Monthly Archives: ಜುಲೈ 2009

ಬದಲಾಗುವುದೆಂದರೆ ಅರ್ಧರಾತ್ರಿಯಲ್ಲಿ ಮನೆ ಬಿಡುವುದಾ?

ಸಾಮಾನ್ಯ

ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಎಲ್ಲೆಲ್ಲಿದ್ದಾರೋ ಅಲ್ಲಲ್ಲಿಯೇ ಕಳೆದು ಹೋಗಿದ್ದಾರೆ. ಕಳೆದು ಹೋಗುವ ಅನಿವಾರ್ಯತೆಯನ್ನು ನಮಗೆ ನಾವೇ ಸೃಷ್ಟಿಸಿಕೊಂಡಿದ್ದೇವೆ. ಅಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳೆಯರು -ಹೀಗೆ ಆತ್ಮೀಯರ ಜತೆ ನಾಲ್ಕು ಮಾತಿಗೆ ಬಿಝಿ ಷೆಡ್ಯೂಲ್‌ನಲ್ಲಿ ಸಮಯ ಹೊಂದಿಸಿಕೊಳ್ಳಲು ತಿಣುಕಾಡಬೇಕಾಗಿದೆ.

ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಹಳ್ಳಿ ಹುಡುಗ, ಆರಂಭದಲ್ಲಿ ಊರಿಗೆ ವಾರಕ್ಕೊಮ್ಮೆ ಹೋಗುತ್ತಿದ್ದ. ನಂತರ ಎರಡು ವಾರಕ್ಕೊಮ್ಮೆ, ಆಮೇಲೆ ತಿಂಗಳಿಗೊಮ್ಮೆ. ಅಮೇಲಾಮೇಲೆ ಮೂರು ತಿಂಗಳಿಗೊಮ್ಮೆ. ಕೊನೆಕೊನೆಗೆ ವರ್ಷಕ್ಕೊಂದು ಸಲ. ಮದುವೆಯಾದ ಮೇಲೆ ಊರು ಎಲ್ಲಿದೆ ಎಂಬುದೇ ಆತನಿಗೆ ನೆನಪಾಗುತ್ತಿಲ್ಲ. ಪ್ರತಿ ಶ್ರಾವಣ ಶನಿವಾರ ಮನೆ ದೇವರ ದೇಗುಲಕ್ಕೆ ಹೋಗುವುದನ್ನು ಆತ ತಪ್ಪಿಸುತ್ತಿರಲಿಲ್ಲ. ಆದರೀಗ ಮನೆ ದೇವರು ಸಹ ದೂರ. ದೇವರ ಪಟವನ್ನು ಮನೆಯಲ್ಲಿಟ್ಟು ದಿನವೂ ಕೈ ಮುಗಿಯುತ್ತಿದ್ದಾನೆ.

