Tag Archives: sante

ಸಂತೆಯೊಳಗೊಂದು ಮನೆಯ ಮಾಡಿ..

ಸಾಮಾನ್ಯ

(ಸಂತೆ: ಭಾಗ-೨)

ಸಿರಾ ಎನ್ನೋ ಬರದೂರು ಉದ್ದುದ್ದ ಅಡ್ಡದ್ದ ಬೆಳೆದರೂ, ಸಂತೆಯ ಗತ್ತು-ಗಮ್ಮತ್ತು ಒಂದು ಚೂರು ಕಡಿಮೆಯಾಗಿಲ್ಲ. ಮಂಗಳವಾರ ಬಂದರೆ ರಾಷ್ಟ್ರೀಯ ಹೆದ್ಧಾರಿಯ ಆಜೂಬಾಜು, ಬಸ್ಟಾಂಡು, ಹೈಸ್ಕೂಲ್ ಫಿಲ್ಡು , ಎಪಿಎಂಸಿ ಆವರಣ -ಹೀಗೆ ಎಲ್ಲೆಲ್ಲೂ  ಜನವೋ ಜನ. ರಂಗಜ್ಜಿ ಮಿಲ್ಟ್ರಿ ಹೋಟೆಲ್‌ಗೆ ಅಂದು ಭರ್ಜರಿ ವ್ಯಾಪಾರ. ಸಂತೆ ನಂಬಿಯೇ ಬದುಕೋ ಅನೇಕ ಸಂಸಾರಗಳು ಸಿರಾದಲ್ಲಿವೆ.

ಮಾರುಕಟ್ಟೆ ಪಕ್ಕದಲ್ಲೇ ಇದ್ದರೂ, ಸೊಪ್ಪು-ತರಕಾರಿ ಮನೆಮುಂದಕ್ಕೆ ಪ್ರತಿದಿನಾ ಬಂದರೂ, ಸಿರಾ ಹೆಂಗಸರು ಕನಕಾಂಬರ, ಗಿಣಿ ಹಸಿರು, ಅಕಾಶ ನೀಲಿ ಮತ್ತಿತರ ಬಣ್ಣಗಳ ವೈರ್ ಬ್ಯಾಗ್ ಹಿಡಿದು ಸಂತೆಗೆ ಹೊರಡುತ್ತಾರೆ. ಒಂದು ನೂರು ರೂಪಾಯಿ ನೋಟನ್ನು ಗಂಡಂದಿರು ಗೊಣಗುತ್ತಲೇ ಕೊಡುತ್ತಾರೆ. ಅದರಲ್ಲಿ ಹತ್ತಿಪ್ಪತ್ತು ಉಳಿಯುತ್ತೆ ಅನ್ನೋ ಕಾರಣಕ್ಕೋ ಅಥವಾ ಸಂತೆ ನೆಪದಲ್ಲಾದರೂ ತಮ್ಮ ಅಕ್ಕಪಕ್ಕದವರ ಜತೆ ಸುತ್ತಾಡಬಹುದು ಎಂಬ ಒಳ ಆಸೆಯೋ, ಹೆಂಗಸರಿಗಂತೂ ಸಂತೆ ಯಾವತ್ತೂ ಬೇಸರ ತರಿಸಿಲ್ಲ.

ಜವಗಾನಹಳ್ಳಿಯಿಂದ ಲಾರಿ, ಬಸ್ಸುನಲ್ಲಿ ಹಗ್ಗ ಹಾಕಿಕೊಂಡು ಬೆಳಬೆಳಗ್ಗೆ ಬರೋ ಕೆಲವರು, ನಾರಾಯಾಣ ಸ್ವಾಮಿ ಆಫೀಸು, ಎಸ್‌ಎಸ್ ಮೆಡಿಕಲ್ಸ್, ಹನುಮಾನ್ ಮೆಡಿಕಲ್ಸ್ ಮುಂದೆಲ್ಲ ಉದ್ದಕೆ ಹಗ್ಗ ಹರಡಿಕೊಂಡು ಕೂತು ಬಿಡುತ್ತಾರೆ. ಅವರಿಗೂ ಚಾಪೆ ಮಾರೋರಿಗೂ ಸದಾ ಜಗಳ.

