ಬ್ಲಾಗ್ ಬಗೆಗಿನ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಇದು ಬ್ಲಾಗ್ ಬಗೆಗಿನ ನನ್ನ ಕನಸು ಮಾತ್ರ. ಹಾಗೆಂದು ನನ್ನ ಕನಸಿನಂತೆಯೇ ಈ ‘ಕನಸಿನರಮನೆ ’ ಇದೆ ಅಥವಾ ಇರುತ್ತದೆ ಎಂದರ್ಥವಲ್ಲ.
ಕನ್ನಡ ಬಿತ್ತನೆ ಅಂತರ್ಜಾಲದಲ್ಲಿ ನಿಧಾನವಾಗಿ ಶುರುವಾಗಿದ್ದರೂ, ಬ್ಲಾಗ್‌ಗಳ ದೆಸೆಯಿಂದ ತುಸು ವೇಗ ಪಡೆಯುತ್ತಿದೆ. ಇಮೇಲ್ ಅಡ್ರೆಸ್ ಪಡೆಯುವುದು ಎಷ್ಟು ಸುಲಭವೋ, ಬ್ಲಾಗ್ ಆರಂಭಿಸುವುದೂ ಅಷ್ಟೇ ಸುಲಭ. ಹೀಗಾಗಿ ಬ್ಲಾಗ್ ಮಾಲೀಕರ ಸಂಖ್ಯೆ ಹೆಚ್ಚುತ್ತಿದೆ. ತಮಗನಿಸಿದ್ದನ್ನು ಎಲ್ಲರಿಗೂ ಹೇಳುವ ಮತ್ತು ಹಂಚಿಕೊಳ್ಳುವ ಪ್ರಯತ್ನದಿಂದ ಮಾನವ ಸಂಬಂಧಗಳು ಚಿಗುರುತ್ತವೆ. ಈ ನಿಟ್ಟಿನಲ್ಲಿ ಸಂವಾದದ ಹೊಸ ಮಾಧ್ಯಮವಾಗಿ ಬ್ಲಾಗ್‌ಗಳು ಅರಳಿ ಘಮಘಮಿಸುತ್ತಿವೆ.
ಟಿವಿ, ರೇಡಿಯೋ, ಪತ್ರಿಕೆ ಮತ್ತು ಸಿನಿಮಾ ರೀತಿಯಲ್ಲಿಯೇ ಬ್ಲಾಗ್‌ಗಳೂ ಸಮೂಹ ಸಂವಹನದ ಆಧುನಿಕ ಅಂಗ. ಯೂನಿಕೋಡ್ ಜನಪ್ರಿಯತೆಯಿಂದಾಗಿ ಕನ್ನಡ ಬ್ಲಾಗ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಬ್ಲಾಗಿನ ಗೂಡಿನಲ್ಲಿ ಒಲಿದಂತೆ ಹಾಡುತ್ತಿರುವ ಬ್ಲಾಗಿಗಳಿಗೆ, ತಮ್ಮ ಸುತ್ತಲಿನ ಪ್ರಪಂಚವನ್ನು ತಾವು ಕಂಡಂತೆ ಇತರರಿಗೆ ಕಾಣಿಸುವ ಮತ್ತು ಇತರರು ಕಂಡ ಪ್ರಪಂಚವನ್ನು ಕಾಣುವ ತವಕ.
ಪ್ರತಿನಿತ್ಯ ಬ್ಲಾಗಿನ ಮನೆಗಳಿಗೆ ತೆರಳುವುದು ಈಗೀಗ ಬ್ರೌಸಿಂಗ್‌ನ ಒಂದು ಭಾಗ. ಅದಕ್ಕೆ ಪೂರಕವಾಗಿ ಬ್ಲಾಗ್‌ಗಳು ಹೊಸ ಪುಟಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಮೈದುಂಬಿಕೊಳ್ಳುತ್ತಿವೆ. ಆದರೆ ಶೇ.೯೦ರಷ್ಟು ಬ್ಲಾಗಿಗಳಿಗೆ ಅಪ್‌ಡೇಟ್ ಮಾಡಲು ಆಲಸ್ಯ. ಇವರುಗಳು ತಮ್ಮ ಬ್ಲಾಗ್‌ಗೆ ಬೀಗ ಜಡಿದರೆ ಒಳ್ಳೆಯದು. ಇದರಿಂದ ಬ್ಲಾಗ್ ಓದುಗರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ.
