Tag Archives: ಮೈಸೂರು ಮಲ್ಲಿಗೆ

‘ಮೈಸೂರು ಮಲ್ಲಿಗೆ’ ಕಂಪು ಹಬ್ಬಲಿ ಗಲ್ಲಿಗಲ್ಲಿಗೆ..

ಸಾಮಾನ್ಯ

ಅಮೆರಿಕದಲ್ಲಿನ ಸದ್ಯದ ಸ್ಥಿತಿ, ಆರ್ಥಿಕ ಹಿಂಜರಿತ, ಹೊಸ ಲ್ಯಾಪ್‌ಟಾಪ್, ಮೊಬೈಲ್, ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ, ಬರಾಕ್ ಪತ್ನಿ ಮಿಶೆಲ್ ಗರ್ಭವತಿ, ಸತ್ಯಮ್ ಹಗರಣ -ಹೀಗೆ ಎಲ್ಲದರ ಬಗ್ಗೆಯೂ ಗಂಟೆಗಟ್ಟಲೇ ಮಾತನಾಡುವ ನಾವು, ನಮ್ಮ ಬಗ್ಗೆ ಐದಾರು ನಿಮಿಷ ಮಾತಾಡುವ ವೇಳೆಗೆ ಸುಸ್ತಾಗಿ ಬಿಡುತ್ತೇವೆ. ನಮ್ಮ ಬಗ್ಗೆ ಹೇಳಿಕೊಳ್ಳುವ ವಿಷಯಗಳು ಇರುವುದೇ ಇಲ್ಲವಾ? ಅಥವಾ ಹೇಳಲು ನಮಗೆ ಗೊತ್ತಿಲ್ಲವಾ?
ಇಂದು ಗಂಡ-ಹೆಂಡತಿ, ಅಪ್ಪ-ಅಮ್ಮ, ಅಜ್ಜ-ಅಜ್ಜಿ  ಇಂಥ ಯಾವ ಸಂಬಂಧಗಳೂ ನಮಗೆ ಆನಂದ ತರುತ್ತಿಲ್ಲ. ನಮ್ಮ ಸಂಸಾರವನ್ನು ಆನಂದ ಸಾಗರ ಮಾಡಿಕೊಳ್ಳುವ ಕೌಶಲ ನಮಗೆ ಗೊತ್ತಿಲ್ಲ. ಆ ಕಲೆಯಲ್ಲಿ ಕೆ.ಎಸ್.ನರಸಿಂಹಸ್ವಾಮಿ ನಿಪುಣರು. ಅದನ್ನು ಇತರರಿಗೆ ಕಲಿಸಲು  ಅವರಿಗೆ ಎಲ್ಲಿಲ್ಲದ ಆಸಕ್ತಿ. ಕುಟುಂಬದ ಸಾರ-ಸಾರ್ಥಕತೆಯನ್ನು ಮನದಲ್ಲಿ ಬಿತ್ತಿದ ಕೆಎಸ್‌ನ, ತಮ್ಮ ಪದ್ಯಗಳ ಮೂಲಕ ಇಂದಿಗೂ ನಮ್ಮ ಮಧ್ಯೆ ಜೀವಂತ. ಒಲವಿನ ವಿಸ್ಮಯ, ಬೆರಗು, ನೋವು, ತಳಮಳಗಳು ಅವರ ಪದ್ಯದಲ್ಲಿ ಅರಡಿಕೊಂಡಿವೆ. ಅದರಾಚೆ ಅವರು ಸಾಕಷ್ಟು ಬರೆದರೂ, ಒಲವಿನಷ್ಟು ಓದುಗರನ್ನು ಸೆಳೆದದ್ದು ಇನ್ನೊಂದಿಲ್ಲ.
