ಪುಸ್ತಕ ಎಂದರೆ ಮೂಗು ಮುರಿಯುವ ಮಂದಿಯೇ ಹೆಚ್ಚು. ಎಸ್.ಎಲ್.ಭೈರಪ್ಪ , ರವಿ ಬೆಳಗೆರೆ ಮತ್ತು ಯಂಡಮೂರಿ ವೀರೇಂದ್ರನಾಥರ(ಕನ್ನಡ ಭಾಷಾಂತರ) ಪುಸ್ತಕಗಳನ್ನು ಬಿಟ್ಟರೆ ಕನ್ನಡದಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುವ ಪುಸ್ತಕಗಳು ಮೂರು ಮತ್ತೊಂದು. ವಸುಧೇಂದ್ರನಂಥ ಜಾಣರು, ಅಂಕಿತದ ಪ್ರಕಾಶ್ ಕಂಬತ್ತಳ್ಳಿ ಸೇರಿದಂತೆ ಕೆಲವೇ ಕೆಲವರು ಪುಸ್ತಕೋದ್ಯಮದಲ್ಲಿ ಅಷ್ಟಿಷ್ಟು ಲಾಭ ಕಂಡವರು.
ಮತ್ತೊಂದು ಕಡೆ ಗ್ರಂಥಾಲಯ ಪ್ರಕಾಶಕರ ದಂಡು ಕನ್ನಡದಲ್ಲಿ ದೊಡ್ಡದಾಗಿಯೇ ಇದೆ. ಪುಸ್ತಕ ತರುವುದು, ಗ್ರಂಥಾಲಯಕ್ಕೆ ಅವುಗಳನ್ನು ಸೇರಿಸುವುದರಲ್ಲಿ ಇವರು ಪ್ರಖ್ಯಾತರು. ಪುಸ್ತಕವನ್ನು ಓದುಗರ ಕೈಗೆ ತಲುಪಿಸುವ ಅಪರೂಪದ ಪ್ರಯತ್ನಗಳು ಇತ್ತೀಚೆಗೆ ಕನ್ನಡದಲ್ಲಿ ನಿಧಾನವಾಗಿಯಾದರೂ ಆರಂಭಗೊಳ್ಳುತ್ತಿವೆ. ‘ಪುಸ್ತಕ ಮೂರು, ರೂಪಾಯಿ ನೂರು’ ಎನ್ನುವ ‘ಛಂದ’ದ ಚೆಂದದ ಪ್ರಯತ್ನಗಳನ್ನು ಇಲ್ಲಿ ಸ್ಮರಿಸಬೇಕು.
ಇಂದು(ಏ.೨೫) ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾದ ನನ್ನ ಸಹೋದ್ಯೋಗಿ ಮತ್ತು ಹಿರಿಯಣ್ಣನಂಥ ಎ.ಆರ್.ಮಣಿಕಾಂತರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಪುಸ್ತಕ ಪ್ರಕಾಶನಕ್ಕೆ ಗ್ಲಾಮರ್ ಟಚ್ ನೀಡಿದ ಈ ಕಾರ್‍ಯಕ್ರಮ ನನಗೆ ಎರಡು ಕಾರಣಗಳಿಗೆ ಮುಖ್ಯವೆನಿಸುತ್ತದೆ. ರವೀಂದ್ರ ಕಲಾಕ್ಷೇತ್ರ ಇಂಥದ್ದೊಂದು ಕಾರ್‍ಯಕ್ರಮದ ಸಲುವಾಗಿ ಹೌಸ್‌ಫುಲ್ ಆದ ಉದಾಹರಣೆ ನನ್ನ ಮಟ್ಟಿಗೆ ಹೊಸತು. ಅಕ್ಷರಶಃ ಕಲಾಕ್ಷೇತ್ರ ತುಂಬಿ ತುಳುಕುತ್ತಿತ್ತು. ಸೀಟುಗಳು ತುಂಬಿದ್ದ ಕಾರಣ, ಮಣಿ ಅಭಿಮಾನಿಗಳು ಮೂರು ಗಂಟೆಯ ಈ ಕಾರ್‍ಯಕ್ರಮವನ್ನು ನಿಂತೇ ಸವಿದರು. ಮಾನವ ಸಂಬಂಧಗಳನ್ನು ಬೆಸೆಯುವಂತಿರುವ ಇಂಥ ಪುಸ್ತಕಗಳನ್ನು ಓದಲು ಜನರ ಕಾತರ ಹೆಚ್ಚುತ್ತಿರುವುದನ್ನು ಇಲ್ಲಿ ಹೇಳಲೇ ಬೇಕು. ಇಂಥ ಪುಸ್ತಕಗಳ ಮೂಲಕವಾದರೂ ಕೆಟ್ಟುನಿಂತ ಬದುಕುಗಳು, ಕರಳು-ಬಳ್ಳಿ ನಂಟುಗಳು ಬಿಗಿಯಾದರೆ ಅದಕ್ಕಿಂತ ಸಂತೋಷ ಇನ್ನೇನಿದೆ.
