Monthly Archives: ಜುಲೈ 2010

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..

ಸಾಮಾನ್ಯ

ಇಂದು(ಆಗಸ್ಟ್ ತಿಂಗಳ ಮೊದಲ ಭಾನುವಾರ) ‘ಅಂತಾರಾಷ್ಟ್ರೀಯ ಸ್ನೇಹ ದಿನ’. ಸ್ನೇಹವೆಂದರೆ ವ್ಯಾಪಾರವೇ, ಸ್ನೇಹವೆಂದರೆ ಹರಟೆಯೇ, ಸ್ನೇಹವೆಂದರೆ ಬಂಧವೇ, ಸ್ನೇಹವೆಂದರೆ ಅಮೃತವೇ, ಸ್ನೇಹವೆಂದರೆ ಹುಚ್ಚಾಟವೇ?

ನಾವು ಪರೀಕ್ಷೆಗೆ ಹೊರಟಾಗ ‘ಆಲ್ ದಿ ಬೆಸ್ಟ್’ ಎಂದು ಹೇಳುವವ ಮಿತ್ರ. ಅದೇ ಪರೀಕ್ಷೆ ಹಾಲ್‌ಗೆ ಬಂದು, ಕಾಪಿ ಚೀಟಿ ಎಸೆಯುವವ ಆಪ್ತಮಿತ್ರ! ತಪ್ಪು ಮಾಡಿ ನಾವು ಜೈಲು ಸೇರಿದಾಗ, ಜಾಮೀನಿಗಾಗಿ ನಮ್ಮ ಪರವಾಗಿ ಸುತ್ತಾಡುವವ ಮಿತ್ರ. ಪಕ್ಕದಲ್ಲೇ ಕೂತು, ಕಂಬಿ ಎಣಿಸುವವ ಆಪ್ತಮಿತ್ರ! – ಮಿತ್ರ ಮತ್ತು ಆಪ್ತಮಿತ್ರನಿಗಿರುವ ವ್ಯತ್ಯಾಸವನ್ನು ನನ್ನ ಗೆಳೆಯ ಪ್ರಹ್ಲಾದ ಮೊನ್ನೆ ವ್ಯಾಖ್ಯಾನಿಸಿದ್ದು ಹೀಗೆ!

ಪ್ರಹ್ಲಾದ ನಿಮಗೆ ಮಿತ್ರನೋ, ಆಪ್ತಮಿತ್ರನೋ ಎಂದು ಕೇಳಿ, ನನ್ನನ್ನು ಇಕ್ಕಟ್ಟಿಗೆ ತಳ್ಳಬೇಡಿ. ಪ್ರಹ್ಲಾದ ಹೇಳಿದ್ದು ಕುತರ್ಕ ಎಂದು ತಳ್ಳಿಹಾಕಿದರೂ, ಒಲಿತು-ಕೆಡಕಿಗೆಲ್ಲ ಸ್ನೇಹವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಬ್ಬ ವ್ಯಕ್ತಿಯ ಗುಣಾವಗುಣಗಳನ್ನು ಅಳೆಯಲು ಆತನನ್ನೇ ನೋಡಬೇಕು ಎಂದೇನಿಲ್ಲ, ಆತನ ಮಿತ್ರರನ್ನು ನೋಡಿದರೂ ಸಾಕು. ಅಂದಹಾಗೇ, ಸ್ನೇಹಿತರನ್ನು ಹುಡುಕಿಕೊಳ್ಳುವಾಗ ಎಚ್ಚರಿಕೆವಹಿಸಬೇಕಾ? ಅಳೆದೂ ತೂಗಿ ಮಾಡಿಕೊಳ್ಳುವ ಸಂಬಂಧ ಮದುವೆಯಾಗುತ್ತದೆಯೇ ಹೊರತು, ಸ್ನೇಹವಾಗಲು ಹೇಗೆ ಸಾಧ್ಯ?