ಅಂದ ಹಾಗೇ, ಕನ್ನಡದಲ್ಲಿರುವ ಒಟ್ಟು ಬ್ಲಾಗ್‌ಗಳ ಸಂಖ್ಯೆ ಎಷ್ಟು? -ಈ ಪ್ರಶ್ನೆಗೆ ಖಚಿತವಾಗಿ ಹೇಳುವುದು ಕಷ್ಟ. ಹೊಸಬರ ದಂಡೇ ಇತ್ತ ಹರಿದು ಬರುತ್ತಿದೆ. ಬ್ಲಾಗ್ ನೋಡಿದ ಮರುಕ್ಷಣವೇ, ತಾವೊಂದು ಬ್ಲಾಗ್ ಕಟ್ಟಬೇಕೆಂದು ಅನೇಕರು ಬಯಸುತ್ತಾರೆ. ಹೀಗಾಗಿ ದಿನಕ್ಕೆ ಹತ್ತಾರು ಬ್ಲಾಗ್‌ಗಳು ಹುಟ್ಟುತ್ತಿವೆ. ಅದೇ ರೀತಿ ಸಾಯುತ್ತಿವೆ. ಹೀಗೆ ಹರಿದು ಹಂಚಿ ಹೋಗಿರುವ ಕನ್ನಡದ ಅಷ್ಟೂ ಬ್ಲಾಗ್‌ಗಳನ್ನು ಒಟ್ಟುಗೂಡಿಸುವಲ್ಲಿ ಬೆಂಗಳೂರಿನ ರೋಹಿತ್ ರಾಮಚಂದ್ರಯ್ಯ ಯಶಸ್ವಿಯಾಗಿದ್ದಾರೆ.
ಮೇ.೧೪, ೨೦೦೮ರವರೆಗೆ ಲಭ್ಯವಿರುವ ಅಂಕಿ ಸಂಖ್ಯೆಗಳ ಪ್ರಕಾರ ಕನ್ನಡದಲ್ಲಿ ೬೧೬ ಬ್ಲಾಗ್‌ಗಳಿವೆ. ರೋಹಿತ್ ತಮ್ಮ kannadabala.blogspot.comನಲ್ಲಿ ಕನ್ನಡದ ಎಲ್ಲಾ ಬ್ಲಾಗ್‌ಗಳ ಕೊಂಡಿಗಳನ್ನು ಪ್ರಕಟಿಸಿದ್ದಾರೆ. ಬ್ಲಾಗಿಗರ ಮಧ್ಯೆ ಬಾಂಧವ್ಯ ಬೆಳೆಸಲು ಮತ್ತು ಬ್ಲಾಗ್‌ಗಳ ಬಗ್ಗೆ ಮಾಹಿತಿ ಹಂಚುವಲ್ಲಿ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಕನ್ನಡದಲ್ಲಿ ೬೦೦ಕ್ಕೂ ಅಕ ಬ್ಲಾಗ್‌ಗಳಿವೆ. ಈ ಸಂಖ್ಯೆ ಏನೋ ಸಮಾಧಾನಕರ. ಆದರೆ ಗುಣಮಟ್ಟ? ಈ ಬಗ್ಗೆ ದಟ್ಸ್ ಕನ್ನಡ.ಕಾಮ್ ಸಂಪಾದಕ ಎಸ್.ಕೆ.ಶಾಮ ಸುಂದರ ಅವರಿಗೆ ಅಸಮಾಧಾನ. ‘ಮಾಹಿತಿಯನ್ನು ಎಲ್ಲರಿಗೂ ಸುಲಭವಾಗಿ ಮತ್ತು ಉಚಿತವಾಗಿ ಹಂಚುವುದು ಅಂತರ್ಜಾಲದ ಮೂಲ ಆಶಯ. ಈ ನಿಟ್ಟಿನಲ್ಲಿ ವೆಬ್‌ಸೈಟ್‌ಗಳು ಮತ್ತು ಬ್ಲಾಗ್‌ಗಳು ಕಾರ್ಯ ನಿರ್ವಹಿಸಬೇಕು’ ಎಂಬುದು ಅವರ ಕಳಕಳಿ. ಆದರೆ ಕನ್ನಡ ಬ್ಲಾಗಿಗಳು ಭಾವನಾತ್ಮಕ ನೆಲೆಯಲ್ಲಿಯೇ ನಿಂತುಬಿಟ್ಟಿದ್ದಾರೆ. ಬೇರೆ ಆಲೋಚಿಸಲು ಯಾರೂ ಸಿದ್ಧರಿಲ್ಲ.
