂಗ, ಉದ್ಯಮ(ಪತ್ರಿಕೋದ್ಯಮ)ವಾದ ಮೇಲೆ ಎಲ್ಲಾ ಕ್ಷೇತ್ರದಂತೆ ಇಲ್ಲೂ ಲಾಭ-ನಷ್ಟದ್ದೇ ಲೆಕ್ಕಾಚಾರ. ಈ ಅಬ್ಬರದಲ್ಲಿ ಸುದ್ದಿ ಮೌಲ್ಯ Out dated ಆಗಿದೆ. ಪತ್ರಕರ್ತರಿಗೆ ಒಳ್ಳೆಯ ಸಂಬಳ ಸಿಗುತ್ತಿದೆ ಎನ್ನುವುದಕ್ಕೆ ನನ್ನ ಖುಷಿಯಿದೆ. ಆದರೆ ಪತ್ರಕರ್ತರ ಕುದುರೆ ವ್ಯಾಪಾರದ ಬಗ್ಗೆ ನನ್ನದು ದೊಡ್ಡ ತಕರಾರು.
  ಡಿಎನ್‌ಎ ಚರಿತೆ
  ಡಿಎನ್‌ಎ(ಡೈಲಿ ನ್ಯೂಸ್ ಅಂಡ್ ಅನಾಲಿಸಿಸ್) ಎಂಬುದು ಇಂಗ್ಲಿಷ್ ದೈನಿಕ. ಮುಂಬಯಿ, ಅಹಮದಾಬಾದ್, ಸೂರತ್, ಪುಣೆ ಮತ್ತು ಜೈಪುರದಲ್ಲಿ ತನ್ನ ಆವೃತ್ತಿಗಳನ್ನು ಹೊಂದಿರುವ ಈ ಪತ್ರಿಕೆ ಆರಂಭಗೊಂಡಿದ್ದು ಜುಲೈ ೩೦, ೨೦೦೫. ಯುವ ಓದುಗರನ್ನು ಗುರಿ ಮಾಡಿಕೊಂಡ ಡಿಎನ್‌ಎ, ಭಾರತದ ವೇಗವಾಗಿ ಬೆಳೆಯುತ್ತಿರುವ ಆಂಗ್ಲ ಪತ್ರಿಕೆ ಪ್ರಮುಖವಾದುದು.
  ದಿ ದೈನಿಕ್ ಭಾಸ್ಕರ್ ಸಮೂಹ ಮತ್ತು ಎಸ್ಸೆಲ್ ಸಮೂಹ ಸೇರಿದಂತೆ ಮಾಧ್ಯಮ ಲೋಕದ ನಾನಾ ಉದ್ಯಮಿಗಳು ಸೇರಿ ಮಾಡಿಕೊಂಡಿರುವ Diligent Media Corporation, ಡಿಎನ್‌ಎ ಪತ್ರಿಕೆಯ ಒಡೆತನವನ್ನು ಹೊಂದಿದೆ. ‘Speak up, it’s in your DNA’ ಘೋಷವಾಕ್ಯವನ್ನು ಜಾಹೀರಾತಿನಲ್ಲಿ ಬಿಂಬಿಸಿ, ಡಿಎನ್‌ಎ ಓದುಗರನ್ನು ಆಕರ್ಷಿಸಿದೆ.