‘ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು..’ ಎಂದು ಆರಂಭಗೊಳ್ಳುವ ಚೆನ್ನವೀರ ಕಣವಿ ಬರೆದಿದ್ದ ಪದ್ಯವೊಂದು ನಮಗೆ ಏಳನೇ ತರಗತಿಯಲ್ಲಿ ಪಠ್ಯವಾಗಿತ್ತು. ಗೆಳೆತನದ ಮಹತ್ವ ವಿವರಿಸುವ ಆ ಪದ್ಯವನ್ನು ಮೇಷ್ಟ್ರು ಓದುವಾಗ ಅದೇಕೋ ಪುಳಕಿತನಾಗಿದ್ದೆ.

‘ಗೆಳೆತನವೆ ಚಿರಬಾಳ ಸಂಜೀವಿನಿ ವಿಶ್ವದಂತಃಕರಣ ಮಂದಾಕಿನಿ’ ಮತು ‘ಜೀವ ಜೀವಕೆ ಇಂಬುಕಯ್ವವರು ನಾಲ್ವರಿರೆ ಚದುರಂಗ ಬಲವಿದಕೆ ಯಾವ ಸಾಟಿ’ ಎನ್ನುವ ಸಾಲುಗಳನ್ನು ಮರೆಯಲಾದೀತೆ?

‘ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ..
ಆಟದೆ ಸೋತು, ರೋಷದೆ ಕಚ್ಚಿದ;
ಗಾಯವ ಮರೆತಿಲ್ಲ ಅಹ ಅಹ!’

ಎನ್ನುತ್ತಾ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಳ್ಳುವುದೇ ಒಂದು ಆನಂದ. ಗೆಳೆಯರ ಜತೆ ಈಜಿದ್ದು, ಮಾವಿನ ಕಾಯಿ ಕದ್ದು ತಿಂದದ್ದು, ಊರೆಲ್ಲ ಸುತ್ತಿದ್ದು ಎಲ್ಲವೂ ಮನದ ಚಿತ್ರಶಾಲೆಯಲ್ಲಿ ಮಧುರಾತಿಮಧುರ ಚಿತ್ರಪಟಗಳು.

‘ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಎನ್ನುತ ನಾನು, ಕೆಣಕಲು ನಿನ್ನ,
ಎನ್ನುತ ನಾನು, ಕೆಣಕಲು ನಿನ್ನ ಉದಿಸಿದೆ ಕೆನ್ನೆ ಹೇ
ನಾನದ ಮರೆಯುವೆನೆ?’

ತುಂಬ ವರ್ಷಗಳ ನಂತರ ಹಳೆಯ ಗೆಳೆಯನೊಬ್ಬ ಆಕಸ್ಮಿಕವಾಗಿ ಸಿಕ್ಕಿದಾಗ, ಹಳೆಯ ನೆನಪುಗಳನ್ನು ಕೆದಕಿದಾಗ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಉಲ್ಲಾಸ. ಶಾಲಾ ದಿನಗಳಿಗೆ ಜಾರುವುದೇ ಒಂದು ಮಧುರ ಅನುಭೂತಿ. ಶಾಲೆಯ ಉಪ್ಪಿಟ್ಟು, ಸ್ವಾತಂತ್ರ್ಯ ದಿನಾಚರಣೆಯ ದಿನ ಧ್ವಜ ಹಿಡಿದು ಊರಲ್ಲಿ ಮೆರವಣಿಗೆ ಹೋಗಿದ್ದು, ಗಣೇಶೋತ್ಸವದಲ್ಲಿ ಸಂಭ್ರಮಿಸಿದ್ದು, ಡುಮ್ಮಿ ಮೇಡಂ ಸಿಟ್ಟು, ಮನೆಗೆ ನೀರು ತುಂಬಿಸಿದ ಥ್ರಿಲ್ ಮೇಷ್ಟ್ರ ದುರ್ಬುದ್ಧಿ -ಹೀಗೆ ಎಷ್ಟೊಂದು ವಿಷಯಗಳು.

‘ಮೈ ಆಟೋಗ್ರಾಫ್’ ಸಿನಿಮಾ ಯಶಸ್ಸಿಗೆ ಕಾರಣವಾದದ್ದು ಸ್ನೇಹದ ಭಾವ. ಗೆಳೆಯರನ್ನೆಲ್ಲ ಮದುವೆ ವೇಳೆ ಸೇರಿಸುವ ಚಿತ್ರದ ನಾಯಕನ ಸಂಭ್ರಮವನ್ನು ಪ್ರೇಕ್ಷಕರೂ ಹಂಚಿಕೊಂಡರು.

