ದೀಪಾವಳಿಯ ಬೆಳಕು ಎಲ್ಲಿಗೆ ಹೋಯಿತೊ?
ಚಟಪಟ ಪಟಾಕಿಯ ಸದ್ದು ಕಿವಿಯಿಂದ ಇನ್ನೂ ಕರಗಿಲ್ಲ
ಆಗಲೇ ಆಘಾತ! ಇಲ್ಲ ಪ್ರತಿ ಸಲವೂ ಮೋಸವಾಗುವುದಿಲ್ಲ
ನನಗೆ ನಂಬಿಕೆಗಳನ್ನು ಬಿಟ್ಟರೆ ಇನ್ನೇನು ಉಳಿದಿಲ್ಲ!
ನಂಬಿದವರು ಕೆಟ್ಟಿಲ್ಲ.. ಕೆಟ್ಟರೂ ನಾ ನಂಬುವುದ ಬಿಟ್ಟಿಲ್ಲ!
ಮತ್ತೆ ಅನ್ನಪೂರ್ಣೆ ಮೆತ್ತಗಾಗಿ ಮುಳ್ಳಿನ ಹಾಸಿಗೆ ಹಿಡಿದಿದ್ದಾಳೆ
ಅವಳ ಕೈ ಹಿಡಿದು ಆ ಮಾಯಗಾರನ ಮನೆಯಿಂದ
ಹೊರಗೆಳೆಯಲು ಶ್ವೇತಧಾರಿಗಳ ಹರಸಾಹಸ
ನಮ್ಮೆಲ್ಲರನ್ನೂ ಮೇಲೆತ್ತಿ ಆಡಿಸಿದ ಮಮತೆಯ ಕೈಗಳವು
ಅವು ಇನ್ನಷ್ಟು ಮಂದಿಯನ್ನೂ ಎತ್ತಿಯಾಡಿಸಲಿ
ಅವಳು ಬಸವಳಿದು ಧಣಿದವಳಂತೆ ಅಲ್ಲೀಗ ಮಲಗಿಲ್ಲ
ಈಗಲೂ ಕೈಗಳಲ್ಲಿ ಸಂಚಲನ ಮೂಡಿಸುವಷ್ಟು ಚೈತನ್ಯ
ಕಣ್ಗಳ ಗೂಡಿನಲ್ಲಿ ಎಲ್ಲರ ಜೋಪಾನವಾಗಿಡಲು ಯತ್ನ
ವಯಸ್ಸಾಯ್ತು ಅನ್ನುವವರು ನಾಚುವಷ್ಟು ಹುಮ್ಮಸ್ಸು
ಸೋತು ಅಡ್ಡ ಬೀಳಲೇ ಬೇಕೆಂಬಷ್ಟು ಮಹಾ ತೇಜಸ್ಸು
ಚಿಟ್ಟೆ ಫ್ರಾಕ್ ತೊಟ್ಟ ಚೋಟುದ್ದದ ಹುಡುಗಿಗೂ
ಇಲ್ಲದಷ್ಟು ಬಣ್ಣಬಣ್ಣದ ಭಾವ ಬಂಗಾರದ ಕನಸುಗಳು
ಎಲ್ಲರನ್ನೂ ಪೊರೆಯುವ, ಕ್ಷಮಿಸುವ ಅಭ್ಯುದಯದತ್ತ
ನಡೆಸುವ ಕಾಯಕ ಇನ್ನೂ ಮುಗಿದಿಲ್ಲವೆಂಬ ಚಿಂತೆಯ
ಕಾರ್ಮೋಡ ಕಂಡೂ ಕಾಣದಂತೆ..
ಸಾವು ಸಹಜ ಎಂಬುದು ನನಗೆ ಗೊತ್ತಿದೆ ಎನ್ನುವುದಾದರೆ
ಜ್ಞಾನನಿ ಅನ್ನಪೂರ್ಣೆಗೆ ತಿಳಿಯದಿರುತ್ತದೆಯೇ?
ಆದರೆ ಅವಳನ್ನು ಬಿಡಲು ನಾವು ಬಿಲ್‌ಕುಲ್ ತಯಾರಿಲ್ಲ,
ಮಾಯನರಮನೆಗೆ ತೆರಳಲೂ ಅವಳೂ ಸಿದ್ಧಳಿಲ್ಲ
ಸಾಗಿದೆ ಚೌಕಾಭಾರ.. ಬೀಳಲಿ ಬೇಕಾದ ನಾಲ್ಕು ಆರುಗಳು!
ಮಂಚ ಹತ್ತಲು ಹೋಗಿ ಕೈಮುರಿದುಕೊಂಡರೂ
ಆ ನೋವಿನ ಕೈಯಲ್ಲಿಯೇ ಗಲ್ಲ ಸವರುತ್ತಾಳೆ
ನೋವಲ್ಲೂ ನಗೆಯ ಚೆಲ್ಲುವ ಅವಳು ಇದೆಲ್ಲವನ್ನೂ
ಎಲ್ಲಿ ಕಲಿತಲೋ? ಯಾರು ಅವಳಿಗೆ ಕಲಿಸಿದರೋ?
ನಮಗೂ ಕಲಿಸಲು ಸಾಕಷ್ಟು ತಿಣುಕಿದಳು, ಆದರೆ ನಾವು ಮೊದ್ದುಗಳು!
ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಕಂಡದ್ದಾಯ್ತು
ಅವಳಿಗೆ ಸುಸ್ತಿಲ್ಲ. ಮನೆಯೆಂಬುದು ಇಂದಿಗೂ ಆಕೆ
ಪಾಲಿಗೆ ಆನಂದ ತುಂಬಿದ ಅನುರಾಗ ಸದನ.
ಆಕೆಯಿದ್ದರೇ ನಮಗದು ಸರಿಸಾಟಿಯಿಲ್ಲದ ಸ್ವರ್ಗ
ಕಾಲನ ಸುಳಿಯಲ್ಲಿ ಎಲ್ಲವೂ ಹಸಿಹಸಿ ಸುಳ್ಳುಗಳಾ?