ಹಗ್ಗದ ಪೆಂಡಿಗಳನ್ನು ಹಾಕಿ, ಪಕ್ಕದ ಜಯಣ್ಣನ ಹೋಟೆಲ್‌ಗೆ ನುಗ್ಗಿ  ಚಿತ್ರಾನ್ನವೋ, ಇಡ್ಲಿನೋ ತರಾತುರಿಯಲ್ಲಿ ತಿಂದು, ಪ್ಲಾಸ್ಟಿಕ್ ಲೋಟದಲ್ಲಿನ ಅರ್ಧ ಚಹಾವನ್ನು ಕೈಯಲ್ಲಿಡಿದೇ ಹಗ್ಗದ ಪೆಂಡಿಗೊಂದು ನಮಸ್ಕಾರ ಹಾಕುತ್ತಾರೆ. ಆಮೇಲೆ ಒಂದೊಂದೇ ಗಂಟು ಬಿಚ್ಚಿ, ವ್ಯವಸ್ಥಿತವಾಗಿ ಜೋಡಿಸಿ ಗಿರಾಕಿಗಳ ಕಾಯುತ್ತಾ ನಿಂತು ಬಿಡುತ್ತಾರೆ. ಪಾನ್ ಪರಾಕ್ ತಿನ್ನೋರು ಪಾಕೇಟ್ ಹೊಡೆಯುತ್ತಾರೆ. ಕೆಲವರು ಬಿಸಿಲ ಧಗೆಗೆ ಸಡ್ಡು ಹೊಡೆಯುವಂತೆ ಬೀಡಿ ಹಚ್ಚುತ್ತಾರೆ. ಕೆಲವರು ಎಲೆ ಅಡಿಕೆ ಜಗಿಯುತ್ತಾ ಬಾಯಿ ಕೆಂಪಗೆ ಮಾಡಿಕೊಳ್ಳುತ್ತಾರೆ.

ಯಾರಾದರೂ ಹಗ್ಗ ನೋಡಿದರೆ ಸಾಕು, ‘ಬನ್ರೀ ಸ್ವಾಮಿ, ಎಷ್ಟು ಬೇಕು, ಯಾವುದು ಬೇಕು? ಇದು ಜವಗಾನಹಳ್ಳಿ ಹಗ್ಗ ’ ಅನ್ನುತ್ತಾರೆ. ಗಿರಾಕಿಗಳು ಹಗ್ಗವನ್ನು ಕೈಯಲ್ಲಿಡಿದು, ಅಳೆದೂತೂಗಿ ಮಾಡಿ ‘ಎಷ್ಟಕ್ಕೆ ಕೊಡ್ತಿಯಾ?’ ಎಂದು ಮುಖ ನೋಡುತ್ತಾರೆ. ಬೆಳಗ್ಗೆ ವ್ಯಾಪಾರ ಯಾರಿಗೂ ಮೋಸ ಬೇಡ, ಇಷ್ಟು ಕೊಡಿ ಎಂದು ಕೇಳುತ್ತಾರೆ. ಗಿರಾಕಿ ಹೆದರಿದಂತೆ ಮುಖ ಮಾಡಿ, ‘ಹೋಗಯ್ಯಾ ಹೋಗು.. ದುಡ್ಡೇನು ಗಿಡದಲ್ಲಿ ಬೆಳಿಯುತ್ತಾ?‘ ಎನ್ನುತ್ತಾ ಮುಂದೆ ಹೋಗುತ್ತಾನೆ. ಕರೆದರೂ ತಿರುಗಿ ಸಹಾ ನೋಡುವುದಿಲ್ಲ. ಮುಂದೆ ಹೋಗಿ ವಿಚಾರಿಸಿದರೆ, ಎಲ್ಲರದೂ ಒಂದೇ ರೇಟು. ಹಗ್ಗದವರು ಮೊದಲೇ ಮಾತಾಡಿಕೊಂಡಿರುವ ಕಾರಣ, ಯಾರೂ ಕಡಿಮೆ ಬೆಲೆಗೆ ಕೊಡಲು ಒಪ್ಪುವುದಿಲ್ಲ. ಕೊನೆಗೆ ಮುಖ ಊದಿಸಿಕೊಂಡೆ  ಕಾಸುಕೊಟ್ಟು ಹಗ್ಗ ಕೈಯಲ್ಲಿಡಿದು ಗಿರಾಕಿಗಳು ಹೋಗುತ್ತಾರೆ.