ಅಮ್ಮನ ಸೆರಗಿನಡಿಯೇ ಬೆಳೆದ ಹುಡುಗಿಗೆ ಬೇರೆ ಪ್ರಪಂಚವೇ ಗೊತ್ತಿರಲಿಲ್ಲ. ಅಮ್ಮನ ನೆರಳಿಲ್ಲದೇ ಬದುಕಲಾರೆ ಎಂದುಕೊಂಡಿದ್ದಳು ಅವಳು. ಕಲಿಕೆ ನೆಪದಲ್ಲಿ ಪಟ್ಟಣಕ್ಕೆ ಬಂದಳು. ಅಲ್ಲಿಯೇ ಕೈತುಂಬ ದುಡ್ಡು ಸಿಗುವಂಥ ಕೆಲಸವೂಸಿಕ್ಕಿತು. ಆಮೇಲೆ ಊರು, ಅಮ್ಮ ಯಾವುದೂ ಮರೆತಿಲ್ಲ. ಆದರೆ ಹತ್ತಿರವಿಲ್ಲ. ಹಾಗೆಂದು ಅವರ ಊರು ದೂರದ ಅಮೆರಿಕದಲ್ಲಿಲ್ಲ. ಒಂದು ರಾತ್ರಿ ಬಸ್‌ನಲ್ಲಿ ಕುಳಿತರೆ ಬೆಳಗಾಗುವ ವೇಳೆಗೆ ಊರು ತಲುಪಬಹುದು. ಆದರೆ ಕೈತುಂಬ ಕಾಸು ಕೊಡುವ ಕಂಪನಿ, ರಜೆ ನೀಡೀತೇ? ಅದು ನೀಡಿದರೂ ಪಡೆಯಲು ಆಕೆಗೆ ಇಷ್ಟವಿಲ್ಲ! ಭವಿಷ್ಯ ಕಟ್ಟಿಕೊಳ್ಳುವ ಹುಮ್ಮಸ್ಸಿನಲ್ಲಿ ಸೆಂಟಿಮೆಂಟ್‌ಗಳಿಗೆ ಅರ್ಥವೇ ಇಲ್ಲ ಎಂದು ಅನಿಸುತ್ತಿದೆ.

‘ಬೆಂಗಳೂರಿನಂಥ ಮಾಯಾನಗರಿಗಳು ಎಲ್ಲರನ್ನೂ ಕರೆಕರೆದು ಕೆಲಸ ಕೊಡುತ್ತವೆ. ಈ ಮಾಯಾನಗರಿಯ ಸೆಳೆತದಲ್ಲಿ ವ್ಯತ್ಯಾಸಗಳೇ ಕಾಣಿಸುವುದಿಲ್ಲ. ನಮ್ಮತನವೇ ಸವೆದು ಹೋಗಿರುತ್ತದೆ. ಎಲ್ಲರಿಗೂ ಒಂದೇ ಸಮವಸ್ತ್ರ. ಒಂದೇ ಕೆಲಸ. ಭಾವನೆಗಳೇ ಇಲ್ಲದ ಯಾಂತ್ರಿಕ ಬದುಕು’ ಎಂದು ಹೇಳಲು ಹೊರಟರೆ, ಅದೇ ಹಳೆಯ ಕೊರಗು ಎನ್ನುವಿರೇನೋ?

ಗಂಡ ಹೆಂಡತಿ ಜತೆ, ಮಕ್ಕಳು ಹೆತ್ತವರ ಜತೆ ಇಮೇಲ್‌ನಲ್ಲಿ, ಎಸ್‌ಎಂಎಸ್‌ಗಳಲ್ಲಿ ಮಾತಾಡುವ ಕಾಲವಿದು. ಮಗನ ಹುಟ್ಟುಹಬ್ಬವನ್ನು ಮೊಬೈಲ್ ನೆನಪಿಸುತ್ತದೆ. ಕೂಡಲೇ ಕರೆ ಮಾಡಿ, ಮಗನಿಗೆ ಹೂಗುಚ್ಛ ತಲುಪುವಂತೆ ಅಪ್ಪ ವ್ಯವಸ್ಥೆ ಮಾಡುತ್ತಾನೆ. ಹುಟ್ಟಿದ ಹಬ್ಬದ ದಿನವಾದರೂ ನನ್ನ ಜತೆ ಅಪ್ಪ ಕಾಲ ಕಳೆಯುತ್ತಾನೆ ಎಂದು ಭಾವಿಸುವ ಮಗನಿಗೆ, ಆ ದಿನವೂ ಯಾವುದೇ ವ್ಯತ್ಯಾಸ ಗೊತ್ತಾಗುವುದಿಲ್ಲ. ಯಾವುದೋ ಎಮರ್ಜೆನ್ಸಿ ಮೀಟಿಂಗ್, ಮುಗಿಯದ ಪ್ರಾಜೆಕ್ಟ್, ತಲೆತಿನ್ನುವ ಕೆಲಸಗಳು ಭಾವನೆಗಳನ್ನು ತಣ್ಣಗೆ ಕೊಲ್ಲುತ್ತದೆ.

