ಮಳೆಗೂ ಮುಂಬಯಿಗೂ ಎಲ್ಲಿಲ್ಲದ ನಂಟು. ಮಹಾಮಳೆಯಿಂದ ಆಗಾಗ ಕಂಗಾಲಾಗುವ ಮಹಾನಗರಿ, ಈ ಸಲ ಉಗ್ರರ ಗುಂಡಿನ ಮಳೆಯಿಂದ ತತ್ತರಿಸಿತು. ಉಗ್ರರ ಕರಿನೆರಳಲ್ಲಿ ಮುಂಬಯಿ ಸಿಲುಕಿದ್ದ ಮೂರು ದಿನ, ಅದರಲ್ಲೂ ಮೊದಲ ಎರಡು ದಿನ ದೇಶಕ್ಕೆ ದೇಶವೇ ಬೆಚ್ಚಿ ಕುಳಿತಿತ್ತು. ಜನರು ಟಿ.ವಿ ಚಾನೆಲ್‌ಗಳ ಬಿಟ್ಟು ಕದಲಲಿಲ್ಲ. ಪತ್ರಿಕೆಗಳಲ್ಲಿನ ಎಲ್ಲ ಅಕ್ಷರಗಳನ್ನು ಓದಿ ಜೀರ್ಣಿಸಿಕೊಂಡರು. ಏನಾಗುವುದೊ? ಎಂಬ ಆತಂಕ ಎಲ್ಲರ ಮನದಲ್ಲಿ.
ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತ ಜನರು, ದೇಶದ ಪರಿಸ್ಥಿತಿಯನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಿದರು. ಉಗ್ರರು ಕೈಗೆ ಸಿಕ್ಕಿದರೆ ಸಿಗಿದು ಹಾಕುವಂತೆ ಕೆಲವರು ಅಬ್ಬರಿಸಿದರು. ತಾವೇ ಭಯೋತ್ಪಾದಕರ ಒತ್ತೆಯಾಳಾದಂತೆ ಅನೇಕರು ತತ್ತರಿಸಿದರು. ಕಮಾಂಡೊಗಳ ಧೈರ್ಯ ಮತ್ತು ಸಾಹಸಕ್ಕೆ ಜನ ಭೇಷ್‌ಗಿರಿ ನೀಡಿದರು.
ಇಂದು ಮುಂಬೈನಲ್ಲಿ ಆದದ್ದು, ನಾಳೆ ನಮ್ಮೂರಿನಲ್ಲಿ ಆದರೂ ಅಚ್ಚರಿಯಿಲ್ಲ ಎನ್ನುವುದನ್ನು ಊಹಿಸಿಕೊಂಡು ಕಂಗಾಲಾದರು. ‘ನಮಗಿನ್ಯಾರು ದಿಕ್ಕು? ರಕ್ಷಣೆ ನೀಡುವವರ್‍ಯಾರು?’ ಎಂದು ಎತ್ತ ನೋಡಿದರೂ, ಭರವಸೆಯ ಬೆಳಕು ಮಾತ್ರ ಜನರಿಗೆ ಕಾಣಿಸಲಿಲ್ಲ. ಒಂದು ರೀತಿಯಲ್ಲಿ ಸರ್ವಸ್ವವೇ ಅಗಿದ್ದ ಅಮ್ಮನನ್ನು ಕಳೆದುಕೊಂಡು ಪುಟ್ಟ ಕಂದಮ್ಮ, ಸಂತೆಯಲ್ಲಿ ನಿಂತಂಥ ಅನಾಥ ಭಾವ!