ಮಧ್ಯಾಹ್ನ ಕಾಣಿಸಿಕೊಳ್ಳುವ ಹೆಸರುಬೇಳೆಯವನು ಅವರಿಗೆಲ್ಲ ಹೆಸರುಬೇಳೆ ಕೊಟ್ಟು, ತಲಾ ಒಂದು ರೂಪಾಯಿ ಇಸಕೊಂಡು ಮುಂದೆ ಹೋಗುತ್ತಾನೆ. ಆಮೇಲೆ ‘ಪೆಪ್ಸಿ ಐಸ್ ಬಾಯಾರ್‍ಕೆಗೆ ಒಳ್ಳೇದು..’ ಎಂದು ಕೂಗುತ್ತಾ ಬರುವ ಹುಡುಗ, ತನ್ನ ಮಾಲನ್ನು ಮಾರಲು ಮುಖಮುಖ ನೋಡುತ್ತಾನೆ.   

ಇಲ್ಲಿ ಮನೆಗಳಲ್ಲಿ ಗಂಡಂದಿರನ್ನು ಆಫೀಸ್‌ಗೆ ಕಳಿಸಿ, ಹೆಂಗಸರು ಸಂತೆಗೆ ರೆಡಿಯಾಗುತ್ತಾರೆ. ‘ರೆಡಿನಾ ಸಂತೆಗೆ?’ ಎಂದು ಒಬ್ಬರನ್ನೊಬ್ಬರು ಕೇಳಿಕೊಳ್ಳುತ್ತಾರೆ. ‘ಈ ಸೀರೆ ಉಟ್ಟುಕೊಳ್ಳಲಾ?’ ಎಂಬ ಸಲಹೆ ಬೇರೆ ಕೇಳುತ್ತಾರೆ. ‘ಯಾವಾಗ್ ತಗೊಂಡಿದ್ದು?’ ಅಂದ್ರೆ, ಅದಕ್ಕೆ ಮಸಾಲೆ ಸೇರಿಸಿ ಸಂಭ್ರಮಿಸುತ್ತಾರೆ. ಯಾವುದೋ ಮದುವೆಗೋ, ನಾಮಕರಣಕ್ಕೋ ಹೋದಂತೆ ಸಿಂಗಾರಬಂಗಾರ ಮಾಡಿಕೊಂಡು ವೈರ್‌ಬ್ಯಾಗ್ ಹಿಡಿದುಕೊಂಡು, ಪರ್ಸಲ್ಲಿ ಕಾಸು ಇದೆಯಾ, ಚಿಲ್ಲರೆ ಇದೆಯಾ ಅನ್ನೋದನ್ನು ಚೆಕ್ ಮಾಡಿಕೊಂಡು ಸಂತೆ ದಿಕ್ಕಿನತ್ತ ಹೆಂಗಸರು ಹೊರಡುತ್ತಾರೆ. ಮನೆಯಲ್ಲಿರೋ ಪುಟ್ಟ ಮಕ್ಕಳು ಅಮ್ಮನ ಕೈಹಿಡಿದುಕೊಂಡು ಹೊರಟು ಬಿಟ್ಟುತ್ತವೆ.