ಆರ್ಥಿಕ ಮಹಾ ಕುಸಿತದ ಈ ದಿನಗಳಲ್ಲಿ ಪಿಂಕ್ ಸ್ಲಿಪ್ ತಪ್ಪಿಸಿಕೊಳ್ಳಲು ತಿಣುಕಾಡಲೇ ಬೇಕು. ಮ್ಯಾನೇಜ್‌ಮೆಂಟ್ ಕಾಕದೃಷ್ಟಿ ತಪ್ಪಿಸಿಕೊಳ್ಳಲು ಗಾಣದ ಎತ್ತಿನಂತೆ ದುಡಿಯಲೇ ಬೇಕು. ಮಲ್ಯನ ರೇಸ್ ಕುದುರೆಗಳಂತೆ ದಣಿವನ್ನು ಮರೆತು ಓಡಲೇ ಬೇಕು. ಗುರಿಯಿಲ್ಲದ ಈ ಓಟ, ನಿರಂತರ. ಸ್ವಲ್ಪ ಏರುಪೇರಾದರೂ ಕೆಲಸಕ್ಕೆ ಕತ್ತರಿ. ಈಗಿನದು ಊರಿಗೆ ನೂರಾರು ಪದ್ಮಾವತಿಯರ ಕಾಲ. ನಮ್ಮ ಕುರ್ಚಿ ಅಲಂಕರಿಸಲು ದೊಡ್ಡದೊಂದು ಕ್ಯೂ ಆಗಲೇ ಹನುಮಂತಪ್ಪನ ಬಾಲದಂತೆ ಬೆಳೆದು ನಿಂತಿದೆ.

ಜಗದ ಸಂಕಷ್ಟಗಳನ್ನು ಅವುಗಳ ಪಾಡಿಗೆ ಬಿಟ್ಟು, ಎಲ್ಲವನ್ನೂ ಮರೆತು, ನಮಗೆ ಬೇಕಾದವರೊಂದಿಗೆ ಹೋಟೆಲ್‌ನಲ್ಲಿ ಕೂತು ಕಾಫಿ ಹೀರಿದ್ದು ಯಾವಾಗ? ಯಾವುದೋ ಪಾರ್ಕ್‌ನಲ್ಲಿ, ನಮ್ಮದೇ ಮೆಚ್ಚಿನ ತಾಣಗಳಲ್ಲಿ ಕೂತು ಅವರೊಂದಿಗೆ ನೆನಪುಗಳನ್ನು ಕೆದಕಿದ್ದು ಯಾವಾಗ? ಯಾವುದೋ ಮರೆತ ಹಳೆಯ ಹಾಡನ್ನು ತಪ್ಪು ತಪ್ಪಾಗಿಯೇ ಗುನುಗಿ, ಮಧುರಾನುಭೂತಿ ಹೊಂದಿದ್ದು ಯಾವಾಗ? ನೆನಪುಗಳು ತಿಂಗಳುಗಳನ್ನು ದಾಟಿ ವರ್ಷಗಳನ್ನು ಎಣಿಸುತ್ತವೆ.

