ಸಮ್ಮೇಳನಕ್ಕೊಂದು ಕಾಟಾಚಾರದ ವೆಬ್‌ಸೈಟ್‌!

ಸಾಮಾನ್ಯ

ಮಾಹಿತಿ ತಂತ್ರಜ್ಞಾನದ ಬಗ್ಗೆ ಮಾರುದ್ದದ ಭಾಷಣ ಬಿಗಿಯುವ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ, ವಿಶ್ವಕನ್ನಡ ಸಮ್ಮೇಳನವನ್ನು ಒಂದು ಒಳ್ಳೆಯ ವೆಬ್‌ಸೈಟ್‌ ಮೂಲಕ ಜಗತ್ತಿಗೆ ಕಟ್ಟಿಕೊಡಬೇಕು ಎಂಬ ಕನಿಷ್ಠ ಕಾಳಜಿಯಿಲ್ಲ. ಸಮ್ಮೇಳನದ ಅಂಗವಾಗಿ ಸರಕಾರ ರೂಪಿಸಿರುವ ವೆಬ್‌ಸೈಟ್‌ ಮತ್ತು ಬ್ಲಾಗ್‌ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ವಿಶ್ವ ಕನ್ನಡ ಸಮ್ಮೇಳನವೆಂದರೆ ಜಾಗತಿಕ ಹಬ್ಬ. ಜಗತ್ತಿನ ಮೂಲೆಮೂಲೆಯಲ್ಲಿನ ಕನ್ನಡಿಗರು ಸಂಭ್ರಮಿಸುವ ಹಬ್ಬ. ಈ ಎಲ್ಲರನ್ನು ಬೆಸೆಯಲು ಒಂದು ಒಳ್ಳೆಯ ವೆಬ್‌ಸೈಟ್‌ ಮಾಡಬೇಕೆಂದು ಸರಕಾರಕ್ಕೆ ಅನ್ನಿಸಿಲ್ಲ. ಸಮ್ಮೇಳನಕ್ಕಾಗಿಯೇ ಒಂದು ಅಧಿಕೃತ ವೆಬ್‌ಸೈಟ್‌ ಇಲ್ಲ. ಕಾಟಾಚಾರಕ್ಕೆ ಎಂಬಂತೆ ಬೆಳಗಾವಿ ಜಿಲ್ಲೆಯ ವೆಬ್‌ಸೈಟ್‌ನಲ್ಲೇ ಒಂದು ಭಾಗವಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ಸೇರಿಸಲಾಗಿದೆ(http://belgaum.nic.in/kannada_s_Sam/Index.html). . ಮಾರುದ್ದದ ಈ ಯುಆರ್‌ಎಲ್‌ ಯಾರಿಗೆ ತಾನೇ ನೆನಪಲ್ಲಿ ಉಳಿಯಲು ಸಾಧ್ಯ. ಹೋಗಲಿ ಈ ವೆಬ್‌ಸೈಟ್‌ ವ್ಯವಸ್ಥಿತವಾಗಿದೆಯೇ ಎಂದರೆ ಅದೂ ಇಲ್ಲ.

ಮನಸೋ ಇಚ್ಛೆ ವೆಬ್‌ಸೈಟ್‌ ರೂಪುಗೊಂಡಿದೆ. ಅಲ್ಲಿರುವ ವಿಷಯ ಮತ್ತು ವಿನ್ಯಾಸ ದೇವರಿಗೆ ಪ್ರಿಯ. ಸರಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಕಣ್ಣಿಗೆ ಕಾಣುವಂತಿದೆ. `ರ್ನಾಟಕ ಏಕೀಕರಣಗೊಂಡು.. ‘ ಎಂದು ವೆಬ್‌ಸೈಟ್‌ನ ಮುಖಪುಟದ ಲೇಖನ ಆರಂಭಗೊಳ್ಳುತ್ತದೆ. ಅಂದರೆ ಮೊದಲ ಸಾಲಿನ ಮೊದಲ ಪದವಾದ ಕರ್ನಾಟಕದಲ್ಲಿ `ಕ’ ಇಲ್ಲವೇ ಇಲ್ಲ! ಸಮ್ಮೇಳನದ ಮಹತ್ವ ವಿವರಿಸುವ ಎರಡು ಪ್ಯಾರಾ ಬರೆಯಲು ಆಗಿಲ್ಲ. ಸರಕಾರದ ಸುತ್ತೋಲೆಯಂತೆ ಮುಖಪುಟ ಕಾಣಿಸುತ್ತಿದೆ.

ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ವಿಷಯಗಳಿಗೆ ಸಂಬಂಧಿಸಿದ ಪುಟಗಳು ಲೆಕ್ಕಕ್ಕಷ್ಟೇ ಇವೆ. ಮುಖಪುಟ ವಿನ್ಯಾಸಕ್ಕೆ ಕಣ್ಣಿಗೆ ರಾಚುವಂತಹ ವರ್ಣಗಳ ಬಳಕೆಯಾಗಿದೆ. ಪುಟದ ಎಡ ಭಾಗದಲ್ಲಿನ ವಿಷಯ ಸೂಚಿಯಲ್ಲಿರುವುದನ್ನು ಓದಲು ಕನ್ನಡಕ ಬೇಕೇ ಬೇಕು! ಸಮ್ಮೇಳನದ ಹಿಂದಿನ ಇತಿಹಾಸ, ಸಮ್ಮೇಳನದ ಮಹತ್ವ, ನಾಡು ನುಡಿ ಪರಿಚಯ ಮಾಡಿಕೊಡುವ ಲೇಖನ ಮತ್ತು ಚಿತ್ರಗಳನ್ನು ಇಲ್ಲಿ ಕೇಳುವುದೇ ಬೇಡ.

ಸಮ್ಮೇಳನದ ಸಿದ್ಧತೆ ಅಥವಾ ನಾಡುನುಡಿಗೆ ಸಂಬಂಧಿಸಿದ ಒಂದೇ ಒಂದು ಚಿತ್ರಪಟ ಇಲ್ಲಿಲ್ಲ. ಇಂಥ ವೆಬ್‌ಸೈಟ್‌ಗೊಂದು ಗ್ಯಾಲರಿ ಬೇಕು ಎಂದು ಆಡಳಿತಯಂತ್ರಕ್ಕೆ ಅನ್ನಿಸಿಲ್ಲ. ಆಹ್ವಾನ ಪತ್ರಿಕೆ, ಸಮಿತಿಗಳು, ಸರಕಾರದ ಆದೇಶಗಳು, ಸಭಾ ನಡವಳಿಕೆಗಳು ಇಲ್ಲಿದ್ದು, ಸರಕಾರದ ಲೆಕ್ಕಪತ್ರ ವಿಭಾಗದ ವೆಬ್‌ಸೈಟ್‌ನಂತೆ ಇದು ರೂಪುಗೊಂಡಿದೆ. ನಾಡು ನುಡಿಯನ್ನು ಬಿಂಬಿಸುವ ಯಾವ ಮಾಹಿತಿಗಳೂ ಇಲ್ಲಿಲ್ಲ.

ನೋ ಅಪ್‌ಡೇಟ್ಸ್‌..
ವಿಶ್ವಕನ್ನಡ ಸಮ್ಮೇಳನದ ನೇರ ಪ್ರಸಾರ ಎಂದು ವೆಬ್‌ಸೈಟ್‌ನ ಮೇಲಿದ್ದರೂ, ಯಾವುದೇ ಅಪ್‌ಡೇಟ್‌ಗಳಿಲ್ಲ. ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿಶ್ವಕನ್ನಡ ಸಮ್ಮೇಳನ ವಿಭಾಗ ವೆಬ್‌ಸೈಟ್‌ಗೆ ಮಾಹಿತಿ ಒದಗಿಸಿದ್ದು, ಅವುಗಳ ಸಮರ್ಪಕ ಬಳಕೆಯ ಕೊರತೆ ಕಂಡು ಬಂದಿದೆ. ವೆಬ್‌ಸೈಟ್‌ ಎನ್ನುವುದು ಬಳಕೆದಾರರ ಸ್ನೇಹಿಯಾಗಿರಬೇಕು. ಆದರೆ ಇದೆಲ್ಲವೂ ಇಲ್ಲಿ ನಗಣ್ಯ.

ಮುಖ್ಯಮಂತ್ರಿಗಳ ಮುನ್ನುಡಿ ಎನ್ನುವ ಕೊಂಡಿಯನ್ನು ಕ್ಲಿಕ್‌ ಮಾಡಿದರೆ ಪೇಪರ್‌ನಲ್ಲಿ ಬಂದಿರುವ ಜಾಹೀರಾತು ಕಾಣಿಸುತ್ತದೆ. ಅದನ್ನು ಸ್ಕ್ಯಾನ್‌ ಮಾಡಿ ಪಿಡಿಎಫ್‌ ಮಾಡಲಾಗಿದ್ದು, ಓದುವುದು ಕಷ್ಟ. ಪಿಡಿಎಫ್‌ `ಡೌನಲೋಡ’ ಎಂಬ ಪದ ಪ್ರಯೋಗವೂ ಇಲ್ಲುಂಟು!

ಚಿತ್ರಗಳಿಗೆ ಬರವೇ?
ಬೆಳಗಾವಿಗೆ ಬರುವ ಕನ್ನಡಿಗರಿಗೆ ಸುತ್ತಲಿನ ಪ್ರವಾಸಿ ತಾಣಗಳ ಪರಿಚಯಿಸುವ ವ್ಯವಧಾನವೂ ವೆಬ್‌ಸೈಟ್‌ನಲ್ಲಿ ಇಲ್ಲ. ಪ್ರವಾಸಿ ತಾಣಗಳು ಪರಿಚಯ ಏನೇನೂ ಸಾಲದು. ಎರಡು ಸ್ಟಾಂಪ್‌ ಅಳತೆಯ ಚಿಕ್ಕ ಚಿತ್ರಗಳು ಇಲ್ಲಿದ್ದು, ಪ್ರವಾಸಿ ತಾಣಗಳ ದೊಡ್ಡ ಚಿತ್ರಗಳಿಗೆ ಇಷ್ಟು ಕೊರೆತೆ ಇದೆಯೇ ಅನಿಸುತ್ತದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಬಯಸುವಂತಿಲ್ಲ. ಇನ್ನಷ್ಟು ವಿವರಗಳಿಗೆ ಕ್ಲಿಕ್‌ ಮಾಡಿದರೆ, ಗೂಗಲ್‌ ನಕ್ಷೆ ಮತ್ತು ಮ್ಯಾಪ್‌ಎಕ್ಸೆಲ್‌ ಡಾಟ್‌ಕಾಮ್‌ ತೆರೆದುಕೊಳ್ಳುತ್ತವೆ. ಬೆಳಗಾವಿಗೆ ಸಂಬಂಧಿಸಿದ ಒಂದು ನಕ್ಷೆಯನ್ನು ಸಿದ್ಧಪಡಿಸಲು ಸಹ ಸರಕಾರ ವಿಫಲವಾಗಿದೆ. ನಗರ ನಕ್ಷೆಗೆ ಗೂಗಲ್‌ನತ್ತ ಬೆರಳು ತೋರಿಸಿ ಕೈತೊಳೆದುಕೊಳ್ಳಲಾಗಿದೆ.