ಹಳ್ಳಿಗಳಿಂದ ಬರೋ ಜನರು ಸಿನಿಮಾ ಪ್ಲಾನ್ ಹಾಕಿಕೊಂಡಿರುತ್ತಾರೆ. ರಂಗನಾಥ ಟಾಕೀಸ್‌ನಲ್ಲಿ ಯಾವ ಸಿನಿಮಾ? ಸಪ್ತಗಿರಿ ಟಾಕೀಸಲ್ಲಿ ಯಾವ ಸಿನಿಮಾ ಎನ್ನುವುದನ್ನು ಮೊದಲೇ ತಿಳಿದಿರುತ್ತಾರೆ. ಕೆಲವರು ಮಾರ್ನಿಂಗ್ ಶೋಗೆ ನುಗ್ಗಿದರೆ, ಕೆಲವರು ಮ್ಯಾಟನಿಗೆ ನುಗ್ಗುತ್ತಾರೆ. ಕೆಲವರು ಈ ಟಾಕೀಸ್‌ಗಳನ್ನು ಅವುಗಳ ಪಾಡಿಗೆ ಬಿಟ್ಟು ದೇವರ ಚಿತ್ರ(?)ಗಳನ್ನು ಹುಡುಕುತ್ತಾರೆ. ಕದ್ದುಮುಚ್ಚಿ , ಟವಲ್‌ನಿಂದ ಮುಖ ಮರೆಮಾಡಿಕೊಂಡು ಚಿತ್ರಮಂದಿರ ಹೊಕ್ಕವರು ನಿಧಾನವಾಗಿ ಬೀಡಿ ಹೊಗೆ ಬಿಡುತ್ತಾರೆ. ಕಾಲೇಜಿಗೆ ಚಕ್ಕರೆ ಹೊಡೆದು ಸಿನಿಮಾಗೆ ಬಂದಿರೋ ಪಡ್ಡೆಗಳು, ನಮಗೆ ಗೊತ್ತಿರೋರು ಯಾರಾದ್ರೂ ಅಲ್ಲಿದರಾ ಎಂದು ಕಣ್ಣಾಡಿಸುತ್ತಾರೆ.

ಸಿನಿಮಾ ಶುರುವಾಗಿ ೧೦-೧೫ ನಿಮಿಷವಾದರೂ ಸಂಭಾಷಣೆಗಳೇ ಮುಂದುವರಿದರೆ, ದೇವತೆಗಳು ಕಾಣಿಸದಿದ್ದರೆ ‘ಅವುನಜ್ಜಿ .. ಸೀನ್ ಹಾಕಯ್ಯೋ .. ’ಎಂದು ಜೋರಾಗಿ ಗಂಟಲು ದೊಡ್ಡದು ಮಾಡಿಕೊಂಡು ಕೂಗುತ್ತಾರೆ. ವಿಷಲ್ ಹಾಕುತ್ತಾರೆ. ಅಷ್ಟು ಹೊತ್ತಿಗೆ ಟಾಕೀಸ್ ಮೇಲಿನ ಶೀಟ್‌ಗಳು ಕಾದು ಬೊಬ್ಬೆ ಹೊಡೆಯುವಂತಾಗುತ್ತದೆ. ಫ್ಯಾನ್‌ಗಳು ಸದ್ದು ಮಾಡುತ್ತವೆಯೇ ಹೊರತು, ಜೋರಾಗಿ ತಿರುಗುವುದಿಲ್ಲ. ಒಂದರ್ಥದಲ್ಲಿ ಬಿಸಿ ಬಾಣಲೆಯಲ್ಲಿ ಕುಳಿತೇ ನಮ್ಮೂರ ಶೃಂಗಾರ ಪ್ರಿಯರು ಚಿತ್ರ ವೀಕ್ಷಿಸುತ್ತಾರೆ. ‘ಥತ್ ಬಡ್ಡೀಮಗ ಮೋಸ ಮಾಡಿದ.. ’ ಎಂದು ಗೊಣಗಿಗೊಳ್ಳುತ್ತಲೆ ಚಿತ್ರ ಇನ್ನೂ ಇರುವಾಗಲೇ ಹೊರಬಂದು ಜನರ ಮಧ್ಯೆ ಬೆರೆತುಹೋಗುತ್ತಾರೆ. 