ಈಗಿನ ಯುವ ಬರಹಗಾರರು ಲಂಕೇಶ್, ರವಿ ಬೆಳಗೆರೆ, ವಿಶ್ವೇಶ್ವರ ಭಟ್‌ರಂತೆಯೇ ಬರೆಯುತ್ತಾರೆ. ಆ ಪ್ರಭಾವಳಿಯಿಂದ ಹೊರಬಂದು ಸ್ವಂತಿಕೆ ಉಳಿಸಿಕೊಳ್ಳುವುದು ನಿಜಕ್ಕೂ ಕಷ್ಟ. ‘ಮಣಿಕಾಂತ್ ಅನುಕರಣೆಯಲ್ಲಿ ಫಟಿಂಗ. ನಾಗತಿಹಳ್ಳಿಯಂತೆ, ರವಿ ಬೆಳಗೆರೆಯಂತೆಯೇ ಬರೆಯುತ್ತಾನೆ’ ಎಂದು ವಿಕ ಸಂಪಾದಕ ವಿಶ್ವೇಶ್ವರ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಅದರಾಚೆಯ ಮಿತಿಯನ್ನು ಪ್ರೊ.ಕೃಷ್ಣೇ ಗೌಡ ಬಿಚ್ಚಿಟ್ಟರು.
‘ರವಿ ಬೆಳಗೆರೆಯಂತೆಯೇ ಬರೆಯುವುದು ಮಣಿಕಾಂತ್ ಪಾಲಿಗೆ ಇಂದು ಹೆಮ್ಮೆಯ ವಿಷಯ. ಆದರೆ ಹತ್ತು ವರ್ಷಗಳ ನಂತರ ಇದೇ ಅಭಿಪ್ರಾಯ ಮೂಡಿದರೆ, ಅದು ಅವರಿಗೆ ಅವಮಾನ’ -ಗೌಡರ ಈ ಮಾತನ್ನು, ಅಕ್ಷರ ಲೋಕ ಪ್ರವೇಶಿಸಿರುವ ಹೊಸ ಹುಡುಗರು ಪದೇಪದೆ ಮೆಲುಕು ಹಾಕಬೇಕು.
ವಸುಧೇಂದ್ರನ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕದ ಜನಪ್ರಿಯತೆಯ ಜಾಡಿನಲ್ಲಿಯೇ ಮಣಿ ಪುಸ್ತಕವೂ ಹೆಜ್ಜೆಹಾಕಿದೆ. ಅಮ್ಮನ ಬಗ್ಗೆ ಎಷ್ಟು ಬರೆದರು, ಯಾರು ಬರೆದರೂ ಚೆನ್ನಾಗಿಯೇ ಇರುತ್ತದೆ ಎಂಬುದು ನನ್ನ ಅಭಿಮತ. ಮಣಿಕಾಂತರ ಬರಹದ ಶೈಲಿ ಏನೇ ಇರಲಿ, ಅವರ ಜನಪ್ರಿಯತೆ ದೊಡ್ಡದು. ಅವರ ಜನಪ್ರಿಯತೆ ಹೆಚ್ಚಳಕ್ಕೆ ಅವರ ಬರಹಗಳ ಜತೆಗೆ ಅವರ ಮಾತೃ ಹೃದಯದ ಪಾತ್ರವೂ ದೊಡ್ಡದು. ಎಲ್ಲರನ್ನೂ ಪ್ರೀತಿಯಿಂದ ಸೆಳೆಯುವ ಅವರ ನೋಟದಲ್ಲಿ ಏನೋ ಆಪ್ತತೆ ಮತ್ತು ವಾತ್ಸಲ್ಯ ತುಂಬಿತುಳುಕುವಂತೆ ನನಗೆ ಭಾಸವಾಗುತ್ತದೆ.