ಒಳ್ಳೆಯ ಸ್ನೇಹಿತನೊಬ್ಬ ಜತೆಯಲ್ಲಿದ್ದರೆ ಏಳು ಬೆಟ್ಟಗಳ ಹತ್ತಿಳಿದು, ಸಪ್ತ ಸಾಗರಗಳ ಈಜುವುದು ಕಷ್ಟವಾಗಲಾರದು! ಎಲ್ಲವೂ ಕಮರ್ಷಿಯಲೈಜ್ ಆಗುತ್ತಿರುವ ಈ ದಿನಗಳಲ್ಲಿ ಸ್ನೇಹವೂ ಮಾರಾಟದ ಸರಕು. ಸ್ನೇಹಿತರು ಬೇಕಾ? ಸ್ನೇಹಿತರಿಗಾಗಿ ಕಾಲ್ ಮಾಡಿ, ಚಾಟ್ ಮಾಡಿ ಎನ್ನುವ ಜಾಹೀರಾತುಗಳು ಅಚ್ಚರಿಯಾಗೇನೂ ಇಂದು ಉಳಿದಿಲ್ಲ.

ಉತ್ತಮ ಅಥವಾ ಮಾದರಿ ಸ್ನೇಹಕ್ಕೆ ರಾಮಾಯಣ ಮತ್ತು ಮಹಾಭಾರತದಲ್ಲೂ ಉದಾಹರಣೆಗಳಿವೆ. ಅಲ್ಲಿ ಅಪ್ತ ಸ್ನೇಹಿತರಿದ್ದಾರೆ. ರಾಮಾಯಣದಲ್ಲಿ ಸುಗ್ರೀವ ಮತ್ತು ರಾಮನ ಸ್ನೇಹ, ಮಹಾಭಾರತದಲ್ಲಿ ಕೃಷ್ಣ ಮತ್ತು ಅರ್ಜುನನ ಸ್ನೇಹವನ್ನು ಕಾಣಬಹುದು. ಇಲ್ಲಿ ಸ್ನೇಹಕ್ಕಿಂತಲೂ ಅನುಕೂಲಸಿಂಧು ಮೈತ್ರಿಯೇಎದ್ದು ಕಾಣುತ್ತದೆ. ಇವರೆಲ್ಲರಿಗಿಂತಲೂ ಮಿಗಿಲಾದ ಸ್ನೇಹ ದುರ್ಯೋಧನ ಮತ್ತು ಕರ್ಣ ಅವರದು.

ಒಂದು ಸಲ ದುರ್ಯೋಧನನ ಪತ್ನಿ ಭಾನುಮತಿ ಮತ್ತು ಕರ್ಣ ಪಗಡೆಯಾಡುತ್ತಿರುತ್ತಾರೆ. ಪಗಡೆಯಾಟದಲ್ಲಿ ಸೋತ ಭಾನುಮತಿ, ತಾನು ಪಣವಾಗಿಟ್ಟಿದ್ದ ಸರವನ್ನು ನೀಡಲು ನಿರಾಕರಿಸುತ್ತಾಳೆ. ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕರ್ಣನು ಎಳೆದಾಗ ಅದು ಹರಿದು ಮಣಿಗಳು ಚೆಲ್ಲಾಪಿಲ್ಲಿಯಾಗುತ್ತವೆ. ಅದೇ ಸಮಯಕ್ಕೆ ಅಲ್ಲಿಗೆ ದುರ್ಯೋಧನ ಪ್ರವೇಶಿಸುತ್ತಾನೆ. ಭಾನುಮತಿ ಮತ್ತು ಕರ್ಣನಿಗೆ ಒಂದು ಕ್ಷಣ ಏನು ಮಾಡಬೇಕು ಎಂಬುದೇ ದೋಚುವುದಿಲ್ಲ.

