೧
ಸಂಜೆ ಊರಿಗೆ ಹೊರಟಿದ್ದ ನಾನು, ‘ರಾತ್ರಿ ೧೦ ಗಂಟೆ ಒಳಗೆ ಊರಲ್ಲಿ ಇರ್ತೀನಿ’ ಅಂತ ಅಮ್ಮನಿಗೆ ಹೇಳಿದ್ದೆ. ಆಫೀಸ್ ಕೆಲಸ ಬೇಗ ಮುಗಿಸಲು ಪರದಾಡುತ್ತಿರುವಾಗಲೇ ಮೊಬೈಲ್ ರಿಂಗಾಯಿತು. ಗೆಳತಿ ನಂಬರ್ ಮೊಬೈಲ್‌ನಲ್ಲಿ ಕಂಡ ತಕ್ಷಣ ಅದೇನೋ ಆನಂದ. ‘ಹಾಯ್ ಎಲ್ಲಿದ್ದೀ?’ ಅನ್ನುತ್ತಿರುವಾಗಲೇ, ‘ಏ ಗೂಬೆ ಹೊರಗೆ ಬಾ’ ಎಂದು ಫೋನ್ ಕಟ್ ಮಾಡಿದಳು. ಹೊರಬಂದರೆ ಸೋಪಾದಲ್ಲಿ ಕೂತಿದ್ದ ಗೆಳತಿ ‘ಹಾಯ್’ ಎಂದಳು. ಆ ಮಾತು ಈ ಮಾತಿನ ಮಧ್ಯೆ ‘ಈಗ ಪಿವಿಆರ್‌ನಲ್ಲಿ ಮನಸಾರೆ ಸಿನಿಮಾ ತೋರಿಸ್ತೀಯಾ?’ ಅಂದಳು. ಆಗ ಸಮಯ ಮೂರು ಗಂಟೆ. ಕಚೇರಿಯಿಂದ ಹೊರಟರೆ ೨೦ ನಿಮಿಷಕ್ಕೆ ಪಿವಿಆರ್ ತಲುಪಬಹುದು. ೩.೩೦ಕ್ಕೆ ಸಿನಿಮಾ ಆರಂಭ. ಏನೇನೋ ಕಾರಣಗಳನ್ನು ಪೋಣಿಸಿ ಅರ್ಧ ದಿನ ರಜೆ ಪಡೆದು ಮನಸಾರೆಗೆ ಹೊರಟೆವು. ಈ ಮಧ್ಯೆ ಅಮ್ಮನಿಗೆ ಕಾಲ್ ಮಾಡಿ, ‘ಸ್ವಲ್ಪ ಲೇಟಾಗಿ ಬರ್ತೀನಿ.. ಗಾಬರಿಯಾಗಬೇಡ’ ಎಂದು ತಿಳಿಸಿದ್ದೆ. ಸಿನಿಮಾ, ಲೈಟಾಗಿ ಊಟ ಮುಗಿಸಿ ಬಸ್ ಹತ್ತುವ ವೇಳೆಗೆ ರಾತ್ರಿ ೧೧ ಗಂಟೆ. ಊರಲ್ಲಿ ನಮ್ಮದು ಒಂಟಿ ಮನೆ. ಬಸ್ ಇಳಿದು ಮಗ ಹೇಗೆ ಬರ್ತಾನೋ ಎಂಬ ದಿಗಿಲು ಅಮ್ಮನಿಗೆ. ಅಂತೂ ಮನೆ ತಲುಪಿದಾಗ ಬೆಳಗಿನ ಜಾವ ೪ ಗಂಟೆ. ಬಾಗಿಲನ್ನು ಮೆಲುವಾಗಿ ತಟ್ಟಿದೆ. ‘ಓ ಬಂದ್ಯಾ?’ ಅನ್ನುತ್ತಾ ಅಮ್ಮ ಬಾಗಿಲು ತೆಗೆದಳು. ನನಗಾಗಿ ಕಾಯುತ್ತಾ ರಾತ್ರಿಯಿಡೀ ಆಕೆ ಸೋಪಾದಲ್ಲಿಯೇ ಕೂತಿದ್ದಳು. ‘ಯಾಕೆ ಲೇಟಾಯಿತು?’ ಎನ್ನುವ ಅಮ್ಮನ ಪ್ರಶ್ನೆಗೆ ಉತ್ತರ ಹೇಳಲು ಕಷ್ಟವಾಗಿ, ‘ಹೊಟ್ಟೆ ಹಸಿಯುತ್ತಿದೆ’ ಎನ್ನುತ್ತಾ ಅಡುಗೆಮನೆಗೆ ನುಗ್ಗಿದೆ.