೧೯೪೨ರಿಂದ ಈವರೆಗೆ ೩೦ಕ್ಕೂ ಹೆಚ್ಚು ಮುದ್ರಣ ಕಂಡಿರುವ ‘ಮೈಸೂರು ಮಲ್ಲಿಗೆ’ ಅದು ಕೇವಲ ಒಂದು ಪುಸ್ತಕವಲ್ಲ. ಮನೆಯ ಜೀವಂತಿಕೆ ಮತ್ತು ಪ್ರತಿಷ್ಠೆ ಹೆಚ್ಚಿಸುವ ಸಂಜೀವಿನಿ.  ‘ಮೈಸೂರು ಮಲ್ಲಿಗೆ ’ಪ್ರೇಮಿಗಳ ಪಾಲಿಗೆ ಭಗವದ್ಗೀತೆ. ಈ ಮಲ್ಲಿಗೆ ಬಗ್ಗೆ ಯಾರಿಗೆ ಗೊತ್ತಿಲ್ಲ.  ಈ ಕವನಸಂಕಲನ ಪ್ರಕಟವಾಗಿ ೬೭ ವರ್ಷವಾದರೂ, ಆ ಕವನಗಳು ತಾಜಾತನದಿಂದ ಇಂದಿಗೂ ನಳನಳಿಸುತ್ತಿವೆ. ಕವನ ಓದಿದಾಗಲೆಲ್ಲ ಹೊಸದಾಗಿ ಓದಿದಂತೆ ಓದುಗ ಭಾವಪರವಶ. ಕವನಕ್ಕೆ ಕಿವಿಯಾದವರ ಭಾವಕೋಶದಲ್ಲಿ ಹೇಳಲಾಗದ ಸಂಭ್ರಮ. ಇಂಥ ಸಂಭ್ರಮವನ್ನು ದ್ವಿಗುಣಗೊಳಿಸುತ್ತಿರುವುದು, ಡಾ.ಬಿ.ವಿ.ರಾಜಾರಾಂ ನಿರ್ದೇಶನದ ‘ಮೈಸೂರು ಮಲ್ಲಿಗೆ’ ನಾಟಕ.
ಕವಿಯನ್ನು ಜನರ ಮಧ್ಯೆ ತರುವಲ್ಲಿ ಇಂಥ ಪ್ರಯೋಗಗಳು ಸ್ವಾಗತಾರ್ಹ. ಬೇಂದ್ರೆ ಪದ್ಯಗಳನ್ನು ಖ್ಯಾತನಾಮರಿಂದ ಓದಿಸಿದ ‘ನಾಕುತಂತಿ’, ಇದೇ ಮಾದರಿಯಲ್ಲಿ ನಿಸಾರ್ ಪದ್ಯಗಳನ್ನು ಜನರಿಗೆ ತಲುಪಿಸಿದ ‘ಗುಲ್‌ಮೊಹರ್’ ಕಾರ್‍ಯಕ್ರಮಗಳನ್ನು ಇಲ್ಲಿ ನೆನೆಯಬೇಕು. ಶಕಲಕ ಬೇಬಿ ವಸುಂಧರಾ ದಾಸ್ ಮತ್ತು ಸಂಸದ ಅನಂತಕುಮಾರ್ ಬಾಯಲ್ಲಿ ನಿಸಾರ್ ಪದ್ಯ ಕೇಳುವುದು, ಪವಿತ್ರಾ ಲೋಕೇಶ್ ಮತ್ತು ಕ್ರಿಕೆಟಿಗ ವಿಜಯ ಭಾರದ್ವಾಜ್ ಅವರು ಬೇಂದ್ರೆ ಪದ್ಯ ಓದುವುದು ಹೊಸ ಅನುಭವ.  ಈ ಕಾರ್‍ಯಕ್ರಮಗಳಲ್ಲಿ ಪಾಲ್ಗೊಂಡವರು, ಕವಿಪ್ರೀತಿಯನ್ನು ದ್ವಿಗುಣಗೊಳಿಸಿಕೊಂಡಿದ್ದರೆ ಅಚ್ಚರಿಯೇನಿಲ್ಲ. ಕವಿಗಳನ್ನು ಜನರ ಹತ್ತಿರಕ್ಕೆ ತರುವಲ್ಲಿ ಸಿ.ಆರ್.ಸಿಂಹ ಸಹಾ ಎತ್ತಿದ ಕೈ. ಅವರ ‘ಟಿಪಿಕಲ್ ಕೈಲಾಸಂ’ ಮತ್ತು ಕುವೆಂಪು ಬದುಕು ಬರಹಗಳನ್ನು ಆಧರಿಸಿದ ‘ರಸಋಷಿ’ ನಾಟಕಗಳನ್ನು ಮರೆಯುವಂತಿಲ್ಲ. ಇಂಥದ್ದೇ ಮುಂದುವರಿದ ಪ್ರಯತ್ನ ‘ಮೈಸೂರು ಮಲ್ಲಿಗೆ’.