ಬ್ಲಾಗ್‌ ಇಂಗ್ಲಿಷ್‌ಮಯ
ಸಮ್ಮೇಳನಕ್ಕಾಗಿ ಸರಕಾರ ರೂಪಿಸಿರುವ http://world-kannada-sammelana-belgaum-2011.blogspot.com/
ಬ್ಲಾಗ್‌ಗೆ ಹೋದರೆ, ಅಲ್ಲಿ ಇಂಗ್ಲಿಷ್‌ನದ್ದೇ ಕಾರುಬಾರು. `ಕರ್ನಾಟಕ ಸರಕಾರ, ವಿಶ್ವಕನ್ನಡ ಸಮ್ಮೇಳನ ಬೆಳಗಾವಿ’ ಎನ್ನುವುದನ್ನು ಬಿಟ್ಟರೆ ಎಲ್ಲವೂ ಇಂಗ್ಲಿಷ್‌ಮಯ. ವೆಬ್‌ಸೈಟ್‌ಗಿಂತ ಇಲ್ಲಿಯೇ ಅಪ್‌ಡೇಟ್‌ ಹೆಚ್ಚಿದ್ದು, ಒಂದಿಷ್ಟು ಮಾಹಿತಿ ಲಭ್ಯ.

ಕಿ.ರಂ. ಬಗ್ಗೆ ನನಗೆ ಅಸೂಯೆ!

ಸಾಮಾನ್ಯ

ಕಿ.ರಂ.ನಾಗರಾಜ್ ಅವರು ಕನ್ನಡ ಶ್ರವ್ಯ ಪರಂಪರೆಯ ನೇತಾರ. ಸಾಹಿತ್ಯ ಕಾರ್ಯಕ್ರಮದಲ್ಲಿ ಸಭಿಕರ ಮಧ್ಯೆ ಜಾಗ ಮಾಡಿಕೊಂಡು ಸಾಮಾನ್ಯರಂತೆಯೇ ಕೂರುತ್ತಿದ್ದ ಅವರ ಅಪಾರ ಓದಿನ ಬಗ್ಗೆ ನನಗೆ ಅಸೂಯೆ! ಅವರನ್ನು ಕಂಡಾಗಲೆಲ್ಲ ಬೆರಗು. ಬೇಂದ್ರೆ, ಅಡಿಗ, ಅಲ್ಲಮನ ಕಾವ್ಯಗಳ ಬಗ್ಗೆ ಮಾತು ತೆಗೆದರೆ ತಮ್ಮನ್ನು ತಾವೇ ಮರೆಯುತ್ತಿದ್ದರು. ಅವರ ಸಾಹಿತ್ಯ ನಿಶೆ ಕಂಡು ನನಗೆ ಹೊಟ್ಟೆ ಉರಿ.
‘ಕವಿತೆ ಕವಿತೆ ಅಷ್ಟೇ. ಅದು ಎಂದಿಗೂ ಘೋಷಣೆಯಾಗಬಾರದು, ಭಾಷಣವಾಗಬಾರದು. ಅದಕ್ಕೆ ಬೇರೇನೂ ಮಾಡಬೇಡಿ. ಅದರ ಪಾಡಿಗೆ ಬಿಡಿ’ ಎಂದಿದ್ದ ಕಿ.ರಂ ಇನ್ನಿಲ್ಲ.. ಛೇ, ಅವರು ಇನ್ನಷ್ಟು ದಿನ ತಮ್ಮ ಅಪಾರ ಓದಿನಿಂದ ನನ್ನ ಹೊಟ್ಟೆ ಉರಿಸಬೇಕಿತ್ತು..

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..

ಸಾಮಾನ್ಯ

ಇಂದು(ಆಗಸ್ಟ್ ತಿಂಗಳ ಮೊದಲ ಭಾನುವಾರ) ‘ಅಂತಾರಾಷ್ಟ್ರೀಯ ಸ್ನೇಹ ದಿನ’. ಸ್ನೇಹವೆಂದರೆ ವ್ಯಾಪಾರವೇ, ಸ್ನೇಹವೆಂದರೆ ಹರಟೆಯೇ, ಸ್ನೇಹವೆಂದರೆ ಬಂಧವೇ, ಸ್ನೇಹವೆಂದರೆ ಅಮೃತವೇ, ಸ್ನೇಹವೆಂದರೆ ಹುಚ್ಚಾಟವೇ?

ನಾವು ಪರೀಕ್ಷೆಗೆ ಹೊರಟಾಗ ‘ಆಲ್ ದಿ ಬೆಸ್ಟ್’ ಎಂದು ಹೇಳುವವ ಮಿತ್ರ. ಅದೇ ಪರೀಕ್ಷೆ ಹಾಲ್‌ಗೆ ಬಂದು, ಕಾಪಿ ಚೀಟಿ ಎಸೆಯುವವ ಆಪ್ತಮಿತ್ರ! ತಪ್ಪು ಮಾಡಿ ನಾವು ಜೈಲು ಸೇರಿದಾಗ, ಜಾಮೀನಿಗಾಗಿ ನಮ್ಮ ಪರವಾಗಿ ಸುತ್ತಾಡುವವ ಮಿತ್ರ. ಪಕ್ಕದಲ್ಲೇ ಕೂತು, ಕಂಬಿ ಎಣಿಸುವವ ಆಪ್ತಮಿತ್ರ! – ಮಿತ್ರ ಮತ್ತು ಆಪ್ತಮಿತ್ರನಿಗಿರುವ ವ್ಯತ್ಯಾಸವನ್ನು ನನ್ನ ಗೆಳೆಯ ಪ್ರಹ್ಲಾದ ಮೊನ್ನೆ ವ್ಯಾಖ್ಯಾನಿಸಿದ್ದು ಹೀಗೆ!

ಪ್ರಹ್ಲಾದ ನಿಮಗೆ ಮಿತ್ರನೋ, ಆಪ್ತಮಿತ್ರನೋ ಎಂದು ಕೇಳಿ, ನನ್ನನ್ನು ಇಕ್ಕಟ್ಟಿಗೆ ತಳ್ಳಬೇಡಿ. ಪ್ರಹ್ಲಾದ ಹೇಳಿದ್ದು ಕುತರ್ಕ ಎಂದು ತಳ್ಳಿಹಾಕಿದರೂ, ಒಲಿತು-ಕೆಡಕಿಗೆಲ್ಲ ಸ್ನೇಹವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಬ್ಬ ವ್ಯಕ್ತಿಯ ಗುಣಾವಗುಣಗಳನ್ನು ಅಳೆಯಲು ಆತನನ್ನೇ ನೋಡಬೇಕು ಎಂದೇನಿಲ್ಲ, ಆತನ ಮಿತ್ರರನ್ನು ನೋಡಿದರೂ ಸಾಕು. ಅಂದಹಾಗೇ, ಸ್ನೇಹಿತರನ್ನು ಹುಡುಕಿಕೊಳ್ಳುವಾಗ ಎಚ್ಚರಿಕೆವಹಿಸಬೇಕಾ? ಅಳೆದೂ ತೂಗಿ ಮಾಡಿಕೊಳ್ಳುವ ಸಂಬಂಧ ಮದುವೆಯಾಗುತ್ತದೆಯೇ ಹೊರತು, ಸ್ನೇಹವಾಗಲು ಹೇಗೆ ಸಾಧ್ಯ?

‘ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು..’ ಎಂದು ಆರಂಭಗೊಳ್ಳುವ ಚೆನ್ನವೀರ ಕಣವಿ ಬರೆದಿದ್ದ ಪದ್ಯವೊಂದು ನಮಗೆ ಏಳನೇ ತರಗತಿಯಲ್ಲಿ ಪಠ್ಯವಾಗಿತ್ತು. ಗೆಳೆತನದ ಮಹತ್ವ ವಿವರಿಸುವ ಆ ಪದ್ಯವನ್ನು ಮೇಷ್ಟ್ರು ಓದುವಾಗ ಅದೇಕೋ ಪುಳಕಿತನಾಗಿದ್ದೆ.

‘ಗೆಳೆತನವೆ ಚಿರಬಾಳ ಸಂಜೀವಿನಿ ವಿಶ್ವದಂತಃಕರಣ ಮಂದಾಕಿನಿ’ ಮತು ‘ಜೀವ ಜೀವಕೆ ಇಂಬುಕಯ್ವವರು ನಾಲ್ವರಿರೆ ಚದುರಂಗ ಬಲವಿದಕೆ ಯಾವ ಸಾಟಿ’ ಎನ್ನುವ ಸಾಲುಗಳನ್ನು ಮರೆಯಲಾದೀತೆ?

‘ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ..
ಆಟದೆ ಸೋತು, ರೋಷದೆ ಕಚ್ಚಿದ;
ಗಾಯವ ಮರೆತಿಲ್ಲ ಅಹ ಅಹ!’

ಎನ್ನುತ್ತಾ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಳ್ಳುವುದೇ ಒಂದು ಆನಂದ. ಗೆಳೆಯರ ಜತೆ ಈಜಿದ್ದು, ಮಾವಿನ ಕಾಯಿ ಕದ್ದು ತಿಂದದ್ದು, ಊರೆಲ್ಲ ಸುತ್ತಿದ್ದು ಎಲ್ಲವೂ ಮನದ ಚಿತ್ರಶಾಲೆಯಲ್ಲಿ ಮಧುರಾತಿಮಧುರ ಚಿತ್ರಪಟಗಳು.

‘ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಎನ್ನುತ ನಾನು, ಕೆಣಕಲು ನಿನ್ನ,
ಎನ್ನುತ ನಾನು, ಕೆಣಕಲು ನಿನ್ನ ಉದಿಸಿದೆ ಕೆನ್ನೆ ಹೇ
ನಾನದ ಮರೆಯುವೆನೆ?’

ತುಂಬ ವರ್ಷಗಳ ನಂತರ ಹಳೆಯ ಗೆಳೆಯನೊಬ್ಬ ಆಕಸ್ಮಿಕವಾಗಿ ಸಿಕ್ಕಿದಾಗ, ಹಳೆಯ ನೆನಪುಗಳನ್ನು ಕೆದಕಿದಾಗ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಉಲ್ಲಾಸ. ಶಾಲಾ ದಿನಗಳಿಗೆ ಜಾರುವುದೇ ಒಂದು ಮಧುರ ಅನುಭೂತಿ. ಶಾಲೆಯ ಉಪ್ಪಿಟ್ಟು, ಸ್ವಾತಂತ್ರ್ಯ ದಿನಾಚರಣೆಯ ದಿನ ಧ್ವಜ ಹಿಡಿದು ಊರಲ್ಲಿ ಮೆರವಣಿಗೆ ಹೋಗಿದ್ದು, ಗಣೇಶೋತ್ಸವದಲ್ಲಿ ಸಂಭ್ರಮಿಸಿದ್ದು, ಡುಮ್ಮಿ ಮೇಡಂ ಸಿಟ್ಟು, ಮನೆಗೆ ನೀರು ತುಂಬಿಸಿದ ಥ್ರಿಲ್ ಮೇಷ್ಟ್ರ ದುರ್ಬುದ್ಧಿ -ಹೀಗೆ ಎಷ್ಟೊಂದು ವಿಷಯಗಳು.

‘ಮೈ ಆಟೋಗ್ರಾಫ್’ ಸಿನಿಮಾ ಯಶಸ್ಸಿಗೆ ಕಾರಣವಾದದ್ದು ಸ್ನೇಹದ ಭಾವ. ಗೆಳೆಯರನ್ನೆಲ್ಲ ಮದುವೆ ವೇಳೆ ಸೇರಿಸುವ ಚಿತ್ರದ ನಾಯಕನ ಸಂಭ್ರಮವನ್ನು ಪ್ರೇಕ್ಷಕರೂ ಹಂಚಿಕೊಂಡರು.