  ಆರಂಭದಲ್ಲಿ ಹತ್ತರಲ್ಲಿ ಹನ್ನೊಂದರಂತಿದ್ದ ಪತ್ರಿಕೆ ನೋಡನೋಡುತ್ತಲೇ ಬದಲಾಗಿದೆ. ದರ ಕಡಿತ, ಸ್ಪರ್ಧಾತ್ಮಕ ವಸ್ತು ವಿಶೇಷಗಳೊಂದಿಗೆ ಅದು ಜಾಗ ಮಾಡಿಕೊಂಡಿದೆ. ಸುರ್ ಅಗರ್ವಾಲ್, ಆರ್.ಜಗನ್ನಾಥನ್, ಸಿದ್ಧಾರ್ಥ್ ಭಾಟಿಯಾ, ವಿನಯ್ ಕಾಮತ್, ಮಾಳವಿಕಾ ಸಾಂಘ್ವಿ, ಶಿವ್ ವಿಶ್ವನಾಥನ್ ಡಿಎನ್‌ಎ ಪುಟಗಳಿಗೆ ಜೀವ ತುಂಬುತ್ತಿದ್ದಾರೆ. ಭಾರತದಲ್ಲಿ ಮೊದಲ ಭಾರಿಗೆ ಸಂಪೂರ್ಣ ವರ್ಣದ ಪುಟಗಳನ್ನು ನೀಡಿದ್ದು ಡಿಎನ್‌ಎ ಹೆಗ್ಗಳಿಕೆ.
  ಐಆರ್‌ಎಸ್(ಇಂಡಿಯನ್ ರೀಡರ್‌ಶಿಪ್ ಸರ್ವೆ) ಪ್ರಕಾರ ಡಿಎನ್‌ಎ ಒಟ್ಟು  ಓದುಗರ ಸಂಖ್ಯೆ ೬,೭೬,೦೦೦. ಭಾರತದ ‘ಟಾಪ್ ೧೦’ ಆಂಗ್ಲ ಪತ್ರಿಕೆಗಳಲ್ಲಿ ಈ ಪತ್ರಿಕೆಗೆ ೮ನೇ ಸ್ಥಾನ. ಮುಂಬಯಿನ ಅತಿ ಹೆಚ್ಚು ಪ್ರಸರಣ ಪತ್ರಿಕೆಗಳಲ್ಲಿ ಡಿಎನ್‌ಎಗೆ ಎರಡನೇ ಸ್ಥಾನ. ೨೦೦೭ರಲ್ಲಿ ಮುಂಬಯಿನಲ್ಲಿ ಪತ್ರಿಕೆಯ ಪ್ರಸರಣ ಸಂಖ್ಯೆ ಡಿಎನ್‌ಎ ಹೇಳುವ ಪ್ರಕಾರ, ೪ಲಕ್ಷ. ಅಕ್ಟೋಬರ್ ೨೦೦೬ರಲ್ಲಿ ೩ ಲಕ್ಷವಿದ್ದ ಪ್ರಸರಣ, ಕೇವಲ ಒಂದೇ ವರ್ಷದಲ್ಲಿ ಒಂದು ಲಕ್ಷ ಪ್ರಸರಣ ಹೆಚ್ಚಿಸಿಕೊಳ್ಳುವುದು ಸುಲಭದ ಮಾತಲ್ಲ.  ಪತ್ರಿಕೆಯ ಸಂಪಾದಕ ಆರ್.ಜಗನ್ನಾಥನ್. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಭೇಟಿ ನೀಡಿ;
  http://en.wikipedia.org/wiki/Daily_News_&_Analysis