ಅವನೆಲ್ಲೋ ಇವನೆಲ್ಲೋ? ಭೇಟಿ ನೆಪದಲ್ಲಿ ದೂರದ ಗೆಳೆಯ ಊರಿಗೆ ಬಂದರೂ ನಮಗೆ ಸಿಗುವುದೇ ಇಲ್ಲ. ಕನಸಲ್ಲಿ ಬಂದಂತೆ ಮಿಂಚಿ ಮಾಯವಾಗುತ್ತಾನೆ. ಊರಿಗೆ ಬಂದರೂ ಸೆಲ್‌ನಲ್ಲಿಯೇ ಆತ ಹೆಚ್ಚಾಗಿ ಸಿಗುತ್ತಾನೆ. ನೇರ ಸಿಕ್ಕರೂ ಸೆಲ್‌ನಲ್ಲಿಯೇ ಇರುತ್ತಾನೆ. ಯಾರಿಗೋ ಎಸ್ಸೆಮ್ಮೆಸ್‌ಗಳನ್ನು ಒಂದರ ನಂತರ ಒಂದರಂತೆ ಕಳುಹಿಸುತ್ತಾ, ನಾವು ಹೇಳಿದ್ದಕ್ಕೆ ತಲೆಯಾಡಿಸುತ್ತಿರುತ್ತಾನೆ! ಅವನು ಪಕ್ಕದಲ್ಲಿದ್ದರೂ, ದೂರದಲ್ಲಿದ್ದಂತೆ ಭಾವ. ಹಾಕಿಕೊಂಡಿದ್ದ ಯೋಜನೆಗಳು ಯಥಾ ಪ್ರಕಾರ ಮುಂದಿನ ಭೇಟಿಗೆ ವರ್ಗವಾಗುತ್ತವೆ. ಕೊನೆಗೆ ಊರು ಬಿಡುವ ವಿಷಯ ಸಹ ತಿಳಿಯುವುದಿಲ್ಲ.

ಒಂದೆರಡು ದಿನಗಳ ನಂತರ ಫೋನಲ್ಲಿಯೇ ‘ಅದೇನಾಯ್ತು ಅಂದ್ರೆ..’ ಎಂದು ಆತ ನೆಪಗಳನ್ನು ಜೋಡಿಸಲು ಶುರು ಮಾಡುತ್ತಾನೆ. ಅವುಗಳನ್ನು ಒಪ್ಪದೇ ಅಥವಾ ನಂಬದೇ ಬೇರೆ ದಾರಿಯಾದರೂ ನಮಗಿದೆಯೇ?
‘ಚಿಕ್ಕ ಕನಸುಗಳನ್ನು ಕಾಣುವುದು ಅಪರಾಧ ’ ಎಂದು ಎಲ್ಲೋ ಕೇಳಿದ ಮಾತು ತಲೆಯಲ್ಲಿ ಉಳಿದಿರುತ್ತದೆ. ‘ ನನಗೆ ಆಸೆಗಳಿಲ್ಲ. ತಿಂಗಳಿಗೆ ಕೇವಲ ೫೦೦೦ ರೂಪಾಯಿ ಸಿಕ್ಕರೆ ಸಾಕು. ನಾನು ಆನಂದದ ಬದುಕು ಕಟ್ಟಿಕೊಳ್ಳುತ್ತೇನೆ’ ಎನ್ನುತ್ತಿದ್ದ ಗೆಳೆಯನ ಸಂಬಳ ಈಗ ೫೦ ಸಾವಿರ. ಆದರೂ ಆತನಿಗೆ ಸಮಾಧಾನ ಇಲ್ಲ. ಸೈಕಲ್ ಸಾಕು ಎನ್ನುತ್ತಿದ್ದವಗೆ ಸ್ಕೂಟರ್ ಸಿಕ್ಕಿದೆ. ರಸ್ತೆಯಲ್ಲಿ ನಿಂತು, ಕಾರಿನ ಕನಸು ಕಂಡವನ ಮನೆಯಲ್ಲಿ ಎರಡೆರಡು ಕಾರುಗಳಿವೆ. ‘ಮಗಳ ಮದುವೆ ಮುಗಿದರೆ ನಾನು ಪುನೀತ. ತಲೆಮೇಲಿನ ಹೊರೆ ಇಳಿಸಿಕೊಂಡು ಹಗುರಾಗುತ್ತೇನೆ’ ಎನ್ನುತ್ತಿದ್ದ ಯಜಮಾನರು, ತಮ್ಮ ಮೊಮ್ಮಗಳಿಗೂ ಮದುವೆ ಮಾಡಿದ್ದಾರೆ. ಆದರೂ ಇವರ‍್ಯಾರಲ್ಲೂ ಸಂತೋಷ ಕೆನೆಕಟ್ಟಿಲ್ಲ.