ಪುಸ್ತಕ ಮತ್ತು ಲೇಖಕರಿಗೆ ಯಾವುದೇ ಸಂಬಂಧವಿಲ್ಲದ ಪ್ರಕಾಶ್ ರೈರನ್ನು ದೂರದ ಚೆನ್ನೈನಿಂದ ಕರೆಸಿದ ಔಚಿತ್ಯ ನನಗಂತೂ ಅರ್ಥವಾಗುತ್ತಿಲ್ಲ. ರವಿಬೆಳಗೆರೆ, ವಿಶ್ವೇಶ್ವರ ಭಟ್, ಕೃಷ್ಣೇಗೌಡ ವೇದಿಕೆ ಮೇಲಿದ್ದರು. ಹೀಗಾಗಿ ಮಾತಿಗಂತೂ ಭರವಿಲ್ಲ. ಮತ್ತೊಂದು ಕಡೆ ಉಪಾಸನಾ ಮೋಹನ್ ಮತ್ತು ಅವರ ತಂಡದ ಸುಗಮ ಸಂಗೀತ ಸಹ ಇತ್ತು. ಹೀಗಾಗಿ ಒಂದರ್ಥದಲ್ಲಿ ಪುಸ್ತಕ ಬಿಡುಗಡೆ ನೆಪದಲ್ಲಿ ಹಾಡು-ಹಾಸ್ಯ-ಹರಟೆಗಳು ಬೋನಸ್ ರೂಪದಲ್ಲಿ ಸಿಕ್ಕವು.
ಕೆಲವು ಬಿಡಿಬಿಡಿ ಚಿತ್ರಗಳು
ಬದುಕಿಗೆ ಬಣ್ಣ ಬಳಿಯಲು ಸೈಕಲ್ ತುಳಿಯುತ್ತಿದ್ದ ರೈಗೆ ಅವು ಕಷ್ಟದ ದಿನಗಳು. ಆಗ ಐಡೆಂಟಿಟಿಗಾಗಿ ಒತ್ತಾಡುತ್ತ, ರವೀಂದ್ರ ಕಲಾಕ್ಷೇತ್ರದ ಸುತ್ತ ಸುತ್ತುತ್ತಿದ್ದ ರೈನತ್ತ ಕತ್ತೆತ್ತಿ ನೋಡುವವರು ಇರಲಿಲ್ಲ. ಸಾಮಾನ್ಯರಲ್ಲಿ ಅವರು ಅಂದು ಸಾಮಾನ್ಯರು. ಅದರೆ ಇಂದು? ಇದೇ ಕಲಾಕ್ಷೇತ್ರದ ವೇದಿಕೆ ಮೇಲೆ ಅವರು ದೊಡ್ಡ ಸ್ಟಾರ್! ಹಿಂದೆ ಆಟೋಗ್ರಾಫ್‌ಗೆ ಕೈಚಾಚಿದ್ದ ಕೈ, ಇಂದು ಆಟೋಗ್ರಾಫ್ ಗೀಚುತ್ತಿತ್ತು! ಇದೇ ಬದುಕು!
‘ಮನೆಯಲ್ಲಿ ಮಾಸ್ಟರ್ ಬೆಡ್‌ರೂಂ, ಮಗನಿಗೆ ಸ್ಟಡಿ ರೂಂ ಎಲ್ಲವೂ ಇರುತ್ತದೆ. ಆದರೆ ಅಮ್ಮನಿಗೆ ಪ್ರತ್ಯೇಕ ರೂಂ ಕಟ್ಟುವ ಔದಾರ್ಯ ಎಷ್ಟು ಮಂದಿಗಿದೆ? ಮಕ್ಕಳಿಲ್ಲವೆಂದು ದತ್ತು ಸ್ವೀಕರಿಸುವ ಜನರು, ಅದೇ ರೀತಿ ಅಮ್ಮನನ್ನು ಏಕೆ ದತ್ತು ಸ್ವೀಕರಿಸಬಾರದು?’ ಎನ್ನುವ ಬೆಳಗೆರೆ ಮಾತು, ಹೃದಯದ ತಂತಿಗಳ ಮೀಟುವಂತಿತ್ತು.