  ಒಂದಷ್ಟು ನ್ಯಾನೊ ಕತೆಗಳು

  ಸಾಮಾನ್ಯ


  ಸಂಜೆ ಊರಿಗೆ ಹೊರಟಿದ್ದ ನಾನು, ‘ರಾತ್ರಿ ೧೦ ಗಂಟೆ ಒಳಗೆ ಊರಲ್ಲಿ ಇರ್ತೀನಿ’ ಅಂತ ಅಮ್ಮನಿಗೆ ಹೇಳಿದ್ದೆ. ಆಫೀಸ್ ಕೆಲಸ ಬೇಗ ಮುಗಿಸಲು ಪರದಾಡುತ್ತಿರುವಾಗಲೇ ಮೊಬೈಲ್ ರಿಂಗಾಯಿತು. ಗೆಳತಿ ನಂಬರ್ ಮೊಬೈಲ್‌ನಲ್ಲಿ ಕಂಡ ತಕ್ಷಣ ಅದೇನೋ ಆನಂದ. ‘ಹಾಯ್ ಎಲ್ಲಿದ್ದೀ?’ ಅನ್ನುತ್ತಿರುವಾಗಲೇ, ‘ಏ ಗೂಬೆ ಹೊರಗೆ ಬಾ’ ಎಂದು ಫೋನ್ ಕಟ್ ಮಾಡಿದಳು. ಹೊರಬಂದರೆ ಸೋಪಾದಲ್ಲಿ ಕೂತಿದ್ದ ಗೆಳತಿ ‘ಹಾಯ್’ ಎಂದಳು. ಆ ಮಾತು ಈ ಮಾತಿನ ಮಧ್ಯೆ ‘ಈಗ ಪಿವಿಆರ್‌ನಲ್ಲಿ ಮನಸಾರೆ ಸಿನಿಮಾ ತೋರಿಸ್ತೀಯಾ?’ ಅಂದಳು. ಆಗ ಸಮಯ ಮೂರು ಗಂಟೆ. ಕಚೇರಿಯಿಂದ ಹೊರಟರೆ ೨೦ ನಿಮಿಷಕ್ಕೆ ಪಿವಿಆರ್ ತಲುಪಬಹುದು. ೩.೩೦ಕ್ಕೆ ಸಿನಿಮಾ ಆರಂಭ. ಏನೇನೋ ಕಾರಣಗಳನ್ನು ಪೋಣಿಸಿ ಅರ್ಧ ದಿನ ರಜೆ ಪಡೆದು ಮನಸಾರೆಗೆ ಹೊರಟೆವು. ಈ ಮಧ್ಯೆ ಅಮ್ಮನಿಗೆ ಕಾಲ್ ಮಾಡಿ, ‘ಸ್ವಲ್ಪ ಲೇಟಾಗಿ ಬರ್ತೀನಿ.. ಗಾಬರಿಯಾಗಬೇಡ’ ಎಂದು ತಿಳಿಸಿದ್ದೆ. ಸಿನಿಮಾ, ಲೈಟಾಗಿ ಊಟ ಮುಗಿಸಿ ಬಸ್ ಹತ್ತುವ ವೇಳೆಗೆ ರಾತ್ರಿ ೧೧ ಗಂಟೆ. ಊರಲ್ಲಿ ನಮ್ಮದು ಒಂಟಿ ಮನೆ. ಬಸ್ ಇಳಿದು ಮಗ ಹೇಗೆ ಬರ್ತಾನೋ ಎಂಬ ದಿಗಿಲು ಅಮ್ಮನಿಗೆ. ಅಂತೂ ಮನೆ ತಲುಪಿದಾಗ ಬೆಳಗಿನ ಜಾವ ೪ ಗಂಟೆ. ಬಾಗಿಲನ್ನು ಮೆಲುವಾಗಿ ತಟ್ಟಿದೆ. ‘ಓ ಬಂದ್ಯಾ?’ ಅನ್ನುತ್ತಾ ಅಮ್ಮ ಬಾಗಿಲು ತೆಗೆದಳು. ನನಗಾಗಿ ಕಾಯುತ್ತಾ ರಾತ್ರಿಯಿಡೀ ಆಕೆ ಸೋಪಾದಲ್ಲಿಯೇ ಕೂತಿದ್ದಳು. ‘ಯಾಕೆ ಲೇಟಾಯಿತು?’ ಎನ್ನುವ ಅಮ್ಮನ ಪ್ರಶ್ನೆಗೆ ಉತ್ತರ ಹೇಳಲು ಕಷ್ಟವಾಗಿ, ‘ಹೊಟ್ಟೆ ಹಸಿಯುತ್ತಿದೆ’ ಎನ್ನುತ್ತಾ ಅಡುಗೆಮನೆಗೆ ನುಗ್ಗಿದೆ.