‘ಆನಂದವನ್ನು ಬಿಟ್ಟು ನಾವು ಸುಖದ ಬೆನ್ನತ್ತಿರುವುದರಿಂದಲೇ ಹೀಗಾಗುತ್ತಿದೆ. ಆನಂದ ನೀಡುವ ಮೇಷ್ಟ್ರು ಕೆಲಸದತ್ತ ಯಾರಿಗೂ ಆಸಕ್ತಿಯಿಲ್ಲ. ಎಲ್ಲರಿಗೂ ಸಾಫ್ಟ್‌ವೇರ್ ಎಂಜಿನಿಯರ್ ಆಗುವ ಹಂಬಲ ಹೆಚ್ಚುತ್ತಿದೆ’ ಎನ್ನುವ ಟಿ.ಎನ್.ಸೀತಾರಾಂ ಮಾತು, ಇಲ್ಲಿ ಸುಮ್ಮನೇ ನೆನಪಾಗುತ್ತಿದೆ. ಮನೆ ಹತ್ತಿರದ ೭ ವರ್ಷದ ಪುಟಾಣಿ ಬಾಲಕಿಯನ್ನು ಮೊನ್ನೆ ಮಾತಾಡಿಸಿದೆ. ‘ದೊಡ್ಡವಳಾದ ಮೇಲೆ ಏನಾಗುತ್ತೀಯಾ?’ ಎಂಬ ಪ್ರಶ್ನೆಗೆ, ತಡವರಿಸದೇ ‘ಡಾಕ್ಟರ್ ಆಗ್ತೀನಿ ಅಂಕಲ್’ ಎಂದಳು. ‘ಯಾಕೆ?’ ಎಂದರೆ, ‘ಚೆನ್ನಾಗಿ ದುಡ್ಡು ಸಂಪಾದಿಸುವುದಕ್ಕೆ’ ಅಂದಳು. ದೊಡ್ಡವರ ದುಡ್ಡಿನ ಮೋಹ ಮಕ್ಕಳ ರಕ್ತದಲ್ಲಿಯೂ ಬೆರೆಯುತ್ತಿದೆಯೇ?

ಈ ಮಧ್ಯೆ ಮದುವೆಗೆ ಬಾರದ ಗೆಳೆಯನೊಬ್ಬ ನಾನು ಬಯಸದಿದ್ದರೂ ಫೋನ್‌ನಲ್ಲಿ ವಿವರಣೆ ಕೊಡುತ್ತಿದ್ದ. ‘ಮದುವೆಗೆ ನೀನು ಬರಲಿಲ್ಲ ಎಂದು ನನಗೆ ಬೇಸರವಿಲ್ಲ. ಅಲ್ಲದೇ ನೀನು ಮದುವೆಗೆ ಬಂದೇ ನಮ್ಮಿಬ್ಬರ ಸ್ನೇಹವನ್ನು ಗಟ್ಟಿಗೊಳಿಸಬೇಕಿತ್ತು ಎಂದು ನಾನು ಭಾವಿಸಿಲ್ಲ. ಹೊಟ್ಟೆಪಾಡಿನ ಸರ್ಕಸ್ ಇದ್ದದ್ದೇ. ಕೆಲವು ಸಲವಾದರೂ ಅನಿವಾರ್ಯತೆಯ ಭೂತದಿಂದ ನಾವು ತಪ್ಪಿಸಿಕೊಳ್ಳಬೇಕು. ನೋಟಿನ ಮಸಿ ಕೈಗೆ ಅಂಟಿದರೆ ಪರವಾಗಿಲ್ಲ. ಮುಖಕ್ಕೆ ಅಂಟಬಾರದು. ನನ್ನ ಮದುವೆ ವಿಷಯ ಬಿಡು, ಅದೇನು ಲೋಕ ಕಲ್ಯಾಣದ ಕಾರ್ಯಕ್ರಮವಲ್ಲ ’ ಎಂದು ಹೇಳಿ ಪೋನ್ ಕೆಳಗಿಟ್ಟೆ.