ಮಲ್ಲಿಗೆ ಕವಿಯ ಬದುಕು, ಬರಹಗಳಿಗೆ ಕನ್ನಡಿಯಾಗುವ ಈ ನಾಟಕಕ್ಕೆ, ‘ಮೈಸೂರು ಮಲ್ಲಿಗೆ’ ಪದ್ಯಗಳೇ ಮಣ್ಣು-ನೀರು ಮತ್ತು ಬೆಳಕು. ಪದ್ಯಗಳ ಮೂಲಕ ಕವಿಯನ್ನು ಕಾಣುವ, ಅರ್ಥೈಸಿಕೊಳ್ಳುವ ಈ ವಿನೂತನ ಪ್ರಯತ್ನದಿಂದ ಮಲ್ಲಿಗೆ ಕಂಪು ಇನ್ನಷ್ಟು ಪಸರಿಸಿದೆ. ರಾಜೇಂದ್ರ ಕಾರಂತರ ಕೈಯಲ್ಲಿ ರೂಪುಗೊಂಡ ಈ ನಾಟಕ, ರಾಜಾರಾಂ ನಿರ್ದೇಶನದಲ್ಲಿ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಾಡಿನ ರಂಗಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟಾಕೀಸಲ್ಲಿ ಕನ್ನಡ ಸಿನೆಮಾ ನೋಡೋರೇ ಇಲ್ಲ, ಇನ್ನು ನಾಟಕಗಳನ್ನು ನೋಡೋರು ಯಾರು ಎಂಬ ಕೊಂಕಿನ ನಡುವೆಯೇ, ನಾಟಕ ೫೦ ಪ್ರದರ್ಶನಗಳನ್ನು ಮುಗಿಸಿ, ನೂರರತ್ತ ಮುನ್ನಡೆದಿದೆ. ಇತ್ತೀಚೆಗಷ್ಟೇ ರವೀಂದ್ರ ಕಲಾಕ್ಷೇತ್ರದಲ್ಲಿ ೫೦ನೇ ಪ್ರದರ್ಶನಗೊಂಡ ನಾಟಕಕ್ಕೆ ರಂಗಾಸಕ್ತರು ಉತ್ಸಾಹದಿಂದ ಆಗಮಿಸಿದ್ದರು. ಕಲಾಕ್ಷೇತ್ರ ತುಂಬಿತುಳುಕುತ್ತಿತ್ತು.