ಆದರೆ ಎಲ್ಲವೂ ನಿಧಾನವಾಗಿ ತಿಳಿಯಾಗುತ್ತಿದೆ. ಕಾಲವೆನ್ನುವ ಮಾಂತ್ರಿಕ ಎಲ್ಲವನ್ನೂ ಮರೆಸುತ್ತಾನೆ. ಅದರಲ್ಲೂ ಭಾರತೀಯರ ನೆನಪಿನ ಶಕ್ತಿ ತುಂಬ ಕಡಿಮೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮತ್ತೊಂದು ಉಗ್ರರ ದಾಳಿಯಾಗುವ ತನಕ, ಜನರಿಗೆ ಭಯೋತ್ಪಾದನೆಯ ಕಾವು ತಟ್ಟುವುದಿಲ್ಲ. ಗೃಹ ಸಚಿವ ಶಿವರಾಜ್ ಪಾಟೀಲ್‌ರ ತಲೆದಂಡದ ಮೂಲಕ, ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ಯುಪಿಎ ಸರಕಾರ ಮುಂದಾಗಿದೆ. ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಹಾಕುವುದಾಗಿ ಅಬ್ಬರಿಸಿದೆ. ಪ್ರತಿ ದುರ್ಘಟನೆ ಸಂದರ್ಭದಲ್ಲೂ ಇದು ಮಾಮೂಲಿ ಪ್ರಕ್ರಿಯೆಯಾಗಿದ್ದು, ಜನರಿಗೆ ವಿಶ್ವಾಸವಿಲ್ಲ.
‘ಮುಸ್ಲಿಂರೆಲ್ಲರೂ ಭಯೋತ್ಪಾದಕರಲ್ಲ, ಆದರೆ ಎಲ್ಲ ಭಯೋತ್ಪಾದಕರೂ ಮುಸ್ಲಿಮರೇ’ ಎಂಬ ಹೇಳಿಕೆಯನ್ನು ಪದೇಪದೆ ಹೇಳುತ್ತಾ ಬಂದಿದ್ದ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಮಾಲೆಗಾಂವ್ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ‘ಹಿಂದೂ ಉಗ್ರವಾದಿಗಳು’ ಎಂಬ ಪದವನ್ನೇ ಜಗ್ಗಾಡಿದ ಕಾಂಗ್ರೆಸ್ ನಾಯಕರು, ಬಿಜೆಪಿಯನ್ನು ಕೆಣಕಲು ಪ್ರಯತ್ನಿಸಿದರು. ಉಭಯ ಪಕ್ಷಗಳ ಒಣ ಜಗಳದತ್ತ ದೇಶ ಗಮನ ನೀಡಿದ್ದ ಸಂದರ್ಭದಲ್ಲಿಯೇ ಮುಂಬಯಿ ಮೇಲೆ ಉಗ್ರರು ದಾಳಿ ಮಾಡಿದರು. ‘ಇಬ್ಬರ ಜಗಳ ಮೂರನೆಯವನಿಗೆ ಲಾಭ ’ ಎಂದರೆ ಇದೇ ಏನೋ?
‘ಭಯೋತ್ಪಾದನೆ ’ ಎನ್ನುವುದನ್ನು ಧರ್ಮಗಳ ನೆಲೆಯಲ್ಲಿಯೇ ನೋಡುವ ಪರಿಪಾಠ ಅನೇಕರದು. ಯಾವ ಧರ್ಮವೂ ಭಯೋತ್ಪಾದನೆಯನ್ನು, ಅದರಲ್ಲೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ‘ಧರ್ಮ’ ಎಂದರೆ ಬದುಕನ್ನು ಚೆಂದಗೊಳಿಸುವ ಮಾರ್ಗ. ಯಾವ ಧರ್ಮವೂ ಅಂತಿಮವಲ್ಲ. ಯಾವುದೂ ಪರಿಪೂರ್ಣವಲ್ಲ. ಲೋಪದೋಷಗಳು ಇದ್ದದ್ದೆ. ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನಷ್ಟೆ ನಾವು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಆಗುತ್ತಿರುವುದಾದರೂ ಏನು? ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ಧರ್ಮದಿಂದಲೇ ಮುಕ್ತಿ ಎಂಬ ಗದ್ದಲದಲ್ಲಿ ನಿಜವಾದ ಮಾನವೀಯ ಧರ್ಮವನ್ನೇ ಎಲ್ಲರೂ ಮರೆತಿದ್ದಾರೆ. ಹೀಗಾಗಿಯೇ ಹಿಂಸೆ ಮತ್ತು ಕ್ರೌರ್ಯಗಳು ಹೆಚ್ಚುತ್ತಿವೆ.