  ದೇವರಿಗೆ ನಮಸ್ಕಾರ ಹಾಕಿದ ನಂಜುಂಡಸ್ವಾಮಿ ಹೆಬ್ಬಾಳದಲ್ಲಿ ಬಸ್‌ಗೆ ಕಾಯುತ್ತಾ ನಿಂತ. ಬಂದ ಬಸ್‌ಗಳೆಲ್ಲ ಅವತ್ತು ಖಾಲಿ ಖಾಲಿ. ಹೀಗಾದರೆ ಬ್ಯುಸಿನೆಸ್ ಕತೆಯೇನು? ಎಂದು ಯೋಚಿಸುತ್ತಲೇ ಮನೆ ದೇವರು ಹನುಮಂತರಾಯನ ನೆನಪಿಸಿಕೊಂಡ. ಅಷ್ಟರಲ್ಲಿಯೇ ಒಂದು ತುಂಬಿದ ಬಸ್ ಬಂತು. ಬಸ್ ಹತ್ತಿದ ಎರಡೇ ನಿಮಿಷಕ್ಕೆ ಒಂದು ಮೊಬೈಲ್ ಎಗರಿಸಿದ. ಮೊಬೈಲ್ ಕಳೆದುಕೊಂಡಿದ್ದವನು ಹಿಡಿಶಾಪ ಹಾಕುತ್ತಿದ್ದ. ಅವನ ಬೈಗುಳದ ಮಧ್ಯೆ ‘ಸೂಳೆ ಮಗ’ ಅನ್ನೋದು ಕಿವಿಗೆ ಬಿತ್ತು. ಆಗ ಜಿನುಗಿದ ಕಣ್ಣೀರಿನ ಹನಿಯನ್ನು ಕಷ್ಟಪಟ್ಟು ನಂಜುಂಡಸ್ವಾಮಿ ಬಚ್ಚಿಟ್ಟುಕೊಂಡ.

  ಡಾಕ್ಟರ್ ಕೈಚೆಲ್ಲಿದ್ದರು. ‘ವೆಂಟಿಲೇಟರ್ ಇರೋದರಿಂದ ನಿಮ್ಮಪ್ಪ ಉಸಿರಾಡುತ್ತಿದ್ದಾರೆ. ಬದುಕುವ ಚಾನ್ಸೇ ಇಲ್ಲ. ಸುಮ್ಮನೇ ದುಡ್ಡು ವೇಸ್ಟ್ ಮಾಡಬೇಡಿ. ವೆಂಟಿಲೇಟರ್ ತೆಗೆದುಬಿಡೋಣ. ಸೆಂಟಿಮೆಂಟ್ ಒಳ್ಳೆಯದಲ್ಲ’ ಎಂದು ಡಾಕ್ಟರ್ ಯಾವುದೇ ಭಾವಗಳಿಲ್ಲದೇ ಮಾತನಾಡುತ್ತಿದ್ದರು. ಈಗಾಗಲೇ ಹಣ ನೀರಿನಂತೆ ಖರ್ಚಾಗಿದೆ. ಇನ್ಮುಂದೆ ದಿನಕ್ಕೆ ೧೫-೨೦ ಸಾವಿರ ಬೇಕು. ಸಾಲ ಕೊಡೋರ ಪಟ್ಟಿ ಮೊಟಕಾಗುತ್ತಿದೆ. ನಾಳೆ ಬೆಳಗ್ಗೆ ೧೫ ಸಾವಿರ ಕಟ್ಟಬೇಕು. ಸದ್ಯಕ್ಕೆ ಜೇಬಲ್ಲಿ ಹಣವಿದೆ. ಆದರೆ ನಾಡಿದ್ದು? ಆಚೆ ನಾಡಿದ್ದು? ಪ್ರಶ್ನೆಗೆ ಉತ್ತರ ಇಲ್ಲ. ಹಾಗೆಂದು ವೆಂಟಿಲೇಟರ್ ತೆಗೆಯಿರಿ ಎಂದು ವೈದ್ಯರಿಗೆ ಹೇಳಲು ಮನಸ್ಸು ಬರುತ್ತಿಲ್ಲ. ಏನೋ ಪಾಪಪ್ರಜ್ಞೆ. ನಮ್ಮ ಕಷ್ಟವು ಪ್ರಜ್ಞೆ ಇಲ್ಲದೇ ಮಲಗಿದ್ದ ಅಪ್ಪನಿಗೆ ಕಾಣಿಸಿತೋ ಏನೋ, ಮಾರನೇ ದಿನ ವೆಂಟಿಲೇಟರ್ ಇದ್ದರೂ ಅವರು ಉಸಿರು ನಿಲ್ಲಿಸಿದ್ದರು!