ಕವಿಯ ಯೌವ್ವನ, ಮಧ್ಯ ವಯಸ್ಸು, ವೃದ್ದಾಪ್ಯದ ಪಾತ್ರಗಳಿಗೆ ವಿಜಯಸಿಂಹ, ಕಿಟ್ಟಿ ಮತ್ತು ರಾಜಾರಾಂ ಜೀವ ತುಂಬಿದರು. ಕವಿ ಪತ್ನಿಯಾಗಿ ಯೌವ್ವನಾವಸ್ಥೆಯಲ್ಲಿ ವಸಂತಲಕ್ಷ್ಮಿ ಮತ್ತು ಲಕ್ಷ್ಮಿ, ನಂತರದ ದಿನಗಳಲ್ಲಿ ವಿದ್ಯಾ ತಮ್ಮ ಪ್ರಬುದ್ಧ ಅಭಿನಯದಿಂದ ಗಮನಸೆಳೆದರು. ಬೆನ್ನು ಬಾಗಿದ ಬಳೆಗಾರ ಚೆನ್ನಯ್ಯನ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಅವರದು ಚಪ್ಪಾಳೆಗಿಟ್ಟಿಸುವಂಥ ಅಭಿನಯ. ಪಾತ್ರಧಾರಿಗಳ ಅಲಂಕಾರ, ಉಡುಪು, ಬೆಳಕಿನ ಬಳಕೆ ಎಲ್ಲವೂ ಹಿತಮಿತ.
ಕಲಾಗಂಗೋತ್ರಿ ತಂಡ ಪ್ರದರ್ಶಿಸಿದ ೬೦ ನಿಮಿಷಗಳ ಈ ಗೀತನಾಟಕದುದ್ದಕ್ಕೂ ಕಲಾಸಕ್ತರು ಒಂದಾದರು. ಪಾತ್ರ ಮತ್ತು ಪದ್ಯದೊಳಗೆ ಬೆರೆತರು. ಶ್ಯಾನುಭೋಗರ ಮಗಳನ್ನು ಮದುವೆಯಾದ ನಂತರದ ಕವಿಯ ಬದುಕು ಹೇಗಿತ್ತು ಎನ್ನುವುದರಿಂದ ಆಕೆಯ ಸಿಟ್ಟು-ಸೆಡವಿನ ವರೆಗೆ.. ಎಲ್ಲದರಲ್ಲೂ ಕವಿಗೆ ಚೆಲುವನ್ನೇ ಕಾಣುವ ಹಂಬಲ. ಆಥವಾ ಅನಿವಾರ್‍ಯತೆ ಎಂದೂ ಕರೆಯಬಹುದು. ಇದೆಲ್ಲವೂ ನಾಟಕದಲ್ಲಿ ಎಳೆಎಳೆಯಾಗಿ ವ್ಯಕ್ತವಾಗಿದೆ.
ಪ್ರೀತಿಗೊಂದು ವಯಸ್ಸಿದೆಯಾ? ಕೆಎಸ್‌ನ ಅವರಂತೂ ತಮ್ಮ ಕಡೇ ಕಾಲದ ತನಕ ಪ್ರೇಮ ಕವನಗಳನ್ನೇ ಬರೆದರು. ಒಲವನ್ನು ಸುದೀರ್ಘ ಕಾಲ ಕಾಯ್ದುಕೊಂಡ ಅವರ ತಾಕತ್ತು ದೊಡ್ಡದು. ಅರ್ಥವಾಗದಂತೆ ಬರೆಯುವುದೇ ಶ್ರೇಷ್ಠತೆ ಎಂಬ ನವ್ಯದ ಅಬ್ಬರದ ಮಧ್ಯೆ, ಕೆಎಸ್‌ನ ಭಿನ್ನ. ಅವರು ನವ್ಯ ಬರೆಯಲಿಲ್ಲವೆಂದಲ್ಲ. ಆದರೆ ಪ್ರೇಮಗೀತೆಗಳ ಸುಳಿಯಲ್ಲಿ ಅದು ತೆರೆಮರೆ.