ಒಳ್ಳೆಯ ಸ್ನೇಹಿತನೊಬ್ಬ ಜತೆಯಲ್ಲಿದ್ದರೆ ಏಳು ಬೆಟ್ಟಗಳ ಹತ್ತಿಳಿದು, ಸಪ್ತ ಸಾಗರಗಳ ಈಜುವುದು ಕಷ್ಟವಾಗಲಾರದು! ಎಲ್ಲವೂ ಕಮರ್ಷಿಯಲೈಜ್ ಆಗುತ್ತಿರುವ ಈ ದಿನಗಳಲ್ಲಿ ಸ್ನೇಹವೂ ಮಾರಾಟದ ಸರಕು. ಸ್ನೇಹಿತರು ಬೇಕಾ? ಸ್ನೇಹಿತರಿಗಾಗಿ ಕಾಲ್ ಮಾಡಿ, ಚಾಟ್ ಮಾಡಿ ಎನ್ನುವ ಜಾಹೀರಾತುಗಳು ಅಚ್ಚರಿಯಾಗೇನೂ ಇಂದು ಉಳಿದಿಲ್ಲ.

ಉತ್ತಮ ಅಥವಾ ಮಾದರಿ ಸ್ನೇಹಕ್ಕೆ ರಾಮಾಯಣ ಮತ್ತು ಮಹಾಭಾರತದಲ್ಲೂ ಉದಾಹರಣೆಗಳಿವೆ. ಅಲ್ಲಿ ಅಪ್ತ ಸ್ನೇಹಿತರಿದ್ದಾರೆ. ರಾಮಾಯಣದಲ್ಲಿ ಸುಗ್ರೀವ ಮತ್ತು ರಾಮನ ಸ್ನೇಹ, ಮಹಾಭಾರತದಲ್ಲಿ ಕೃಷ್ಣ ಮತ್ತು ಅರ್ಜುನನ ಸ್ನೇಹವನ್ನು ಕಾಣಬಹುದು. ಇಲ್ಲಿ ಸ್ನೇಹಕ್ಕಿಂತಲೂ ಅನುಕೂಲಸಿಂಧು ಮೈತ್ರಿಯೇಎದ್ದು ಕಾಣುತ್ತದೆ. ಇವರೆಲ್ಲರಿಗಿಂತಲೂ ಮಿಗಿಲಾದ ಸ್ನೇಹ ದುರ್ಯೋಧನ ಮತ್ತು ಕರ್ಣ ಅವರದು.

ಒಂದು ಸಲ ದುರ್ಯೋಧನನ ಪತ್ನಿ ಭಾನುಮತಿ ಮತ್ತು ಕರ್ಣ ಪಗಡೆಯಾಡುತ್ತಿರುತ್ತಾರೆ. ಪಗಡೆಯಾಟದಲ್ಲಿ ಸೋತ ಭಾನುಮತಿ, ತಾನು ಪಣವಾಗಿಟ್ಟಿದ್ದ ಸರವನ್ನು ನೀಡಲು ನಿರಾಕರಿಸುತ್ತಾಳೆ. ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕರ್ಣನು ಎಳೆದಾಗ ಅದು ಹರಿದು ಮಣಿಗಳು ಚೆಲ್ಲಾಪಿಲ್ಲಿಯಾಗುತ್ತವೆ. ಅದೇ ಸಮಯಕ್ಕೆ ಅಲ್ಲಿಗೆ ದುರ್ಯೋಧನ ಪ್ರವೇಶಿಸುತ್ತಾನೆ. ಭಾನುಮತಿ ಮತ್ತು ಕರ್ಣನಿಗೆ ಒಂದು ಕ್ಷಣ ಏನು ಮಾಡಬೇಕು ಎಂಬುದೇ ದೋಚುವುದಿಲ್ಲ.

ಆಗ ದುರ್ಯೋಧನ ನೆಲದಲ್ಲಿ ಬಿದ್ದಿದ್ದ ಮಣಿಗಳನ್ನು ಆಯುತ್ತಾ, ‘ಪಣವೆಂದರೆ ಪಣ. ನೀನು ಗೆದ್ದಿರುವೆ. ಸರ ನಿನಗೇ ಸೇರಬೇಕು. ಒಂದು ಮಣಿಯನ್ನೂ ಬಿಡಬೇಡ. ಎಲ್ಲವೂ ನಿನ್ನದೇ. ಎಲ್ಲ ಮಣಿಗಳನ್ನೂ ನಾನೇ ಆಯ್ದು ಕೊಡುತ್ತೇನೆ’ ಎನ್ನುತ್ತಾನೆ.

ಆ ಸಂದರ್ಭದಲ್ಲಿ ಬೇರೆ ಯಾರಾದರೂ ಆಗಿದ್ದರೆ ಮಿತ್ರನ ವಿರುದ್ಧ ಕಿಡಿಕಾರುತ್ತಿದ್ದರು. ಕರ್ಣನ ಸಲಿಗೆಯನ್ನು ತಪ್ಪಾಗಿ ಭಾವಿಸುತ್ತಿದ್ದರು. ಆದರೆ ದುರ್ಯೋಧನನಿಗೆ ಕರ್ಣ ಎಂಥವನು ಎಂಬುದು ಗೊತ್ತಿತ್ತು.

ಕಾಲವನ್ನು ತಡೆಯೋರು ಯಾರೂ ಇಲ್ಲ ಎಂಬಂತೆ ದಿನಗಳು ಬದಲಾಗಿವೆ. ಆದರೂ ಸ್ನೇಹದ ಮಹತ್ವ, ಸ್ನೇಹದ ದಾಹ ಮನುಷ್ಯರಲ್ಲಿ ಹಿಂಗಿಲ್ಲ. ಹೀಗಾಗಿಯೇ ಆರ್ಕುಟ್, ಫೇಸ್‌ಬುಕ್, ಟ್ರಿಟರ್‌ನಂತಹ ಸೋಷಿಯಲ್ ನೆಟ್‌ವರ್ಕ್ ವೆಬ್‌ಸೈಟ್‌ಗಳು ಜನಪ್ರಿಯ. ಇದು ಚಾಟಿಂಗ್ ಫ್ರೆಂಡ್ಸ್, ಫೋನ್ ಫ್ರೆಂಡ್ಸ್‌ಗಳ ಕಾಲ.

ಸ್ನೇಹ ಅರಳಲು ಯಾವುದೇ ಕಾರಣಗಳು ಬೇಕಿಲ್ಲ. ಅವನ್ಯಾರೋ, ಇವನ್ಯಾರೋ? ಗೆಳೆಯರಾಗುವ ಮುನ್ನ ಅಪರಿಚಿತರು. ನಂತರ ಫೆವಿಕಾಲ್ ಹಾಕಿದಂತೆ ಅಂಟಿಕೊಳ್ಳುತ್ತಾರೆ. ಪರಿಚಯಕ್ಕೆ ಕಾರಣಗಳಿರುತ್ತವೆಯೇ ಹೊರತು, ಗೆಳೆತನಕ್ಕೆ ಕಾರಣಗಳಿರುವುದಿಲ್ಲ. ಕಾರಣಗಳಿದ್ದರೇ, ಅದು ಗೆಳೆತನವಾಗಲು ಹೇಗೆ ಸಾಧ್ಯ?

ನಮ್ಮ ತಂದೆ ಹೇಳುತ್ತಿದ್ದರು; ‘ನಾವು ಪರಿಚಿತರನ್ನೆಲ್ಲ ಗೆಳೆಯರೆಂದೇ ಕರೆಯುತ್ತೇವೆ. ಪರಿಚಿತರೇ ಬೇರೆ. ಗೆಳೆಯರೇ ಬೇರೆ. ನನ್ನ ಈ ಸುದೀರ್ಘ ಬದುಕಿನಲ್ಲಿ ನನಗೆ ಸಿಕ್ಕಿದ್ದು ಒಬ್ಬನೇ ಒಬ್ಬ ಗೆಳೆಯ. ಅಂತಹ ಒಬ್ಬ ಗೆಳೆಯ ಸಿಕ್ಕರೂ ಸಾಕು, ನೂರು ಆನೆಯ ಶಕ್ತಿ ಬರುತ್ತದೆ’.

ಒಂದೇ ತರಗತಿಯಲ್ಲಿ ಓದಿದ ಮಾತ್ರಕ್ಕೆ, ಅಕ್ಕಪಕ್ಕ ಕೂತ ಮಾತ್ರಕ್ಕೆ, ಒಂದೇ ಕಚೇರಿಯಲ್ಲಿ ಕೆಲಸ ಮಾಡಿದ ಮಾತ್ರಕ್ಕೆ ಗೆಳೆಯರಾಗಲು ಸಾಧ್ಯವೇ? ಎರಡು ಹೃದಯಗಳಲ್ಲಿ ಸ್ನೇಹದ ಹೊಳೆ ಹರಿಯದಿದ್ದರೇ, ಬಂಧವೂ ಇಲ್ಲ, ಸಂಬಂಧವೂ ಇಲ್ಲ.

ಸ್ನೇಹದ ಬಗ್ಗೆ ದಿನಕ್ಕೆ ಹತ್ತು ಎಸ್ಸೆಮ್ಮೆಸ್ ಕಳಿಸುವ ವ್ಯಕ್ತಿಯ ಬಳಿ, ಒಂದೇ ಒಂದು ಸಹಾಯ ಕೇಳಿ ನೋಡಿ.. ಬಣ್ಣ ಬಯಲಾಗುತ್ತದೆ. ಆತ ನಿಮಗಾಗಿ ಯಾರೋ ಕಳಿಸಿದ ಎಸ್ಸೆಮ್ಮೆಸ್‌ಗಳನ್ನಷ್ಟೇ ಫಾರ್ವರ್ಡ್ ಮಾಡುತ್ತಾನೆ! ಎಸ್ಸೆಮ್ಮೆಸ್ ಸೇವೆ ಅವರ ಮೊಬೈಲ್‌ನಲ್ಲಿ ಉಚಿತವಿದ್ದರೇ ಮಾತ್ರ ಈ ಸೇವೆ ಮುಂದುವರಿಯುತ್ತದೆ! ಇವರನ್ನು ‘ಎಸ್ಸೆಮ್ಮೆಸ್ ಗೆಳೆಯ’ ಎನ್ನೋಣವೇ?

ನಾನು ಪದವಿ ತರಗತಿಯಲ್ಲಿ ಓದುವಾಗ ಒಬ್ಬ ಪರಿಚಿತನಾಗಿದ್ದ. ಏನಾದರೂ ಸಹಾಯ ಬೇಕಿದ್ದರೆ ಮಾತ್ರ ಜೊತೆಯಲ್ಲಿರುತ್ತಿದ್ದ. ಈಗಲೂ ಅವನು ಕರೆ ಮಾಡಿದನೆಂದರೆ, ‘ನಟೇಶ ನಿನ್ನಿಂದ ನನಗೊಂದು ಹೆಲ್ಪ್ ಆಗಬೇಕಿತ್ತಲ್ಲ..’ ಎನ್ನುವುದೇ ಆತನ ಮೊದಲ ಮಾತು. ನಾನು ‘ಇಲ್ಲ’ ಎಂದರೆ, ಫ್ರೆಂಡ್‌ಗಾಗಿ ಇಷ್ಟೂ ಮಾಡುವುದಿಲ್ಲವೇ ಎಂಬ ಒಗ್ಗರಣೆ ಬೇರೆ ಇರುತ್ತದೆ.

