ಮಾಹಿತಿ ತಂತ್ರಜ್ಞಾನದ ಬಗ್ಗೆ ಮಾರುದ್ದದ ಭಾಷಣ ಬಿಗಿಯುವ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ, ವಿಶ್ವಕನ್ನಡ ಸಮ್ಮೇಳನವನ್ನು ಒಂದು ಒಳ್ಳೆಯ ವೆಬ್‌ಸೈಟ್ ಮೂಲಕ ಜಗತ್ತಿಗೆ ಕಟ್ಟಿಕೊಡಬೇಕು ಎಂಬ ಕನಿಷ್ಠ ಕಾಳಜಿಯಿಲ್ಲ. ಸಮ್ಮೇಳನದ ಅಂಗವಾಗಿ ಸರಕಾರ ರೂಪಿಸಿರುವ ವೆಬ್‌ಸೈಟ್ ಮತ್ತು ಬ್ಲಾಗ್ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.
ವಿಶ್ವ ಕನ್ನಡ ಸಮ್ಮೇಳನವೆಂದರೆ ಜಾಗತಿಕ ಹಬ್ಬ. ಜಗತ್ತಿನ ಮೂಲೆಮೂಲೆಯಲ್ಲಿನ ಕನ್ನಡಿಗರು ಸಂಭ್ರಮಿಸುವ ಹಬ್ಬ. ಈ ಎಲ್ಲರನ್ನು ಬೆಸೆಯಲು ಒಂದು ಒಳ್ಳೆಯ ವೆಬ್‌ಸೈಟ್ ಮಾಡಬೇಕೆಂದು ಸರಕಾರಕ್ಕೆ ಅನ್ನಿಸಿಲ್ಲ. ಸಮ್ಮೇಳನಕ್ಕಾಗಿಯೇ ಒಂದು ಅಧಿಕೃತ ವೆಬ್‌ಸೈಟ್ ಇಲ್ಲ. ಕಾಟಾಚಾರಕ್ಕೆ ಎಂಬಂತೆ ಬೆಳಗಾವಿ ಜಿಲ್ಲೆಯ ವೆಬ್‌ಸೈಟ್‌ನಲ್ಲೇ ಒಂದು ಭಾಗವಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ಸೇರಿಸಲಾಗಿದೆ(http://belgaum.nic.in/kannada_s_Sam/Index.html). . ಮಾರುದ್ದದ ಈ ಯುಆರ್‌ಎಲ್ ಯಾರಿಗೆ ತಾನೇ ನೆನಪಲ್ಲಿ ಉಳಿಯಲು ಸಾಧ್ಯ. ಹೋಗಲಿ ಈ ವೆಬ್‌ಸೈಟ್ ವ್ಯವಸ್ಥಿತವಾಗಿದೆಯೇ ಎಂದರೆ ಅದೂ ಇಲ್ಲ.
ಮನಸೋ ಇಚ್ಛೆ ವೆಬ್‌ಸೈಟ್ ರೂಪುಗೊಂಡಿದೆ. ಅಲ್ಲಿರುವ ವಿಷಯ ಮತ್ತು ವಿನ್ಯಾಸ ದೇವರಿಗೆ ಪ್ರಿಯ. ಸರಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಕಣ್ಣಿಗೆ ಕಾಣುವಂತಿದೆ. `ರ್ನಾಟಕ ಏಕೀಕರಣಗೊಂಡು.. ‘ ಎಂದು ವೆಬ್‌ಸೈಟ್‌ನ ಮುಖಪುಟದ ಲೇಖನ ಆರಂಭಗೊಳ್ಳುತ್ತದೆ. ಅಂದರೆ ಮೊದಲ ಸಾಲಿನ ಮೊದಲ ಪದವಾದ ಕರ್ನಾಟಕದಲ್ಲಿ `ಕ’ ಇಲ್ಲವೇ ಇಲ್ಲ! ಸಮ್ಮೇಳನದ ಮಹತ್ವ ವಿವರಿಸುವ ಎರಡು ಪ್ಯಾರಾ ಬರೆಯಲು ಆಗಿಲ್ಲ. ಸರಕಾರದ ಸುತ್ತೋಲೆಯಂತೆ ಮುಖಪುಟ ಕಾಣಿಸುತ್ತಿದೆ.
ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ವಿಷಯಗಳಿಗೆ ಸಂಬಂಧಿಸಿದ ಪುಟಗಳು ಲೆಕ್ಕಕ್ಕಷ್ಟೇ ಇವೆ. ಮುಖಪುಟ ವಿನ್ಯಾಸಕ್ಕೆ ಕಣ್ಣಿಗೆ ರಾಚುವಂತಹ ವರ್ಣಗಳ ಬಳಕೆಯಾಗಿದೆ. ಪುಟದ ಎಡ ಭಾಗದಲ್ಲಿನ ವಿಷಯ ಸೂಚಿಯಲ್ಲಿರುವುದನ್ನು ಓದಲು ಕನ್ನಡಕ ಬೇಕೇ ಬೇಕು! ಸಮ್ಮೇಳನದ ಹಿಂದಿನ ಇತಿಹಾಸ, ಸಮ್ಮೇಳನದ ಮಹತ್ವ, ನಾಡು ನುಡಿ ಪರಿಚಯ ಮಾಡಿಕೊಡುವ ಲೇಖನ ಮತ್ತು ಚಿತ್ರಗಳನ್ನು ಇಲ್ಲಿ ಕೇಳುವುದೇ ಬೇಡ.
ಸಮ್ಮೇಳನದ ಸಿದ್ಧತೆ ಅಥವಾ ನಾಡುನುಡಿಗೆ ಸಂಬಂಧಿಸಿದ ಒಂದೇ ಒಂದು ಚಿತ್ರಪಟ ಇಲ್ಲಿಲ್ಲ. ಇಂಥ ವೆಬ್‌ಸೈಟ್‌ಗೊಂದು ಗ್ಯಾಲರಿ ಬೇಕು ಎಂದು ಆಡಳಿತಯಂತ್ರಕ್ಕೆ ಅನ್ನಿಸಿಲ್ಲ. ಆಹ್ವಾನ ಪತ್ರಿಕೆ, ಸಮಿತಿಗಳು, ಸರಕಾರದ ಆದೇಶಗಳು, ಸಭಾ ನಡವಳಿಕೆಗಳು ಇಲ್ಲಿದ್ದು, ಸರಕಾರದ ಲೆಕ್ಕಪತ್ರ ವಿಭಾಗದ ವೆಬ್‌ಸೈಟ್‌ನಂತೆ ಇದು ರೂಪುಗೊಂಡಿದೆ. ನಾಡು ನುಡಿಯನ್ನು ಬಿಂಬಿಸುವ ಯಾವ ಮಾಹಿತಿಗಳೂ ಇಲ್ಲಿಲ್ಲ.
ನೋ ಅಪ್‌ಡೇಟ್ಸ್..
ವಿಶ್ವಕನ್ನಡ ಸಮ್ಮೇಳನದ ನೇರ ಪ್ರಸಾರ ಎಂದು ವೆಬ್‌ಸೈಟ್‌ನ ಮೇಲಿದ್ದರೂ, ಯಾವುದೇ ಅಪ್‌ಡೇಟ್‌ಗಳಿಲ್ಲ. ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿಶ್ವಕನ್ನಡ ಸಮ್ಮೇಳನ ವಿಭಾಗ ವೆಬ್‌ಸೈಟ್‌ಗೆ ಮಾಹಿತಿ ಒದಗಿಸಿದ್ದು, ಅವುಗಳ ಸಮರ್ಪಕ ಬಳಕೆಯ ಕೊರತೆ ಕಂಡು ಬಂದಿದೆ. ವೆಬ್‌ಸೈಟ್ ಎನ್ನುವುದು ಬಳಕೆದಾರರ ಸ್ನೇಹಿಯಾಗಿರಬೇಕು. ಆದರೆ ಇದೆಲ್ಲವೂ ಇಲ್ಲಿ ನಗಣ್ಯ.