ದೇಶದಲ್ಲಿ ಭ್ರಷ್ಟರ ಸಂಖ್ಯೆ ಹೆಚ್ಚುತ್ತಿದೆ. ಕಳ್ಳ-ಖದೀಮರ ಗುಂಪು ದೊಡ್ಡದಾಗುತ್ತಿದೆ. ಸಂಬಂಧಗಳು ವಾಣಿಜ್ಯೀಕರಣಗೊಳ್ಳುತ್ತಿವೆ. ಸುಳ್ಳು ಹೇಳುವುದು, ಲಂಚ ತಿನ್ನುವುದು ಅವಮಾನ ಅಥವಾ ತಪ್ಪು ಎಂದು ಯಾರಿಗೂ ಅನ್ನಿಸುತ್ತಿಲ್ಲ. ಪರಿಸ್ಥಿತಿ ಹೀಗಾಗಿದೆ ಎಂದರೆ ಧರ್ಮಗಳು ಜನರನ್ನು ಸರಿದಾರಿಗೆ ತರುವಲ್ಲಿ ವಿಫಲವಾಗಿವೆ ಎಂದರ್ಥ. ಬಡತನ, ನಿರುದ್ಯೋಗದಂಥ ಸಮಸ್ಯೆಗಳ ಬಗ್ಗೆ ಹೊಟ್ಟೆ ತುಂಬಿದವರು ಯೋಚಿಸುತ್ತಿಲ್ಲ. ಧರ್ಮದ ಗದ್ದಲದಲ್ಲಿ ಮೂಲ ಸಮಸ್ಯೆ-ಸವಾಲುಗಳನ್ನು ಮರೆತಿದ್ದೇವೆ.
ಮುಸ್ಲಿಂರಲ್ಲಿ ಅಥವಾ ಹಿಂದೂಗಳಲ್ಲಿ ಉಗ್ರಗಾಮಿಗಳಿದ್ದಾರೆ ಎಂದ ಮಾತ್ರಕ್ಕೆ ಹಿಡೀ ಜನಾಂಗವನ್ನು ಅನುಮಾನದಿಂದ ನೋಡಬೇಕಿಲ್ಲ. ಯಾರೋ ಮಾಡಿದ ತಪ್ಪಿಗೆ ಹಿಡೀ ಜನಾಂಗವನ್ನು ಹೊಣೆಯಾಗಿಸುವುದು, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ. ಅದರ ಸ್ವರೂಪವನ್ನು ಅರಿಯಲು ನನ್ನ ಗೆಳೆಯನಿಗಾದ ಅನುಭವವನ್ನು ಇಲ್ಲಿ ಹೇಳುವುದು ಸೂಕ್ತ.
ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಎಂಸಿಜೆ ತೆಗೆದುಕೊಂಡಿದ್ದ ನನ್ನ ಗೆಳೆಯನೊಬ್ಬ, ವಿವಿಯ ಸಂಪರ್ಕ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ೫ ದಿನ ಉಳಿದುಕೊಳ್ಳಲು ಹೋಟೆಲ್‌ನಲ್ಲಿ ರೂಮ್ ಪಡೆಯಲು ನಿರ್ಧರಿಸಿ, ಎಲ್ಲೆಡೆ ಸುತ್ತಾಡಿ ಒಂದು ಹೋಟೆಲ್‌ಗೆ ಹೋದ. ಕೇಳಿದಷ್ಟು ದಿನದ ಬಾಡಿಗೆ ಮತ್ತು ಅಡ್ವಾನ್ಸ್‌ನ್ನು ಕೊಡಲು ಒಪ್ಪಿದ ಕಾರಣ, ಹೋಟೆಲ್ ಸಿಬ್ಬಂದಿ ರೂಂ ಕೊಡಲು ಉತ್ಸಾಹ ತೋರಿದರು.