ದೂರದ ಊರಿಂದ ಮದುವೆಗೆ ಆಗಮಿಸಿದ್ದ ನನ್ನ ಇನ್ನೊಬ್ಬ ಗೆಳೆಯ ತುಂಬ ಭಾವುಕನಾಗಿದ್ದ. ‘ಕಟ್ಟ ಕಡೆಯ ತನಕ ಮದುವೆಯಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ನಾನು ದ್ವಂದ್ವದಲ್ಲಿದ್ದೆ. ಊರಲ್ಲಿ ತುಂಬಾ ತಾಪತ್ರಯಗಳು. ಆದರೂ ಈ ಮದುವೆ ತಪ್ಪಿಸಿದರೆ ಸಾಯುವ ತನಕ ಪಾಪ ಪ್ರಜ್ಞೆ ಕಾಡುತ್ತಿತ್ತು. ಈಗ ಮದುವೆ ಮಂಟಪದಲ್ಲಿದ್ದೇನೆ. ನನಗೆ ಈಗಲೇ ಸಮಾಧಾನ’ ಎಂದು ಒಂದೇ ಉಸಿರಿನಲ್ಲಿ ಹೇಳುತ್ತಿದ್ದ. ನನ್ನಲ್ಲಿ ಮಾತಿಗೆ ಬರ. ಬಿಗಿಯಾಗಿ ಆತನ ಕೈ ಅಮುಕಿದೆ.

ಸಂಬಂಧಗಳು ಸಡಿಲವಾಗುತ್ತಿವೆ. ದೂರವಿದ್ದಷ್ಟು ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂಬ ಮಾತಿನಲ್ಲಿ ಅರ್ಥವಿಲ್ಲ. ಈಗಿನ ಜೀವನ ಶೈಲಿಯಲ್ಲಿ ದೂರವಿದ್ದಷ್ಟೂ ಇನ್ನಷ್ಟೂ ದೂರವಾಗುತ್ತೇವೆ. ಅಂತರ ಕಡಿಮೆ ಮಾಡಿಕೊಳ್ಳಲು ಆರ್ಕುಟ್‌ನಲ್ಲಿ ಗುಂಪು ಕಟ್ಟಿಕೊಳ್ಳುತ್ತೇವೆ.. ಚಾಟ್ ಮಾಡುತ್ತೇವೆ. ಇಮೇಲ್ ಮಾಡುತ್ತೇವೆ. ಎಲ್ಲವೂ ಸರಿ. ಆದರೆ ಎದುರಿಗೆ ಸಿಕ್ಕಾಗ ತುಟಿಗಳಲ್ಲಿ ಒಂದು ಸಣ್ಣ ನಗೆ ಸಹ ಕಾಣಿಸುವುದಿಲ್ಲ.

ಒಂದು ಲಯಕ್ಕೆ ಜೀವನವನ್ನು ಜೋಡಿಸಿಕೊಂಡವರು ನಾವು. ಇಲ್ಲ ಹಾಗೆ ಅಂದುಕೊಂಡಿದ್ದೇವೆ. ಲಿಮಿಟ್ಟುಗಳನ್ನು ದಾಟಲಾಗದ ಅಸಹಾಯಕತೆಯನ್ನು ಅಪ್ಪಿಕೊಂಡಿದ್ದೇವೆ. ಸರಳತೆ, ಪ್ರಾಮಾಣಿಕತೆ, ಮೌಲ್ಯಗಳ ಬಗ್ಗೆ ನೀವು ಬಾಯಿಬಿಚ್ಚಿದರೆ, ವಿಚಿತ್ರ ಪ್ರಾಣಿಯಂತೆ ಸಮಾಜ ನೋಡುತ್ತದೆ.

ವ್ಯವಸ್ಥೆ ಭ್ರಷ್ಟಗೊಂಡಿದೆ ಎನ್ನುತ್ತಲೇ ನಾವು ಅದರ ಒಂದು ಭಾಗವಾಗುತ್ತೇವೆ. ಈ ಬಗ್ಗೆ ವಿವರಣೆ ನೀಡಲು ನಾವು ಜಾಣರಾಗಿದ್ದೇವೆ. ನಾಚಿಕೆ ಮರೆತು ಬಹಳ ಕಾಲವಾಯಿತು. ಆದರ್ಶಗಳ ಜಪಿಸುತ್ತಲೇ ದಾರಿ ತಪ್ಪುತ್ತೇವೆ. ಕ್ರಾಂತಿಗಳನ್ನು ಕೇಳಿ ಅಥವಾ ಕಂಡು ಪುಳಕಿತರಾಗುತ್ತೇವೆ. ಸಂಬಂಧಗಳ ಬಗ್ಗೆ ಗೌರವ ಉಳಿದಿಲ್ಲ. ಜನರ ಬಗ್ಗೆ ನಂಬಿಕೆ ಉಳಿದಿಲ್ಲ. ಎಲ್ಲವನ್ನೂ ಕಳೆದುಕೊಂಡು ಅನಾಥ ಪ್ರಜ್ಞೆ ಅನುಭವಿಸುವಾಗ ದೇವರು ನೆನಪಾಗುತ್ತಾನೆ. ಪ್ರಾರ್ಥನೆ ನೆನಪಾಗುತ್ತದೆ. ಬೆಳಗ್ಗೆ ಹ್ಯೂಮರ್ ಕ್ಲಬ್‌ಗಳಿಗೆ ಹೋಗಿ, ಬಲವಂತದಿಂದ ನಕ್ಕು ವಾಪಸ್ ಆಗುತ್ತೇವೆ.
‘ಬದುಕು ಎಂದರೆ ಇದಲ್ಲ ’ ಎಂದು ಆಗಾಗ ಸುಪ್ತ ಮನಸ್ಸು ಎಚ್ಚರಿಸುತ್ತಲೇ ಇರುತ್ತದೆ. ದುಡ್ಡಿನ ಝಣಝಣದ ಮಧ್ಯೆ ಅದರ ಸದ್ದು ಕ್ಷೀಣ. ನಾವು ಬದಲಾಗುವುದಿಲ್ಲ. ಬದಲಾಗುವುದು ಎಂದರೆ, ಸಿದ್ಧಾರ್ಥ ಅರ್ಧ ರಾತ್ರಿಯಲ್ಲಿ ಮನೆ ಬಿಟ್ಟು ಹೋದಂತೆಯೇ? ನನಗಂತೂ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳಲು, ಸದ್ಯದ ಕಮಿಟ್‌ಮೆಂಟ್‌ಗಳ ಮಧ್ಯೆ ಪುರುಸೊತ್ತಿಲ್ಲ. ಅವುಗಳು ಮುಗಿದರೆ ಇನ್ನಷ್ಟು ಕಮಿಟ್‌ಮೆಂಟ್‌ಗಳು.

(ವಿಜಯ ಕರ್ನಾಟಕದಲ್ಲಿ ಈ ಲೇಖನ ಜು.೧೭ರಂದು ಪ್ರಕಟಗೊಂಡಿದ್ದು, ಸ್ಥಳಾವಕಾಶ ಮತ್ತು ಇತರೆ ಕಾರಣಗಳಿಗೆ ತಕ್ಕಂತೆ ಕೆಲವು ಎಡಿಟ್‌ಗಳಾಗಿವೆ. ಲೇಖನದ ಮೂಲ ರೂಪ ಇಲ್ಲಿದೆ. )