೨
ದೇವರಿಗೆ ನಮಸ್ಕಾರ ಹಾಕಿದ ನಂಜುಂಡಸ್ವಾಮಿ ಹೆಬ್ಬಾಳದಲ್ಲಿ ಬಸ್‌ಗೆ ಕಾಯುತ್ತಾ ನಿಂತ. ಬಂದ ಬಸ್‌ಗಳೆಲ್ಲ ಅವತ್ತು ಖಾಲಿ ಖಾಲಿ. ಹೀಗಾದರೆ ಬ್ಯುಸಿನೆಸ್ ಕತೆಯೇನು? ಎಂದು ಯೋಚಿಸುತ್ತಲೇ ಮನೆ ದೇವರು ಹನುಮಂತರಾಯನ ನೆನಪಿಸಿಕೊಂಡ. ಅಷ್ಟರಲ್ಲಿಯೇ ಒಂದು ತುಂಬಿದ ಬಸ್ ಬಂತು. ಬಸ್ ಹತ್ತಿದ ಎರಡೇ ನಿಮಿಷಕ್ಕೆ ಒಂದು ಮೊಬೈಲ್ ಎಗರಿಸಿದ. ಮೊಬೈಲ್ ಕಳೆದುಕೊಂಡಿದ್ದವನು ಹಿಡಿಶಾಪ ಹಾಕುತ್ತಿದ್ದ. ಅವನ ಬೈಗುಳದ ಮಧ್ಯೆ ‘ಸೂಳೆ ಮಗ’ ಅನ್ನೋದು ಕಿವಿಗೆ ಬಿತ್ತು. ಆಗ ಜಿನುಗಿದ ಕಣ್ಣೀರಿನ ಹನಿಯನ್ನು ಕಷ್ಟಪಟ್ಟು ನಂಜುಂಡಸ್ವಾಮಿ ಬಚ್ಚಿಟ್ಟುಕೊಂಡ.
೩
ಡಾಕ್ಟರ್ ಕೈಚೆಲ್ಲಿದ್ದರು. ‘ವೆಂಟಿಲೇಟರ್ ಇರೋದರಿಂದ ನಿಮ್ಮಪ್ಪ ಉಸಿರಾಡುತ್ತಿದ್ದಾರೆ. ಬದುಕುವ ಚಾನ್ಸೇ ಇಲ್ಲ. ಸುಮ್ಮನೇ ದುಡ್ಡು ವೇಸ್ಟ್ ಮಾಡಬೇಡಿ. ವೆಂಟಿಲೇಟರ್ ತೆಗೆದುಬಿಡೋಣ. ಸೆಂಟಿಮೆಂಟ್ ಒಳ್ಳೆಯದಲ್ಲ’ ಎಂದು ಡಾಕ್ಟರ್ ಯಾವುದೇ ಭಾವಗಳಿಲ್ಲದೇ ಮಾತನಾಡುತ್ತಿದ್ದರು. ಈಗಾಗಲೇ ಹಣ ನೀರಿನಂತೆ ಖರ್ಚಾಗಿದೆ. ಇನ್ಮುಂದೆ ದಿನಕ್ಕೆ ೧೫-೨೦ ಸಾವಿರ ಬೇಕು. ಸಾಲ ಕೊಡೋರ ಪಟ್ಟಿ ಮೊಟಕಾಗುತ್ತಿದೆ. ನಾಳೆ ಬೆಳಗ್ಗೆ ೧೫ ಸಾವಿರ ಕಟ್ಟಬೇಕು. ಸದ್ಯಕ್ಕೆ ಜೇಬಲ್ಲಿ ಹಣವಿದೆ. ಆದರೆ ನಾಡಿದ್ದು? ಆಚೆ ನಾಡಿದ್ದು? ಪ್ರಶ್ನೆಗೆ ಉತ್ತರ ಇಲ್ಲ. ಹಾಗೆಂದು ವೆಂಟಿಲೇಟರ್ ತೆಗೆಯಿರಿ ಎಂದು ವೈದ್ಯರಿಗೆ ಹೇಳಲು ಮನಸ್ಸು ಬರುತ್ತಿಲ್ಲ. ಏನೋ ಪಾಪಪ್ರಜ್ಞೆ. ನಮ್ಮ ಕಷ್ಟವು ಪ್ರಜ್ಞೆ ಇಲ್ಲದೇ ಮಲಗಿದ್ದ ಅಪ್ಪನಿಗೆ ಕಾಣಿಸಿತೋ ಏನೋ, ಮಾರನೇ ದಿನ ವೆಂಟಿಲೇಟರ್ ಇದ್ದರೂ ಅವರು ಉಸಿರು ನಿಲ್ಲಿಸಿದ್ದರು!
೪
ಆಕೆಯ ಹೆಸರು ನನಗಂತೂ ಗೊತ್ತಿಲ್ಲ. ಹೂವಜ್ಜಿ ಎಂದೇ ಅಮ್ಮ ಕರೆಯುತ್ತಾಳೆ. ಆಕೆ ಎಂದಿನಂತೆ ಮನೆ ಬಾಗಿಲಲ್ಲಿ ಹೂವಿಟ್ಟು ಹೊರಟಳು. ಆ ಹೂವನ್ನು ಅಮ್ಮನ ಕೈಯಲ್ಲಿಟ್ಟೆ. ‘ಹೂವು ಬಾಡಿವೆ. ಕಳ್ಳಮುಂಡೆ ದಿನಾ ಇದೇ ಆಯಿತು..’ ಎಂದು ಅವಳು ಗೊಣಗಿದಳು. ಹೂವು ಬಾಡಿದ್ದೋ ಇಲ್ಲವೋ, ನನಗೆ ಆಕ್ಷಣ ಹೂವಜ್ಜಿಯ ಕೈಬೆರಳುಗಳು ಕಣ್ಮುಂದೆ ಬಂದವು. ಆಕೆಯ ಬೆರಳುಗಳು ಹೂವನ್ನು ಕಟ್ಟಿ, ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದು ನೆನಪಾಯಿತು.
೫
ಕಂಬಳಿ ಅಡಿಯಲ್ಲಿ ಚಳಿಯಲ್ಲಿ ಮುದುಡಿ ಮಲಗಿದ್ದಾಗ ಏನೇನೋ ನೆನಪಾಯಿತು. ಆ ಮಧುರ ಯಾತನೆಯ ಮೆಲುಕು ಹಾಕುತ್ತಾ, ಅದರಲ್ಲಿಯೇ ಸುಖ ಹೊಂದುತ್ತಿರುವಾಗಲೇ ಹಾಳಾದ ನಿದ್ದೆ ಎಲ್ಲವನ್ನೂ ಕಸಿದಿತ್ತು. ಆ ಕ್ಷಣಗಳಿಗಾಗಿ ಕಂಬಳಿ ಮೇಲೆ ಕಂಬಳಿ ಹೊದ್ದರೂ ಫಲ ದೊರೆತಿಲ್ಲ. ಚಳಿಯೂ ಕಡಿಮೆಯಾಗಿಲ್ಲ.
ಸೆಪ್ಟೆಂ9