೭೮ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಕವಿಯ ಬದುಕು, ಬಡತನ, ಅತೃಪ್ತಿ, ದುಗುಡ, ದುಮ್ಮಾನ, ಸಿಡುಕು, ಅಸಹಾಯಕತೆ, ಹಿರಿಮೆ ಮತ್ತು ಸಾವು ಇವೆಲ್ಲವೂ ನಾಟಕದ ವಸ್ತು. ಬಳೆಗಾರ ಚೆನ್ನಯ್ಯ ಬಾಗಿಲಿಗೆ, ತೌರ ಸುಖದೊಳಗೆನ್ನ, ಸಿರಿಗೆರೆಯ ನೀರಿನಲ್ಲಿ, ರಾಯರು ಬಂದರು, ನಿನ್ನ ಪ್ರೇಮದ ಪರಿಯ ಗೀತೆಗಳು ಸಾಂದರ್ಭಿಕವಾಗಿ ನಾಟಕದಲ್ಲಿ ಬಳಕೆಯಾಗಿವೆ. ಕತೆ ಮತ್ತು ಪದ್ಯಗಳು ಎಲ್ಲಿಯೂ ಬೇರೆಬೇರೆಯಾಗಿ ಕಾಣುವುದಿಲ್ಲ. ಇವೆರಡೂ ದಾರಕ್ಕೆ ಮಲ್ಲಿಗೆ ಮೊಗ್ಗು ಪೋಣಿಸಿದಂತೆ ಅಂದ ಮತ್ತು ಚೆಂದ. ಮೈಸೂರು ಮಲ್ಲಿಗೆ ಎಂದರೆ ಬಳೆಗಾರ ಚೆನ್ನಯ್ಯ ನೆನಪಾಗುತ್ತಾನೆ. ಆ ಪಾತ್ರ ಒಂದು ರೀತಿಯಲ್ಲಿ ಸೂತ್ರದಾರನಂತೆ ನಾಟಕದುದ್ದಕ್ಕೂ ನಿಲ್ಲುತ್ತದೆ. ಆತನ ಆಗಮನದೊಂದಿಗೆ ನಾಟಕ ಆರಂಭಗೊಳ್ಳುತ್ತದೆ. ಫ್ಲ್ಯಾಷ್‌ಬ್ಯಾಕ್‌ನಲ್ಲಿ ಕವಿಯ ಬದುಕು ಅನಾವರಣಗೊಳ್ಳುತ್ತದೆ. ಪ್ರತಿ ದೃಶ್ಯಕ್ಕೂ ಚೆನ್ನಯ್ಯ ಸಾಕ್ಷಿ ಬಿಂದು. ಶಾನುಭೋಗರ ಮಗಳು ಸೀತಮ್ಮಳ(ಕವಿಯ ಪತ್ನಿ) ಮರಿಮಗಳು ಮತ್ತು ಆಕೆಯ ಮೊಮ್ಮಕ್ಕಳನ್ನು ನವಿಲೂರಿನಲ್ಲಿ ಭೇಟಿ ಮಾಡುವ ಚೆನ್ನಯ್ಯ, ಹಳೆಯದನ್ನು ನೆನೆಯುತ್ತಾನೆ. ಆ ದಿನಗಳು ಹೇಗಿದ್ದವು, ಕೆಎಸ್‌ನ ಬದುಕು ಹೇಗಿತ್ತು ಎನ್ನುವುದನ್ನು ಹೇಳುತ್ತಾ ಹೋಗುತ್ತಾನೆ.