ಇನ್ನೂ ಕೆಲವರಿರುತ್ತಾರೆ. ಅವರಿಗೆ ಅವರ ಕಷ್ಟಗಳಷ್ಟೇ ದೊಡ್ಡವು! ಸಮಯ ಸಿಕ್ಕರೇ ಸಾಕು, ಕಷ್ಟಗಳ ಪಟ್ಟಿಯನ್ನು ಒಪ್ಪಿಸುತ್ತಿರುತ್ತಾರೆ. ಸದಾ ಅನುಕಂಪವನ್ನು ಕೋರುತ್ತಿರುತ್ತಾರೆ. ಅವರದು ಮುಗಿಯದ ಗೋಳು. ಕಷ್ಟಗಳಿಲ್ಲದ ಮನುಷ್ಯರು ಜಗತ್ತಿನಲ್ಲಿ ಯಾರಿದ್ದಾರೆ ಹೇಳಿ? ಕಷ್ಟಗಳ ಮಧ್ಯೆಯೂ ಬದುಕುತ್ತಿರುವ ನಾವು ದೊಡ್ಡ ‘ಮಹಾತ್ಮ’ರು ಎಂದು ಬಿಂಬಿಸಿಕೊಳ್ಳುವ ಕೆಲವರ ಕಾಯಿಲೆಗೆ ಔಷಧಿಯಿಲ್ಲ.

ಜಾಗತೀಕರಣದ ಈ ದಿನಗಳಲ್ಲಿ ಗೆಳೆತನವನ್ನು ವ್ಯವಹಾರವಾಗಿ ಬದಲಿಸಿಕೊಳ್ಳಿ ಎನ್ನುವ ಸಲಹೆಗಳೂ ಇವೆ. ಎಲ್‌ಐಸಿ ಪಾಲಿಸಿಗಾಗಿ ಗಂಟು ಬೀಳುವ ಗೆಳೆಯರಿದ್ದಾರೆ. ನಮ್ಮ ಪಾಲಿಸಿ ಜೊತೆಗೆ ನಮ್ಮ ಆಪ್ತರ ಪಾಲಿಸಿಗಳನ್ನೂ ಕೊಡಿಸಬೇಕಂತೆ. ಇವರನ್ನು ‘ಎಲ್‌ಐಸಿ ಗೆಳೆಯ’ ಅನ್ನೋಣವೇ?

ಸ್ನೇಹ ಮಾಡುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ ಅನ್ನುತ್ತಾರೆ ಕೆಲವರು. ಉಳಿಸಿಕೊಳ್ಳಲು ಅದೇನು ಕದ್ದ ದುಡ್ಡಾ? ಉಳಿಯಲಿಲ್ಲ ಎಂದರೆ ಅಲ್ಲಿ ಸ್ನೇಹವಿರಲಿಲ್ಲ ಎಂದರ್ಥ. ಅಲ್ಲಿ ಪರಸ್ಪರ ಅವಶ್ಯಕತೆಗಳಿದ್ದವು ಅಷ್ಟೆ.

ಪ್ರೀತಿ, ಸಹೋದರ ಭಾವ, ರಕ್ಷಣೆ, ಮಾರ್ಗದರ್ಶನ, ಆತ್ಮೀಯತೆ, ಟೀಕೆ -ಇದೆಲ್ಲವೂ ಗೆಳೆತನದಲ್ಲಿ ಇವೆ. ಜತೆಗೆ ಇನ್ನೂ ಏನೇನೋ ಇದೆ. ‘ನನಗೊಬ್ಬ ಒಳ್ಳೆಯ ಗೆಳೆಯ ಸಿಕ್ಕಲಿಲ್ಲ’ ಎಂದು ನಾವು ಆಗಾಗ ಗೊಣಗುತ್ತಿರುತ್ತೇವೆ ಅಥವಾ ಯಾರಿಗಾದರೂ ಹೇಳುತ್ತಿರುತ್ತೇವೆ. ಆದರೆ, ‘ನಾನು ಒಳ್ಳೆ ಗೆಳೆಯನೇ?’ ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದು ನಮ್ಮತ್ರ ಇರೋದಿಲ್ವೋ ಅದನ್ನು ಇನ್ನೊಬ್ಬರಲ್ಲಿ ಹುಡುಕುವ ಸ್ವಭಾವ ನಮ್ಮದು!

ಫ್ರೆಂಡ್‌ಶಿಫ್‌ಗೊಂದು ಡೇ!

ಅಮ್ಮನಿಗೊಂದು ದಿನ, ಅಪ್ಪನಿಗೊಂದು ದಿನ, ಪ್ರೇಮಿಗಳಿಗೊಂದು ದಿನ ಇದ್ದ ಮೇಲೆ ಗೆಳೆತನಕ್ಕೊಂದು ದಿನ ಬೇಡವೇ? ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ‘ಅಂತಾರಾಷ್ಟ್ರೀಯ ಸ್ನೇಹ ದಿನ’ವಾಗಿ ಆಚರಿಸಲಾಗುತ್ತಿದೆ. ಆ ದಿನವನ್ನು ಗೆಳೆಯರಿಗೆ ಅರ್ಪಿಸುವ ಪರಿಪಾಠವನ್ನು ಆರಂಭಿಸಿದ್ದು ಅಮೆರಿಕ. ೧೯೩೫ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ಫ್ರೆಂಡ್‌ಶಿಫ್ ಡೇ ಎಂದು ಅಮೆರಿಕದ ಸಂಸತ್ ಘೋಷಿಸಿತು. ಅದು ಹೀಗೆಯೇ ಮುಂದುವರಿದಿದೆ. ಅಮೆರಿಕದಲ್ಲಿ ಇದು ಜನಪ್ರಿಯವಾದ ನಂತರ ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳೂ ಈ ಪದ್ಧತಿಯನ್ನು ಅನುಸರಿಸುತ್ತಿವೆ. ಶಾಲೆ ಕಾಲೇಜುಗಳಲ್ಲಿ ಫ್ರೆಂಡ್‌ಶಿಫ್ ಕ್ರೇಜ್ ಆರಂಭಗೊಂಡಿದೆ. ಫ್ರೆಂಡ್‌ಶಿಫ್ ಕಾರ್ಟ್, ಗಿಫ್ಟ್, ಫ್ರೆಂಡ್‌ಶಿಫ್ ಬ್ಯಾಂಡ್‌ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಆನ್‌ಲೈನ್‌ನಲ್ಲೂ ಮಾರಾಟದ ಭರಾಟೆ ಕಾಣಿಸುತ್ತಿದೆ. ಸ್ನೇಹವನ್ನು ವಾಣಿಜ್ಯೀಕರಣ ಮಾಡಲಾಗಿದ್ದು, ಫ್ರೆಂಡ್‌ಶಿಫ್ ಡೇ ಎನ್ನುವುದು ಮಾರ್ಕೆಂಟಿಂಗ್ ಗಿಮಿಕ್.

ಏನು ಕೊಡಲಿ ಗಿಫ್ಟ್?
ಶುಭಾಶಯ ಪತ್ರ, ನೆಚ್ಚಿನ ಸಿ.ಡಿ ಅಥವಾ ಪುಸ್ತಕ, ಶೋ ಫೀಸ್, ಫೋಟೊ ಫ್ರೇಮ್, ಫೋಟೊ ಆಲ್ಬಮ್, ಪೆನ್ನು, ಡೈರಿ, ಬರೆಯುವ ಪ್ಯಾಡ್, ಗಡಿಯಾರ, ಬೀಗದ ಕೈ, ಪೆನ್ ಸ್ಟ್ಯಾಂಡ್, ಎಲೆಕ್ಟ್ರಾನಿಕ್ ನೋಟ್‌ಬುಕ್ ಮತ್ತಿತರ ವಸ್ತುಗಳನ್ನು ಮಿತ್ರರಿಗೆ ನೀಡುವ ಪರಿಪಾಠ ಬೆಳೆದು ಬಂದಿದೆ. ಇದೆಲ್ಲದರ ಬದಲಿಗೆ ಗೆಳೆಯನಿಗಾಗಿ ನಿಮ್ಮ ‘ಬೆಲೆಕಟ್ಟಲಾಗುವ ಸಮಯ’ವನ್ನು ಕೊಡಬಹುದು! ನಿಜ ಹೇಳಿ, ನಿಮ್ಮ ಜೀವದ ಗೆಳೆಯನನ್ನು ಭೇಟಿ ಮಾಡಿ ಎಷ್ಟು ದಿನ ಅಥವಾ ವರ್ಷವಾಯಿತು? ಅಟ್ ಲೀಸ್ಟ್ ಫೋನ್ ಮಾಡಿ ಯಾವ ಕಾಲವಾಯಿತು?

ಸಿಂಪ್ಲಿ ಟಾಕ್ ಮಾಡೋದನ್ನು ಸ್ಟಾಪ್ ಮಾಡೋಣ್ವಾ?

ಸಾಮಾನ್ಯ

ಭಾಷೆ ಎಂದರೆ ಭಾವಾವೇಶ. ಎದೆಯ ತುಂಬ ನವೋಲ್ಲಾಸ. ಭಾಷೆ ಎಂದರೆ ಪುಳಕ. ಭಾಷೆ ಎನ್ನುವುದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ಒಂದು ನಾಡಿನ ಜೀವನಾಡಿ. ಅದೊಂದು ಸಂಸ್ಕೃತಿ, ಅದೊಂದು ಪರಂಪರೆ. ಭಾಷೆಯಿಂದಲೇ ಬೆಳಕು. ಭಾಷೆಯಿಂದಲೇ ಬದುಕು. ಮಾತೃಭಾಷೆ ಪ್ರಾಮುಖ್ಯವನ್ನು ಅರ್ಥಮಾಡಿಕೊಂಡವರು ಈ ಮಾತುಗಳನ್ನು ಒಪ್ಪುತ್ತಾರೆ ಎನ್ನುವುದು ನನ್ನ ಅಭಿಮತ.

ಭಾಷೆ ಉಳಿದಾಗ ಮಾತ್ರ ನಾಡು ಉಳಿಯುತ್ತದೆ, ಬೆಳೆಯುತ್ತದೆ. ಹೀಗಾಗಿ ನಾಡು-ನುಡಿ ಕಾಯುವ ಕೆಲಸ ಅತ್ಯಂತ ಮಹತ್ವದ್ದು. ದುರದೃಷ್ಟವೆಂದರೆ; ಚಂಪಾ ಹೇಳುವಂತೆ; ಈವರೆಗೆ ಕನ್ನಡ ಸರಕಾರಗಳು ಬರಲೇ ಇಲ್ಲ. ಬರುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪಕ್ಕದ ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಂತೆ ಇಲ್ಲಿ ಭಾಷಾ ರಾಜಕೀಯ ನಡೆಯುವುದಿಲ್ಲ. ಭಾಷೆಗೆ ರಾಜಮಾನ್ಯತೆ ದೊರೆಯುವುದಿಲ್ಲ. ರಾಜ್ಯೋತ್ಸವದ ತಿಂಗಳು ಬಿಟ್ಟರೆ, ಕನ್ನಡದ ಸದ್ದು ಹೊಸ್ತಿಲು ದಾಟುವುದಿಲ್ಲ.