ಕನ್ನಡದ ಬಹುಪಾಲು ಬ್ಲಾಗ್‌ಗಳು ಪದ್ಯ, ಹನಿಗವನ, ಲೇಖನ, ಕತೆ, ನೆನಪು, ಕನಸು, ಕನವರಿಕೆಗಷ್ಟೆ ಮೀಸಲು. ಎಲ್ಲಾ ರಂಗದ ವ್ಯಕ್ತಿಗಳೂ ಬ್ಲಾಗ್ ತೆರೆಯಬೇಕು. ಅದರಲ್ಲಿ ತಮ್ಮ ಮತ್ತು ತಮ್ಮ ಕ್ಷೇತ್ರದ ವಿಶೇಷ, ಸಾಹಸ, ಸವಾಲು, ಸಾಧನೆ ಮತ್ತು ತಾಕಲಾಟಗಳನ್ನು ವಿವರಿಸಬೇಕು. ಉಪ್ಪಿಟ್ಟು ಮಾಡುವುದು ಹೇಗೆ ಎನ್ನುವುದರಿಂದ ಆರಂಭವಾಗಿ, ಸಾಫ್ಟ್‌ವೇರ್ ಲೋಕದ ಪ್ರೋಗ್ರಾಮ್ ಅಥವಾ ಕೋಡಿಂಗ್ ಬರೆಯುವುದು ಹೇಗೆ ಎನ್ನುವ ತನಕ ಮಾಹಿತಿಯ ವಿಲೇವಾರಿಯಾಗಬೇಕು.
ಮೋಟಾರ್ ಸೈಕಲ್ ರಿಪೇರಿ ಹೇಗೆ? ಕಸೂತಿ ಹಾಕುವುದು ಹೇಗೆ? ವಿದ್ಯುತ್ ಅಥವಾ ನೀರಿನ ಬಿಲ್ ಯದ್ವಾತದ್ವಾ ಬಂದರೆ ಯಾರನ್ನು ಕೇಳಬೇಕು? ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನು ಮಾಡಬೇಕು? ಬಾಳೆಎಲೆ ಎಲ್ಲಿ ಸಿಗುತ್ತೆ? ಬಸವನಗುಡಿಗೆ ಮೆಜೆಸ್ಟಿಕ್‌ನಿಂದ ಹತ್ತಿರದ ದಾರಿ ಯಾವುದು? -ಇಂಥ ಹತ್ತಾರು ಸಂಗತಿಗಳು ಬ್ಲಾಗ್‌ಗಳಲ್ಲಿ ಚರ್ಚೆಯಾಗಬೇಕು. ಜನಸಾಮಾನ್ಯರಿಗೆ ಅರ್ಥವಾಗಬೇಕು.