ಅಂದಿಗೂ ಇಂದಿಗೂ ಇರುವ ಬದಲಾವಣೆ ಕಂಡು ಚೆನ್ನಯ್ಯ ಅಚ್ಚರಿಪಡುತ್ತಾನೆ. ‘ಬೀಸೋ ಗಾಳಿ ಬದಲಾಗಿಲ್ಲ. ಹರಿಯೋ ನೀರು ಬದಲಾಗಿಲ್ಲ. ಮಲ್ಲಿಗೆ ಹೂವು ಬದಲಾಗಿಲ್ಲ. ಬೆಳದಿಂಗಳು ಬದಲಾಗಿಲ್ಲ. ಭೂಮಿ ಅಂಗೇ ಇದೆ. ಸೂರ್‍ಯನೂ  ಬದಲಾಗಿಲ್ಲ. ಆದರೆ ಈ ಮನುಷ್ಯ ಮಾತ್ರ ಈ ಪಾಟಿ ಬದಲಾಗಿದ್ದಾನೆ’ ಎನ್ನುವ ಅವನ ಮಾತು, ಆಧುನಿಕ ಪ್ರಪಂಚಕ್ಕೆ ಪ್ರಶ್ನೆ. ‘ಎಲ್ಲ ಬದಲಾದರೂ ಬದಲಾಗದ್ದು, ಈ ಹಳ್ಳಕೊಳ್ಳದ ರಸ್ತೆಗಳು ಮಾತ್ರ’ ಎನ್ನುವ ಮೂಲಕ ಆಡಳಿತ ಯಂತ್ರವನ್ನು ಚುಚ್ಚುತ್ತಾನೆ. ಇಂಥ ಮೊನಚು ಸಂಭಾಷಣೆ ನಾಟಕದುದ್ದಕ್ಕೂ ಬೆರೆತಿದೆ.
ಅಂದಿನ ವೈಭವ ನೆನೆಯುವ ಚೆನ್ನಯ್ಯ, ‘ಇಲ್ಲಿದ್ದ ತೆಂಗಿನ ಮರ ಎಲ್ಲಮ್ಮ?’ ಎನ್ನುತ್ತಾನೆ. ಕವಿಯ ಮರಿಮಗಳು, ‘ಅವನ್ನು ಕಡಿದು ಹಾಕಿದೆವು’ ಎನ್ನುತ್ತಾಳೆ. ‘ಕಲ್ಪವೃಕ್ಷಾನಾ ಎಲ್ಲಾದ್ರೂ ಕಡಿಯೋದುಂಟಾ.. ಅಯ್ಯೊ ಅಯ್ಯೊ’ ಎಂದು ಕೊರಗುತ್ತಾನೆ ಚೆನ್ನಯ್ಯ. ‘ಸುಮ್ಮನೇ ಕಡಿಯಲಿಲ್ಲ, ಪೂಜೆ ಮಾಡಿಯೇ ಕಲ್ಪವೃಕ್ಷ ಕಡಿಸಿದೆವು’ ಎನ್ನುವ ಉತ್ತರ ಕೇಳಿ, ತಲೆ ಚಚ್ಚಿಕೊಳ್ಳುತ್ತಾನೆ. ಕಾಣದ ಮಲ್ಲಿಗೆ ಚಪ್ಪರ ನೆನೆದು ಚೆನ್ನಯ್ಯ ಕುಗ್ಗಿ ಹೋಗುತ್ತಾನೆ.
ಎರಡು ಪೀಳಿಗೆಯ ಕೊಂಡಿಯಂತೆ ಕಾಣಿಸಿಕೊಳ್ಳುವ ಚೆನ್ನಯ್ಯ ದಾಹವೆಂದಾಗ ಪುಟಾಣಿಗಳು ಪೆಪ್ಸಿ ತಂದು ಕೊಡುತ್ತಾರೆ. ‘ನನಗಿದ್ದೆಲ್ಲ ಬೇಡ ನೀರು ಕೊಡಿ. ಇಲ್ಲೆಲ್ಲೋ ಸಿಹಿನೀರು ಬಾವಿ ಇದ್ದಲ್ಲ..  ಎಲ್ಲಿ?’ ಎಂದು ಚೆನ್ನಯ್ಯ ಹುಡುಕಾಡುತ್ತಾನೆ. ‘ಬಾವಿ ನೀರು ಕೆಟ್ಟಿದೆ’ ಎನ್ನುವುದನ್ನು ಕೇಳಿ, ‘ಇಲ್ಲ ಅದು ಕೆಟ್ಟಿಲ್ಲ .. ನೀವು ಕೆಡಿಸಿದ್ದೀರಿ’ ಎನ್ನುವ ಮೂಲಕ ಕುಟುಕುತ್ತಾನೆ. ಕವಿಯ ಮದುವೆ, ಆ ಸಂಭ್ರಮದ ಯೌವ್ವನ, ಪ್ರೇಮ ಇದು ಮೊದಲ ಭಾಗದಲ್ಲಿ ಅನಾವರಣಗೊಳ್ಳುತ್ತದೆ.