ನಮ್ಮ ನಾಡಿನ ಜನಪ್ರತಿನಿಧಿಗಳು ಕನ್ನಡ ಕಲಿಸುವ ಕೆಲಸಕ್ಕಿಂತ, ಹಿಂದಿ-ಇಂಗ್ಲಿಷ್ ಕಲಿಯುವಲ್ಲಿಯೇ ಗಮನಹರಿಸಿದ್ದು ವಿಷಾದಕರ. ಇಂಗ್ಲಿಷ್ ತಿಳಿಯದೆಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರೊಬ್ಬರು ಕೀಳರಿಮೆಯಿಂದ ನರಳಿದ್ದು, ತಮ್ಮ ಕೀಳರಿಮೆಯನ್ನೇ ಸಾರ್ವತ್ರೀಕರಣಗೊಳಿಸಿದ್ದು ಅಕ್ಷಮ್ಯ. ಈ ನಾಡಿನ ರಾಜಕಾರಣಿಗಳು ಟಿ.ವಿ ಚಾನೆಲ್‌ಗಳ ಎದುರು ಮುರುಕು ಇಂಗ್ಲಿಷ್‌ನಲ್ಲಿ ಸಂವಹನ ನಡೆಸಿ ನಗೆಪಾಟಲಿಗೀಡಾದ ಪ್ರಸಂಗ ಇನ್ನೂ ಹಸಿಯಾಗಿದೆ. ತಮಿಳಿನಲ್ಲಿಯೇ ನುಡಿಯುವ ಮತ್ತು ಕೆಮ್ಮುವ ಕರುಣಾನಿಧಿ ಮತ್ತು ಜಯಲಲಿತಾ ನಮ್ಮವರಿಗೆ ಮಾದರಿಯಾಗಬಾರದೇ?

ಮಾತೃ ಭಾಷೆ ಬಗ್ಗೆ ಪ್ರೇಮವಿಲ್ಲದ ಇಂಗ್ಲಿಷ್ ಮೋಹಿತ ಜನಪ್ರತಿನಿಧಿಗಳ ದೆಸೆಯಿಂದಾಗಿಯೇ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆಯಲು ತಿಣುಕಾಡಬೇಕಾಯಿತು. ನವೆಂಬರ್ ಹಿಂದೆಮುಂದಷ್ಟೆ ಗುರ್‌ಗುರ್ ಎನ್ನುವ ಜನಪ್ರತಿನಿಧಿಗಳಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಇಂದು ಕನ್ನಡ ತಿಳಿಯದಿದ್ದರೂ ರಾಜಧಾನಿ ನಗರ ಬೆಂಗಳೂರಿನಲ್ಲಿ ಆರಾಮವಾಗಿ ಬದುಕಬಹುದು. ಅದೇ ಇಂಗ್ಲಿಷ್ ತಿಳಿಯದಿದ್ದರೆ, ಸೆಕ್ಯೂರಿಟಿಗಾರ್ಡ್ ಕೆಲಸ ಸಹಾ ದಕ್ಕುವುದಿಲ್ಲ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ತಿಳಿಯದಿದ್ದರೆ ಬೆಂಗಳೂರು ಅಸಹನೀಯ!

ಒಂದರ್ಥದಲ್ಲಿ ಕನ್ನಡಿಗ ಬೆಂಗಳೂರೆಂಬ ಘೋರ ಕಾನನದಲ್ಲಿ ದಾರಿ ತಪ್ಪಿದ ಪೋರ. ಹತ್ತಾರು ವರ್ಷ ಬೆಂಗಳೂರಿನಲ್ಲಿದ್ದರೂ ಒಂದಕ್ಷರ ಕನ್ನಡ ನುಡಿಯದ ಅನ್ಯ ಭಾಷಿಗರು ನಮ್ಮ ನಡುವೆ ಇದ್ದಾರೆ. ಕನ್ನಡ ಕಲಿಯುವ ಅನಿವಾರ್ಯತೆ ಬಾರದ ಹೊರತು, ಪರಿಸ್ಥಿತಿ ಬದಲಾಗುವುದಿಲ್ಲ. ಕನ್ನಡ ಭಾಷೆ ಬೆಳೆಯದ ಹೊರತು ಸಾಹಿತ್ಯ, ಸಂಸ್ಕೃತಿ, ಚಲನಚಿತ್ರ, ಸಂಗೀತ -ಹೀಗೆ ನಾನಾ ಕ್ಷೇತ್ರಗಳು ಸಮೃದ್ಧವಾಗಿ ಬೆಳೆಯಲಾರವು. ಸೀಮಿತ ಮಾರುಕಟ್ಟೆ ಬಗ್ಗೆಯೇ ಮಾತನಾಡುವ ಮಂದಿ, ಮಾರುಕಟ್ಟೆ ವಿಸ್ತರಣೆಗೆ ತಾವು ಮಾಡಿದ ಕೆಲಸದ ಬಗ್ಗೆ ಹೇಳುವುದಿಲ್ಲ. ತೆಲುಗರ ಮುಂದೆ ತೆಲುಗರಾಗಿ, ತಮಿಳರ ಮುಂದೆ ತಮಿಳರಾಗಿ ನಮ್ಮ ಭಾಷಾ ನೈಪುಣ್ಯ ಮತ್ತು ಹೃದಯ ವೈಶಾಲ್ಯವನ್ನು ಪ್ರದರ್ಶಿಸುವ ಹುಚ್ಚಿನ ಭರದಲ್ಲಿ ನಾವೇ ಕನ್ನಡಕ್ಕೆ ಕಂಟಕವಾಗುತ್ತಿದ್ದೇವೆ. ಅನ್ಯ ಭಾಷಿಗರಿಗೆ ಕನ್ನಡ ಕಲಿಯುವ ಅವಕಾಶವನ್ನೇ ನಾವು ಕಸಿದಿದ್ದೇವೆ. ಆಯಾ ನೆಲದಲ್ಲಿ ಆಯಾ ಭಾಷೆಯೇ ಸಾಮ್ರಾಟ. ಅದೇ ನ್ಯಾಯ.

‘ಕನ್ನಡಕ್ಕೆ ಏನೋ ಅಪಾಯವಾಗುತ್ತಿದೆ.. ಯಾರೋ ಕನ್ನಡ ಮಾತನಾಡುತ್ತಿಲ್ಲ ಎಂದು ಯಾಕೆ ಕೊರಗಬೇಕು? ನನಗೆ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ ಸಾಕಷ್ಟು ಭಾಷೆ ಗೊತ್ತು.. ಸಂದರ್ಭಾನುಸಾರ ನಾನು ಎಲ್ಲಾ ಭಾಷೆ ಮಾತಾಡುತ್ತೇನೆ’ ಎಂದು ಸಮಾರಂಭವೊಂದರಲ್ಲಿ ‘ಮಠ ’ ಚಿತ್ರದ ನಿರ್ದೇಶಕ ಗುರುಪ್ರಸಾದ್ ಹೆಮ್ಮೆಯಿಂದ ಹೇಳಿದ್ದರು. ಅಷ್ಟರ ಜತೆಗೆ ಅವರು, ‘ಯಾರು ಯಾವ ಭಾಷೆ ಬೇಕಾದರೂ ಕಲಿಯಲಿ. ಮಾತನಾಡಲಿ. ಅದಕ್ಕೆ ನಮ್ಮದೇಕೆ ಅಭ್ಯಂತರ? ಯಾರೋ ಕನ್ನಡ ಮಾತನಾಡುತ್ತಿಲ್ಲ ಎಂದು ಯಾಕೆ ಕೊರಗಬೇಕು? ಅವರನ್ನು ಅವರ ಪಾಡಿಗೆ ಬಿಡಿ’ ಎಂದಿದ್ದರು.

ಗುರು ಮಾತಲ್ಲಿ ಅಪಾಯವಿದೆ. ಕನ್ನಡ ಬಾರದೇ ಈ ನೆಲದಲ್ಲಿ ಒಂದು ಕ್ಷಣವೂ ಇರಲಾಗದು ಎಂದು ಅನ್ನಿಸದ ಹೊರತು, ಅನ್ಯರು ಕನ್ನಡ ಕಲಿಯುವುದಿಲ್ಲ. ಕನ್ನಡ ಮಾರುಕಟ್ಟೆ ಬೆಳೆಯುವುದಿಲ್ಲ.

ಕನ್ನಡ ಗಣಕ

ಭಾಷೆ ಉಳಿಯಬೇಕಾದರೆ, ಅದನ್ನು ಬಳಸಬೇಕು! ಅಂತರ್ಜಾಲದ ಅಪಾರ ಸಾಧ್ಯತೆಗಳನ್ನು ಸಮಸ್ತ ಕನ್ನಡಿಗರು ಬಳಸಿಕೊಳ್ಳಲು, ಆ ಮೂಲಕ ಇಂಗ್ಲಿಷ್ ಪ್ರವಾಹಕ್ಕೆ ತಡೆಯೊಡ್ಡಲು ಕನ್ನಡ ಗಣಕವೊಂದೇ ಪರಿಹಾರ. ಬರಹ-ನುಡಿಗಳಾಚೆ ಕನ್ನಡವನ್ನು ಬೆಳೆಸುವ ಜವಾಬ್ದಾರಿ ಸರಕಾರದ್ದು. ಕನ್ನಡವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅನೇಕರು ಸ್ವಪ್ರೇರಣೆಯಿಂದ ಪ್ರೋಗ್ರಾಮ್‌ಗಳನ್ನು ಬರೆಯುತ್ತಿದ್ದಾರೆ, ಸಾಫ್ಟ್‌ವೇರ್‌ಗಳನ್ನು ಕಂಡು ಹಿಡಿಯುತ್ತಿದ್ದಾರೆ.

ಎಲ್ಲ ಇಂಟರ್‌ನೆಟ್ ಬ್ರೌಸಿಂಗ್ ಸೆಂಟರ್‌ಗಳಲ್ಲಿ, ಖಾಸಗಿ ಮತ್ತು ಸರಕಾರಿ ಕಚೇರಿಗಳಲ್ಲಿನ ಗಣಕಗಳಲ್ಲಿ ಬರಹ-ನುಡಿಗಳನ್ನು ಅನುಸ್ಥಾಪಿಸಬೇಕು. ಆ ಮೂಲಕ ಫಾಂಟ್‌ಗಳ ತೊಂದರೆಯಿಂದ ಕನ್ನಡ ಬಳಸುತ್ತಿಲ್ಲ ಎಂಬ ನೆಪವನ್ನು ತಳ್ಳಿಹಾಕಬಹುದು. ಜತೆಗೆ ಮೂಲಭೂತವಾಗಿ ಕಂಪ್ಯೂಟರ್ ಕನ್ನಡಮಯವಾಗಲು ಸಾಧ್ಯವಾಗುತ್ತದೆ. ಸರಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಆದೇಶವೊಂದನ್ನು ಹೊರಡಿಸಬೇಕಾಗಿದೆ.

ಅತ್ಯಂತ ಪರಿಣಾಮಕಾರಿಯಾದ ಅಂತರ್ಜಾಲ ಮಾಧ್ಯಮವನ್ನೂ ಗಂಭೀರವಾಗಿ ಪರಿಗಣಿಸಬೇಕು. ಮುದ್ರಣ ಮಾಧ್ಯಮಕ್ಕೆ ನೀಡಿದಂತೆಯೇ ಸರಕಾರಿ ಜಾಹೀರಾತುಗಳನ್ನು ನೀಡುವ ಮೂಲಕ ಕನ್ನಡ ವೆಬ್‌ಸೈಟ್‌ಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಕ್ರಿಯಾಶೀಲವಾಗಿರುವುದು ಒಂದೆರಡೇ ವೆಬ್‌ಸೈಟ್‌ಗಳಾಗಿರುವುದರಿಂದ, ಸರಕಾರಕ್ಕೇನು ಭಾರವಾಗದು. ಜಾಗತಿಕ ಕನ್ನಡಿಗರಿಗೆ ಕನ್ನಡದ ವರ್ತಮಾನಗಳನ್ನು ತಲುಪಿಸುವ ಕೆಲಸ ಮಾಡುತ್ತಾ, ತವರಿನ ಜತೆ ಎನ್‌ಆರ್‌ಐ ಕನ್ನಡಿಗರ ಬೆಸೆಯುತ್ತಿರುವ ವೆಬ್‌ಸೈಟ್‌ಗಳನ್ನು ಕಡೆಗಣಿಸುವುದು ಸಲ್ಲದು.