ಆಗ ದುರ್ಯೋಧನ ನೆಲದಲ್ಲಿ ಬಿದ್ದಿದ್ದ ಮಣಿಗಳನ್ನು ಆಯುತ್ತಾ, ‘ಪಣವೆಂದರೆ ಪಣ. ನೀನು ಗೆದ್ದಿರುವೆ. ಸರ ನಿನಗೇ ಸೇರಬೇಕು. ಒಂದು ಮಣಿಯನ್ನೂ ಬಿಡಬೇಡ. ಎಲ್ಲವೂ ನಿನ್ನದೇ. ಎಲ್ಲ ಮಣಿಗಳನ್ನೂ ನಾನೇ ಆಯ್ದು ಕೊಡುತ್ತೇನೆ’ ಎನ್ನುತ್ತಾನೆ.

ಆ ಸಂದರ್ಭದಲ್ಲಿ ಬೇರೆ ಯಾರಾದರೂ ಆಗಿದ್ದರೆ ಮಿತ್ರನ ವಿರುದ್ಧ ಕಿಡಿಕಾರುತ್ತಿದ್ದರು. ಕರ್ಣನ ಸಲಿಗೆಯನ್ನು ತಪ್ಪಾಗಿ ಭಾವಿಸುತ್ತಿದ್ದರು. ಆದರೆ ದುರ್ಯೋಧನನಿಗೆ ಕರ್ಣ ಎಂಥವನು ಎಂಬುದು ಗೊತ್ತಿತ್ತು.

ಕಾಲವನ್ನು ತಡೆಯೋರು ಯಾರೂ ಇಲ್ಲ ಎಂಬಂತೆ ದಿನಗಳು ಬದಲಾಗಿವೆ. ಆದರೂ ಸ್ನೇಹದ ಮಹತ್ವ, ಸ್ನೇಹದ ದಾಹ ಮನುಷ್ಯರಲ್ಲಿ ಹಿಂಗಿಲ್ಲ. ಹೀಗಾಗಿಯೇ ಆರ್ಕುಟ್, ಫೇಸ್‌ಬುಕ್, ಟ್ರಿಟರ್‌ನಂತಹ ಸೋಷಿಯಲ್ ನೆಟ್‌ವರ್ಕ್ ವೆಬ್‌ಸೈಟ್‌ಗಳು ಜನಪ್ರಿಯ. ಇದು ಚಾಟಿಂಗ್ ಫ್ರೆಂಡ್ಸ್, ಫೋನ್ ಫ್ರೆಂಡ್ಸ್‌ಗಳ ಕಾಲ.

ಸ್ನೇಹ ಅರಳಲು ಯಾವುದೇ ಕಾರಣಗಳು ಬೇಕಿಲ್ಲ. ಅವನ್ಯಾರೋ, ಇವನ್ಯಾರೋ? ಗೆಳೆಯರಾಗುವ ಮುನ್ನ ಅಪರಿಚಿತರು. ನಂತರ ಫೆವಿಕಾಲ್ ಹಾಕಿದಂತೆ ಅಂಟಿಕೊಳ್ಳುತ್ತಾರೆ. ಪರಿಚಯಕ್ಕೆ ಕಾರಣಗಳಿರುತ್ತವೆಯೇ ಹೊರತು, ಗೆಳೆತನಕ್ಕೆ ಕಾರಣಗಳಿರುವುದಿಲ್ಲ. ಕಾರಣಗಳಿದ್ದರೇ, ಅದು ಗೆಳೆತನವಾಗಲು ಹೇಗೆ ಸಾಧ್ಯ?

ನಮ್ಮ ತಂದೆ ಹೇಳುತ್ತಿದ್ದರು; ‘ನಾವು ಪರಿಚಿತರನ್ನೆಲ್ಲ ಗೆಳೆಯರೆಂದೇ ಕರೆಯುತ್ತೇವೆ. ಪರಿಚಿತರೇ ಬೇರೆ. ಗೆಳೆಯರೇ ಬೇರೆ. ನನ್ನ ಈ ಸುದೀರ್ಘ ಬದುಕಿನಲ್ಲಿ ನನಗೆ ಸಿಕ್ಕಿದ್ದು ಒಬ್ಬನೇ ಒಬ್ಬ ಗೆಳೆಯ. ಅಂತಹ ಒಬ್ಬ ಗೆಳೆಯ ಸಿಕ್ಕರೂ ಸಾಕು, ನೂರು ಆನೆಯ ಶಕ್ತಿ ಬರುತ್ತದೆ’.