ಸಾಂಸಾರಿಕ ಬದುಕಿನ ಕಷ್ಟ, ದುಡ್ಡಿನ ಕಷ್ಟ, ಮಗಳ ದುರಂತ, ಗಂಡ-ಹೆಂಡತಿ ಪ್ರತ್ಯೇಕ ಜೀವನ ನಡೆಸುವುದು, ಮಗ ಬಂದು ಕರೆಯುವುದು, ಕವಿ ನಿರಾಕರಣೆ ಇವೆಲ್ಲವೂ ನಾಟಕದ ಎರಡನೇ ಭಾಗದಲ್ಲಿವೆ. ಮಗನ ಮೇಲಿನ ಕೋಪವನ್ನು ‘ಯಾತ್ರೆ’ ಕವಿತೆ ಮೂಲಕ ಕವಿ ತೀರಿಸಿಕೊಳ್ಳುತ್ತಾರೆ. ಮೊಮ್ಮಗನ ಮೇಲೆ ‘ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು’ ಪದ್ಯವನ್ನು ಬರೆದು, ಅದು ಮುಂದಿನವಾರದ ಸುಧಾದಲ್ಲಿ ಬರುತ್ತೆ. ದಯವಿಟ್ಟು ಓದು ಎಂದು ಮಗನಿಗೆ ಹೇಳುವ ಸಂದರ್ಭ ಭಾವನಾತ್ಮಕವಾಗಿದೆ.
ನೀವು ನೆಮ್ಮದಿಯಾಗಿದದ್ದನ್ನು ನಾ ಎಂದೂ ಕಂಡಿಲ್ಲ ಎನ್ನುವ ಪತ್ನಿ ಮಾತಿಗೆ, ‘ನೊಂದ್ಕೊಳ್ಳದಿದ್ರೆ ಕವಿತೆ ಹುಟ್ಟುತ್ತಾ? ನೆಮ್ಮದಿಯಿದ್ರೆ ಕವಿ ಕವಿತೆ ಹೇಗೆ ಬರೆಯುತ್ತಾನೆ?’ಎನ್ನುತ್ತಾರೆ. ಕೆಲಸದಲ್ಲಿನ ಪ್ರಾಮಾಣಿಕತೆ, ಸತ್ಯವಾಗಿ ಬದುಕಿದ ಹೆಮ್ಮೆ ಅವರ ಮಾತಲ್ಲಿ ಎದ್ದು ಕಾಣುತ್ತದೆ. ತಮ್ಮ ಬಡತನಕ್ಕೆ ಯಾರನ್ನೂ ಹೊಣೆ ಮಾಡದ ಅವರು, ಕಷ್ಟದಿಂದ ಹಣ್ಣಾಗುತ್ತಾರೆ. ‘ಸರಕಾರವನ್ನು ಕೇಳೋದು ಹೇಗೆ? ನಾ ಕೇಳಲಾರೆ. ಮಗನಿಗೆ ನಾ ಏನನ್ನೂ ನೀಡಲಿಲ್ಲ. ಈಗ ನಾ ಹೇಗೆ ಕೈವೊಡ್ಡಲಿ’ ಎನ್ನುವ ಮಲ್ಲಿಗೆ ಕವಿ ತಮ್ಮ ಸ್ವಾಭಿಮಾನ ಪ್ರದರ್ಶಿಸುತ್ತಾರೆ. ಈ ದೃಶ್ಯಗಳು ನೋಡುಗರ ಕಣ್ಣನ್ನು ತೇವಗೊಳಿಸುತ್ತವೆ. ಆ ಮಧ್ಯೆ ನೋವಿನಲ್ಲೂ ಕವಿ ಮತ್ತು ಅವರ ಪತ್ನಿ ನಲಿವನ್ನು ಕಾಣುತ್ತಾರೆ. ಅವರಿಬ್ಬರ ನಡುವಿನ ಸರಸ ಸಂಭಾಷಣೆ, ಮುದ್ದಣ ಮನೋರಮೆಯರ ನೆನಪಿಸುತ್ತದೆ.