ಜಾಹೀರಾತುದಾರರ ಬೆಂಬಲ ಮತ್ತು ಕನ್ನಡಿಗರ ಪ್ರೀತಿಯ ಕೊರತೆಯಿಂದಾಗಿ ಕನ್ನಡ ವೆಬ್‌ಸೈಟ್‌ಗಳು ಕಣ್ ಮುಚ್ಚುತ್ತಿವೆ. ಈ ಮಾತಿಗೆ ‘ಕೆಂಡ ಸಂಪಿಗೆ’ವೆಬ್‌ಸೈಟ್ ಹೊಸ ಉದಾಹರಣೆ.

ಎಲ್ಲಿದ್ದಾರೆ ಕನ್ನಡ ಜಾಣ-ಜಾಣೆಯರು?

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕಂಪ್ಯೂಟರ್ -ಹೀಗೆ ಏನೇ ಇರಲಿ.. ಎಲ್ಲವನ್ನೂ ಮಾತೃ ಭಾಷೆಯಲ್ಲಿ ಯೋಚಿಸಿದಾಗ ಮಾತ್ರ ಮನನವಾಗುತ್ತದೆ. ಇಂದು ಕನ್ನಡದಲ್ಲಿ ತಪ್ಪಿಲ್ಲದೇ ಬರೆಯುವವರು ಅತಿ ವಿರಳ. ಕನ್ನಡ ಎಂ.ಎ. ಪದವೀಧರರ ಬರವಣಿಗೆಯಲ್ಲೂ  ಸಾಕಷ್ಟು ಕಾಗುಣಿತ ದೋಷಗಳನ್ನು ಗಮನಿಸಬಹುದು.

ಬರವಣಿಗೆಯಿರಲಿ, ಶುದ್ಧ ಕನ್ನಡ ಮಾತು ಕಿವಿಗೆ ಬಿದ್ದರೆ ಪುಣ್ಯ ಮಾಡಿರಬೇಕು. ಪ್ರಾಥಮಿಕ ಹಂತದಿಂದ ಹಿಡಿದು ಪದವಿಯ ವರೆಗೆ ಹತ್ತಾರು ವರ್ಷ ಕನ್ನಡ ಅಧ್ಯಯನ ಮಾಡಿದ ಬಹುತೇಕರಿಗೆ ಅಲ್ಪಪ್ರಾಣ-ಮಹಾಪ್ರಾಣ, ಹ್ರಸ್ವ-ದೀರ್ಘಗಳ ವ್ಯತ್ಯಾಸವೇ ಗೊತ್ತಿಲ್ಲ! – ಉತ್ತಮ ಭಾಷಾ ಶಿಕ್ಷಕರ ಕೊರತೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಿನ ಮಕ್ಕಳಿರಲಿ, ಕೆಲವು ಶಿಕ್ಷಕರಿಗೆ ಸಂಧಿ-ಸಮಾಸಗಳ ಗಂಧವೇ ಗೊತ್ತಿಲ್ಲ. ಇನ್ನು ಅಲಂಕಾರ, ಛಂದಸ್ಸುಗಳ ತಂಟೆಗೆ ಹೋಗುವಂತೆಯೇ ಇಲ್ಲ. ‘ಕೇಶಿರಾಜ’ನನ್ನು ‘ಕೆ.ಸಿ.ರಾಜ’ಎಂದು ತಿಳಿದುಕೊಂಡಿರುವ ಕನ್ನಡಿಗರೂ ನಮ್ಮ ನಡುವೆ ಇದ್ದಾರೆ!

ಕನ್ನಡ ಜಾಣ-ಜಾಣೆಯರನ್ನು ಸೃಷ್ಟಿಸುತ್ತಿದ್ದ ಕನ್ನಡ ಪಂಡಿತ್ ಕೋರ್ಸನ್ನು ಸರಕಾರ ಕೆಲವು ವರ್ಷಗಳ ಹಿಂದೆಯೇ ರದ್ದು ಪಡಿಸಿದೆ. ೫ ವರ್ಷಗಳ ಈ ಕೋರ್ಸ್ ಮಾಡಿದವರು ಕನ್ನಡವನ್ನು ಅರೆದು ಕುಡಿಯುತ್ತಿದ್ದರು. ಕನ್ನಡ ಪಂಡಿತ್ ಕೋರ್ಸ್ ಮುಗಿಸಿದ ಮೇಲೆ ಶಿಕ್ಷಕರಾಗುವ ಅವಕಾಶಗಳಿದ್ದವು. ಆದರೆ ಕನ್ನಡ ಪಂಡಿತ್ ಮುಗಿಸಿದರೂ, ಹೈಸ್ಕೂಲ್ ಶಿಕ್ಷಕರಾಗಲು ಬಿಎಡ್ ಕಡ್ಡಾಯ ಎಂಬ ನೀತಿಯನ್ನು ಸರಕಾರ ಅನುಸರಿಸಿತು. ಈ ಕಾರಣ, ೫ ವರ್ಷಗಳ ಕಬ್ಬಿಣದ ಕಡಲೆಯಂತಿದ್ದ ಕನ್ನಡ ಪಂಡಿತ್ ಕೋರ್ಸ್‌ಗಿಂತಲೂ, ಮೂರುವರ್ಷಗಳ ಪದವಿ ನಂತರ, ಬಿಎಡ್ ಮುಗಿಸುವುದನ್ನೇ ಅನೇಕರು ಆಯ್ದುಕೊಂಡರು.

ಕನ್ನಡ ಪಂಡಿತ್ ಕೋರ್ಸನ್ನು ಪುನಾರಂಭಿಸಿ, ಆ ಕೋರ್ಸ್ ಮುಗಿಸಿದವರಿಗಷ್ಟೆ ಕನ್ನಡ ಶಿಕ್ಷಕರ ಹುದ್ದೆ ಎಂಬ ನಿಯಮವನ್ನು ಸರಕಾರ ಜಾರಿಗೆ ತರಬೇಕು. ಕನ್ನಡವನ್ನು ನಂಬಿ ಬದುಕುವ ಪರಿಸ್ಥಿತಿ ಆಗ ಒಂದಿಷ್ಟಾದರೂ ನಿರ್ಮಾಣವಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಾಣ, ಕಾವ, ರತ್ನ ಪರೀಕ್ಷೆ ಪಾಸು ಮಾಡಿದವರಿಗೆ ಸರಕಾರ ಒಂದಿಷ್ಟು ಆದ್ಯತೆ ನೀಡಿದರೆ, ಇವುಗಳತ್ತ ಅನೇಕರು ಆಕರ್ಷಿತರಾಗುತ್ತಾರೆ. ಆ ಮೂಲಕ ನಾಡು-ನುಡಿಯ ಪ್ರಜ್ಞೆ ಜೀವಂತವಾಗುತ್ತದೆ.

ಪುಸ್ತಕೋದ್ಯಮದ ಸವಕಲು ಪುಟಗಳು

ಒಂದು ಸಾವಿರ ಮುದ್ರಿಸುವುದಾಗಿ ಹೇಳಿ ಐದಾರು ಸಾವಿರ ಪ್ರತಿಗಳನ್ನು ಪ್ರಕಟಿಸುವುದು, ಲೇಖಕರಿಗೆ ಗೌರವ ಧನ ನೀಡದೇ ನಾಮ ಹಾಕುವ ದರಿದ್ರ ವ್ಯವಸ್ಥೆಯಿಂದ ಪುಸ್ತಕ ಪ್ರಕಾಶನ ನರಳುತ್ತಿದೆ. ನಮ್ಮಲ್ಲಿ ಲೈಬ್ರರಿ ಪ್ರಕಾಶಕರು ಮತ್ತು ಜನಹಿತ ಪ್ರಕಾಶಕರು ಎಂಬ ಎರಡು ಗುಂಪುಗಳಿವೆ. ಅದರಲ್ಲೂ ಲೈಬ್ರರಿ ಪ್ರಕಾಶಕರ ಸಂಖ್ಯೆ ದೊಡ್ಡದು. ಗ್ರಂಥಾಲಯ ಇಲಾಖೆಯ ದುಡ್ಡು ನಂಬಿ, ಇವರು ಬದುಕುತ್ತಾರೆ. ಇವರ ದೆಸೆಯಿಂದ ಪುಸ್ತಕಗಳು ಲೈಬ್ರರಿಯ ಕತ್ತಲೆ ಕೋಣೆಯಲ್ಲಿ ಕೊಳೆಯುತ್ತಿವೆ. ಒಂದು ಒಳ್ಳೆಯ ಪುಸ್ತಕ ಓದುವ ಬಯಕೆ ಪುಸ್ತಕ ಪ್ರೇಮಿಗಳಲ್ಲಿ ಸಹಜ. ಆದರೆ ಆ ಪುಸ್ತಕ ಖರೀದಿಸಲು ಕರ್ನಾಟಕದ ಕುಗ್ರಾಮಗಳಲ್ಲಿನ ಓದುಗ, ಬೆಂಗಳೂರಿಗೆ ಬರಬೇಕಾದ ಪರಿಸ್ಥಿತಿ ಇದೆ. ಓದುಗರು ಮತ್ತು ಪ್ರಕಾಶಕರ ನಡುವಿನ ಅಂತರ, ಈ ಸಮಸ್ಯೆಗೆ ಪ್ರಮುಖ ಕಾರಣ.

ಪ್ರಕಾಶನಗಳಿಂದ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸುತ್ತದೆ. ಆದರೆ ಕೆಲವು ಪ್ರಕಾಶಕರು ಬೇರೆಬೇರೆ ಹೆಸರಲ್ಲಿ ೮-೧೦ ಪ್ರಕಾಶನಗಳನ್ನು ಹೊಂದಿದ್ದಾರೆ. ಇದು ಹಣ ನುಂಗಲು ದಾರಿಯಾಗಿದ್ದು, ಪ್ರಾಮಾಣಿಕ ಪ್ರಕಾಶಕರಿಗೆ ತೊಂದರೆಯಾಗಿದೆ.  ಗೌರವ ಧನ ನೀಡದೇ ವಂಚಿಸುವ ಪ್ರಕಾಶಕನಿಗೆ ಪಾಠ ಕಲಿಸುವ ಅಥವಾ ಬರಹದ ಹಕ್ಕುಗಳನ್ನು ಮೂರುನಾಲ್ಕು ಪ್ರಕಾಶಕರಿಗೆ ಮಾರುವ ಲೇಖಕನಿಗೆ ಶಿಕ್ಷೆ ನೀಡುವ ಕಾನೂನುಗಳು ನಮ್ಮಲ್ಲಿಲ್ಲ. ಹೀಗಾಗಿ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ. ನಕಲಿ ಪುಸ್ತಕಗಳ ಜಾಲ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಸಮಗ್ರ ಪುಸ್ತಕ ನೀತಿ ಅತ್ಯಗತ್ಯ ಎಂಬುದು ಸುಮುಖ ಪ್ರಕಾಶನದ ನಾರಾಯಣ್ ಮಾಲ್ಕೋಡ್ ಅಭಿಪ್ರಾಯ.

