ಮೇ ಮುಗ್ಯೋ ತನ್ಕ ನಮ್ ರಾಜ್‌ಕಾರುಣಿಗುಳ್ಗೆ ನಿದ್ದಿಲ್ಲ. ನಮುಗಿಲ್ಲದ್ ನಿದ್ದಿ ನಿಮಗ್ಯಾಕೆ ಅಂಥ, ಮತುದಾರುರ ನಿದ್ದಿಗೂ ಭಂಗ ತಂದವ್ರೆ. ಮತುದಾರ್ರಿಗೆ ಮೊಂಕುಬೂದಿ ಎರಚೋದು ಹೆಂಗೆ ಅಂಬೋ ಸಂಶೋದ್ನೆಗೆ ಇರೋಬರೊ ರಾಜ್ಕೀಯ ಪಕ್ಸುಗುಳು ಕಾಸು ಸುರಿದಿವ್ಯಂತೆ.
ಚುನಾವಣೆ ಟೇಮಲ್ಲಿ ಬಿಸಿಬಿಸಿ ಸುದ್ದಿ ಮಧ್ಯೆ ಲೋಡುಗಟ್ಟಲೇ ಜಾಹೀರಾತು(ಥೂ) ಮಾರಿ ಜೇಬು ತುಂಬ್ಸಿಕೊಳ್ಳೋಕೆ ಪೇಪರ್‌ನೋರು, ಟೀವಿನೋರು ಐನಾತಿ ಪಿಲಾನು ಮಾಡವ್ರೆ ಅಂಬುತಾ ಅದ್ಯಾರೋ ಲದ್ದಿಯೊ ಬುದ್ಧಿಯೊ ಇರೋ ಜೀವಿ ಹೇಳ್ತಾವ್ನೆ. ನನ್ ಈ ಘನಂದಾರಿ ಕೆಲ್ಸಕ್ಕೆ ನೊಬಲ್ಲು ಕೊಡಿ ಅಂಬುತಾ ಆಯಪ್ಪ ಬಾಯಿ ಬಡಕೋತಾ ಇದಾನೆ.
ಈ ಗಲಾಟೆನಾಗೆ ನಮ್ ರಾಜಕಾರಣಿಗಳು ಇಲೆಕ್ಷನ್‌ಗೆ ಸಜ್ಜಾಗ್ತಾವ್ರೆ. ಜಯ ಲಕ್ಷ್ಮಮ್ಮುನ್ನ ತಮ್ ಕಡೀಗೆಯಾ ವಾಲಿಸಿಕೊಳ್ಳೋಕೆ ಅವ್ರು ಈಗೇನ್ ಕಡುದು ಕಟ್ಟೆ ಹಾಕವ್ರೆ ಅಂಬೋದನ್ನು ಅವ್ರ ಬಾಯಲ್ಲೇ ಕೇಳೋಣ್ವಾ?
ದೇವೇಗೌಡ: ನಾನು ಸನ್ ಆಫ್ ಸಾಯಿಲ್ಲು. ಮಣ್ಣಿಂದಲೇ ರಿಯಲ್ಲಾಗಿ ಎದ್ದು ಬರೋಕೆ ಸಾಕಷ್ಟು ಲೋಡು ಮಣ್ಣು ರಾಶಿ ಹಾಕಿಸ್ತಾ ಇವ್ನಿ. ನನ್ ಜತೆಗೇನೇ ಕುಮಾರನೂ ದಿಲ್ಲಿಗೆ ಬರೋ ಹಂಗೆ ಆಗಬೇಕು. ಅದುಕ್ಕೆ ಡಬಲ್ಲು ಡಬಲ್ಲು ಪೂಜೆ ಮಾಡಿಸ್ತಾಯಿವ್ನಿ. ನನ್ನ ಶತ್ರುಗಳು ನೆಗೆದು ನೆಲ್ಲಿಕಾಯಾಗಲಿ ಅಂಥ ಮಾಟಾ ಮಂತ್ರನೂ ಜೋರಾಗೆ ಮಾಡಿಸಿವ್ನಿ. ದೊಡ್‌ದೊಡ್ ಬಲಿನೂ ಕೊಡಬೇಕಂತೆ. ನಾಡಿ ನೋಡುದವ್ರು ನಿಮ್ಗೆ ರಾಜ್‌ಯೋಗ ಐತೆ, ಶುಭುವಾಗ್ತೈತೆ ಅಂದವ್ರೆ. ಆದ್ರೆ ಕೈ ನೋಡುದವ್ರುನಿಮರಾಯಾ ಹೆಗಲ್‌ಮ್ಯಾಲ್ ಕುಂತವ್ನೆ ಅಂದವ್ರೆ. ನೋಡೋಣ..