  ಆಕೆಯ ಹೆಸರು ನನಗಂತೂ ಗೊತ್ತಿಲ್ಲ. ಹೂವಜ್ಜಿ ಎಂದೇ ಅಮ್ಮ ಕರೆಯುತ್ತಾಳೆ. ಆಕೆ ಎಂದಿನಂತೆ ಮನೆ ಬಾಗಿಲಲ್ಲಿ ಹೂವಿಟ್ಟು ಹೊರಟಳು. ಆ ಹೂವನ್ನು ಅಮ್ಮನ ಕೈಯಲ್ಲಿಟ್ಟೆ. ‘ಹೂವು ಬಾಡಿವೆ. ಕಳ್ಳಮುಂಡೆ ದಿನಾ ಇದೇ ಆಯಿತು..’ ಎಂದು ಅವಳು ಗೊಣಗಿದಳು. ಹೂವು ಬಾಡಿದ್ದೋ ಇಲ್ಲವೋ, ನನಗೆ ಆಕ್ಷಣ ಹೂವಜ್ಜಿಯ ಕೈಬೆರಳುಗಳು ಕಣ್ಮುಂದೆ ಬಂದವು. ಆಕೆಯ ಬೆರಳುಗಳು ಹೂವನ್ನು ಕಟ್ಟಿ, ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದು ನೆನಪಾಯಿತು.

  ಕಂಬಳಿ ಅಡಿಯಲ್ಲಿ ಚಳಿಯಲ್ಲಿ ಮುದುಡಿ ಮಲಗಿದ್ದಾಗ ಏನೇನೋ ನೆನಪಾಯಿತು. ಆ ಮಧುರ ಯಾತನೆಯ ಮೆಲುಕು ಹಾಕುತ್ತಾ, ಅದರಲ್ಲಿಯೇ ಸುಖ ಹೊಂದುತ್ತಿರುವಾಗಲೇ ಹಾಳಾದ ನಿದ್ದೆ ಎಲ್ಲವನ್ನೂ ಕಸಿದಿತ್ತು. ಆ ಕ್ಷಣಗಳಿಗಾಗಿ ಕಂಬಳಿ ಮೇಲೆ ಕಂಬಳಿ ಹೊದ್ದರೂ ಫಲ ದೊರೆತಿಲ್ಲ. ಚಳಿಯೂ ಕಡಿಮೆಯಾಗಿಲ್ಲ.

  ============================

  ‘ಕನಸಿನರಮನೆ ’ಯ ವಿಳಾಸ ಬದಲಾಗಿದೆ!

  ಅಕ್ಷರ ಪ್ರೇಮಿಗಳಿಗೆ ನಮಸ್ಕಾರ.

  ಬ್ಲಾಗ್‌ಸ್ಪಾಟ್‌ನಲ್ಲಿದ್ದ ‘ಕನಸಿನರಮನೆ ’ ಇಲ್ಲಿಗೆ ತಂದಿದ್ದೇನೆ. ನನ್ನ ಹಳೆಯ ಬರಹಗಳಿಗಾಗಿ ದಯಮಾಡಿ ಭೇಟಿ ನೀಡಿ:http://kanasinaramane.blogspot.com/