ಕನ್ನಡದ ಮಾರುಕಟ್ಟೆ ಚಿಕ್ಕದು, ಓದುಗರ ಕೊರತೆ ಇದೆ ಎನ್ನುವ ಮಾತಿನಲ್ಲಿ ಎಳ್ಳಷ್ಟು ಹುರುಳಿಲ್ಲ. ಕನ್ನಡ ಪುಸ್ತಕ ಪ್ರಾಕಾರವು ಪ್ರಕಾಶನ ಸಂಸ್ಥೆಯಾಗಿ ಬದಲಾಗಿದೆ! ಅದರ ಕಾರ್ಯಾವೈಖರಿ ಬದಲಾಗಬೇಕು. ಅದು ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿ ಮಾಡಿ, ತಾಲೂಕು ಕೇಂದ್ರಗಳಲ್ಲಿ ಮಾರಾಟ ಮಾಡಬೇಕು. ಎಲ್ಲಾ ಕಡೆ ಪ್ರಕಾಶಕರೇ ಮಳಿಗೆ ತೆರೆಯುವ ವ್ಯವಸ್ಥೆ ಜಾರಿಗೆ ಬರಲು, ಇನ್ನೂ ಸಮಯ ಬೇಕು. ಆ ಮಟ್ಟಕ್ಕೆ ಕನ್ನಡ ಪ್ರಕಾಶಕರು ಬೆಳೆದಿಲ್ಲ. ಹೊಸ ಪುಸ್ತಕಗಳ ಬಗ್ಗೆ ಓದುಗರಿಗೆ ಮಾಹಿತಿ ಸಿಗುತ್ತಿಲ್ಲ.

ಕನ್ನಡ ಪತ್ರಿಕೆಗಳನ್ನು ಈ ಬಗ್ಗೆ ದೂರುವಂತಿಲ್ಲ. ಪ್ರಕಟವಾಗುವ ಸಾವಿರಾರು ಪುಸ್ತಕಗಳಿಗೆ ಜಾಗ ನೀಡಲು ಪತ್ರಿಕೆಗಳಿಗೆ ಕಷ್ಟ.  ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ನೀಡುವ ಪತ್ರಿಕೆಗಳನ್ನು ಆರಂಭಿಸಿ, ಅನೇಕರು ವಿಫಲರಾಗಿದ್ದಾರೆ. ತಾಲೂಕು ಕೇಂದ್ರಗಳಲ್ಲಿ ಮಳಿಗೆಗಳನ್ನು ತೆರೆದು, ಕನ್ನಡ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಕೆಲಸವನ್ನು ಪ್ರಕಾಶಕರು ಮಾಡಬೇಕಿದೆ.

ಓದುಗರು ಬೆಚ್ಚುವಷ್ಟು ಕೆಲವು ಕನ್ನಡ ಪುಸ್ತಕಗಳು ದುಬಾರಿ. ಕೆಲವು ಪ್ರಕಾಶನಗಳು ಪುಟಕ್ಕೆ ೪೦-೪೨ ಪೈಸೆ ನಿಗದಿ ಪಡಿಸುತ್ತದೆ. ಕೆಲವು ಪ್ರಕಾಶಕರು ಲಾಭದ ಆಸೆಯಿಂದ ೭೦-೮೦ ಪೈಸೆ ನಿಗದಿ ಮಾಡುತ್ತಾರೆ. ಪುಸ್ತಕೋದ್ಯಮದಲ್ಲಿ ಲಾಭ-ನಷ್ಟಗಳ ಮೇಲಾಟವೇ ನಡೆಯುತ್ತಿದೆ.

ಧ್ವನಿ ಸುರುಳಿ ಕಂಪನಿಗಳಿಗೆ ಬೀಗ

ಪೈರಸಿ ಎನ್ನುವ ಪಿಡುಗು ಕನ್ನಡ ಪುಸ್ತಕೋದ್ಯಮದ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಆದರೆ ಧ್ವನಿ ಸುರುಳಿ ಮತ್ತು ವಿಸಿಡಿ, ಡಿವಿಡಿ ಮಾರುಕಟ್ಟೆ ಮೇಲೆ ರಾಕ್ಷಸನಂತೆ ಎರಗಿದೆ. ಸುಮಾರು ೧ ಲಕ್ಷ ಮಂದಿ ಕ್ಯಾಸೆಟ್ ಉದ್ಯಮ ನಂಬಿ ಬದುಕುತ್ತಿದ್ದಾರೆ. ಪೈರಸಿ ತಡೆಯಲು ಗೂಂಡಾ ಕಾಯಿದೆ ಜಾರಿಗೆ ತರುವುದಾಗಿ ಎಲ್ಲಾ ಸರಕಾರಗಳು ಹೇಳುತ್ತಿದ್ದವು. ಈ ನಿಟ್ಟಿನಲ್ಲಿ ಯಡಿಯೂರಪ್ಪ ಒಂದೆಜ್ಜೆ ಮುಂದೆ ಇಟ್ಟಿದ್ದಾರೆ. ಆದರೂ ಪೈರಸಿ ಪಿಡುಗು ಗಣನೀಯವಾಗಿ ಕಡಿಮೆಯಾಗಿಲ್ಲ. ಮುಂಬಯಿ, ದಿಲ್ಲಿ, ಕೋಲ್ಕತಾ, ಗೋವಾದಲ್ಲಿ ಕನ್ನಡ ಕ್ಯಾಸೆಟ್‌ಗಳಿಗೆ ಉತ್ತಮ ಮಾರುಕಟ್ಟೆಯಿದೆ.

‘ಪ್ರೇಮಲೋಕ ಚಿತ್ರದ ೪೦ ಲಕ್ಷ ಕ್ಯಾಸೆಟ್‌ಗಳನ್ನು ಲಹರಿ ಸಂಸ್ಥೆ ಮಾರಾಟ ಮಾಡಿದ್ದನ್ನು ಉದ್ಯಮ ಕಂಡಿದೆ. ಈ ಅಂಶಗಳು ಕನ್ನಡ ಧ್ವನಿ ಸುರುಳಿಗಿರುವ ಮಾರುಕಟ್ಟೆಯನ್ನು ವಿವರಿಸುತ್ತವೆ. ಆದರೆ ಪೈರಸಿ ಹಾವಳಿಯಿಂದ ಆಡಿಯೊ ಕಂಪನಿಗಳಿಗೆ ಬೀಗ ಜಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೈರಸಿ ವಿರುದ್ಧ ನಾವು ೬೫೦ ಪ್ರಕರಣ ದಾಖಲಿಸಿದ್ದೇವೆ. ಯಾರಿಗೂ ಶಿಕ್ಷೆಯಾಗಿಲ್ಲ. ೧.೨೪ ಲಕ್ಷ(೮೦ ಸಾವಿರ ಕನ್ನಡ ) ಧ್ವನಿ ಸುರುಳಿಗಳನ್ನು ಸಂಸ್ಥೆ ಹೊರತಂದಿದೆ. ಆದರೆ ಇಂದು ಉದ್ಯಮ ಇಕ್ಕಟ್ಟಿನಲ್ಲಿದೆ. ೨೫-೩೦ ಲಕ್ಷ ಹಣ ಹೂಡಿಕೆ ಮಾಡಿದರೆ, ಒಂದೆರಡು ಲಕ್ಷವೂ ಲಾಭ ದೊರಕುತ್ತಿಲ್ಲ’ ಎಂದು ಲಹರಿ ಸಂಸ್ಥೆಯ ವೇಲು ಸಮಾರಂಭವೊಂದರಲ್ಲಿ ಅಲವತ್ತುಗೊಂಡಿದ್ದಾರೆ.

ಸಿನಿಮಾ ತೆರೆಗೆ ಬಂದ ೪-೫ ದಿನಗಳೊಳಗೆ ಪೈರಸಿ ವಿಸಿಡಿಗಳು ಮಾರುಕಟ್ಟೆ ಪ್ರವೇಶಿಸುತ್ತವೆ. ಮನೆಯ ಟಿ.ವಿ, ಕಂಪ್ಯೂಟರ್‌ನಲ್ಲಿ ಸಿನಿಮಾ ನೋಡುವ ಮನುಷ್ಯ ಚಿತ್ರಮಂದಿರಕ್ಕೆ ಯಾಕೆ ಬರುತ್ತಾನೆ? ಅಂದಹಾಗೆ, ಜೇನು ತುಪ್ಪ ಪಕ್ಕದಲ್ಲಿರುವಾಗ ಕೈ ಹಾಕುವುದು ಸಹಜ. ಅದು ಕಳ್ಳತನ, ಇನ್ನೊಬ್ಬರ ಶ್ರಮಕ್ಕೆ ಬೆಲೆ ಕೊಡದ ವಂಚನೆ, ಮೌಲ್ಯಗಳ ಪ್ರಶ್ನೆ -ಇವೆಲ್ಲವೂ ಆ ಸಂದರ್ಭದಲ್ಲಿ ಅಪ್ರಸ್ತುತ.

ಸಂಗೀತ, ಹಾಡು, ಸಿನಿಮಾ, ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೀಗಾಗಿ ಧ್ವನಿ ಸುರುಳಿ, ಚಲನಚಿತ್ರ ಮತ್ತು ಪುಸ್ತಕೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸಾಕಷ್ಟು ಲಾಭ ಉಂಡರೂ ಧ್ವನಿ ಸುರುಳಿ ಕಂಪನಿಗಳು, ಚಲನಚಿತ್ರ ನಿರ್ಮಾಪಕರು ಮತ್ತು ಪ್ರಕಾಶಕರಿಗೆ ತೃಪ್ತಿಯಿಲ್ಲ. ಹೀಗಾಗಿ ನಕಲು ಮಾಡುವುದರತ್ತ ಜನರು ಆಸಕ್ತರಾಗುತ್ತಾರೆ. ಹೀಗಾಗಿ ಪುಸ್ತಕ ಮತ್ತು ಚಲನಚಿತ್ರಗಳ ಹಕ್ಕುಸ್ವಾಮ್ಯದ ಅವಯನ್ನು ಮಿತಿಗೊಳಿಸುವುದು ಒಳ್ಳೆಯದು. ಸರಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ.

ತೆರೆ ಮೇಲಷ್ಟೆ ನಾಯಕರು!

ಕಾವೇರಿ ಚಳವಳಿಗಾಗಿ ತಮಿಳುನಾಡಿನ ನಟರು ವಿದೇಶದ ಚಿತ್ರೀಕರಣ ನಿಲ್ಲಿಸಿ ಚೆನ್ನೈ ಕಡೆ ಹೆಜ್ಜೆ ಹಾಕುತ್ತಾರೆ. ಆದರೆ ನಮ್ಮಲ್ಲಿ? ಬೆಂಗಳೂರಿನಲ್ಲಿದ್ದರೂ ಚಳವಳಿ ನಡೆಯುವ ದಿಕ್ಕಿನತ್ತ ನೋಡದ ನಟ-ನಟಿಯರು ಒಬ್ಬಿಬ್ಬರಲ್ಲ. ನಾಡು-ನುಡಿ ಬಗ್ಗೆ ಎದ್ದು ನಿಲ್ಲುತ್ತಿದ್ದ ರಾಜ್‌ಕುಮಾರ್ ನಿಧನದ ನಂತರ ಚಿತ್ರೋದ್ಯಮದಲ್ಲೊಂದು ಬೃಹತ್ ಶೂನ್ಯ.