ನೋಂದಣಿ ಪುಸ್ತಕ ತೆರೆದು ‘ನಿಮ್ಮ ಹೆಸರು?’ ಎಂದರು. ಅವನು ‘ಇಸ್ಮತ್’ ಎಂದಾಕ್ಷಣ, ಪ್ರಶ್ನೆಗಳ ಸುರಿಮಳೆ ಆರಂಭವಾಯಿತು. ‘ನೀವ್ಯಾರು? ಬೆಂಗಳೂರಿಗೆ ಯಾಕೆ ಬಂದಿರಿ? ನಿಮ್ಮ ಊರ್‍ಯಾವುದು?’ -ಹೀಗೆ ಪ್ರಶ್ನೆಗಳ ರಾಶಿ. ಸಮಾಧಾನದಿಂದಲೇ ನನ್ನ ಗೆಳೆಯ ತನ್ನ ಬಗ್ಗೆ, ತಾನು ಬೆಂಗಳೂರಿಗೆ ಬಂದ ಉದ್ದೇಶದ ಬಗ್ಗೆ ಹೇಳಿದ. ಅವರು ನಂಬಲು ಸುತಾರಾಂ ಒಪ್ಪಲಿಲ್ಲ. ನನ್ನ ಗೆಳೆಯನಲ್ಲಿ ಒಬ್ಬ ಉಗ್ರಗಾಮಿಯನ್ನು ಅವರು ಕಂಡಿದ್ದರು!
‘ನೀವು ವಿದ್ಯಾರ್ಥಿ’ ಎನ್ನುವುದಾದರೆ ಗುರುತಿನ ಚೀಟಿ ತೋರಿಸಿ ಎಂದು ಪಟ್ಟು ಹಿಡಿದರು. ಪುಣ್ಯಕ್ಕೆ ಗುರುತಿನ ಚೀಟಿ ಸೂಟ್‌ಕೇಸ್‌ನಲ್ಲಿತ್ತು. ಗುರುತಿನ ಚೀಟಿ ತೋರಿಸಿದರೂ ಮುಗಿಯದ ಸಂಶಯ. ಒಲ್ಲದ ಮನಸ್ಸಿನಿಂದಲೇ ತಂಗಲು ಜಾಗ ಕೊಟ್ಟರು.
‘ಇಂಥ ಅನುಭವ ಹಿಂದೆಯೂ ಒಂದೆರಡು ಸಲ ಆಗಿದೆ. ಭಯೋತ್ಪಾದಕರ ಬೆದರಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಅನಿವಾರ್ಯ. ಒಪ್ಪೋಣ. ಆದರೆ ನಾನು ಮತ್ತು ನನ್ನಂಥವರು ಮಾಡಿದ ತಪ್ಪೇನು? ನನಗಾದ ಅವಮಾನಕ್ಕೆ ಯಾರನ್ನು ಹೊಣೆ ಮಾಡಲಿ. ನಮ್ಮಂಥವರಿಗೆ ಯಾರು ಸಾಂತ್ವನ ಹೇಳುತ್ತಾರೆ? ದೇಶದ ಬಗ್ಗೆ ನಮಗೇನು ಪ್ರೀತಿಯಿಲ್ಲವೇ? ನಾವು ಇಲ್ಲೇ ಹುಟ್ಟಿ ಬೆಳೆದವರಲ್ಲವೇ? ಅವರು ವಿರೋಸುತ್ತಿರುವುದು ಭಯೋತ್ಪಾದಕರನ್ನೋ, ಮುಸ್ಲಿಂರನ್ನೋ?’ಎನ್ನುವ ಗೆಳೆಯನಿಗೆ ಉತ್ತರ ನೀಡಲು ನನ್ನಲ್ಲಿನ ಪದಗಳು ಸಾಲಲಿಲ್ಲ.