ಬ್ಲಾಗಿಗರ ಬಗೆಗಿನ ನನ್ನ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಗೆಳೆಯನೊಬ್ಬ, ‘ಕೆಲಸದ ಏಕತಾನತೆಯಿಂದ ಪಾರಾಗಲೆಂದೇ ಬ್ಲಾಗ್‌ನಲ್ಲಿ ಬರೆಯುತ್ತೇವೆ.. ನಮ್ಮ ಆಸಕ್ತಿಯ ಕತೆ, ಕವನಗಳತ್ತ ಗಮನ ನೀಡುತ್ತೇವೆ. ಅಲ್ಲಿ ಬೇರೇನನ್ನೋ ನಿರೀಕ್ಷಿಸುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ. ಆದರೆ ‘ತೋಚಿದಂತೆ ಗೀಚುವೆ, ನಾನು ನನ್ನಿಷ್ಟ ’ ಎನ್ನಲು ಬ್ಲಾಗ್ ಎಂಬುದು ಮನೆಯ ಕಪಾಟಿನಲ್ಲಿ ಕೊಳೆಯುವ ಡೈರಿಯಲ್ಲ ಎಂದಷ್ಟೆ ಹೇಳುತ್ತೇನೆ.
ಜಗತ್ತಿನ ಕೋಟ್ಯಂತರ ಬಳಕೆದಾರರ ಮುಂದೆ ಬ್ಲಾಗ್‌ಗಳ ಪುಟಗಳು ಬಿಚ್ಚಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಗೂಗಲ್, ಯಾಹೂ, ಗುರೂಜಿ ಮತ್ತಿತರ ಸರ್ಜ್ ಎಂಜಿನ್‌ಗಳ ದೆಸೆಯಿಂದ ಯಾವ ಬ್ಲಾಗನ್ನು ಯಾರು ಯಾವಾಗ ಬೇಕಾದರೂ ನೋಡುವ ಸಾಧ್ಯತೆಗಳಿವೆ. ಹೀಗಾಗಿ ಬ್ಲಾಗಿಗರ ಜವಾಬ್ದಾರಿ ದೊಡ್ಡದು. ಬ್ಲಾಗ್ ಎಂಬುದು ಖಾಸಗಿ ಡೈರಿಯಲ್ಲ… ಅದು ನಾಲ್ಕು ಗೋಡೆಗಳ ಮನೆಯಲ್ಲ.
ನಿಜಕ್ಕೂ ಕನ್ನಡದ ಬ್ಲಾಗ್‌ಗಳೆಂದರೆ ನೆನಪಾಗುವುದು ಕೆಲವಷ್ಟೆ. ಪತ್ರಿಕೆಗಳಲ್ಲಿ ಜೋಗಿ ಬರಹಗಳನ್ನು ಓದದವರಿಗಷ್ಟೆ, ಜೋಗಿಮನೆ(http://jogeemane.blogspot.com/) ಖುಷಿ ತರುತ್ತದೆ. ತಮ್ಮ ಹಳೆಯ ಬರಹಗಳನ್ನು ತುಂಬುವ ಕಣಜವಾಗಿ ಅವರು ಬ್ಲಾಗನ್ನು ಬಳಸುತ್ತಿದ್ದಾರೆ! ಜೋಗಿ ಅವರಂತೆಯೇ ತಮ್ಮ ಹಳೆಯ ಬರಹಗಳನ್ನೇ ಬ್ಲಾಗ್‌ಗಳಲ್ಲಿ ಅನೇಕರು ತುಂಬುತ್ತಿದ್ದಾರೆ.
ವೈವಿಧ್ಯದ ದೃಷ್ಟಿಯಲ್ಲಿ ನೋಡುವುದಾದರೆ ಮೋಟುಗೋಡೆ(http://motugode.blogspot.com/), ಏನ್‌ಗುರು(http://enguru.blogspot.com/), ಇ-ಜ್ಞಾನ(http://e-jnana.blogspot.com/), ಅಚ್ಚ-ಕನ್ನಡ(http://accha-kannada.blogspot.com/) ಬ್ಲಾಗ್‌ಗಳನ್ನು ಪ್ರಸ್ತಾಪಿಸಬೇಕು. ಐಟಿ ಕನ್ನಡಿಗರ ಬನವಾಸಿ ಬಳಗ ನಡೆಸುತ್ತಿರುವ ಏನ್‌ಗುರು, ನಾಡು-ನುಡಿ ಬರಹಗಳ ಖಜಾನೆ. ಕನ್ನಡದ ಹೊಸ ಸವಾಲು, ಸಂಕಟ, ಸಮಸ್ಯೆಗಳ ಬಗ್ಗೆ ಇಲ್ಲಿ ಸದಾ ಕಾವೇರಿದ ಚರ್ಚೆ.