ಒಂದೇ ತರಗತಿಯಲ್ಲಿ ಓದಿದ ಮಾತ್ರಕ್ಕೆ, ಅಕ್ಕಪಕ್ಕ ಕೂತ ಮಾತ್ರಕ್ಕೆ, ಒಂದೇ ಕಚೇರಿಯಲ್ಲಿ ಕೆಲಸ ಮಾಡಿದ ಮಾತ್ರಕ್ಕೆ ಗೆಳೆಯರಾಗಲು ಸಾಧ್ಯವೇ? ಎರಡು ಹೃದಯಗಳಲ್ಲಿ ಸ್ನೇಹದ ಹೊಳೆ ಹರಿಯದಿದ್ದರೇ, ಬಂಧವೂ ಇಲ್ಲ, ಸಂಬಂಧವೂ ಇಲ್ಲ.

ಸ್ನೇಹದ ಬಗ್ಗೆ ದಿನಕ್ಕೆ ಹತ್ತು ಎಸ್ಸೆಮ್ಮೆಸ್ ಕಳಿಸುವ ವ್ಯಕ್ತಿಯ ಬಳಿ, ಒಂದೇ ಒಂದು ಸಹಾಯ ಕೇಳಿ ನೋಡಿ.. ಬಣ್ಣ ಬಯಲಾಗುತ್ತದೆ. ಆತ ನಿಮಗಾಗಿ ಯಾರೋ ಕಳಿಸಿದ ಎಸ್ಸೆಮ್ಮೆಸ್‌ಗಳನ್ನಷ್ಟೇ ಫಾರ್ವರ್ಡ್ ಮಾಡುತ್ತಾನೆ! ಎಸ್ಸೆಮ್ಮೆಸ್ ಸೇವೆ ಅವರ ಮೊಬೈಲ್‌ನಲ್ಲಿ ಉಚಿತವಿದ್ದರೇ ಮಾತ್ರ ಈ ಸೇವೆ ಮುಂದುವರಿಯುತ್ತದೆ! ಇವರನ್ನು ‘ಎಸ್ಸೆಮ್ಮೆಸ್ ಗೆಳೆಯ’ ಎನ್ನೋಣವೇ?

ನಾನು ಪದವಿ ತರಗತಿಯಲ್ಲಿ ಓದುವಾಗ ಒಬ್ಬ ಪರಿಚಿತನಾಗಿದ್ದ. ಏನಾದರೂ ಸಹಾಯ ಬೇಕಿದ್ದರೆ ಮಾತ್ರ ಜೊತೆಯಲ್ಲಿರುತ್ತಿದ್ದ. ಈಗಲೂ ಅವನು ಕರೆ ಮಾಡಿದನೆಂದರೆ, ‘ನಟೇಶ ನಿನ್ನಿಂದ ನನಗೊಂದು ಹೆಲ್ಪ್ ಆಗಬೇಕಿತ್ತಲ್ಲ..’ ಎನ್ನುವುದೇ ಆತನ ಮೊದಲ ಮಾತು. ನಾನು ‘ಇಲ್ಲ’ ಎಂದರೆ, ಫ್ರೆಂಡ್‌ಗಾಗಿ ಇಷ್ಟೂ ಮಾಡುವುದಿಲ್ಲವೇ ಎಂಬ ಒಗ್ಗರಣೆ ಬೇರೆ ಇರುತ್ತದೆ.