ಕೇವಲ ೫೦೦೦ ರೂ.ಗಳಿಗೆ ತಮ್ಮ ಸಮಗ್ರ ಕಾವ್ಯದ ಹಕ್ಕುಗಳನ್ನು ಪಡೆದ ಪ್ರಕಾಶಕರ ಬಗ್ಗೆ ಕವಿಗೆ ಒಂದಿಷ್ಟೂ ಸಿಟ್ಟಿಲ್ಲ. ಒಳ್ಳೆ ಸಮಯದಲ್ಲಿ ಹಣ ನೀಡಿ ಉಪಕಾರ ಮಾಡಿದಿರಿ ಎನ್ನುತ್ತಾರೆ. ವಿಮರ್ಶಕರ ಬಗ್ಗೆ ಅಸಹನೆ ಹೊಂದಿರುವ ಕವಿ, ಪತ್ನಿಯನ್ನು ಶ್ರೇಷ್ಠ ವಿಮರ್ಶಕಿ ಅನ್ನುತ್ತಾರೆ. ಬದುಕಿದ್ದಾಗಲೇ ಸಾವಿನ ಸುದ್ದಿ ಪ್ರಕಟವಾದದ್ದನ್ನು ಕಂಡು ನೊಂದುಕೊಳ್ಳುತ್ತಾರೆ. ನಾನು ಸತ್ತ ನಂತರ, ಜನರು ನನ್ನನ್ನು ನೆನಪಲ್ಲಿಟ್ಟುಕೊಳ್ತಾರಾ ಎಂಬ ಅನುಮಾನ ಸಹಾ ಎಲ್ಲೋ ಒಂದು ಮೂಲೆಯಲ್ಲಿ. ಈ ಅಂಶಗಳ ಜತೆಗೆ  ನಾಟಕದಲ್ಲಿ ನೆನಪಲ್ಲಿ ಉಳಿಯುವ ಎರಡು ಮುಖ್ಯ ದೃಶ್ಯಗಳಿವೆ. ವೇದಿಕೆ ಮೇಲೆಯೇ ಹಳೆಯ ಮದುವೆ ದಿಬ್ಬಣ ನೆನಪಿಸುವ ದೃಶ್ಯವಂತೂ ಕಣ್ಣಿಗೆ ಹಬ್ಬ. ‘ಎಲ್ಲಿದ್ದಿಯೇ ಮೀನಾ’ ಪದ್ಯದ ಬಳಕೆ ದೃಶ್ಯಕಾವ್ಯವಾಗಿ ನೆನಪಲ್ಲಿ ನಿಲ್ಲುತ್ತದೆ.
ಮನೆ ಇಷ್ಟಪಡುವವರಿಗೆ ಮೈಸೂರು ಮಲ್ಲಿಗೆ ಇಷ್ಟವಾಗುತ್ತದೆ. ಪಪ್ ಇಷ್ಟಪಡುವವರಿಗೆ ನರಸಿಂಹಸ್ವಾಮಿ ಅರ್ಥವಾಗುವುದಿಲ್ಲ. ಇಂಥ ನಾಟಕಗಳು ಇನ್ನಷ್ಟು ಬರಲಿ. ಕನ್ನಡ ನಾಟಕಗಳನ್ನು ಇನ್ನಷ್ಟು ನೋಡಲು ಕನ್ನಡಿಗರು ಮನಸ್ಸು ಮಾಡಲಿ.