ಮುಖ್ಯಮಂತ್ರಿಗಳ ಮುನ್ನುಡಿ ಎನ್ನುವ ಕೊಂಡಿಯನ್ನು ಕ್ಲಿಕ್ ಮಾಡಿದರೆ ಪೇಪರ್‌ನಲ್ಲಿ ಬಂದಿರುವ ಜಾಹೀರಾತು ಕಾಣಿಸುತ್ತದೆ. ಅದನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ಮಾಡಲಾಗಿದ್ದು, ಓದುವುದು ಕಷ್ಟ. ಪಿಡಿಎಫ್ `ಡೌನಲೋಡ’ ಎಂಬ ಪದ ಪ್ರಯೋಗವೂ ಇಲ್ಲುಂಟು!
ಚಿತ್ರಗಳಿಗೆ ಬರವೇ?
ಬೆಳಗಾವಿಗೆ ಬರುವ ಕನ್ನಡಿಗರಿಗೆ ಸುತ್ತಲಿನ ಪ್ರವಾಸಿ ತಾಣಗಳ ಪರಿಚಯಿಸುವ ವ್ಯವಧಾನವೂ ವೆಬ್‌ಸೈಟ್‌ನಲ್ಲಿ ಇಲ್ಲ. ಪ್ರವಾಸಿ ತಾಣಗಳು ಪರಿಚಯ ಏನೇನೂ ಸಾಲದು. ಎರಡು ಸ್ಟಾಂಪ್ ಅಳತೆಯ ಚಿಕ್ಕ ಚಿತ್ರಗಳು ಇಲ್ಲಿದ್ದು, ಪ್ರವಾಸಿ ತಾಣಗಳ ದೊಡ್ಡ ಚಿತ್ರಗಳಿಗೆ ಇಷ್ಟು ಕೊರೆತೆ ಇದೆಯೇ ಅನಿಸುತ್ತದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಬಯಸುವಂತಿಲ್ಲ. ಇನ್ನಷ್ಟು ವಿವರಗಳಿಗೆ ಕ್ಲಿಕ್ ಮಾಡಿದರೆ, ಗೂಗಲ್ ನಕ್ಷೆ ಮತ್ತು ಮ್ಯಾಪ್‌ಎಕ್ಸೆಲ್ ಡಾಟ್‌ಕಾಮ್ ತೆರೆದುಕೊಳ್ಳುತ್ತವೆ. ಬೆಳಗಾವಿಗೆ ಸಂಬಂಧಿಸಿದ ಒಂದು ನಕ್ಷೆಯನ್ನು ಸಿದ್ಧಪಡಿಸಲು ಸಹ ಸರಕಾರ ವಿಫಲವಾಗಿದೆ. ನಗರ ನಕ್ಷೆಗೆ ಗೂಗಲ್‌ನತ್ತ ಬೆರಳು ತೋರಿಸಿ ಕೈತೊಳೆದುಕೊಳ್ಳಲಾಗಿದೆ.
ಬ್ಲಾಗ್ ಇಂಗ್ಲಿಷ್‌ಮಯ
ಸಮ್ಮೇಳನಕ್ಕಾಗಿ ಸರಕಾರ ರೂಪಿಸಿರುವ http://world-kannada-sammelana-belgaum-2011.blogspot.com/
ಬ್ಲಾಗ್‌ಗೆ ಹೋದರೆ, ಅಲ್ಲಿ ಇಂಗ್ಲಿಷ್‌ನದ್ದೇ ಕಾರುಬಾರು. `ಕರ್ನಾಟಕ ಸರಕಾರ, ವಿಶ್ವಕನ್ನಡ ಸಮ್ಮೇಳನ ಬೆಳಗಾವಿ’ ಎನ್ನುವುದನ್ನು ಬಿಟ್ಟರೆ ಎಲ್ಲವೂ ಇಂಗ್ಲಿಷ್‌ಮಯ. ವೆಬ್‌ಸೈಟ್‌ಗಿಂತ ಇಲ್ಲಿಯೇ ಅಪ್‌ಡೇಟ್ ಹೆಚ್ಚಿದ್ದು, ಒಂದಿಷ್ಟು ಮಾಹಿತಿ ಲಭ್ಯ.