ಇನ್ನೂ ಕೆಲವರಿರುತ್ತಾರೆ. ಅವರಿಗೆ ಅವರ ಕಷ್ಟಗಳಷ್ಟೇ ದೊಡ್ಡವು! ಸಮಯ ಸಿಕ್ಕರೇ ಸಾಕು, ಕಷ್ಟಗಳ ಪಟ್ಟಿಯನ್ನು ಒಪ್ಪಿಸುತ್ತಿರುತ್ತಾರೆ. ಸದಾ ಅನುಕಂಪವನ್ನು ಕೋರುತ್ತಿರುತ್ತಾರೆ. ಅವರದು ಮುಗಿಯದ ಗೋಳು. ಕಷ್ಟಗಳಿಲ್ಲದ ಮನುಷ್ಯರು ಜಗತ್ತಿನಲ್ಲಿ ಯಾರಿದ್ದಾರೆ ಹೇಳಿ? ಕಷ್ಟಗಳ ಮಧ್ಯೆಯೂ ಬದುಕುತ್ತಿರುವ ನಾವು ದೊಡ್ಡ ‘ಮಹಾತ್ಮ’ರು ಎಂದು ಬಿಂಬಿಸಿಕೊಳ್ಳುವ ಕೆಲವರ ಕಾಯಿಲೆಗೆ ಔಷಧಿಯಿಲ್ಲ.

ಜಾಗತೀಕರಣದ ಈ ದಿನಗಳಲ್ಲಿ ಗೆಳೆತನವನ್ನು ವ್ಯವಹಾರವಾಗಿ ಬದಲಿಸಿಕೊಳ್ಳಿ ಎನ್ನುವ ಸಲಹೆಗಳೂ ಇವೆ. ಎಲ್‌ಐಸಿ ಪಾಲಿಸಿಗಾಗಿ ಗಂಟು ಬೀಳುವ ಗೆಳೆಯರಿದ್ದಾರೆ. ನಮ್ಮ ಪಾಲಿಸಿ ಜೊತೆಗೆ ನಮ್ಮ ಆಪ್ತರ ಪಾಲಿಸಿಗಳನ್ನೂ ಕೊಡಿಸಬೇಕಂತೆ. ಇವರನ್ನು ‘ಎಲ್‌ಐಸಿ ಗೆಳೆಯ’ ಅನ್ನೋಣವೇ?

ಸ್ನೇಹ ಮಾಡುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ ಅನ್ನುತ್ತಾರೆ ಕೆಲವರು. ಉಳಿಸಿಕೊಳ್ಳಲು ಅದೇನು ಕದ್ದ ದುಡ್ಡಾ? ಉಳಿಯಲಿಲ್ಲ ಎಂದರೆ ಅಲ್ಲಿ ಸ್ನೇಹವಿರಲಿಲ್ಲ ಎಂದರ್ಥ. ಅಲ್ಲಿ ಪರಸ್ಪರ ಅವಶ್ಯಕತೆಗಳಿದ್ದವು ಅಷ್ಟೆ.

ಪ್ರೀತಿ, ಸಹೋದರ ಭಾವ, ರಕ್ಷಣೆ, ಮಾರ್ಗದರ್ಶನ, ಆತ್ಮೀಯತೆ, ಟೀಕೆ -ಇದೆಲ್ಲವೂ ಗೆಳೆತನದಲ್ಲಿ ಇವೆ. ಜತೆಗೆ ಇನ್ನೂ ಏನೇನೋ ಇದೆ. ‘ನನಗೊಬ್ಬ ಒಳ್ಳೆಯ ಗೆಳೆಯ ಸಿಕ್ಕಲಿಲ್ಲ’ ಎಂದು ನಾವು ಆಗಾಗ ಗೊಣಗುತ್ತಿರುತ್ತೇವೆ ಅಥವಾ ಯಾರಿಗಾದರೂ ಹೇಳುತ್ತಿರುತ್ತೇವೆ. ಆದರೆ, ‘ನಾನು ಒಳ್ಳೆ ಗೆಳೆಯನೇ?’ ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದು ನಮ್ಮತ್ರ ಇರೋದಿಲ್ವೋ ಅದನ್ನು ಇನ್ನೊಬ್ಬರಲ್ಲಿ ಹುಡುಕುವ ಸ್ವಭಾವ ನಮ್ಮದು!

ಫ್ರೆಂಡ್‌ಶಿಫ್‌ಗೊಂದು ಡೇ!