ಸಂತೆಯಲ್ಲಿ ಅಂಗಡಿ ಹಾಕೋದು ಕೆಲವರಿಗೆ ಕುಲಕಸುಬು. ಮೂಗುದಾರ, ಹಸು-ಕರು ಕುತ್ತಿಗೆಗೆ ಗಂಟೆ, ಕಾಲಿಗೆ ಗೆಜ್ಜೆ ಮತ್ತಿತರ ಅಂಗಡಿಯನ್ನು ಇಡುವ ಕೋಟೆ ನಿವಾಸಿಗೆ ವ್ಯಾಪಾರಕ್ಕಿಂತಲೂ ಕುಲಕಸುಬು ಮುಂದುವರಿಸಿದ್ದೇ ತೃಪ್ತಿ. ಸರಕಾರಿ ಕೆಲಸ ಮಾಡೋ ಒಬ್ಬಾತ ಸಂತೆಯಲ್ಲಿ ವ್ಯಾಪಾರ ಸಹಾ ಮಾಡುತ್ತಾನೆ. ಹೀಗಾಗಿ ಅವುನು ಪ್ರತಿ ಮಂಗಳವಾರ ಮಧ್ಯಾಹ್ನ ಅದೇನ್ ರಜೆ ಹಾಕ್ತಾನೋ, ಕೆಲಸಕ್ಕೆ ಚಕ್ಕರ್ ಹಾಕ್ತಾನೋ  ಸಂತೆಯಲ್ಲಂತೂ ಕೂತು ವ್ಯಾಪಾರ ಮಾಡ್ತಾನೆ.

ಹಳ್ಳಿಗಳಿಂದ ಬರೋ ಗಂಡಸರು ಮೆಡಿಕಲ್ ಸ್ಟೋರ್‌ಗೆ ತೆರಳಿ ‘ಪೀಪಿ ಕೊಡಿ’ ಎಂದು ಮೆತ್ತಗೆ ಕೇಳುತ್ತಾರೆ. ಕೆಲವು ಆಧುನಿಕ ಮಹಿಳೆ ಥರಾ ಕಾಣೋ ಹಳ್ಳಿ ಹೆಂಗಸರು ನಾಚಿಕೊಂಡು ಬ್ರೆಡ್ ಕೊಡಿ ಎಂದು ಪಿಸಗುಟ್ಟುತ್ತಾರೆ. ಅವರ ಸ್ಥಿತಿ ನೋಡಿಯೇ ಮೆಡಿಕಲ್ ಸ್ಟೋರ್‌ನವರು ಅವರವರು ಬಯಸಿದ್ದನ್ನು ಕೊಟ್ಟು ಮನಸ್ಸಿನಲ್ಲಿಯೇ ನಗುತ್ತಾರೆ.