ಮುಂಬಯಿ ದಾಳಿ ನಡೆದ ದಿನ ಬಸ್‌ನ ಹಿಂದಿನ ಸೀಟಿನಲ್ಲಿದ್ದ ನಾಲ್ಕೈದು ಜನ ಭಯೋತ್ಪಾದನೆ ಬಗ್ಗೆ ಚರ್ಚಿಸುತ್ತಿದ್ದರು. ಅವರ ಮುಂದಿನ ಸೀಟಿನಲ್ಲಿ ಮುಸ್ಲಿಂ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಕೂತಿದ್ದರು. ‘ಮುಸ್ಲಿಮರನ್ನು ದೇಶದಿಂದ ಹೊರಗಟ್ಟುವ ತನಕ ಭಾರತಕ್ಕೆ ಭವಿಷ್ಯವಿಲ್ಲ ’ ಎಂಬ ಮಾತು ಹಿಂದಿನ ಸೀಟಿನಿಂದ ಪದೇಪದೆ ಕೇಳಿ ಬರುತ್ತಿತ್ತು. ‘ನಾವೇನ್ ತಪ್ಪು ಮಾಡಿದ್ದೇವೆ. ನಮ್ಮನ್ಯಾಕೆ ಹೊರಗಟ್ಟಬೇಕು?’ ಎಂದು ಅಮಾಯವಾಗಿ ಹೆತ್ತವರನ್ನು ಕೇಳಿದ ಮಗುವಿನ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಭಯೋತ್ಪಾದನೆಯೆಂಬ ವಿಷವೃಕ್ಷವನ್ನು ಕತ್ತರಿಸಲು ಹೊರಟ ನಾವುಗಳು ಇಂಥ ಸೂಕ್ಷ್ಮಗಳನ್ನು ಗಮನಿಸಬೇಕು.
ಭಯೋತ್ಪಾದಕರನ್ನು ಮಟ್ಟಹಾಕುವುದು ಹೇಗೆ ಎಂಬ ನಿಟ್ಟಿನಲ್ಲಿ ಆಲೋಚಿಸುತ್ತ, ಭಯೋತ್ಪಾದನೆಯ ಮೂಲಬೇರುಗಳ ಹುಡುಕಲು ಹೊರಟರೆ, ಅದು ಮತ್ತೆ ಧರ್ಮದತ್ತಲೇ ಸುತ್ತುತ್ತದೆ. ಶಿಕ್ಷಣದ ಮೂಲಕ ಮತಾಂಧತೆಯನ್ನು ಇಲ್ಲವಾಗಿಸಬಹುದು ಎಂಬುದು ಪೂರ್ಣ ಸತ್ಯವಲ್ಲ. ಭಯೋತ್ಪಾದಕರಲ್ಲಿ ಎರಡೆರಡು ಪದವಿ ಪಡೆದವರೂ ಇದ್ದಾರೆ! ಉಗ್ರವಾದಿಗಳು ಹುಟ್ಟಲು ಕಾರಣವಾದ ಅಂಶಗಳ ಬಗ್ಗೆ ಆತ್ಮಾವಲೋಕನ ಅಗತ್ಯ.