ವರುಣ್ ಗಾಂಧಿ: ನಾನೇನು ತಪ್ಪು ಮಾಡಿಲ್ಲ ಅನ್ನೋದಕ್ಕೆ ಬಾಳಾ ಠಾಕ್ರೆ ನೀಡಿರೋ ಸರ್ಟಿಫಿಕೇಟೇ ಸಾಕ್ಷಿ. ಚುನಾವಣೆಯಲ್ಲಿ ಮತದಾರರ ಸೆಳೆಯೋದಕ್ಕೆ ಇನ್ನೂ ಸಕತ್ತು ಟೈಲಾಗ್ ರೆಡಿ ಮಾಡಿದ್ದೆ. ಆರಂಭದಲ್ಲೇ ಸಿಕ್ಕಿಹಾಕಿಕೊಂಡೆ. ಬೇಕಿದ್ದವರು ಟೈಲಾಗ್ ಬುಕ್‌ನ ಪಡೀಬಹುದು.
ಸೋನಿಯಾಗಾಂಧಿ: ‘ಭಾರತಕ್ಕಾಗಿ ತವರು ದೇಶ ಬಿಟ್ಟೆ.. ಅತ್ತೇನಾ ಕೊಟ್ಟೆ, ಗಂಡನ್ನ ಕೊಟ್ಟೆ ’ ಅನ್ನೋ ಟೈಲಾಗ್ ಹಳೆಯದಾಯಿತು. ಮತ್ತೆ ಇಂದಿರಮ್ಮನ ಸ್ಟೈಲಲ್ಲಿ ನಾನು ನನ್ನ ಮಗಳು ಸೀರೆ ಉಟ್ಟು ಮತದಾರರ ಮುಂದೆ ನಿಲ್ತೇವೆ. ಮತದಾರರ ಸೆಳೆಯುವಂತೆ ಮುಗುಳ್ನಗುತ್ತಾ, ಕೈಮುಗಿಯೋದರ ರಿಹರ್ಸಲ್ ಮಾಡ್ತಾ ಇದ್ದೀವಿ. ಮೊದಲು ತೆರೆಹಿಂದಿನ ಪ್ರಧಾನಿಯಾಗಿದ್ದೆ. ನನಗಂತೂ ಪ್ರಧಾನಿ ಯೋಗ ಬರೆದಿಲ್ಲ. ರಾಹುಲ್‌ನನ್ನು ರಾಜೀವ್ ಥರಾ, ಪ್ರಿಯಾಂಕಾನಾ ನಮ್ಮ ಅತ್ತೆ ಥರಾ ಜನರ ಮನದಲ್ಲಿ ನಿಲ್ಲಿಸೋದು ನನ್ನಾಸೆ. ಮುಂದೆ ಒಂದು ದಿನ ಅವರು ಪ್ರಧಾನಿ ಕುರ್ಚಿ ಹತ್ತಿದರೆ, ಅದಕ್ಕಿಂತ ಸೌಭಾಗ್ಯ ಏನೈತೆ?
ಆಡ್ವಾಣಿ: ವಾಜಪೇಯಿ ಮನೆ ಸೇರಿದ್ದಾರೆ. ಅವರಿಲ್ಲದ ಕೊರತೆ, ಈ ಚುನಾವಣೆಯಲ್ಲಿ ಕಾಡ್ತಾಯಿದೆ. ಏನ್ ಲಾಗಾ ಹಾಕಿದ್ರೂ ಜನಗಳ ಮನಸು ಕಮಲದತ್ತ ವಾಲುತ್ತಿಲ್ಲ. ವಾಜಪೇಯಿ ಮುಖವಾಡ ಹಾಕಿಕೊಂಡು, ಪ್ರಚಾರ ಮಾಡಬೇಕು ಅಂಥ ನಿರ್ಧರಿಸಿದ್ದೇನೆ. ಪ್ರಧಾನಿಯಾಗೋ ಯೋಗ ನನ್ನ ಹಣೆಯಲ್ಲಿ ಬರೆದಿದ್ಯೋ ಇಲ್ವೋ ರಾಮನೇ ಬಲ್ಲ..
ಚಿರಂಜೀವಿ: ನಾನು ಅಸಲೀ ಕಲಾವಿದ. ಚುನಾವಣೆ ಅನ್ನೋದು, ನನ್ನಲ್ಲಿರೋ ಕಲಾವಿದನಿಗೆ ನಿಜಕ್ಕೂ ಒಂದು ಸವಾಲು. ಉತ್ತಮವಾಗಿ ಅಭಿನಯಿಸಿ, ಬಣ್ಣದ ಟೈಲಾಗ್‌ಗಳಿಂದ ಮತದಾರರ ಮರಳು ಮಾಡೋ ಆತ್ಮವಿಶ್ವಾಸ ನನಗಂತೂ ಇದೆ.
ಗೆಳೆಯರೇ ಈ ರಾಜಕೀಯ ವಿಡಂಬನೆ ಏನನ್ನಿಸಿತು?