ಉದಯ ಟಿ.ವಿ ಸಂದರ್ಶನವೊಂದನ್ನು ಇಲ್ಲಿ ಪ್ರಸ್ತಾಪಿಸುವುದು ನಮ್ಮವರ ಕನ್ನಡ ತಾತ್ಸಾರಕ್ಕೆ ಉದಾಹರಣೆಯಾಗಬಲ್ಲದು. ನಾಲ್ಕಾರು ವರ್ಷಗಳ ಹಿಂದೆ ದೀಪಕ್ ತಿಮ್ಮಯ್ಯ ಅವರು ನಟ ವಿಷ್ಣುವರ್ಧನ್ ಅವರನ್ನು ಸಂದರ್ಶಿಸುತ್ತಿದ್ದರು. ಇಬ್ಬರೂ ಹದಿನಾರಾಣೆ ಕನ್ನಡಿಗರು. ತಮಾಷೆಯೆಂದರೆ ಸಂದರ್ಶನದುದ್ದಕ್ಕೂ ಇಬ್ಬರೂ ಇಂಗ್ಲಿಷ್‌ನಲ್ಲಿಯೇ ಮಾತನಾಡಿದರು! ನಮ್ಮ ಕನ್ನಡದ ಬೆಡಗಿಯರಂತೂ ಆಕ್ಸಫರ್ಡ್‌ನಲ್ಲಿ ಕಲಿತವರಂತೆ ಇಂಗ್ಲಿಷ್‌ನಲ್ಲಿಯೇ ಬಳುಕುತ್ತಾರೆ. ಅಪ್ಪಿತಪ್ಪಿಯಷ್ಟೆ ಕನ್ನಡ ಪದ ಹೊರ ನುಸುಳುತ್ತದೆ!

ಮೊನ್ನೆ ಟಿ.ವಿ ಕಾರ್ಯಕ್ರಮವೊಂದರಲ್ಲಿ ಇಂಗ್ಲಿಷ್‌ನಲ್ಲಿಯೇ ಭಾವನೆಗಳ ಹಂಚಿಕೊಂಡ ನಟಿ ಭಾವನಾ, ಕಾರ್ಯಕ್ರಮದ ಕೊನೆಗೆ ಆಟೋಗ್ರಾಫ್‌ನಲ್ಲಿ ‘ಕನ್ನಡ ನಾಡು-ನುಡಿ ಉಳಿಯಲಿ’ ಎಂದು ಬರೆದು ಧನ್ಯತೆ ಅನುಭವಿಸಿದರು! ಭೇಷ್ ಭಾವನಾ! 

ಇಂಗ್ಲಿಷ್ ಬೇಡ್ವಾ?

ಶಿಕ್ಷಣ ಮಾಧ್ಯಮದಲ್ಲಿ ಯಾವುದೇ ದ್ವಂದ್ವಗಳು ಬೇಡ. ಮಾತೃಭಾಷೆಯಲ್ಲೆ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ.

‘ಇವತ್ತು ಕನ್ನಡ ಅನ್ನ ಕೊಡುವ ತಾಕತ್ತನ್ನು ಕಳೆದುಕೊಂಡಿದೆ. ಇಂಗ್ಲಿಷ್ ಗೊತ್ತಿದ್ದರೆ ವಿಶ್ವದಲ್ಲಿ ಎಲ್ಲಿ ಬೇಕಾದರೂ ಬದುಕಬಹುದು. ಅದು ನಿಜಕ್ಕೂ ನಮ್ಮ ಹೊಟ್ಟೆ ತುಂಬಿಸುತ್ತೆ. ಕನ್ನಡ ಕನ್ನಡ ಅಂಥ ಮುದ್ದಾಡಬಹುದೇ ಹೊರತು, ಬೇರೇನೂ ಸಾಧ್ಯವಿಲ್ಲ. ನನಗೂ ಕನ್ನಡದ ಬಗ್ಗೆ ಗೌರವವಿದೆ. ಪ್ರೀತಿಯಿದೆ. ಇಂಗ್ಲಿಷನ್ನು ಕಲಿಯೋದು ತಪ್ಪಾ? ಒಂದನೇ ತರಗತಿಯಿಂದಲೇ ಇಂಗ್ಲಿಷ್ ಇರಲಿ. ಇಂಗ್ಲಿಷ್ ಬೇಡ ಎನ್ನುವ ಮೂಲಕ ಬಡವರನ್ನು ಶೋಷಿಸೋದು ಸರೀನಾ? ಎಲ್ಲರ ಮಕ್ಕಳು ಮೈಸೂರು ಪಾಕ್ ತಿನ್ನುವಾಗ, ನಮ್ಮುಡುಗರು ರಾಗಿ ಮುದ್ದೆ ತಿನ್ತಾ ಕೂರಬೇಕಾ? ’ -ಹೀಗೆ ಪ್ರಶ್ನಿಸಿದ ಗೆಳೆಯನೊಬ್ಬನ ಅಂತರಾಳ ನನಗೆ ಅರ್ಥವಾಗುತ್ತೆ. ತಾನು ಸರಿಯಾಗಿ ಇಂಗ್ಲಿಷ್ ಕಲಿಯಲಿಲ್ಲ. ಕಲಿತಿದ್ದರೆ ಇವತ್ತು ದೊಡ್ಡ ಸಂಬಳ ಪಡೆಯಬಹುದಿತ್ತು ಅನ್ನೋದು ಅವನ ಕೊರಗು.

ಒಂದು ವಿಷಯ ಗಮನಿಸಿ. ಮೊದಲು ಇಂಗ್ಲಿಷ್ ಅನ್ನೋದನ್ನು ೫ನೇ ತರಗತಿಯಿಂದ ಕಲಿಸಲಾಗುತ್ತಿತ್ತು. ಅಲ್ಲಿಂದ ಪದವಿ ತನಕ ಅಂದ್ರೆ ಸುಮಾರು ೯-೧೦ ವರ್ಷ ಇಂಗ್ಲಿಷ್ ಕಲಿತರೂ, ನಮ್ಮುಡಗರ ತಲೆಗೆ ಅದು ಹೋಗಲೇ ಇಲ್ಲ. ಅಂದ್ರೆ ಇಂಗ್ಲಿಷ್ ಅನ್ನೋದು ಅಷ್ಟೊಂದು ಕಠಿಣವೇ? ಖಂಡಿತ ಇಲ್ಲ. ಆದರೆ ನಾವು ಕಲಿತ, ನಮಗೆ ಕಲಿಸಿದ ವಾತಾವರಣವಿದೆಯಲ್ಲ , ಅಲ್ಲಿಯೇ ಇದೆ ದೋಷ. ಒಳ್ಳೆ ಭಾಷಾ ಶಿಕ್ಷಕರು ದೊರಕದ ಕಾರಣ, ಇಂಗ್ಲಿಷ್ ಭೂತವಾಯಿತು ಅಷ್ಟೆ. ಒಳ್ಳೆ ಶಿಕ್ಷಕರು ಸಿಗದ ಹೊರತು, ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಿದರೂ ಪ್ರಯೋಜನವಿಲ್ಲ.

ಇನ್ನು ವಿಶ್ವ ಸುತ್ತುವ ವಿಷಯಕ್ಕೆ ಬರೋಣ. ಅಂತಾರಾಷ್ಟ್ರೀಯ ಭಾಷೆ ಎನ್ನುವ ಸುಳ್ಳು ಪ್ರಚಾರ ಪಡೆದಿರುವ ಇಂಗ್ಲಿಷ್, ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಜೀವಂತ. ಜಪಾನಿಯರು, ಚೀನಿಯರಿಗೆ ಬೇಕಿಲ್ಲದ ಇಂಗ್ಲಿಷ್ ನಮಗೇಕೆ? ಅಭಿವೃದ್ಧಿ ಎನ್ನುವುದು ನಮ್ಮ ಮನಸ್ಥಿತಿ, ಅದು ಶ್ರಮವನ್ನು ಆಧಾರಿಸಿದೆಯೇ ಹೊರತು, ಭಾಷೆಯನ್ನಲ್ಲ. ಭಾಷೆಯಾಗಿ ಇಂಗ್ಲಿಷ್ ಕಲಿಯುವುದಾದರೆ ನನ್ನದೇನು ತಕರಾರಿಲ್ಲ. ಇಂಗ್ಲಿಷ್ ಒಂದೇ ಅಲ್ಲ, ಪ್ರೆಂಚ್, ಡಚ್, ಜರ್ಮನ್ ಸೇರಿದಂತೆ ಯಾವ ಭಾಷೆ ಬೇಕಾದರೂ ಕಲಿಯಿರಿ.

‘ಇಂಗ್ಲಿಷ್‌ನ ಅನಿವಾರ್ಯತೆ ಇದೆ, ಹೀಗಾಗಿ ಒಂದನೇ ತರಗತಿಯಿಂದ ಕನ್ನಡದ ಜತೆಗೆ ಇಂಗ್ಲಿಷ್ ಸಹಾ ಇರಲಿ’ ಎನ್ನುವ ನಾವು, ನಾಳೆ ಇಂಗ್ಲಿಷ್ ಒಂದೇ ಇರಲಿ ಎಂದರೂ ಅಚ್ಚರಿಯೇನಿಲ್ಲ. ಇಂಗ್ಲಿಷ್ ಭಾಷೆಯನ್ನಷ್ಟೆ ನಾವು ಕಲಿಯುತ್ತಿಲ್ಲ.. ಆ ಸಂಸ್ಕೃತಿಯನ್ನೂ ಸಹಾ ಮೈಗೂಡಿಸಿಕೊಳ್ಳುತ್ತಿದ್ದೇವೆ. ಭಾಷೆಯನ್ನು ನುಂಗುತ್ತಿರುವ ಇಂಗ್ಲಿಷ್ ತಿಮಿಂಗಲ, ನಂತರ ನೆಲದ ಸಂಸ್ಕೃತಿಯನ್ನು ನುಂಗುತ್ತದೆ. ಆನಂತರ ನಮ್ಮತನವನ್ನು ನುಂಗುತ್ತದೆ. ಲಿವ್ ಇನ್ ರಿಲೇಷನ್‌ಶಿಪ್, ಡೈವರ್ಸ್ -ಮತ್ತಿತರ ವಿಷಯಗಳು ನಮ್ಮ ಸಮಾಜದಲ್ಲೀಗ ವಿಶೇಷವಾಗಿ ಉಳಿದಿಲ್ಲ. ಇಂಗ್ಲಿಷ್ ಅಪ್ಪುಗೆಯಲ್ಲಿ ಇವೆಲ್ಲವೂ ನಮಗೆ ಅಹಿತವಾಗಿ ಕಾಣಿಸುತ್ತಿಲ್ಲ. ಇಂಗ್ಲಿಷ್ ವಿರೋಧಿಸಲು ಇದಕ್ಕಿಂತ ಬೇರೆ ಕಾರಣ ಬೇಕಿಲ್ಲ.

ಜಗತ್ತನ್ನು ಇಂಗ್ಲಿಷ್ ಇಲ್ಲದೇ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯವಾ? -ಸಾಧ್ಯ. ಈ ನಿಟ್ಟಿನಲ್ಲಿ ಅಸಲಿ ಕನ್ನಡ ಪ್ರೇಮಿಗಳು ಹೆಜ್ಜೆ ಹಾಕಬೇಕು. ಕೆಲವೇ ವರ್ಷಗಳ ಹಿಂದೆ ಇಂಗ್ಲಿಷ್ ಗೊತ್ತಿಲ್ಲದವರ ಕೈಗೆ ಎಟುಕದಿದ್ದ ಗಣಕ, ಈಗ ಎಲ್ಲರಿಗೂ ಹತ್ತಿರವಾಗಿದೆ. ಜಗತ್ತಿನ ಎಲ್ಲಾ ಮಾಹಿತಿಯನ್ನೂ ಕನ್ನಡದ ಅಂತರ್ಜಾಲಕ್ಕೆ ಬಸಿಯುವ ಮಹಾಯಜ್ಞ ಕ್ಕೆ ನಮ್ಮ ಕನ್ನಡದ ಹುಡುಗರು ಕಂಕಣ ತೊಡಬೇಕಿದೆ. ಇದು ಖಂಡಿತ ಅಸಾಧ್ಯದ ಕೆಲಸವೇನಲ್ಲ.