‘ಮಣಿಕಾಂತ್‌ರ ಈ ಪುಸ್ತಕವನ್ನು ಓದುತ್ತ ಹೋದಂತೆ ತುಂಬಾ ಆಪ್ತವೆನಿಸುತ್ತದೆ. ಅವರ ಭಾಷೆಯಲ್ಲಿ ಸೊಗಸು ಮತು ಆತ್ಮೀಯತೆ ಮೇಳೈಸಿದ್ದು, ಇಲ್ಲಿನ ಲೇಖನ ಪ್ರೀತಿಯ ರೂಪಕಗಳು. ಹೀಗಾಗಿ, ಇದನ್ನು ಓದುತ್ತಿದ್ದಂತೆ ಕಣ್ಣು ಎಲ್ಲೋ ತಂಗುತ್ತದೆ, ಮನಸ್ಸು ಎಲ್ಲೋ ನಿಲ್ಲುತ್ತದೆ. ತುಂಬಾ ಸಹೃದಯಿ ಆಗಿರುವ ಕಾರಣ ಅವರ ಬರವಣಿಗೆ ಅಂಥ ಭಾವವುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಇದೊಂದು ಭಾವಗದ್ಯ.ಮಣಿಕಾಂತ್‌ರ ಈ ಪುಸ್ತಕವನ್ನು ನಮ್ಮ ಮಕ್ಕಳಿಗೆ ಓದಲು ಕೊಡಬೇಕು. ಆಗ ಅವರು ನಮ್ಮನ್ನು ನೋಡುವ ಭಾವವೇ ಬೇರೆಯಾದಂತೆ ಕಾಣುತ್ತದೆ.’ ಕೃಷ್ಣೇಗೌಡರ ಈ ಅಭಿಪ್ರಾಯಕ್ಕೆ ನನ್ನದು ಸಂಪೂರ್ಣ ಸಮ್ಮತಿ.
baraha chennagide. adre neevu saha manikanth tharane barediruviralla?
ಹೌದು ಕೆಲವೋಮ್ಮೆ ನಾವು ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗುತ್ತೇವೆ ಅದು ಯಾವಾಗವೆಂದರೆ ನಾವು ಒಂದಿಬ್ಬರು ಲೇಖಕರನ್ನು ನೆಚ್ಚಿಕೊಂಡಾಗ. ಒಬ್ಬನ ಬರಹದ ಶೈಲಿ, ನಿರೂಪಣೆ ಅವನ ಸೃಜನಾತ್ಮಕ ಆಲೋಚನೆಗಳಿಗೂ ಓದಿಗೂ ಪರಸ್ಪರ ಸಂಬಂಧವಿದೆ. ಆಳವಾದ ಓದು ಒಬ್ಬನನ್ನು ಇತರರಿಗಿಂತ ಬಿನ್ನವಾಗಿ ಬರೆಯುವಂತೆ ಮಾಡುತ್ತದೆಯೆಂದು ನನ್ನ ಅನಿಸಿಕೆ. ಪ್ರಾರಂಭಿಕ ಹಂತದಲ್ಲಿ ಪ್ರಭಾವವನ್ನು ಕಂಡುಕೊಳ್ಳವ ಸಾಧ್ಯತೆ ಇರುತ್ತದೆಯಾದರೂ ಬರಹದ ಮೇಲಿನ ಪ್ರಜ್ಞೆ (ಶೈಲಿ) ನಮ್ಮನ್ನು ನಮ್ಮ ದಾರಿ ಕಂಡು ಕೊಳ್ಳುವಂತೆ ಮಾಡುತ್ತದೆ.
ವಿಶ್ವೇಶ್ವರ ಭಟ್ಟರನ್ನು ನಾನು ಅಂತಹ ದೊಡ್ಡ ಬರಹಗಾರನೆಂದು ಭಾವಿಸುವುದಿಲ್ಲ.ಬೇಸರಿಸಬೇಡಿ ನನ್ನ ಸ್ವಂತ ಅಭಿಪ್ರಾಯ. ಲಂಕೇಶ್, ಬೆಳಗೆರೆ ಬಗ್ಗೆ ಮಾತಿಲ್ಲ. ಆದ್ರೆ ಸಾಹಿತ್ಯ ವಿಚಾರ ಬಂದಾಗ ನನಗೆ ಲಂಕೇಶ್ ಮಾತ್ರ ಮುಖ್ಯವಾಗುತ್ತಾರೆ.ಅವರ ನೀಲೂವಿನ ಪಧ್ಯದ ಆಮಲೂ ನನ್ನೊಳಗಿಳಿದರೂ ಅವರು ನಮ್ಮನ್ನು ಪ್ರಭಾವಿಸಿದ್ದಾರೆ ಎನ್ನುವುದು ಕಷ್ಟ.
ಧನ್ಯವಾದಗಳು