ಅಂದ ಹಾಗೆ ಸಂತೆಪೇಟೆಯಲ್ಲಂತೂ ಸಂತೆ ನಂಬಿ ಬದುಕುವ ಹಟ್ಟಿಯೇ ಇದೆ. ಇಲ್ಲಿ ನಡೆಯುತ್ತಿದ್ದ ಸಂತೆ, ಈಗ ಜಾಜಿಕಟ್ಟೆ ಬಳಿಗೆ ಹೋಗಿದೆ. ಅಲ್ಲೂ ಇಕ್ಕಟ್ಟು, ಬೇರೆ ಕಡೆಗೆ ವರ್ಗಾಯಿಸಿ ಎಂದು ಪ್ರಜಾಪ್ರಗತಿ ಮತ್ತು ಸೊಗಡು ಪೇಪರ್‌ನಲ್ಲಿ ಓದುಗರು ಪದೇಪದೇ ಬರೆಯುತ್ತಿರುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಮಾರುವ ಸಂತೆಪೇಟೆಯ ಈಡಿಗರ ಕೇರಿಯ ಹುಡುಗರು ಸಾಕಷ್ಟು ದುಡ್ಡು ಎಣಿಸುತ್ತಾರೆ. ಸಿರಾ ಸಂತೆಯಲ್ಲದೇ ಸುತ್ತಲಿನ ಬರಗೂರು, ಪಟ್ಟನಾಯಕನಹಳ್ಳಿ, ಸೀಬಿ, ಮಧುಗಿರಿ ಸಂತೆಗೂ ಹೋಗುತ್ತಾರೆ. ದಿನಕ್ಕೊಂದು ಸಂತೆಯಲ್ಲಿ ಈ ಹುಡುಗರು ಕಾಣಿಸಿಕೊಳ್ಳುತ್ತಾರೆ. ಸಂತೆ ಹಣದಲ್ಲೇ ಹೆಂಡತಿ ಮಕ್ಕಳನ್ನು ಸುಖವಾಗಿ ಸಾಕುತ್ತಿದ್ದು, ಅಕ್ಕ ತಂಗೀರ ಮದುವೆ ಮಾಡುತ್ತಿದ್ದಾರೆ. ಕೆಲವರು ಬೆಳಗ್ಗೆ ದುಡಿದದ್ದನ್ನು ಸಂಜೆ ಎಣ್ಣೆಗೆ ಖಾಲಿ ಮಾಡ್ತಾರೆ ಎನ್ನೋದನ್ನು ಬಿಟ್ಟರೆ ಎಲ್ಲರೂ ತಕ್ಕಮಟ್ಟಿಗೆ ಕ್ಷೇಮ.

ಸಂತೆಗೆ ಗುಂಪುಗುಂಪಾಗಿ ಬರೋ ಹೆಂಗಸರಲ್ಲಿ ಕೆಲವರಿಗೆ ಕಳ್ಳತನದ ಚಪಲ. ತರಕಾರಿಯವನು ಮಾತಿನ ಭರದಲ್ಲಿ ಎತ್ತಲೋ ಕಣ್ಣು ಹಾಯಿಸಿದಾಗ ಬ್ಯಾಗಿಗೆ ಒಂದಿಷ್ಟು ತರಕಾರಿ ಒಳಸೇರಿರುತ್ತದೆ. ‘ಅವುನು ಕೊತ್ತಂಬರಿ ಸೊಪ್ಪನ್ನು ರೂಪಾಯಿಗೆ ಕಡಿಮೆ ಕೊಡಲ್ಲ ಅನ್ತಾಯಿದ್ದ, ನಾನು ರೂಪಾಯಿ ಕೊಡದೇ ಎಗರಿಸಿದೆ ’ ಎಂದು ತಮ್ಮ ಚಾಲೂಕುತನವನ್ನು ತಮ್ಮ ಸಂತೆ ಗೆಳತಿಯರ ಜತೆ ಹಂಚಿಕೊಳ್ಳುತ್ತಿರುತ್ತಾರೆ. ಅವರು ಕದ್ದು ಸಿಕ್ಕಿಬಿದ್ದಾಗ ಎಲ್ಲರೂ ತರಕಾರಿಯವರ ಗಲೀಜು ಬೈಗುಳಗಳನ್ನು ಹಂಚಿಕೊಳ್ಳಬೇಕಾಗುತ್ತದೆ. 