‘ಮಾಲೆಗಾಂವ್ ಸೋಟದಲ್ಲಿ ಹಿಂದೂ ಉಗ್ರವಾದಿಗಳ ಕೈವಾಡವಿದೆ ’ ಎಂದ ತಕ್ಷಣ ಬಿಜೆಪಿ ಬೆಚ್ಚಿ ಬೀಳಬೇಕಿಲ್ಲ. ‘ಭಯೋತ್ಪಾದನೆಗೆ ಧರ್ಮವಿಲ್ಲ. ತಪ್ಪಿದಸ್ಥರಿಗೆ ಶಿಕ್ಷೆಯಾಗಲಿ’ ಎಂಬಂಥ ಹೇಳಿಕೆ ಬಿಜೆಪಿ ಪಾಳಯದಿಂದ ಬರಲೇ ಇಲ್ಲ. ಸಮಯ ಸಿಕ್ಕಿದೆಯೆಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಸ್ವಘೋಷಿತ ಬುದ್ಧಿಜೀವಿಗಳು ವಾಗ್ದಾಳಿ ಮಾಡುವುದೂ ತಪ್ಪು. ಭಯೋತ್ಪಾದನೆಯೆಂಬ ಗಂಭೀರ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಂದಾಗಬೇಕು. ಅದೇ ರೀತಿ ಮುಸ್ಲಿಂ ಉಗ್ರವಾದಿಗಳ ವಿಚಾರವನ್ನು ಹಿಡಿ ಮುಸ್ಲಿಂ ಸಮುದಾಯಕ್ಕಾದ ಅವಮಾನವೆಂದು ಪರಿಗಣಿಸಬಾರದು. ಯಾರೋ ಒಬ್ಬ ಕಿಡಿಗೇಡಿಯ ಕುಕೃತ್ಯಕ್ಕೆ ಸಮುದಾಯವನ್ನು ಹೊಣೆಯಾಗಿಸುವುದು ಎಷ್ಟು ಸರಿ?
ಹಿಂದೂ ಸಂಘಟನೆಗಳ ಮೇಲೆ ವಾಗ್ದಾಳಿ ಮಾಡುವುದನ್ನೇ ಜಾತ್ಯತೀತತೆ ಎಂದು ಕೆಲವರು ಭಾವಿಸಿದಂತಿದೆ. ಹಿಂದೂ ಮತಗಳ ಮೇಲೆ ಬಿಜೆಪಿ, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಮತ್ತಿತರ ಪಕ್ಷಗಳು ಇನ್ನಾದರೂ ತಮ್ಮ ಕೋಳಿ ಜಗಳ ನಿಲ್ಲಿಸಬೇಕು. ಅಸಲಿ ಅಪಾಯವನ್ನು ಗ್ರಹಿಸದಿದ್ದರೆ ದೇಶಕ್ಕೆ ಗಂಡಾಂತರ ತಪ್ಪದು.
ಧರ್ಮ ಉಳಿಸುವ ಮಹಾತ್ಮರ ಗುಂಗಿನಲ್ಲಿ ಪ್ರಾಣವನ್ನೇ ಕಳೆದುಕೊಳ್ಳಲು ಮುಂದಾಗುವ ಉಗ್ರರ ಕೂರಿಸಿಕೊಂಡು, ಚಂದಮಾಮದ ನೀತಿ ಕತೆ ಹೇಳಿದರೆ ಪ್ರಯೋಜನವಿಲ್ಲ. ಅವರಿಗೆ ಗುಂಡಿನ ಭಾಷೆಯಷ್ಟೆ ಅರ್ಥವಾಗುತ್ತದೆ. ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿಯೇ ರಾಜಕಾರಣಿಗಳು ಮೈಮರೆತರೆ, ದೇಶದ ಜನರು ಎಂದೂ ಕ್ಷಮಿಸುವುದಿಲ್ಲ. ಉಗ್ರರ ವಿರುದ್ಧ ಪ್ರಾಮಾಣಿಕ ಹೋರಾಟ ನಡೆಸುವುದು ಸರಕಾರದ ಕೆಲಸ.
ಧರ್ಮ ಮತ್ತು ಜಾತಿಯ ಅವಹೇಳನದ ಮೂಲಕ, ಅಸ್ಪೃಶ್ಯತೆ ಮೂಲಕ ಹೊಸ ಉಗ್ರ ಜನಿಸದಂತೆ ಎಚ್ಚರವಹಿಸುವುದು ಸಮಾಜದಲ್ಲಿನ ಪ್ರತಿಯೊಬ್ಬರ ಕರ್ತವ್ಯ.
ಡಿಸೆ3