ಬ್ಲಾಗ್ ಕೆಲವರ ಪಾಲಿಗೆ ಕೋತಿ ಕೈಯೊಳಗಿನ ಮಾಣಿಕ್ಯದಂತಾಗಿದೆ. ತಮ್ಮ ಕೋಪ-ತಾಪ, ವೈಯಕ್ತಿಕ ನಿಂದೆಗೆ ಬ್ಲಾಗ್ ಅಸ್ತ್ರವಾಗಿದೆ. ಬ್ಲಾಗ್‌ಗಳನ್ನು ಜನಪ್ರಿಯಗೊಳಿಸಲು ‘ಬರಹ ’ದ ರೂವಾರಿ ಶೇಷಾದ್ರಿ ವಾಸು ಪ್ರಯತ್ನಿಸುತ್ತಿದ್ದಾರೆ. ಕನ್ನಡ ಬ್ಲಾಗ್‌ಗಳು ಅಪ್‌ಡೇಟ್ ಆದ ತಕ್ಷಣ http://www.baraha.com/kannada/ ಮಾಹಿತಿ ಒದಗಿಸತ್ತದೆ. ಇದರ ಜತೆಗೆ ದಟ್ಸ್‌ಕನ್ನಡ.ಕಾಮ್ ಮತ್ತು ವೆಬ್‌ದುನಿಯಾಗಳು ಬ್ಲಾಗ್‌ಗಾಗಿ ಪ್ರತ್ಯೇಕ ವಿಭಾಗ ತೆರೆದಿವೆ.
ಬ್ಲಾಗಿಗಳನ್ನು ಕವಿಗಳು, ಲೇಖಕರು ಎನ್ನಲು ಸಾಹಿತ್ಯವಲಯದ ಹಳೆಯ ತಲೆಮಾರು ಸಿದ್ಧವಿಲ್ಲ. ಪುಟ ತುಂಬಿಸಲು ಪೈಪೋಟಿ ನಡೆಸುತ್ತಿರುವ ಕೆಲವು ಬ್ಲಾಗಿಗಳು ಅಕ್ಷರ ಮಾಲಿನ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಕಾಳಿಗಿಂತ ಜೊಳ್ಳೇ ಜಾಸ್ತಿಯಿದೆ ಅನ್ನಿಸಿದರೂ, ಕನ್ನಡ ಬ್ಲಾಗ್‌ಗಳನ್ನು ಕಡೆಗಣಿಸುವಂತಿಲ್ಲ.
ಈ ಮಧ್ಯೆ ಕನ್ನಡ ಬ್ಲಾಗಿಗಳನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನಗಳು ಆಗಾಗ ನಡೆಯುತ್ತಿವೆ. ಕಂಪ್ಯೂಟರ್ ಎನ್ನುವುದು ಕಚೇರಿಯಲ್ಲಿ ಮಾತ್ರವಲ್ಲದೇ ಅಡುಗೆ ಮನೆ ಶೆಲ್ಪ್ ಮೇಲೂ ಪವಡಿಸಿದೆ. ಹೀಗಾಗಿ ಸಹಜವಾಗಿಯೇ ಬ್ಲಾಗ್ ಕ್ರೇಜ್ ಇನ್ನಷ್ಟು, ಮತ್ತಷ್ಟು ಹೆಚ್ಚಾಗಿದೆ. ಆದರೆ ಬ್ಲಾಗಿಗರ ಜವಾಬ್ದಾರಿ?