ಅಮ್ಮನಿಗೊಂದು ದಿನ, ಅಪ್ಪನಿಗೊಂದು ದಿನ, ಪ್ರೇಮಿಗಳಿಗೊಂದು ದಿನ ಇದ್ದ ಮೇಲೆ ಗೆಳೆತನಕ್ಕೊಂದು ದಿನ ಬೇಡವೇ? ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ‘ಅಂತಾರಾಷ್ಟ್ರೀಯ ಸ್ನೇಹ ದಿನ’ವಾಗಿ ಆಚರಿಸಲಾಗುತ್ತಿದೆ. ಆ ದಿನವನ್ನು ಗೆಳೆಯರಿಗೆ ಅರ್ಪಿಸುವ ಪರಿಪಾಠವನ್ನು ಆರಂಭಿಸಿದ್ದು ಅಮೆರಿಕ. ೧೯೩೫ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ಫ್ರೆಂಡ್‌ಶಿಫ್ ಡೇ ಎಂದು ಅಮೆರಿಕದ ಸಂಸತ್ ಘೋಷಿಸಿತು. ಅದು ಹೀಗೆಯೇ ಮುಂದುವರಿದಿದೆ. ಅಮೆರಿಕದಲ್ಲಿ ಇದು ಜನಪ್ರಿಯವಾದ ನಂತರ ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳೂ ಈ ಪದ್ಧತಿಯನ್ನು ಅನುಸರಿಸುತ್ತಿವೆ. ಶಾಲೆ ಕಾಲೇಜುಗಳಲ್ಲಿ ಫ್ರೆಂಡ್‌ಶಿಫ್ ಕ್ರೇಜ್ ಆರಂಭಗೊಂಡಿದೆ. ಫ್ರೆಂಡ್‌ಶಿಫ್ ಕಾರ್ಟ್, ಗಿಫ್ಟ್, ಫ್ರೆಂಡ್‌ಶಿಫ್ ಬ್ಯಾಂಡ್‌ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಆನ್‌ಲೈನ್‌ನಲ್ಲೂ ಮಾರಾಟದ ಭರಾಟೆ ಕಾಣಿಸುತ್ತಿದೆ. ಸ್ನೇಹವನ್ನು ವಾಣಿಜ್ಯೀಕರಣ ಮಾಡಲಾಗಿದ್ದು, ಫ್ರೆಂಡ್‌ಶಿಫ್ ಡೇ ಎನ್ನುವುದು ಮಾರ್ಕೆಂಟಿಂಗ್ ಗಿಮಿಕ್.

ಏನು ಕೊಡಲಿ ಗಿಫ್ಟ್?
ಶುಭಾಶಯ ಪತ್ರ, ನೆಚ್ಚಿನ ಸಿ.ಡಿ ಅಥವಾ ಪುಸ್ತಕ, ಶೋ ಫೀಸ್, ಫೋಟೊ ಫ್ರೇಮ್, ಫೋಟೊ ಆಲ್ಬಮ್, ಪೆನ್ನು, ಡೈರಿ, ಬರೆಯುವ ಪ್ಯಾಡ್, ಗಡಿಯಾರ, ಬೀಗದ ಕೈ, ಪೆನ್ ಸ್ಟ್ಯಾಂಡ್, ಎಲೆಕ್ಟ್ರಾನಿಕ್ ನೋಟ್‌ಬುಕ್ ಮತ್ತಿತರ ವಸ್ತುಗಳನ್ನು ಮಿತ್ರರಿಗೆ ನೀಡುವ ಪರಿಪಾಠ ಬೆಳೆದು ಬಂದಿದೆ. ಇದೆಲ್ಲದರ ಬದಲಿಗೆ ಗೆಳೆಯನಿಗಾಗಿ ನಿಮ್ಮ ‘ಬೆಲೆಕಟ್ಟಲಾಗುವ ಸಮಯ’ವನ್ನು ಕೊಡಬಹುದು! ನಿಜ ಹೇಳಿ, ನಿಮ್ಮ ಜೀವದ ಗೆಳೆಯನನ್ನು ಭೇಟಿ ಮಾಡಿ ಎಷ್ಟು ದಿನ ಅಥವಾ ವರ್ಷವಾಯಿತು? ಅಟ್ ಲೀಸ್ಟ್ ಫೋನ್ ಮಾಡಿ ಯಾವ ಕಾಲವಾಯಿತು?