ಸಂತೇದಿನ ಲಕ್ಷ್ಮಿ ಕುಣಿಯೋದು ಕಂಡು ಅಂಗಡಿ ವ್ಯಾಪಾರಿಗಳಿಗೆ ಖುಷಿ. ಅಂದು ಸರತಿ ಸಾಲಂತೆ ೧೦-೧೫ ನಿಮಿಷಕ್ಕೊಬ್ಬರು ಬರೋ ಭಿಕ್ಷುಕರನ್ನು ಕಂಡು, ತಲೆ ಕೆಟ್ಟು ಗೊಬ್ಬರವಾಗುತ್ತೆ. ಆ ಭಿಕ್ಷುಕರೋ ಒಂದು ರೂಪಾಯಿಗಿಂತ ಕಡಿಮೆ ಮುಟ್ಟೋದಿಲ್ಲ. ಯಾವುದೋ ಜನ್ಮದ ಸಾಲ ವಸೂಲಿ ಮಾಡುವಂತೆ ಅಂಗಡಿ ಮುಂದೆ ನಿಂತ ದಾಸಯ್ಯಗಳು ಶಂಖ ಊದುತ್ತಾರೆ. ಕೆಲವರ  ಜಾಗಟೆ ಬಡಿಯುತ್ತಾರೆ. ಹಣ ಇಲ್ಲ ಎಂದರೆ ಹಿಡಿ ಶಾಪ ಹಾಕುತ್ತಾ ಮುಂದಕ್ಕೆ ಹೋಗುತ್ತಾರೆ. ಚಿಲ್ಲರೆ ಇಲ್ಲ ಎಂದು ಸಾಗಾಕಲು ನೋಡಿದರೆ, ‘ತಗೊಳ್ಳಿ ಸ್ವಾಮಿ ಚಿಲ್ಲರೆ..’ ಎಂದು ಪುಡಿಗಾಸುಗಳ ಆ ಭಿಕ್ಷುಕ ಮಹಾಶಯರು ಜೋಡಿಸುತ್ತಾರೆ.

ಹೊಸದಾಗಿ ಮದುವೆಯಾದವರಿಗೆ ಸುತ್ತಾಡೋದಕ್ಕೆ ಸಂತೆಗಿಂತಲೂ ಒಳ್ಳೆ ಜಾಗ ಯಾವುದಿದೆ? ಹೊಸ ಜೋಡಿಗಳು ಮಾತ್ರವಲ್ಲ, ಹಳೇ ಜೋಡಿಗಳು ಸಹಾ ಸಂತೆ ನೆಪದಲ್ಲಿ ಹೊರಗೆ ಬರುತ್ತವೆ. ಸಂತೆ ತುಂಬ ಸುತ್ತಾಡುತ್ತ, ಬ್ಯಾಗ್‌ನ ಹಿಡಿಗಳನ್ನು ಹಂಚಿಕೊಂಡು, ತಮ್ಮ ಸಮಾನಭಾರಾಭಿರುಚಿ ಸೂತ್ರವನ್ನು ಎಲ್ಲರ ಮುಂದೆ ಪ್ರದರ್ಶಿಸುತ್ತಾರೆ.

ಆಟೋಗೆ ಕೊಟ್ಟರೆ ಹೋಗುತ್ತಲ್ಲ ಎಂದು ಕೆಲವು ಮಹಿಳೆಯರು ಉಸ್ಸಪ್ಪಾ ಅನ್ನುತ್ತಲೇ ಜಾಜೀಕಟ್ಟೆ ಮೇಲೆ ಬ್ಯಾಗನ್ನು ತಲೆ ಮೇಲೆ ಹೊತ್ತುಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಾರೆ. ಮನೆ ಸೇರೋ ಹೊತ್ತಿಗೆ ಅವರಿಗೆಲ್ಲ ಬೆವರಲ್ಲೇ ಸ್ನಾನ ಮಾಡಿದಂತಾಗಿರುತ್ತೆ. ಬ್ಯಾಗ್ ಹೊತ್ತುಕೊಂಡು ಬರೋ ಹೆಂಗಸರ ಮುಖ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತೆ.
ಇದನ್ನೂ ಓದಿ:
ಸಂತೆ: ಭಾಗ-೧